HD Devegowda: ನನ್ನನ್ನು ಕೆಣಕಲು ಬರಬೇಡಿ, ಕೆಣಕಿದರೆ ಸರಿ ಇರಲ್ಲ; ಗುಡುಗಿದ ಎಚ್​ಡಿ ದೇವೇಗೌಡ

ನೀವು ಎಲ್ಲಿಂದ ಬೆಳೆದಿದ್ದೀರಿ, ಅದೇ ಪಕ್ಷಕ್ಕೆ ಅಪಪ್ರಚಾರ ಮಾಡಬೇಡಿ. ಕಾಂಗ್ರೆಸ್ ನ್ನು ಮುಗಿಸುವ ಬಗ್ಗೆ ನಾನು ಮಾತನಾಡಲ್ಲ. ಕಾಂಗ್ರೆಸ್ ಯಾವ ಪರಿಸ್ಥಿತಿಗೆ ಹೋಗಿದೆ. ನಾನು ಕಾಂಗ್ರೆಸ್ ಬಗ್ಗೆ ಲಘುವಾಗಿ ಮಾತನಾಡಲ್ಲ. ಯಾಕೆಂದರೆ ನಾನು ಕೂಡ ಕಾಂಗ್ರೆಸ್‌ನಲ್ಲಿದ್ದವನು ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು ಎಂದರು.

ಹೆಚ್.ಡಿ. ದೇವೇಗೌಡ

ಹೆಚ್.ಡಿ. ದೇವೇಗೌಡ

 • Share this:
  ಬೆಂಗಳೂರು(ಅ.08):  28ರಿಂದ ಏಳು ದಿನ ಕಾರ್ಯಾಗಾರ ನಡೆಸಿದ್ದೇವೆ. ನಾನು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಇರುತ್ತಿದ್ದೆ. ಕುಮಾರಸ್ವಾಮಿ(HD Kumaraswamy) ಪಂಚರತ್ನ ಯೋಜನೆ ಪ್ರದರ್ಶನ ಏರ್ಪಾಟು ಮಾಡಿದ್ದರು. ಹಾಲಿ, ಮಾಜಿ ಶಾಸಕರು ಭಾಗವಹಿಸಿದ್ದರು. ಮಹಿಳೆಯರು, ಯುವಕರು, ಅಲ್ಪಸಂಖ್ಯಾತರ ಕಾರ್ಯಾಗಾರ ಆಯೋಜಿಸಿದ್ದೆವು. ಮಿಷನ್ 123 ಪ್ರಕಾರ ಅವಕಾಶ ಕೊಟ್ಟರೆ ಪಂಚರತ್ನ ಯೋಜನೆ‌ ಜಾರಿ ಮಾಡಲಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ(Former Prime Minister HD Devegowda) ಹೇಳಿದ್ದಾರೆ. 

  ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಸಿಎಂ ಆದರೆ ಹಣಕಾಸಿನ‌ ಸಮಸ್ಯೆ ಇದ್ದರೂ ಕಾರ್ಯಗತ ಮಾಡುತ್ತೇವೆ. ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ಮಾಡಿದ್ದೆವು. ಆ ವೇಳೆ ಇದನ್ನೆಲ್ಲ‌ ನಿರೀಕ್ಷೆ ಮಾಡಿರಲಿಲ್ಲ. ಅಧಿಕಾರಕ್ಕೆ ಬಂದರೆ 28 ಸಾವಿರ ಕೋಟಿ ಸಾಲ‌ಮನ್ನಾ ಮಾಡುತ್ತೇನೆ ಎಂದು‌‌ ಕುಮಾರಸ್ವಾಮಿ ಹೇಳಿದ್ದರು. ಆಗ ಕುಮಾರಸ್ವಾಮಿ ಮಾತನ್ನು ನನಗೆ ನಂಬಲು‌ ಆಗಿರಲಿಲ್ಲ. ಹೇಗೆ ಸಾಲಮನ್ನಾ ಮಾಡುತ್ತಾನೆ‌‌ ಎಂದು ಅನುಮಾನ ಇತ್ತು. ಹೇಗೆ ಅಷ್ಟೊಂದು ಹಣ ಹೊಂದಿಸುತ್ತಾರೆ ಎಂದು. ಆದರೆ ವಿಧಿಯಾಟವೇ ಬೇರೆ ಇತ್ತು. ನಿಚ್ಚಳ ಬಹುಮತ ಕಳೆದ ಬಾರಿ ಆಗಲಿಲ್ಲ ಎಂದರು.

  ಖರ್ಗೆ ಅವರನ್ನು ಸಿಎಂ ಮಾಡಿ ಎಂದು ಸೋನಿಯಾ ಗಾಂಧಿಗೆ ಹೇಳಿದ್ದೆ. ಕಾಂಗ್ರೆಸ್‌ಗೆ ಹೆಚ್ಚು ಸೀಟುಗಳು ಬಂದಿದ್ದವು. ನಾವು ಮುಖ್ಯಮಂತ್ರಿ ಸ್ಥಾನ ಪಡೆದರೆ ಅಭಾಸ ಆಗುತ್ತದೆ. ಹೀಗಾಗಿ ಖರ್ಗೆ ಅವರನ್ನೇ ಸಿಎಂ ಮಾಡಿ ಎಂದಿದ್ದೆ. ಖರ್ಗೆಯವರು ಕೂಡ ಅದಕ್ಕೆ ಒಪ್ಪಿದ್ದರು.. ಸೋನಿಯಾಗಾಂಧಿಗೆ ಒಪ್ಪಿಸುತ್ತೇನೆ ಎಂದು ಗುಲಾಮ್‌ನಬಿ ಆಜಾದ್ ಹೇಳಿದ್ದರು. ಆದರೆ ಕೊನೆಗೆ ಕುಮಾರಸ್ವಾಮಿ ಸಿಎಂ ಆಗಬೇಕೆಂದು ಒಪ್ಪಿಸಿದರು ಎಂದು ಹೇಳಿದರು.

  ನೂರಾರು ಸೀಟು ಇಟ್ಟುಕೊಂಡಿದ್ದ ಯಡಿಯೂರಪ್ಪ ವಿಪಕ್ಷ ನಾಯಕ ಆದರು.  ಸಾಲಮನ್ನಾ ಮಾಡುತ್ತಿರಾ ಇಲ್ವಾ ಎಂದು ಏಕವಚನದಲ್ಲೇ ಮಾತನಾಡಿದ್ದರು. ಯಡಿಯೂರಪ್ಪ ಏಕವಚನದಲ್ಲಿ ಮಾತನಾಡಿದ್ದನ್ನು ಟಿವಿಯಲ್ಲೇ ನೋಡಿದ್ದೆ. ಬಜೆಟ್ ವಿಷಯದಲ್ಲಿ ಕೂಡ ಸಿದ್ದರಾಮಯ್ಯ ಷರತ್ತು‌ಹಾಕಿದ್ದರು. ಸಿದ್ದರಾಮಯ್ಯ ಅವರು ಜಾರಿಗೆ ತಂದಿದ್ದ ಎಲ್ಲಾ ಭಾಗ್ಯಗಳನ್ನು ಮುಂದುವರಿಸಲು ಷರತ್ತು ಹಾಕಿದ್ದರು. ಸಿದ್ದರಾಮಯ್ಯ ಅವರ 50 ಸಾವಿರ ಸಾಲಮನ್ನಾ ಜೊತೆಗೆ ಕುಮಾರಸ್ವಾಮಿ ಕೂಡ ಸಾಲ‌ಮನ್ನಾ ಮಾಡಿದರು ಎಂದು ದೇವೇಗೌಡ ಹೇಳಿದರು.

  ಮಗನನ್ನು ಹಾಡಿ ಹೊಗಳಿದ ಎಚ್​ಡಿಡಿ

  ಕುಮಾರಸ್ವಾಮಿ ಆರ್ಥಿಕ ತಜ್ಞ ಏನಲ್ಲ. ಸಿದ್ದರಾಮಯ್ಯ ಹಾಗೆ ಸಾಕಷ್ಟು ಬಾರಿ ಬಜೆಟ್ ಮಂಡಿಸಿಲ್ಲ. ಆದರೆ ಸಂಪನ್ಮೂಲ ಕ್ರೂಢೀಕರಿಸಿ ಯೋಜನೆ ತಂದರು. ಹಿಂದಿನ ಎಲ್ಲ‌ ಯೋಜನೆಗಳಿಗೆ ಹಣ‌ ಹೊಂದಿಸಿದರು. ಹೇಳಿದ‌ ಹಾಗೆ ಕುಮಾರಸ್ವಾಮಿ ಮಾಡುತ್ತಾರೆ ಎಂದು ತಮ್ಮ ಮಗನನ್ನು ಹಾಡಿ ಹೊಗಳಿದರು.

  ಹಾನಗಲ್‌ ಹಾಗೂ ಸಿಂದಗಿಯಲ್ಲಿ‌ ಮುಸ್ಲಿಂ ಅಭ್ಯರ್ಥಿ ಹಾಕಿದ್ದೇವೆ. ಬಸವ ಕಲ್ಯಾಣದಲ್ಲೂ ಮುಸ್ಲಿಂ ಅಭ್ಯರ್ಥಿ ಹಾಕಿದ್ದೆವು. ನಾರಾಯಣರಾವ್ ಕೂಡ ನನ್ನ ಶಿಷ್ಯ. ಜಾತಿ ನೋಡಿ ನಾನು ಬೆಳೆಸಲಿಲ್ಲ. ಯಾರನ್ನೆಲ್ಲ ಬೆಳೆಸಿದ್ದೇನೆ ಎಂದು ಹೇಳಲ್ಲ. ಬಸವಕಲ್ಯಾಣದಲ್ಲಿ 50ಸಾವಿರ ಮುಸ್ಲಿಂ ಮತಗಳಿವೆ. ಹೀಗಾಗಿ ಮುಸ್ಲಿಂ ಅಭ್ಯರ್ಥಿ ಹಾಕಿದ್ದೇವೆ. ಅದಕ್ಕೂ ಮುನ್ನ‌ ಖೂಬಾಗೆ ಟಿಕೆಟ್ ಆಫರ್ ಮಾಡಿದ್ದೆ.  ಆದರೆ ಖೂಬಾ ಪಕ್ಷೇತರ ಅಭ್ಯರ್ಥಿ ಆಗುತ್ತೇನೆ ಅಂತ ಹೇಳಿದರು ಎಂದರು.

  ಕಾಂಗ್ರೆಸ್​ ವಿರುದ್ಧ ವಾಗ್ದಾಳಿ

  ವಿಜಯಪುರದಲ್ಲಿ ಕಾಂಗ್ರೆಸ್ ಎಷ್ಟು ಮುಸ್ಲಿಂ ನಾಯಕರನ್ನು ಗೆಲ್ಲಿಸಿದ್ದಾರೆ. ಇವರು ಅಲ್ಪಸಂಖ್ಯಾತರ ಬಗ್ಗೆ ಚರ್ಚೆ ಮಾಡುತ್ತಾರೆ. ಮನಗೂಳಿಯನ್ನು ಮನೆ ಮಗನಂತೆ ಬೆಳೆಸಿಕೊಂಡು ಬಂದೆ. ಜೀವನದ ಕೊನೆ ಹಂತದಲ್ಲಿದ್ದ ಮನಗೂಳಿಗೆ ಮಂತ್ರಿ ಮಾಡು ಎಂದೆ.  ಸಿಂದಗಿಗೆ ಆಲಮಟ್ಟಿಯಿಂದ ನೀರು ಕೊಟ್ಟ ಕಾರಣ ಪ್ರತಿಮೆ ಮಾಡಿಸಿದ್ದರು. ಹೆಗಡೆ ಸಿಎಂ ಇದ್ದಾಗ, ಅಧಿವೇಶನದಲ್ಲಿ ಮನಗೂಳಿ ಮಾತನಾಡಿದ್ದರು. ನಿಮ್ಮ‌ಪ್ರತಿಮೆ ಮಾಡುತ್ತೇನೆ ಎಂದು ಮನಗೂಳಿ ಹೇಳಿದ್ದರು. ಸಿಎಂ ಹೆಗಡೆ ಅವರಿಂದಲೇ ಪ್ರತಿಮೆಗೆ ಶಂಕುಸ್ಥಾಪನೆ ಮಾಡಿದ್ದರು ಎಂದು ಹೇಳಿದರು.

  ಇದನ್ನೂ ಓದಿ:Sindagi By Election: ಸೆಕ್ಯೂಲರ್ ಮತ ವಿಭಜನೆ ಮಾಡಲು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿಲ್ಲ: ಸಿಂದಗಿಯಲ್ಲಿ ಹೆಚ್ಡಿಕೆ ಸ್ಪಷ್ಟನೆ

  ಮನಗೂಳಿ ಕಾಲವಾದ ನಂತರ ಅವರ ಮಗನನ್ನು ಕಾಂಗ್ರೆಸ್​ನವರು ಕರೆದುಕೊಂಡು ಹೋದರು. ನಿಮಗೆ ನಮ್ಮ‌ ಅಭ್ಯರ್ಥಿಯೇ ಬೇಕಾ? ಬಿಜೆಪಿ ಅಭ್ಯರ್ಥಿ ಗಾಣಿಗ ಸಮುದಾಯ ಇದೆ. ನಮ್ಮ ಅಭ್ಯರ್ಥಿಯನ್ನು ಹೊತ್ತುಕೊಂಡು ಹೋದರೆ ನಾವು ಸುಮ್ಮನಿರಬೇಕಾ. ಹೀಗಾಗಿ ನಾವು ನಮ್ಮ ಅಭ್ಯರ್ಥಿ ಹಾಕಿದ್ದೇವೆ. ಬಿಜೆಪಿ ಗೆಲ್ಲಿಸಲು ಮುಸ್ಲಿಂ ಅಭ್ಯರ್ಥಿ ಹಾಕಿಲ್ಲ. ಮುಸ್ಲಿಂರನ್ನು ನೀವು ಗುತ್ತಿಗೆ ಪಡೆದಿಲ್ಲ. ನಾನು ಬೆಳಸಿದ್ದ ಮುಸ್ಲಿಂ ಮುಖಂಡ ಈಗ ಅವರ ಬಲಗೈ ಶಕ್ತಿ ಕೊಟ್ಟವರು ಎಂದರು.

  ನೀವು ಎಲ್ಲಿಂದ ಬೆಳೆದಿದ್ದೀರಿ, ಅದೇ ಪಕ್ಷಕ್ಕೆ ಅಪಪ್ರಚಾರ ಮಾಡಬೇಡಿ

  ನೀವು ಎಲ್ಲಿಂದ ಬೆಳೆದಿದ್ದೀರಿ, ಅದೇ ಪಕ್ಷಕ್ಕೆ ಅಪಪ್ರಚಾರ ಮಾಡಬೇಡಿ. ಕಾಂಗ್ರೆಸ್ ನ್ನು ಮುಗಿಸುವ ಬಗ್ಗೆ ನಾನು ಮಾತನಾಡಲ್ಲ. ಕಾಂಗ್ರೆಸ್ ಯಾವ ಪರಿಸ್ಥಿತಿಗೆ ಹೋಗಿದೆ. ನಾನು ಕಾಂಗ್ರೆಸ್ ಬಗ್ಗೆ ಲಘುವಾಗಿ ಮಾತನಾಡಲ್ಲ. ಯಾಕೆಂದರೆ ನಾನು ಕೂಡ ಕಾಂಗ್ರೆಸ್‌ನಲ್ಲಿದ್ದವನು ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು. ನಾನು ಆರ್‌ಎಸ್‌ಎಸ್ ಬಗ್ಗೆ ಹೊಗಳಿದ್ದೇನೆ ಎನ್ನುವುದು ಸುಳ್ಳು. ಟಡ್ವಾಣಿ‌ ಬಂದಾಗ ನಾವು ಸಮಾಲೋಚನೆ ಮಾಡಿದ್ದೆವು. ಎಮರ್ಜೆನ್ಸಿ ಸಮಯದಲ್ಲಿ ಜೈಲಿಗೆ ಹೋಗಿದ್ದರ ಬಗ್ಗೆ ಮಾತನಾಡಿದ್ದೆವು. ಬಾಂಕ್ವೆಟ್‌ ಹಾಲ್‌ನಲ್ಲಿ ಒಂದು ಕಾರ್ಯಕ್ರಮ‌ ನಡೆದಿತ್ತು. ನಾನೇ ಬಾಂಕ್ವಟ್ ಹಾಲ್ ಅನುಮತಿ ನೀಡಿದ್ದೆ. ನನ್ನ ಅಧ್ಯಕ್ಷತೆಯಲ್ಲಿಯೇ ಕಾರ್ಯಕ್ರಮ ನಡೆದಿತ್ತು. ನಾನು ಆ ಸಭೆಯಲ್ಲೇ ಹೇಳಿದ್ದೆ, ಸಭೆಯನ್ನು ದುರುಪಯೋಗ ಮಾಡುವುದು ಸರಿಯಲ್ಲ ಎಂದಿದ್ದೆ. ನಾವು ತುರ್ತುಪರಿಸ್ಥಿತಿಗೆ ಬೆಂಬಲಿಸುತ್ತೇವೆ ಎಂದು ಹೇಳಿ ಅನೇಕರು ಬರೆದುಕೊಟ್ಟರು. ನನಗೂ ಆರ್‌ಎಸ್‌ಎಸ್‌ಗೂ ಏನು ಸಂಬಂಧ? ಆರ್‌ಎಸ್‌ಎಸ್ ಬಗ್ಗೆ ಗಂಧವೂ ಗೊತ್ತಿಲ್ಲ. ನಾನು ಬೈಟಕ್‌ ಕೂತಿಲ್ಲ, ಹೊಗಳಿಯೂ ಇಲ್ಲ. ರಾಮ್‌ಲೀಲಾ ಮೈದಾನದಲ್ಲಿ ಯಾರ್ಯಾರು ಏನು ಹೇಳಿದರು. ಎಲ್ಲವೂ ಗೊತ್ತಿದೆ, ಈಗ ಚರ್ಚೆ ಬೇಡ ಎಂದು ಹೇಳಿದರು.

  ಸಿಂದಗಿಯಲ್ಲಿ ಹೆಚ್ಚು ಪ್ರಚಾರ ಮಾಡ್ತೀನಿ

  ಸಿಂದಗಿಯಲ್ಲಿ ನಾನು ಹೆಚ್ಚು ಪ್ರಚಾರ ಮಾಡುವೆ. ಮತ ಕೇಳುವ ಎಲ್ಲ ಹಕ್ಕು ನನಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಕೆಲಸ ಮಾಡಿದ್ದೇನೆ. .ಸಿಂದಗಿ, ಇಂಡಿಗೆ ನೀರಾವರಿ‌ ಮಾಡಿದ್ದೇನೆ. ನಾನು ಪ್ರಧಾನಿ ಇದ್ದಾಗ ಯುಕೆಪಿಗೆ ಅನುದಾನ ಕೊಟ್ಟಿದ್ದೆ. ಕಾವೇರಿ ನೀರಾವರಿಗೆ ಕೊಟ್ಟಿರಲಿಲ್ಲ. ಆ ಭಾಗ, ಈ ಭಾಗ ಎಂದು ನನ್ನ‌ ಜೀವನದಲ್ಲೇ ಯೋಚಿಸಿಲ್ಲ. ನಾನು ಸಿಂದಗಿಯಲ್ಲೇ ಹೆಚ್ಚು ವಾಸ್ತವ್ಯ ಮಾಡುತ್ತೇನೆ ಎಂದರು.

  ಸಿ.ಎಂ.ಇಬ್ರಾಹಿಂ ಜೆಡಿಎಸ್‌ ಪಕ್ಷ ಸೇರ್ಪಡೆ ವಿಚಾರ ಕುರಿತು,  ಇಬ್ರಾಹಿಂ ಸಾಕಷ್ಟು ಪ್ರಬುದ್ಧ‌ ಇದ್ದಾರೆ. ಕೇಂದ್ರದ ಮಾಜಿ ಸಚಿವರಾಗಿ ಕೆಲಸ ಮಾಡಿದವರು ಎಂದು ಹೇಳಿದರು.

  ನನ್ನನ್ನು ಕೆಣಕಿದರೆ ಸರಿ ಇರಲ್ಲ

  ಎಸ್.ಆರ್.ಬೊಮ್ಮಾಯಿ‌ ಸರ್ಕಾರ ತೆಗೆದವರು ರಾಮಕೃಷ್ಣ ಹೆಗಡೆ. ಇದಕ್ಕೆ ಬೇಕಾದರೆ ಸಾಕ್ಷಿ ಕೊಡುತ್ತೇನೆ. ಕಾಂಗ್ರೆಸ್ ಸ್ಥಿತಿ ಎಲ್ಲಿಂದ ಎಲ್ಲಿಗೆ ಬರ್ತಾ ಇದೆ ಅಂತ ಗೊತ್ತಿದೆ. ನೆಹರೂ ಕಾಲದಿಂದ ಯಾವ ಯಾವ ರಾಜ್ಯದಲ್ಲಿ ಎಲ್ಲಿಗೆ ಬಂದಿದೆ ಅಂತ ಎಲ್ಲರಿಗೂ ಗೊತ್ತಿದೆ. ನನ್ನನ್ನು ಕೆಣಕಲು ಬರಬೇಡಿ. ಕೆಣಕಿದರೆ ಸರಿ‌ ಇರಲ್ಲ ಎಂದು ಎಚ್ಚರಿಕೆ ನೀಡಿದರು.
  Published by:Latha CG
  First published: