ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು; ಮಣಿಪಾಲ್ ಆಸ್ಪತ್ರೆಯಲ್ಲಿ ಮಾಜಿ ಸಿಎಂಗೆ ಆರೋಗ್ಯ ತಪಾಸಣೆ

ಕಳೆದ ವರ್ಷ ಕೊರೋನಾ ಸೋಂಕಿಗೆ ತುತ್ತಾಗಿದ್ದ ಮಾಜಿ ಸಿಎಂ ಮಣಿಪಾಲ್​​ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ವಿಪಕ್ಷ ನಾಯಕ ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ

  • Share this:
ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ನಿನ್ನೆ ರಾತ್ರಿಯಿಂದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋವಿಡ್​ ಪರೀಕ್ಷೆ ನಡೆಸಲಾಯಿತು. ಕೋವಿಡ್​ ರಿಪೋರ್ಟ್​ ನೆಗೆಟಿವ್​ ಬಂದಿದ್ದು ಸೋಂಕಿನಿಂದ ಜ್ವರ ಬಂದಿಲ್ಲ ಎಂಬುದು ದೃಢಪಟ್ಟಿದೆ. ಆದರೆ ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಇಂದು ಮಣಿಪಾಲ್​​ ಆಸ್ಪತ್ರೆಗೆ ಸಿದ್ದರಾಮಯ್ಯರನ್ನು ಕರೆ ತರಲಾಗಿದೆ. ಫ್ಯಾಮಿಲಿ‌ ಡಾಕ್ಟರ್ ಸಲಹೆ ಮೇರೆಗೆ ಮಣಿಪಾಲ್ ಆಸ್ಪತ್ರೆಗೆ ತೆರಳಿರುವ ಸಿದ್ದರಾಮಯ್ಯ ಅವರು ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ.

ಮಣಿಪಾಲ್​​ ಆಸ್ಪತ್ರೆಗೆ ಸಿದ್ದರಾಮಯ್ಯ ಅವರ ಜೊತೆ ಕುಟುಂಬಸ್ಥರು ಆಗಮಿಸಿದ್ದಾರೆ. ನಿನ್ನೆ ರಾತ್ರಿಯಿಂದ ಸಿದ್ದರಾಮಯ್ಯ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಇವತ್ತು, ನಾಳೆ ಎರಡು ದಿನಗಳ ಕಾಲ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವ ಸಿದ್ದರಾಮಯ್ಯನವರು ವಿಶ್ರಾಂತಿ ಪಡೆಯಲಿದ್ದಾರೆ. ಕಳೆದ ವರ್ಷ ಕೊರೋನಾ ಸೋಂಕಿಗೆ ತುತ್ತಾಗಿದ್ದ ಮಾಜಿ ಸಿಎಂ ಮಣಿಪಾಲ್​​ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಈಗ ಮತ್ತೆ ಜ್ವರ ಕಾಣಿಸಿಕೊಂಡಿದ್ದರಿಂದ ಕೊರೋನಾ ಸೋಂಕಿನ ಬಗ್ಗೆ ಶಂಕಿಸಲಾಗಿತ್ತು. ಆದರೆ ಸಿದ್ದರಾಮಯ್ಯನವರ ಕೋವಿಡ್​​ ರಿಪೋರ್ಟ್​ ನೆಗೆಟಿವ್​ ಬಂದಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯೂರಿನಲ್​ ಇನ್​ಫೆಂಕ್ಷನ್​​ ಸಮಸ್ಯೆಯ ಆರೋಗ್ಯ ಇತಿಹಾಸವಿದ್ದು, ನಿರಂತರವಾಗಿ ವೈದ್ಯರ ಸಲಹೆ ಪಡೆಯುತ್ತಿರುತ್ತಾರೆ. ಇನ್ನು ಸಿದ್ದರಾಮಯ್ಯ ಅವರ ಪುತ್ರ, ಶಾಸಕ ಯತೀಂದ್ರ ಕೂಡ ವೈದ್ಯರಾಗಿದ್ದು, ತಂದೆಯ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ. ಕೊರೋನಾ 2ನೇ ಅಲೆಯ ಸಂದರ್ಭದಲ್ಲಿ ಹಲವು ಕ್ಷೇತ್ರಗಳಿಗೆ ತೆರಳಿ ಸಿದ್ದರಾಮಯ್ಯ ಪಕ್ಷದ ವತಿಯಿಂದ ಜನಸಾಮಾನ್ಯರಿಗೆ ಫುಡ್​ ಕಿಟ್​ ಸೇರಿದಂತೆ ಹಲವು ನೆರವನ್ನು ನೀಡಿದ್ದರು.

ಇದನ್ನೂ ಓದಿ: HD Deve Gowda: ಎಚ್​.ಡಿ. ದೇವೇಗೌಡ ಪ್ರಧಾನಿಯಾಗಿ ಇಂದಿಗೆ 25 ವರ್ಷ; ನನಗೆ ನಿವೃತ್ತಿಯೇ ಇಲ್ಲ ಎಂದ ಮಣ್ಣಿನ ಮಗ!

ಇನ್ನು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,27,510 ಪಾಸಿಟಿವ್​​ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಕೇಸ್​ಗಳ ಸಂಖ್ಯೆ 2,81,75,044ಕ್ಕೆ ಏರಿಕೆ ಆಗಿದೆ.‌ ಒಂದೇ ದಿನ ದೇಶಾದ್ಯಂತ 2,795 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 3,31,895ಕ್ಕೆ ಏರಿಕೆ ಆಗಿದೆ. ದೇಶದಲ್ಲಿ ಇನ್ನೂ 20,26,092 ಆಕ್ಟಿವ್ ಕೇಸುಗಳಿವೆ. ಈವರೆಗೆ 2,59,47,629 ಮಂದಿ ಕೊರೋನಾದಿಂದ ಗುಣಮುಖ ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,55,287 ರೋಗಿಗಳು ಚೇತರಿಸಿಕೊಂಡಿದ್ದಾರೆ. ಸತತವಾಗಿ 19ನೇ ದಿನವೂ ದೈನಂದಿನ ಹೊಸ ಪ್ರಕರಣಗಳಿಗಿಂತ ಗುಣ ಆಗುವವರ ಸಂಖ್ಯೆ ಹೆಚ್ಚಾಗಿದೆ. ಸಾಪ್ತಾಹಿಕ ಪಾಸಿಟಿವಿಟಿ ದರ ಪ್ರಸ್ತುತ 9.04ರಷ್ಟಾಗಿದೆ‌.‌ ದೈನಂದಿನ ಪಾಸಿಟಿವಿಟಿ ದರ 6.62ರಷ್ಟಾಗಿದ್ದು ಸತತವಾಗಿ 8 ದಿನಗಳವರೆಗೆ ಶೇಕಡಾ 10ಕ್ಕಿಂತ ಕಡಿಮೆ ಇದೆ. . ದೇಶದಲ್ಲಿ ಕೊರೋನಾ ಲಸಿಕೆ ಪಡೆದುಕೊಂಡವರ ಸಂಖ್ಯೆ 21 ಕೋಟಿ ದಾಟಿದೆ.‌ ಈವರೆಗೆ 21,60,46,638 ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ‌.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: