ಗಾಯಕಿ ಹರಿಣಿ ತಂದೆ ಬೆಂಗಳೂರಿನಲ್ಲಿ ಅನುಮಾನಾಸ್ಪದ ಸಾವು; ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆ

Singer Harini Rao’s father found dead at Railway track- ಸುಜನ ಫೌಂಡೇಶನ್ ಮುಖ್ಯಸ್ಥರಾಗಿದ್ದ ಹಾಗೂ ತೆಲುಗು ಗಾಯಕಿ ಹರಿಣಿ ರಾವ್ ಅವರ ತಂದೆ ಎ ಕೆ ರಾವ್ ಅವರು ಬೆಂಗಳೂರಿನ ರೈಲ್ವೆ ಟ್ರ್ಯಾಕ್​ವೊಂದರ ಬಳಿ ಶವವಾಗಿ ಪತ್ತೆಯಾಗಿದ್ದಾರೆ.

ಎಕೆ ರಾವ್

ಎಕೆ ರಾವ್

 • Share this:
  ಬೆಂಗಳೂರು, ನ. 25: ತೆಲುಗು ಚಿತ್ರರಂಗದ ಹಿನ್ನೆಲೆ ಗಾಯಕಿ ಹರಿಣಿ ರಾವ್ (Telugu Singer Harini Rao) ಅವರ ತಂದೆ ಅಜುಲ ಕಾಳಿಪ್ರಸಾದ್ ರಾವ್ (Ajula Kaliprasad Rao) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ವಿಚಾರ ಎರಡು ದಿನ ತಡವಾಗಿ ಬೆಳಕಿಗೆ ಬಂದಿದೆ. ಹೈದರಾಬಾದ್ ನಿವಾಸಿಯಾಗಿರುವ ಎ ಕೆ ರಾವ್ ಅವರು ಬೆಂಗಳೂರಿನ ರಾಜಾನುಕುಂಟೆ ಮತ್ತು ಯಲಹಂಕ ರೈಲ್ವೆ ನಿಲ್ದಾಣ ನಡುವಿನ ಸ್ಥಳದ ರೈಲ್ವೆ ಟ್ರ್ಯಾಕ್ ಬಳಿ (Railway track between Rajanukunte and Yalahanka Station) ಶವವಾಗಿ ಪತ್ತೆಯಾಗಿದ್ದಾರೆ. ಚಾಕುವಿನಿಂದ ಅವರ ಮೈಮೇಲೆ ಗಾಯವಾಗಿರುವುದರಿಂದ 65 ವರ್ಷದ ಎ ಕೆ ರಾವ್ ಅವರ ಕೊಲೆ ನಡೆದಿರಬಹುದು ಎಂಬ ಶಂಕೆ ಇದೆ. ಬೆಂಗಳೂರಿನಲ್ಲಿರುವ ಅವರ ಮತ್ತೊಬ್ಬ ಮಗಳು ಶಾಲಿನಿ ರಾವ್ (Shalini Rao) ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೊನ್ನೆ, ಅಂದರೆ ನ. 23ರಂದು ಈ ಘಟನೆ ನಡೆದಿದೆ.

  65 ವರ್ಷದ ಎ ಕೆ ರಾವ್ ಅವರು ತಮ್ಮ ಮಗಳು ಹಾಗು ಹಿನ್ನೆಲೆ ಗಾಯಕಿ ಹಾರಿಣಿ ರಾವ್ ಅವರ ಹೈದರಾಬಾದ್​ನ ಶ್ರೀನಗರ ಕಾಲೊನಿಯ ಅಪಾರ್ಟ್ಮೆಂಟ್​ವೊಂದರಲ್ಲಿ ವಾಸವಾಗಿದ್ದರು. ಸುಜನ ಫೌಂಡೇಶನ್​ನ (Sujana foundation) ಮುಖ್ಯಸ್ಥರಾಗಿದ್ದ ಅವರು ಆಗಾಗ್ಗೆ ಬೆಂಗಳೂರಿಗೆ ಬಂದು ಹೋಗುತ್ತಿದ್ದರೆನ್ನಲಾಗಿದೆ. ಸುದ್ದುಗುಂಟಪಾಳ್ಯದಲ್ಲಿ ಹಿಂದೊಮ್ಮೆ ಅವರ ವಿರುದ್ಧ 2 ಕೋಟಿ ರೂ ವಂಚನೆ ನಡೆಸಿದ ಪ್ರಕರಣ (Cheating Case against AK Rao in Bengaluru) ದಾಖಲಾಗಿತ್ತು. ಈಗ ಅವರ ಸಾವಿಗೂ ಆ ಪ್ರಕರಣಕ್ಕೂ ನಂಟಿದೆಯಾ ಎಂಬ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸಲಿದ್ದಾರೆ.

  ಮಗಳು ಶಾಲಿನಿ ರಾವ್ ಹೇಳಿಕೆ:

  ನಮ್ಮ ತಂದೆ ಪ್ರಾಜೆಕ್ಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸ ನಿಮಿತ್ತ ಆಗಾಗ್ಗೆ ಬೆಂಗಳೂರಿಗೆ ಬಂದು ಹೋಗುತ್ತಿದ್ದರು. ನ. 8ರಂದು ಬೆಂಗಳೂರಿಗೆ ಬಂದು ನಮ್ಮ ಮನೆಯಲ್ಲಿಯೇ ಇದ್ದರು. ನಂತರ ನ. 13ರಂದು ಹೋಟೆಲ್​ನಲ್ಲಿ ರೂಮ್ ಮಾಡಿಕೊಂಡಿದ್ದರು. ನ. 19ರಂದು ನನ್ನ ಜೊತೆ ಫೋನ್​ನಲ್ಲಿ ಮಾತನಾಡಿದ್ದರು. ನ. 23ರಂದು ನನ್ನ ತಾಯಿ ಫೋನ್ ಮಾಡಿ ಅಪ್ಪ ತೀರಿಕೊಂಡಿರುವ ವಿಚಾರ ತಿಳಿಸಿದರು ಎಂದು ಬೆಂಗಳೂರಿನಲ್ಲಿ ಮನಃಶಾಸ್ತ್ರಜ್ಞೆಯಾಗಿ ಕೆಲಸ ಮಾಡುವ ಅವರ ಎರಡನೇ ಮಗಳು ಶಾಲಿನಿ ರಾವ್ ತಮ್ಮ ಎಫ್​ಐಆರ್​ನಲ್ಲಿ ತಿಳಿಸಿದ್ದಾರೆ.

  ಮೈಮೇಲೆ ಗಾಯದ ಗುರುತಿನಿಂದ ಅನುಮಾನ:

  ನಂದೇಡ್ ಎಕ್ಸ್​ಪ್ರೆಸ್​ನ ಲೋಕೋ ಪೈಲಟ್ ಅವರು ರೈಲ್ವೆ ಟ್ರ್ಯಾಕ್​ನಲ್ಲಿ ಎ ಕೆ ರಾವ್ ಅವರ ಶವ ಬಿದ್ದಿರುವುದನ್ನು ಕಂಡು ಯಲಹಂಕ ಸ್ಟೇಷನ್ ಮಾಸ್ಟರ್ ಅವರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಶವವನ್ನು ಪರೀಕ್ಷಿಸಿದಾಗ ಹಣೆ, ಕೈ, ಕತ್ತಿನ ಭಾಗಗಳಲ್ಲಿ ಗಾಯದ ಗುರುತು ಪತ್ತೆಯಾಗಿದೆ. ಟ್ರ್ಯಾಕ್ ಬಳಿ ಚಾಕು, ಬ್ಲೇಡ್ ಮತ್ತು ಕತ್ತರಿ ಕೂಡ ಸಿಕ್ಕಿದೆ. ಇದರಿಂದ ಅನುಮಾನಗೊಂಡ ರೈಲ್ವೆ ಪೊಲೀಸರು ಶವಪಂಚನಾಮೆ ಜರುಗಿಸಿ ಬಳಿಕ ಶವವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

  ಮೃತರ ಬಳಿ ದೊರೆತ ಮೊಬೈಲ್ ನಂಬರ್​ಗಳ ಆಧಾರದ ಮೇಲೆ ಅವರ ಪತ್ನಿಯನ್ನ ಸಂಪರ್ಕಿಸಿ ಮಾಹಿತಿ ತಿಳಿಸಿದ್ಧಾರೆ. ಆ ಬಳಿಕ ಬೆಂಗಳೂರಿನಲ್ಲಿರುವ ಅವರ ಮಗಳು ಶಾಲಿನಿ ಅವರು ಎಂಎಸ್ ರಾಮಯ್ಯ ಆಸ್ಪತ್ರೆಗೆ ಬಂದು ಶವವನ್ನು ಗುರುತಿಸಿ ಇದು ತಮ್ಮ ತಂದೆ ಎ ಕೆ ರಾವ್ ಅವರ ಶವವೆಂದು ಖಚಿತಪಡಿಸಿದ್ದಾರೆ.

  ತಮ್ಮ ತಂದೆಯನ್ನು ಯಾರೋ ಕೊಲೆ ಮಾಡಿ ಶವವನ್ನು ರೈಲ್ವೆ ಟ್ರ್ಯಾಕ್​ಗೆ ತಂದು ಹಾಕಿದ್ದಾರೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಶಾಲಿನಿ ರಾವ್ ಅವರು ತಮ್ಮ ದೂರಿನಲ್ಲಿ ಒತ್ತಾಯಿಸಿದ್ಧಾರೆ. ಬೆಂಗಳೂರು ಗ್ರಾಮಾಂತರ ರೈಲ್ವೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
  Published by:Vijayasarthy SN
  First published: