Bengaluru: ಕೋಟಿ ಕದ್ದ ಖದೀಮರನ್ನು ಹಿಡಿದ ಫಾಸ್ಟ್ ಟ್ಯಾಗ್; ಕೇರಳ ಕಳ್ಳರು ಸಿಕ್ಕಿಬಿದ್ದ ರೋಚಕ ಸ್ಟೋರಿ

ಬೆಂಗಳೂರಿನ ಹೊರವಲಯದ ಮಾದನಾಯಕನಹಳ್ಳಿಯ ನೈಸ್‍ಸ್ಟ್ರೀಟ್ ಜಂಕ್ಷನ್‍ಗೆ ಸಮೀಪದಲ್ಲಿ, ವಾಹನದಲ್ಲಿ ಸಾಗುತ್ತಿದ್ದ ನಾಗರ್‌ಕೋಯಿಲ್‌ ಮೂಲದ ಖಾಸಗಿ ಹಣಕಾಸು ಸಂಸ್ಥೆಯೊಂದರ 5 ಮಂದಿ ಸಿಬ್ಬಂದಿಗಳು ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಲಾಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪೂರ್ವಯೋಜಿತ  ದರೋಡೆಯೊಂದು (Robbery) ಬೆಂಗಳೂರಿನಲ್ಲಿ ನಡೆದಿದೆ. ದರೋಡೆ ಮುಗಿಸಿ ಕಳ್ಳರು ಯಶಸ್ವಿಯಾಗಿ ಪರಾರಿಯಾದರು, ಆದರೆ ಈಗ ಪೊಲೀಸರ (Police) ಅತಿಥಿಗಳಾಗಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ಹಣವನ್ನು ಸಾಗಿಸುತ್ತಿದ್ದ ವಾಹನದ (Vehicle) ಮೇಲೆ ದಾಳಿ ಮಾಡಿದ ದರೋಡೆಕೋರರ ಗ್ಯಾಂಗ್‍, 1 ಕೋಟಿ ರೂ. ಗಳನ್ನು ದೋಚಿಕೊಂಡು, ವಾಹನಗಳ ನಂಬರ್ ಪ್ಲೇಟ್‍ಗಳನ್ನು (Vehicle Number Plat ) ಬದಲಾಯಿಸಿಕೊಂಡು, ಎರಡು ರಾಜ್ಯಗಳ ಗಡಿ ದಾಟಿ ಪರಾರಿಯಾಗಿತ್ತು. ಅಷ್ಟೆಲ್ಲಾ ಪ್ಲ್ಯಾನ್‌ ಮಾಡಿದ್ದರೂ, ಪರಾರಿಯಾಗುವ ಅವಸರದಲ್ಲಿ ಫಾಸ್ಟ್‌ಟ್ಯಾಗ್( FASTag) ಲೇನ್‍ನಲ್ಲಿ ಸಂಚರಿಸಿದ್ದೇ ದರೋಡೆಕೋರರು ಪೊಲೀಸರ ಬಲೆಗೆ ಬೀಳಲು ಕಾರಣವಾಯಿತು.

ಕೇರಳದ ಮೂಲದ ಕಳ್ಳರ ಗ್ಯಾಂಗ್‍

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ಮಾದನಾಯಕನಹಳ್ಳಿ ಕಳ್ಳತನ ಪ್ರಕರಣವನ್ನು ಸೋಮವಾರ ಭೇದಿಸಿದ್ದು, ಅದಕ್ಕೆ ಸಂಬಂಧಿಸಿದ್ದಂತೆ ಕೇರಳದ ಮೂಲದ ಕಳ್ಳರ ಗ್ಯಾಂಗ್‍ನ 10 ಮಂದಿ ಸದಸ್ಯರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಈ ಗ್ಯಾಂಗ್ ಹೆದ್ದಾರಿಗಳಲ್ಲಿ ಹವಾಲಾ ಆಪರೇಟರ್‌ಗಳನ್ನು ದರೋಡೆ ಮಾಡುವ ಕುಖ್ಯಾತಿ ಹೊಂದಿರುವ ಕೊಡಲಿ ಶ್ರೀಧರನ್ ಜೊತೆ ನಂಟು ಹೊಂದಿದೆ ಎನ್ನಲಾಗಿದೆ.

ರಾಜೀವ್ ಪಿ ಕೆ (48), ವಿಷ್ಣುಲಾಲ್ (26), ಸಂತಲ್ ಟಿ.ಸಿ (34), ಅಖಿಲ್ (28), ಸನಫ್ ಪಿ (33), ಸಮೀರ್‌. ಎಸ್‌ (31), ಸೈನುಲ್ಲಾ ಹಬಿದಿ (21), ಶಫೀಕ್ ಎ.ಪಿ ಮತ್ತು ರಮ್‍ಶೀದ್ ಅಲಿಯಾಸ್ ಮುಸ್ತಫಾ (25) ಬಂಧಿತರು. ಪೊಲೀಸರು ಬಂಧಿತರಿಂದ 9.7 ಲಕ್ಷ ರೂ. ಮತ್ತು ಎರಡು ಸ್ಪೋರ್ಟ್ಸ್‌ ಯುಟಿಲಿಟಿ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಅಧೀಕ್ಷಕ (ಬೆಂಗಳೂರು ಗ್ರಾಮಾಂತರ) ಕೆ. ವಂಶಿ ಕೃಷ್ಣ ಅವರು, ಈ ಪ್ರಕರಣದಲ್ಲಿ ಮುಖ್ಯ ಶಂಕಿತನಾಗಿದ್ದಾನೆ ಎಂದು ತಿಳಿಸಿದ್ದಾರೆ. ಉಳಿದ 90 ಲಕ್ಷ ರೂಪಾಯಿ ಶ್ರೀಧರನ್ ಬಳಿಯೇ ಇರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

7 ಮಂದಿ ಕಳ್ಳರಿಂದ ವಾಹನದ ಮೇಲೆ ದಾಳಿ

ಈ ಪ್ರಕರಣ ನಡೆದದ್ದು ಮಾರ್ಚ್ 11 ರಂದು ಮುಂಜಾನೆಯ ಸಮಯದಲ್ಲಿ. ಬೆಂಗಳೂರಿನ ಹೊರವಲಯದ ಮಾದನಾಯಕನಹಳ್ಳಿಯ ನೈಸ್‍ಸ್ಟ್ರೀಟ್ ಜಂಕ್ಷನ್‍ಗೆ ಸಮೀಪದಲ್ಲಿ, ವಾಹನದಲ್ಲಿ ಸಾಗುತ್ತಿದ್ದ ನಾಗರ್‌ಕೋಯಿಲ್‌ ಮೂಲದ ಖಾಸಗಿ ಹಣಕಾಸು ಸಂಸ್ಥೆಯೊಂದರ 5 ಮಂದಿ ಸಿಬ್ಬಂದಿಗಳು ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಲಾಗಿದೆ. ಹಣಕಾಸು ಸಂಸ್ಥೆಯ ಸಿಬ್ಬಂದಿ ಮಾರ್ಚ್ 8 ರಂದು ಹುಬ್ಬಳ್ಳಿ ಮತ್ತು ಇತರ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಗ್ರಾಹಕರಿಂದ ಹಣವನ್ನು ಸಂಗ್ರಹಿಸಿ, ನಾಗರ್‌ಕೋಯಿಲ್‌ಗೆ ಮರಳುತ್ತಿದ್ದರು.

ಇದನ್ನೂ ಓದಿ: Khelo India: ಯಲಹಂಕ ಬಳಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗೆ 100 ಎಕರೆ ಜಾಗ; ನಾರಾಯಣಗೌಡ

ಅವರು ಪ್ರಯಾಣಿಸುತ್ತಿದ್ದ ವಾಹನದಲ್ಲಿ ಬಾಕ್ಸ್ ಒಂದರಲ್ಲಿ 1 ಕೋಟಿ ರೂ.ಗಳನ್ನು ಇಡಲಾಗಿತ್ತು. ಅವರ ವಾಹನ ಮುಂಜಾವಿನ 5.50 ರ ವೇಳೆಗೆ ಮಾದನಾಯಕನಹಳ್ಳಿಯ ಹೊರವಲಯವನ್ನು ತಲುಪಿದಾಗ, ಶಸ್ತ್ರಾಸ್ತ್ರಗಳನ್ನು ಹೊಂದಿದ್ದ 7 ಮಂದಿ ಅವರ ವಾಹನದ ಮೇಲೆ ದಾಳಿ ನಡೆಸಿದ್ದರು.

ಹಣ ಕಸಿದುಕೊಂಡು ಖದೀಮರು ಪರಾರಿ

“ದುಷ್ಕರ್ಮಿಗಳು ಮಚ್ಚು ಮತ್ತು ರಾಡ್‍ಗಳಿಂದ ನಮ್ಮ ವಾಹನದ ಮೇಲೆ ದಾಳಿ ಮಾಡಿದರು ಹಾಗೂ ಗಾಜುಗಳನ್ನು ಒಡೆದು ಹಾಕಿದರು. ನಮ್ಮನ್ನು ಹೊರಗೆಳೆದು, ಹಣ ಮತ್ತು ಮೊಬೈಲ್ ಫೋನ್‍ಗಳನ್ನು ಕಸಿದುಕೊಂಡರು. ನಮ್ಮ ಮತ್ತು ಅವರ ಕಾರುಗಳಲ್ಲಿ ಪರಾರಿಯಾದರು” ಎಂದು ಆ ಹಣಕಾಸು ಸಂಸ್ಥೆಯ ಹಿರಿಯ ಅಕೌಟೆಂಟ್ ಜೆ. ಫ್ರಾಂಕ್ಲಿನ್ ಹೇಳಿಕೆ ನೀಡಿದ್ದಾರೆ.

ಚಿನ್ನದ ವ್ಯಾಪಾರಿಗಳಿಂದ ಹಣ ಸಂಗ್ರಹಿಸಲು, ಹುಬ್ಬಳ್ಳಿಗೆ ಭೇಟಿ ನೀಡಿದ್ದ ಆ ಹಣಕಾಸು ಸಂಸ್ಥೆಯ ಸಿಬ್ಬಂದಿಗಳ ಮಾಹಿತಿಯನ್ನು ದರೋಡೆಕೋರರು ಹೊಂದಿದ್ದರು ಎಂಬುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದರೋಡೆಕೋರರು ಅವರನ್ನು ಹುಬ್ಬಳ್ಳಿಯಿಂದ ಬೆಂಗಳೂರಿನವರೆಗೂ ಹಿಂಬಾಲಿಸಿಕೊಂಡು ಬಂದಿದ್ದರು.

ಈ ಪ್ರಕರಣದ ತನಿಖೆಗೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಗಣೇಶ್ ಅವರ ನೇತೃತ್ವದಲ್ಲಿ ಎರಡು ನಿರ್ದಿಷ್ಟ ಗುಂಪುಗಳನ್ನು ನಿಯೋಜಿಸಲಾಗಿತ್ತು. ದರೋಡೆಕೋರರು, ಸಂತ್ರಸ್ತರ ವಾಹನವನ್ನು ಬೆಳ್ಳೂರಿನ ಸಮೀಪ ಬಿಟ್ಟು, ಕೇರಳದ ಕಡೆಗೆ ಪರಾರಿಯಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದರು.

ಸಿಸಿಟಿವಿ ದೃಶ್ಯದಲ್ಲಿ ಕಳ್ಳರು ಸೆರೆ

ದರೋಡೆಕೋರರ ವಾಹನವನ್ನು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪತ್ತೆ ಹಚ್ಚಿ, ಅದು ಕರ್ನಾಟಕದ ನೋಂದಣಿಯನ್ನು ಹೊಂದಿದ್ದು, ಚಾಮರಾಜನಗರ ಜಿಲ್ಲೆಯನ್ನು ದಾಟಿ ತಮಿಳುನಾಡಿಗೆ ಪ್ರವೇಶಿಸಿರುವುದನ್ನು ಕಂಡುಕೊಂಡಿದ್ದಾರೆ. ತಮಿಳುನಾಡಿನ ಮಾರ್ಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆ ವಾಹನ ಕೇರಳ ನೋಂದಾವಣಿಯ ಪ್ಲೇಟ್ ಅನ್ನು ಹೊಂದಿರುವುದು ಕಂಡು ಬಂದಿದೆ. ಅಂದರೆ ಆರೋಪಿಗಳು ಕರ್ನಾಟಕದ ಗಡಿ ದಾಟಿದ ಬಳಿಕ ನಂಬರ್ ಪ್ಲೇಟ್ ಬದಲಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳದ ಎರ್ನಾಕುಲಂವರೆಗೂ 250 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸ್ ಸಿಬ್ಬಂದಿ ಪರಿಶೀಲಿಸಿದರು, ಆದರೆ ಆರೋಪಿಗಳನ್ನು ಪತ್ತೆ ಹಚ್ಚುವುದು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: Bengaluruನಲ್ಲಿ ಕೊರೊನಾ ಹೊಸ ತಳಿ ಕಂಡು ಬಂದಿದ್ಯಾ? ಊಹಾಪೋಹಗಳಿಗೆ ಉತ್ತರ ನೀಡಿದ BBMP ಆರೋಗ್ಯ ಇಲಾಖೆ ವಿಶೇಷ ಆಯುಕ್ತ

ವಾಹನದ ಫಾಸ್ಟ್‌ಟ್ಯಾಗ್ ವಿವರದಿಂದ ಸಿಕ್ಕಿಬಿದ್ರು

ದರೋಡೆಕೋರರ ವಾಹನ ವಿಭಿನ್ನ ನಂಬರ್ ಪ್ಲೇಟ್‍ಗಳನ್ನು ಹೊಂದಿದ್ದರೂ, ಎಲ್ಲಾ ಟೋಲ್ ಪ್ಲಾಜಾಗಳ ಮೂಲಕ ಫಾಸ್ಟ್‌ಟ್ಯಾಗ್ ಲೇನ್‍ನಲ್ಲಿ ಚಲಿಸಿರುವುದು ಪೊಲೀಸರ ಗಮನಕ್ಕೆ ಬಂತು. ವಾಹನದ ಫಾಸ್ಟ್‌ಟ್ಯಾಗ್ ವಿವರಗಳನ್ನು ಕಲೆ ಹಾಕಿದ ಪೊಲೀಸರು ದರೋಡೆಕೋರರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published by:Pavana HS
First published: