ಕೊಟ್ಟ ಮಾತನ್ನು ತಪ್ಪಿದ ಸರ್ಕಾರ, ಪಂಚಮಸಾಲಿ ಮೀಸಲಾತಿ ಹೋರಾಟ ಅನಿವಾರ್ಯ; ಜಯಮೃತ್ಯುಂಜಯ ಸ್ವಾಮೀಜಿ
ನಮ್ಮಸಮುದಾಯಕ್ಕೆ ಮೀಸಲಾತಿ ಅಗತ್ಯವಿದೆ. ಶೈಕ್ಷಣಿಕ, ಔದ್ಯೋಗಿಕವಾಗಿ ಮೀಸಲಾತಿ ಬೇಕಿದೆ. ಸಿಎಂ ಮೀಸಲಾತಿ ವರದಿ ಪಡೆದುಕೊಂಡಿದ್ದಾರೆ. ಮಾತು ಕೊಟ್ಟಂತೆ ಸರ್ಕಾರ ನಡೆದುಕೊಳ್ಳಲಿಲ್ಲ. ಸೆಪ್ಟಂಬರ್ 15 ರ ಗಡುವು ಸರ್ಕಾರ ಮರೆತಿದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಬೆಂಗಳೂರು (ಸೆಪ್ಟೆಂಬರ್ 30); ವಾಲ್ಮೀಕಿ ಜಯಂತಿಯ (valmiki jayanti 2021) ಒಳಗಾಗಿ ಪಂಚಮಸಾಲಿ (Panchamasali) ಸಮುದಾಯಕ್ಕೆ ಮೀಸಲಾತಿ (Reservation) ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಇದೀಗ ಗಡುವು ಮುಗಿಯುವ ಕಾಲ ಹತ್ತಿರ ಬಂದಿದ್ದರೂ ಸಹ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಹೀಗಾಗಿ ನಮ್ಮ ಸಮುದಾಯದ ಮೀಸಲಾತಿಗೆ ಮತ್ತೊಮ್ಮೆ ಸತ್ಯಾಗ್ರಹ-ಹೋರಾಟ ನಡೆಸುವುದು ಅನಿವಾರ್ಯ ಎಂದು ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. ಲಿಂಗಾಯತ ಪಂಚಮಸಾಲಿ ಸಮುದಾಯ ಕಳೆದ ಹಲವು ದಿನಗಳಿಂದ 2A ಮೀಸಲಾತಿಗೆ ಆಗ್ರಹಿಸಿ ಹೋರಾಟ ಮಾಡಿಕೊಂಡು ಬಂದಿತ್ತು. ಬಸವಕಲ್ಯಾಣದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ 712 ಕಿಲೋಮೀಟರ್ ಪಾದಯಾತ್ರೆ ನಡೆಸಲಾಗಿತ್ತು. ಆದರೆ, ಬಸನಗೌಡ ಪಾಟೀಲ್ ಯತ್ನಾಳ್ ಮಾತುಕತೆಯಿಂದಾಗಿ ಹೋರಾಟಕ್ಕೆ ತಾತ್ಕಾಲಿಕ ತೆರೆ ಬಿದ್ದಿತ್ತು. ಸಿಎಂ ಯಡಿಯೂರಪ್ಪ ಅಧಿವೇಶನದಲ್ಲೇ ವಾಲ್ಮೀಕಿ ಜಯಂತಿಯ ಒಳಗಾಗಿ ಮೀಸಲಾತಿ ಬೇಡಿಕೆ ಈಡೇರಿಸಲು ಬದ್ಧ ಎಂದು ತಿಳಿಸಿದ್ದರು. ಈ ಹಿನ್ನೆಲೆ ಪಂಚಮಸಾಲಿ ಹೋರಾಟಗಾರರು ಆರು ತಿಂಗಳ ಗುಡುವು ಕೊಟ್ಟು ಹೋರಾಟದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದರು.
ಆದರೆ, ಇಂದು ಮತ್ತೆ ಪಂಚಮಸಾಲಿ ಮೀಸಲಾತಿ ಹೋರಾಟ ಮುನ್ನಲೆಗೆ ಬಂದಿದೆ. ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, "ನಮ್ಮಸಮುದಾಯಕ್ಕೆ ಮೀಸಲಾತಿ ಅಗತ್ಯವಿದೆ. ಶೈಕ್ಷಣಿಕ, ಔದ್ಯೋಗಿಕವಾಗಿ ಮೀಸಲಾತಿ ಬೇಕಿದೆ. ಸಿಎಂ ಮೀಸಲಾತಿ ವರದಿ ಪಡೆದುಕೊಂಡಿದ್ದಾರೆ. ಮಾತು ಕೊಟ್ಟಂತೆ ಸರ್ಕಾರ ನಡೆದುಕೊಳ್ಳಲಿಲ್ಲ. ಸೆಪ್ಟಂಬರ್ 15 ರ ಗಡುವು ಸರ್ಕಾರ ಮರೆತಿದೆ.
ನಾವು ತಾತ್ಕಾಲಿಕವಾಗಿ ಪ್ರತಿಭಟನೆ ವಾಪಸ್ ಪಡೆದಿದ್ವಿ. ಸದನದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಪ್ರಸ್ತಾಪ ಇಟ್ಟಿದ್ದರು. ಸಿಎಂ ಕೂಡ ಉತ್ತರವನ್ನ ಕೊಟ್ಟಿದ್ದಾರೆ. ಉತ್ತರದ ವೇಳೆ ಗದ್ದಲ ಕೂಡ ಆಯ್ತು. ಮೀಸಲಾತಿ ಕೊಡ್ತೇವೆ ಎಂಬ ಭರವಸೆ ಕೊಟ್ಟಿದ್ದಾರೆ. ಚಿವ ಸಿ.ಸಿ.ಪಾಟೀಲರು ಭರವಸೆ ಕೊಟ್ಟಿದ್ದಾರೆ. ಮೀಸಲಾತಿ ಬಗ್ಗೆ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ನಮಗೆ ಸಿಎಂ ಮೇಲೆ ವಿಶ್ವಾಸವಿದೆ. ಅವರು ನಮ್ಮಹೋರಾಟಕ್ಕೆ ಸ್ಪಂದಿಸಿದ್ದಾರೆ. ಆದರೆ, ಅವರಿಂದ ಸ್ಪಷ್ಟ ನಿರ್ದೇಶನ ಹೊರಬರಬೇಕು
ಜಯಪ್ರಕಾಶ್ ಹೆಗ್ಡೆ ಶಿಫಾರಸು ಮಾಡ್ತೇವೆ ಎಂದಿದ್ದಾರೆ. ವರದಿಯನ್ನ ಸಂಪುಟದಲ್ಲಿ ಪಾಸು ಮಾಡಬೇಕು. ಅಕ್ಟೋಬರ್ 1 ರಂದು ಅಭಿಯಾನ ಪೂರ್ಣ. ಬೆಂಗಳೂರಿನಲ್ಲಿ ಅಭಿಯಾನ ಮುಗಿಯಲಿದೆ. ಅಂದು ಮತ್ತೊಂದು ಸಭೆಯನ್ನ ನಾವು ಮಾಡ್ತಿದ್ದೇವೆ. ಅಂದು ಸಿಎಂ ಸಂಪೂರ್ಣ ಭರವಸೆ ಕೊಡಬೇಕು. ಕೊಡದಿದ್ದರೆ ನಾವು ಅಂತಿಮ ನಿರ್ಧಾರ ತೆಗೆದುಕೊಳ್ತೇವೆ, ಮತ್ತೆ ಸತ್ಯಾಗ್ರಹ ಹಾದಿ ಅನಿವಾರ್ಯವಾಗಲಿದೆ" ಎಂದು ಜಯಮೃತ್ಯುಂಜಯ ಶ್ರೀ ಹೇಳಿಕೆ ನೀಡಿದ್ದಾರೆ.
"ವಾಲ್ಮೀಕಿ, ಹಾಲುಮತ ಸಮುದಾಯಗಳಿಗೂ ಮೀಸಲಾತಿ ಕೊಡಿ ಎಂದೇಳಿದ್ದೇವೆ. ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ನಮ್ಮ ಹೋರಾಟ ನಿರಂತರವಾಗಿರಲಿದೆ. ಪಂಚಮಸಾಲಿಗಳಿಗೆ ಮೀಸಲಾತಿ ಕೊಡಿಸುವುದಷ್ಟೇ ಗುರಿ. ನನಗೆ ಅವಕಾಶ ಕೊಟ್ಟ ಸಮುದಾಯಕ್ಕೆ ಒತ್ತುಕೊಡಬೇಕು. ಮನೆ ಗೆದ್ದು ಮಾರ್ಗ ಗೆಲ್ಲಬೇಕು. ಮೊದಲು ಸಮುದಾಯದ ಪರ ಧ್ವನಿ ಎತ್ತಿದ್ದೇನೆ. ಬೇರೆ ಸಮುದಾಯಗಳ ಪರವೂ ಧ್ವನಿ ಎತ್ತುತ್ತೇನೆ. ಉಳಿದ ಸಮುದಾಯಕ್ಕೂ ಮೀಸಲಾತಿ ಕೊಡಬೇಕು. ಇದು ನಮ್ಮ ಹೋರಾಟದ ಗುಣವೂ ಹೌದು. ಎಲ್ಲರನ್ನ ಒಟ್ಟಾಗಿ ಕರೆದೊಯ್ಯುವುದೇ ನಮ್ಮ ಉದ್ದೇಶ. ಇನ್ನೊಬ್ಬರ ಮೀಸಲಾತಿ ನಾವು ಕಿತ್ತುಕೊಳ್ತಿಲ್ಲ" ಎಂದು ಜಯಮೃತ್ಯುಂಜಯ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿದ್ದು, "ಇದು ನಮಗೆ ಮಾಡು ಅಥವಾ ಮಡಿಯುವ ಹೋರಾಟ. ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟ ನಡೆಸಲಾಗಿತ್ತು. ಹೋರಾಟದ ಮೂಲಕವೇ ಬೇಡಿಕೆ ಈಡೇರಿಸಿಕೊಳ್ಳಬೇಕು. 39 ದಿನಗಳ ಕಾಲ ನಾವು ಪಾದಯಾತ್ರೆ ಮಾಡಿದ್ದೆವು. ಸರ್ಕಾರವೇ ಮುಂದೆ ಬಂದು ಸ್ಪಂದಿಸಿದೆ. ಯಡಿಯೂರಪ್ಪನವರೇ ಆರು ತಿಂಗಳು ಕೇಳಿದ್ದರು. ಈಗ ಆರು ತಿಂಗಳ ಸಮಯ ಮುಗಿದಿದೆ.
ಹಾಗಾಗಿ ಸರ್ಕಾರ ಸ್ಪಷ್ಟವಾದ ಭರವಸೆ ಕೊಡಬೇಕು. ಶ್ರೀಗಳಿಗೆ ಸಿಎಂ, ಸಚಿವರು ಭರವಸೆ ಕೊಟ್ಟಿದ್ದಾರೆ. ಅವರು ಹೇಳಿದಂತೆ ನಡೆದುಕೊಳ್ಳಬೇಕು. ನಾವು ಹೋರಾಟ ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದರೆ ಹೋರಾಟ ಮುಂದುವರಿಯಲಿದೆ. ಮುರುಗೇಶ್ ನಿರಾಣಿ ಸಮುದಾಯ ಬಳಕೆ ಮಾಡಿಕೊಂಡಿದ್ದಾರೆ. ನಮ್ಮ ಮೀಸಲಾತಿ ಹೋರಾಟವನ್ನ ಹತ್ತಿಕ್ಕಲು ಯತ್ನಿಸಿದ್ರು. ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ನಿರಾಣಿಯವರನ್ನ ನಂಬಿ ನಾವು ಹೋರಾಟ ಮಾಡ್ತಿಲ್ಲ" ಎಂದು ಕಿಡಿಕಾರಿದ್ದಾರೆ.