ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಪಾಸಿಟಿವ್ ಸಂಖ್ಯೆಗಳು ರಕ್ತಬೀಜಾಸುರನ ರೀತಿ ಹೆಚ್ಚಾಗುತ್ತಲೇ ಇದೆ. ಸೋಂಕಿತರು ಹೆಚ್ಚಾದಂತೆಲ್ಲಾ ಬೆಡ್ಗಳ ಸಮಸ್ಯೆ, ಆಕ್ಸಿಜನ್ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ. ಇನ್ನು ಬೆಡ್ ದೊರೆತು ಆಸ್ಪತ್ರೆಗೆ ದಾಖಲಾದರೂ ಸಮಸ್ಯೆಗಳ ಸರಮಾಲೆ ಮುಗಿಯುತ್ತಲೇ ಇಲ್ಲ. ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ. ನನ್ನ ಪತಿಯ ಸಾವಿಗೆ ಆಸ್ಪತ್ರೆಯವರೇ ಕಾರಣ ಎಂದು ಪತಿಯನ್ನು ಕಳೆದುಕೊಂಡ ಪತ್ನಿಯೊಬ್ಬರು ಆಸ್ಪತ್ರೆ ಎದುರು ಕಣ್ಣೀರಿಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ ಬಳಿಕ ರೋಗಿಗಳ ಬಗ್ಗೆ ಆಸ್ಪತ್ರೆಯವರು ಯಾವುದೇ ಮಾಹಿತಿ ನೀಡಲ್ಲ. ಏಕಾಏಕಿ ಸಾವಿನ ಸುದ್ದಿ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
41 ವರ್ಷದ ಸೋಂಕಿತ ವ್ಯಕ್ತಿ ಎರಡ್ಮೂರು ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಸೋಂಕಿತರನ್ನು ದಾಖಲಿಸಿಕೊಂಡ ಆಸ್ಪತ್ರೆಯವರು ಅವರ ಮೊಬೈಲನ್ನು ಕಸಿದುಕೊಂಡಿದ್ದಾರಂತೆ. ಕುಟುಂಬದೊಂದಿಗೆ ಮಾತನಾಡಲು ಸಾಧ್ಯವಾಗದೆಯೇ ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಗೆ ದಾಖಲಾದ ಬಳಿಕ ಅವರ ಬಗ್ಗೆ ಯಾವುದೇ ಮಾಹಿತಿಯನ್ನು ಆಸ್ಪತ್ರೆಯವರು ತಿಳಿಸಿಲ್ಲ. ಏಕಾಏಕಿ ಕರೆ ಮಾಡಿ ಅವರು ಮೃತಪಟ್ಟಿದ್ದಾರೆ, ಹೆಣ ತೆಗೆದುಕೊಂಡು ಹೋಗಿ ಅನ್ನುತ್ತಿದ್ದಾರೆ ಎಂದು ಮೃತರ ಪತ್ನಿ ಆರೋಪಿಸಿದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಿಂಸೆ ಕೊಡುತ್ತಿದ್ದಾರೆ. ಸರಿಯಾಗಿ ಚಿಕಿತ್ಸೆ ಕೊಡುತ್ತಿಲ್ಲ. ರೋಗಿಗಳ ಆರೋಗ್ಯದ ಬಗ್ಗೆ ಸರಿಯಾದ ಅಪ್ಡೇಟ್ ಕೊಡುವುದಿಲ್ಲ. ಪೇಷೆಂಟ್ ಜೊತೆ ಮಾತನಾಡೋಕು ಬಿಡಲ್ಲ. ನನ್ನ ಗಂಡನ ಜೊತೆ ಮಾತನಾಡಿ ಎರಡು ದಿನ ಆಯ್ತು. ಅವರು ಆಸ್ಪತ್ರೆಯಲ್ಲಿ ಹೇಗಿದ್ದರು, ಹೇಗೆ ಚಿಕಿತ್ಸೆ ಕೊಡುತ್ತಿದ್ದರು. ಯಾವ ಆರೋಗ್ಯ ಸಮಸ್ಯೆ ಬಾಧಿಸಿ ಕೊನೆಯುಸಿರೆಳೆದರು ಅನ್ನೋದು ನಮಗೆ ಗೊತ್ತೇ ಆಗಲಿಲ್ಲ. ಕುಟುಂಬದೊಂದಿಗೆ ಮಾತನಾಡಿದ್ದರೆ ಅವರಿಗೆ ಆತ್ಮಸ್ಥೈರ್ಯವನ್ನು ತುಂಬುತ್ತಿದ್ದೆವು. ಕಡೆ ಪಕ್ಷ ಅವರೊಂದಿಗೆ ಕೊನೆಯ ಬಾರಿಯಾದ್ರೂ ಮಾತನಾಡುತ್ತಿದ್ದೆವು. ಮೊಬೈಲ್ ಕಸಿದುಕೊಂಡು ಅನಾಥರಂತೆ ಸಾಯುವ ಹಾಗೆ ಮಾಡಿದ್ದಾರೆ ಎಂದು ಗೋಳಾಡಿದರು.
ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಡಾಕ್ಟರ್ಗಳು ತುಂಬಾ ನೆಗ್ಲೇಟ್ ಮಾಡುತ್ತಾರೆ. ಕೇಳೋಕೆ ಹೋದರೆ ದಬಾಯಿಸ್ತಾರೆ. ಜೀವಗಳಿಗೆ ಬೆಲೆ ಇಲ್ವಾ ಎಂದು ಮೃತರ ಪತ್ನಿ ಆಕ್ರೋಶ ವ್ಯಕ್ತಪಡಿಸಿದರು. ಗೊರಗುಂಟೆಪಾಳ್ಯದ ಪೀಪಲ್ಸ್ ಟ್ರೀ ಆಸ್ಪತ್ರೆಯಲ್ಲಿ ಪಾಸಿಟಿವ್ ಬಂದಿತ್ತು. ಆದರೆ ಇಲ್ಲಿ ಅವರ ಕೋವಿಡ್ ರಿಪೋರ್ಟ್ ನೆಗೆಟಿವ್ ಬಂದಿತ್ತು. ಆದರೂ ಅವರಿಗೆ ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲ. ಅವರಿಗೆ ಬಾಯಲ್ಲಿ ಹುಣ್ಣಾಗಿತ್ತು, ಅದಕ್ಕೂ ಒಂದು ಮಾತ್ರೆ ಕೊಟ್ಟಿಲ್ಲ. ಒಳಗಡೆ ಏನಾಗ್ತಿತ್ತು ಅಂತಾನೇ ಗೊತ್ತಾಗಲ್ಲ. ನನ್ನ ಗಂಡನ ಸಾವಿಗೆ ವಿಕ್ಟೋರಿಯಾ ಆಸ್ಪತ್ರೆಯವರೇ ಕಾರಣ. ಅವರನ್ನ ನೋಡುತ್ತೀವಿ, ಅವರ ಜೊತೆ ಮಾತಾಡ್ತೀವಿ ಅಂತಾ ಗೋಗರೆದ್ರೂ ಬಿಡಲಿಲ್ಲ. ನಮ್ಮ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಕಣ್ಣೀರಾಕಿದ್ದಾರೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ