ನೆಲಮಂಗಲ: ಕೋವಿಡ್ ಪಾಸಿಟಿವ್ ಬಂದಿರುವುದಕ್ಕೆ ಮನೆ ಖಾಲಿ ಮಾಡುವಂತೆ ಮನೆ ಮಾಲೀಕ ಬಾಡಿಗೆದಾರರಿಗೆ ಹೇಳಿ ಹಲ್ಲೆ ಮಾಡಿರುವ ಆರೋಪ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಳಿಬಂದಿದೆ. ತ್ಯಾಮಗೊಂಡ್ಲು ಪಟ್ಟಣದ ನಿವಾಸಿ ರಾಧ ಎಂಬುವವರು ಹಲ್ಲೆಗೊಳಗಾದ ಮಹಿಳೆಯಾಗಿದ್ದು, ಇವರು ಪತ್ರಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮನೆ ಮಾಲೀಕರಾದ ರಾಧಮ್ಮ, ಗಂಗಯ್ಯ, ಅವರ ಮಕ್ಕಳಾದ ಮೋಹನ್ ಕುಮಾರ್ ಹಾಗೂ ಶ್ವೇತಾ ಎಂಬುವವರು ಹಲ್ಲೆ ಮಾಡಿದ್ದಾರೆಂದು ರಾಧ ಆರೋಪಿಸಿದ್ದಾರೆ.
ರಾಧ ಎಂಬುವವರು ತಮ್ಮ ಗಂಡ ಹಾಗೂ ಮಕ್ಕಳ ಜೊತೆ ತ್ಯಾಮಗೊಂಡ್ಲು ಗ್ರಾಮದಲ್ಲಿ ಮನೆ ಭೋಗ್ಯಕ್ಕೆ ಪಡೆದು ವಾಸಿಸುತ್ತಿದ್ದಾರೆ. ಇವರಿಗೆ ಕಳೆದ ನಾಲ್ಕೈದು ದಿನಗಳ ಹಿಂದೆ ಕೊರೋನಾ ಪಾಸಿಟಿವ್ ಬಂದಿದ್ದು ಮನೆಯಲ್ಲಿಯೇ ಹೋಮ್ ಐಸೋಲೆಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನಾ ಪಾಸಿಟಿವ್ ಬಂದ ಕಾರಣ ರಾಧ ಅವರನ್ನು ಮನೆ ಖಾಲಿ ಮಾಡುವಂತೆ ಮಾಲೀಕ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ರಾಧ ಅವರು, ನಾವು ಹಲವು ವರ್ಷಗಳಿಂದ ರಾಧಮ್ಮ, ಗಂಗಯ್ಯ ಅವರ ಮನೆಯನ್ನು ಭೋಗ್ಯಕ್ಕೆ ಹಾಕಿಸಿಕೊಂಡು ವಾಸಿಸುತ್ತಿದ್ದೇವೆ. ಎರಡು ತಿಂಗಳ ಹಿಂದೆ ವಾಹಿದೆ ಮುಗಿದಿದೆ. ಕೋವಿಡ್ ಕಾರಣದಿಂದ ಮನೆ ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ಕಳೆದ ಎರಡು ತಿಂಗಳ ಹಿಂದೆ ನನ್ನ ಗಂಡನಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಇದೀಗ ಅವರು ಗುಣಮುಖರಾಗಿದ್ದು, ನನಗೆ ಕೋವಿಡ್ ವೈರಸ್ ತಗುಲಿದ್ದು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆ. ಮನೆ ಮಾಲೀಕರಾದ ರಾಧಮ್ಮ, ಗಂಗಯ್ಯ ಹಾಗೂ ಅವರ ಮಕ್ಕಳು ನೀವು ನಮ್ಮ ಮನೆಯಲ್ಲಿದ್ದರೆ ನಮಗೂ ಸೋಂಕು ಬರುತ್ತದೆ. ಮನೆ ಖಾಲಿ ಮಾಡಿ ಎಂದು ಹಲ್ಲೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ: ಗ್ರಾಪಂ ವ್ಯಾಪ್ತಿಯಲ್ಲಿ ಟಾಸ್ಕ್ ಪೋರ್ಟ್ ಸಮಿತಿ ರಚನೆ..! ಹೊರಗಿನಿಂದ ಬರುವವರ ಮೇಲೆ ಹದ್ದಿನ ಕಣ್ಣು..!
ಮನೆ ಖಾಲಿ ಮಾಡದಿದ್ದರೆ ಮನೆಯಲ್ಲಿನ ಎಲ್ಲಾ ಸಾಮಾನುಗಳನ್ನು ತೆಗೆದು ಆಚೆ ಎಸೆಯುತ್ತೇವೆ. ನಿಮಗೆ ಪಾಸಿಟಿವ್ ಬಂದಿದ್ದು ನಮ್ಮ ಮನೆಗೆ ಯಾರೂ ಬರುತ್ತಿಲ್ಲ. ಮನೆ ಖಾಲಿ ಮಾಡಿ ಎಂದು ಹೇಳಿದರು. ಆಗ ನಾನು ಸಮಯ ಕೇಳಿದಕ್ಕೆ ಮನೆಯೊಳಗೆ ಬಂದು ಏಕಾಏಕಿ ನನ್ನ ಹಾಗೂ ನನ್ನ ಗಂಡನ ಮೇಲೆ ಹಲ್ಲೆಗೆ ಮುಂದಾಗಿದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ