ಯಾರದ್ದೋ ತಪ್ಪಿಗೆ 30 ವರ್ಷ ಬಾಳಿಬದುಕಿದ ಮನೆ ಕಳೆದುಕೊಂಡ ನತದೃಷ್ಟ ಕುಟುಂಬ

ಲಕ್ಷಾಂತರ ರೂಪಾಯಿ ಲೋನ್ ಪಡೆದು ಮನೆ ಕಟ್ಟಿಸಿದ ಪವನ್ ಕುಮಾರ್ ಅದರಲ್ಲಿ ಸುಮಾರು 30 ವರ್ಷ ಜೀವನ ನಡೆಸಿ ಬದುಕು ಕಟ್ಟಿಕೊಂಡಿದ್ದರು. ಗಲಭೆಯಲ್ಲಿ ಮನೆ ಬೆಂಕಿಗಾಹುತಿಯಾಗಿ ಸುಮಾರು 1.80 ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಹಾನಿಯಾಗಿದೆ

ಬೆಂಕಿಗಾಹುತಿಯಾದ ಮನೆ

ಬೆಂಕಿಗಾಹುತಿಯಾದ ಮನೆ

 • Share this:
  ಬೆಂಗಳೂರು: ಅದು ಆತನ ಕನಸಿನ ಮನೆ. ಸುಂದರ ಬದುಕು ಕೊಟ್ಟಿದ್ದ ಆ ಮನೆಯೆಂದರೆ ಆತನಿಗೆ ಎಲ್ಲಿಲ್ಲದ ಪ್ರೀತಿ. ಅದ್ರೆ ರಾತ್ರೋರಾತ್ರಿ ಕಿಡಿಗೇಡಿಗಳ ಕೆಂಗಣ್ಣಿಗೆ ಗುರಿಯಾದ ಆ ಮನೆ ತನ್ನ ಕಣ್ಣೇದುರೆ ಪಾಳು ಕೊಂಪೆಯಂತಾಗಿತ್ತು. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಸಿಲಿಕಾನ್ ಸಿಟಿ ಜನರನ್ನ ನಿದ್ದೆ ಕೆಡಿಸಿದಂತ ಘಟನೆ. ಆ ಒಂದು ಘಟನೆಯಿಂದಾಗಿ ಎರಡು ಪೊಲೀಸ್ ಠಾಣೆಗಳು, ಶಾಸಕರ ಮನೆ ಸೇರಿ ಹತ್ತಾರು ಆಸ್ತಿ ಪಾಸ್ತಿ, ನೂರಾರು ವಾಹನಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದವು. ಹೀಗೆ ಗಲಭೆಗೆ ತುತ್ತಾಗಿ ಆಸ್ತಿ ಪಾಸ್ತಿ ಕಳೆದುಕೊಂಡವರಲ್ಲಿ ಕಾವಲ್ ಭೈರಸಂದ್ರದ ನಾಗಮ್ಮ ಲೇಔಟ್ ನಿವಾಸಿ ಪವನ್ ಕುಮಾರ್ ಸಹ ಒಬ್ಬರು. 2020 ಆಗಸ್ಟ್ ನಲ್ಲಿ ನಡೆದ ಗಲಭೆಯಲ್ಲಿ ಪವನ್ ಕುಮಾರ್ ಅವರಿಗೆ ಸೇರಿದ ಎರಡಂತಸ್ತಿನ ಡೂಪ್ಲೇಕ್ಸ್ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದರು.

  ಪವನ್ ಕುಮಾರ್ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು, ಲಕ್ಷಾಂತರ ಬೆಲೆಬಾಳುವ ಬಟ್ಟೆಗಳು, ಚಿನ್ನ ಬೆಳ್ಳಿ, ನಗದು ಹಣ ಹಾಗೂ ಆಸ್ತಿ ಪಾಸ್ತಿ ಪತ್ರಗಳು ಬೆಂಕಿಗೆ ಆಹುತಿಯಾಗಿದ್ದವು. ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ ಪವನ್ ಕುಮಾರ್ ತಮಗಾದ ನಷ್ಟದ ಬಗ್ಗೆ ಕಮೀಷನರ್ ಗೆ ಅರ್ಜಿ ಮೂಲಕ ತಿಳಿಸಿದ್ದಾರೆ. ಪವನ್ ಕುಮಾರ್ ಕ್ಲೈಮ್ಸ್ ಕಮೀಷನರ್ ಗೆ ಕೊಟ್ಟಿರೋ ನಷ್ಟದ ಅರ್ಜಿಯಲ್ಲಿ ಸುಮಾರು 1.80 ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಹಾನಿಯಾಗಿದೆ ಎಂದು ನಮೂದಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ತಾವೇ ಕಟ್ಟಿಸಿದ ತಮ್ಮ ಕನಸಿನ ಮನೆ ಕೂಡ ಒಂದು. ಲಕ್ಷಾಂತರ ರೂಪಾಯಿ ಲೋನ್ ಪಡೆದು ಮನೆ ಕಟ್ಟಿಸಿದ ಪವನ್ ಕುಮಾರ್ ಅದರಲ್ಲಿ ಸುಮಾರು 30 ವರ್ಷ ಜೀವನ ನಡೆಸಿ ಬದುಕು ಕಟ್ಟಿಕೊಂಡಿದ್ದರು. ಇಬ್ಬರು ಗಂಡು ಮಕ್ಕಳನ್ನ ಬೆಳೆಸಿದ್ರೆ, ಹೆಣ್ಣು ಮಕ್ಕಳಿಗೆ ಮದುವೆಯೂ ಮಾಡಿದ್ದರು. ವಯಸ್ಸಾದ ಕಾಲದಲ್ಲಿ ನೆಮ್ಮದಿಯಿಂದ ಇರೋಣ ಅನ್ನೋವಾಗ  ಚಿಕ್ಕ ಮಗ ಮಾಡಿದ ಆ ಒಂದು ಎಡವಟ್ಟು  ಪವನ್ ಕುಮಾರ್ ಅವರನ್ನ ಬೀದಿಗೆ ತಂದು ನಿಲ್ಲಿಸಿದೆ.

  ಇದನ್ನೂ ಓದಿ: Bangalore Crime: ಹೆಂಡತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಕೊಲೆಯಾದನಾ ಗಂಡ?

  ಕಳೆದ ವರ್ಷ ನಡೆದ ಗಲಭೆಯಲ್ಲಿ ಪವನ್ ಕುಮಾರ್ ಅವರ ಮನೆ ಬೆಂಕಿಯಿಂದ ತೀವ್ರ ಹಾಳಾಗಿತ್ತು. ಅದರಲ್ಲಿ ಇನ್ನೂ ವಾಸ ಮಾಡಲು ಕಷ್ಟ ಸಾಧ್ಯ ಎಂದು ತಿಳಿದು ಇತ್ತೀಚಿಗೆ ಸಂಪೂರ್ಣ ಮನೆ ನೆಲಸಮ ಮಾಡಿದ್ದಾರೆ. ಈಗಾಗಲೇ ನಷ್ಟದ ಬಗ್ಗೆ ಕ್ಲೈಮ್ಸ್ ಕಮೀಷನರ್ ಗೆ ಅರ್ಜಿ ಹಾಕಿದ್ದಾರೆ. ಹಾನಿ ಬಗ್ಗೆ ಸರ್ಕಾರದಿಂದ ಒಂದಷ್ಟು ಹಣ ಸಹಾಯವಾದ್ರೆ ಮತ್ತೆ ತಮ್ಮ ನಿವೇಶನದಲ್ಲಿ ಮನೆ ಕಟ್ಟಬೇಕು ಅನ್ನೋದು ಪವನ್ ಕುಮಾರ್ ಇರಾದೆ.

  ಸದ್ಯ ಇದ್ದ ಬದ್ದ ಸೂರು ಕಳೆದುಕೊಂಡಿರೋ ಪವನ್ ಕುಮಾರ್ ಪತ್ನಿಯ ಜೊತೆ ತಮ್ಮ ಹಿರಿ ಮಗನ ಜೊತೆ ವಾಸವಿದ್ದಾರೆ. ಅಂದು ರಾತ್ರಿ ನಡೆದ ಯಾರದೋ ಎಡವಟ್ಟು ಪವನ್ ಕುಮಾರ್ ಅವರಿಗೆ ಬರೆ ಎಳೆದಂತಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Kavya V
  First published: