ನಾನು ಅಕ್ಕಿ ಕೊಟ್ಟೆ.. ಹಾಲು ಕೊಟ್ಟೆ ಆದರೂ ನಮಗೆ ಯಾಕೆ ಈ ಶಾಪ..? ಸಿದ್ದರಾಮಯ್ಯ ಭಾವುಕ ನುಡಿ

Siddarmaiah Emotional Talk: ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್​.ಯಡಿಯೂರಪ್ಪ ಅವರನ್ನು ತೆಗೆದು ಹಾಕಿದ್ದಾರೆ. ವಯಸ್ಸು ಆಗಿದೆ ಎಂದು ತೆಗೆದಿಲ್ಲ, ಬದಲಾಗಿ ದುಡ್ಡು ಹೊಡೆದ್ರು ಅಂತಾ ತೆಗೆದಿದ್ದು ಎಂದು ಸಿದ್ದರಾಮಯ್ಯ ಆರೋಪಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ

  • Share this:
ಬೆಂಗಳೂರು : ನಾನು ಮುಖ್ಯಮಂತ್ರಿ ಆಗಿದ್ದಾಗ ಅಕ್ಕಿ ಕೊಟ್ಟೆ, ಹಾಲು ಕೊಟ್ಟೆ ಆದರೆ ನನಗೆ ಯಾಕೆ ಈ ಶಾಪ ಎಂದು ಪದ್ಮನಾಭನಗರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾವುಕವಾಗಿ ಮಾತನಾಡಿದರು. ತನ್ನ ಸರ್ಕಾರ ಇದ್ದಾಗ ಹಲವು ಭಾಗ್ಯಗಳನ್ನು ಕೊಟ್ಟರು ಜನ ಕಾಂಗ್ರೆಸ್​ನ ಮರು ಆಯ್ಕೆ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ಬಿಜೆಪಿಯ ಮಾಜಿ ಸಚಿವ ಆರ್​.ಅಶೋಕ್​ ಅವರ ವಿಧಾನಸಭಾ ಕ್ಷೇತ್ರವಾದ ಪದ್ಮನಾಭನಗರದಲ್ಲಿ ಕಾಂಗ್ರೆಸ್​​ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಮಾಜಿ ಸಿಎಂ ಭಾವುಕರಾದರು. ಜೊತೆಗೆ ಸಿಎಂ ಬದಲಾವಣೆ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯನವರು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್​.ಯಡಿಯೂರಪ್ಪ ಅವರನ್ನು ತೆಗೆದು ಹಾಕಿದ್ದಾರೆ. ವಯಸ್ಸು ಆಗಿದೆ ಎಂದು ತೆಗೆದಿಲ್ಲ, ಬದಲಾಗಿ ದುಡ್ಡು ಹೊಡೆದ್ರು ಅಂತಾ ತೆಗೆದಿದ್ದು ಎಂದು ಸಿದ್ದರಾಮಯ್ಯ ಆರೋಪಿಸಿದರು. ಅಪ್ಪ - ಮಗ ಸೇರಿ ಲೂಟಿ ಮಾಡಿದ್ರು ಅಂತ ಸಿಎಂ ಸ್ಥಾನದಿಂದ ಬಿಜೆಪಿಯವರೇ ಕಿತ್ತು ಹಾಕಿದ್ದಾರೆ. ಐಟಿ, ಇಡಿ ಇದೆ ಎಂದು ಹೇಳಿ ಕೆಳಗಿಳಿಸಿದ್ದಾರೆ. ಆರ್ ಟಿ ಜಿಎಸ್ ಮೂಲಕ ಹಣ ತೆಗೆದುಕೊಂಡಿದ್ದಾರೆ. ಯಡಿಯೂರಪ್ಪ ಮದುವೆ ಊಟ ಮಾಡೇ ಇಲ್ಲ, ಬರೀ ತಿಥಿ ಊಟ ಮಾಡಿದವರು ಅವರು. ಅವರಿಗೆ ಮುಂಬಾಗಿಲಿಂದ ಬಂದು ಗೊತ್ತೇ ಇಲ್ಲ, ಹಿಂಬಾಗಿಲಿಂದ ಬಂದವರು ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್​ ಶಾಸಕರನ್ನು ಕರೆಕೊಂಡು ಸರ್ಕಾರ‌ ಮಾಡಿದ್ದಾರೆ. ನೂತನ ಸಿಎಂ ಬಸವರಾಜ ಬೊಮ್ಮಾಯಿ‌ ಬಗ್ಗೆ ಈಗ ಮಾತಾಡಲ್ಲ. ಮೂರು ನಾಲ್ಕು ತಿಂಗಳು ಹೋಗಲಿ ಆಮೇಲೆ ಅವರ ಬಗ್ಗೆ ಮಾತಾಡುತ್ತೇನೆ. ಬೊಮ್ಮಾಯಿಯನ್ನು ಸಿಎಂ ಮಾಡಿದ್ದು ಯಡಿಯೂರಪ್ಪ, ಹಾಗಾಗಿ ಬೊಮ್ಮಾಯಿ ಏನು ಮಾಡ್ತಾರೆ. ಸ್ಟ್ಯಾಂಪ್ ಆಗವುದು ಬಿಟ್ಟು ಎಂದು ಕುಟುಕಿದರು.

ಕೋವಿಡ್ ಸಾಂಕ್ರಾಮಿಕ ರೋಗವನ್ನು ನಾವು ಕಂಡು ಕೇಳಿರಲಿಲ್ಲ. ಚೀನಾದಿಂದ ನಮ್ಮ ದೇಶಕ್ಕೆ ಬಂದಿದೆ. ಕೋವಿಡ್ ಬರೋಕೆ ನಾವು ಕಾರಣನಾ? ಯಾರು ಸರ್ಕಾರ ನಡೆಸುತ್ತಾರೋ ಅವರೇ ಕಾರಣ. ಕೋವಿಡ್ ಬರೋಕೆ ಈ ಕ್ಷೇತ್ರದ  ಆರ್ ಅಶೋಕ ಕಾರಣ. ಅವರು ಸಿಎಂ ಆಗದೆ ಇರಬಹುದು, ಆದ್ರೆ ಕಂದಾಯ ಸಚಿವರಾಗಿದ್ದರಲ್ಲ. ಅಶೋಕ ಅವರನ್ನು ಅನೇಕ ಬಾರಿ ಗೆಲ್ಲಿಸಿದ್ದೀರಿ. ಜನರಿಗೆ ಆಹಾರ, ಔಷಧಿ, ಬೆಡ್ ಗಳು ಕೊಡುವುದು ಅಶೋಕ್ ಜವಾಬ್ದಾರಿ. ಕಾರ್ಯಕ್ರಮ ನಡೆಸಲು ಅಶೋಕ್ ಅನುಮತಿ ಪಡೆಯಬೇಕಂತೆ. ಈ‌ ಮೈದಾನ ಏನೂ ಅಶೋಕ್ ಅವರ ಅಪ್ಪನ ಮನೆ ಆಸ್ತಿನಾ. ಇದು ಪಬ್ಲಿಕ್ ಪ್ರಾಪರ್ಟಿ, ಅಧಿಕಾರಿಗಳು ಇದಕ್ಕೆ ಮಣೆ ಹಾಕಬಾರದು ಎಂದು ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ: ಸಿಎಂ ಆದ ಬಳಿಕವೂ ಅದೃಷ್ಟದ ಕಾರು, ಮನೆ ಬಿಡದ ಬೊಮ್ಮಾಯಿ: ಕಾರು ನಂ.9000 ಹಿಂದಿರುವ ರಹಸ್ಯವೇನು?

ಮುಂದೆ ನಾವೇ ಅಧಿಕಾರಕ್ಕೆ ಬರ್ತವೆ, ಅಧಿಕಾರಗಳು ಎಚ್ಚರಿಯಿಂದ ಇರಬೇಕು. ಅಶೋಕ ಒಬ್ಬ ಶಾಸಕ ಅಷ್ಟೇ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಪದ್ಮನಾಭ ನಗರದಲ್ಲಿ ಕಾಂಗ್ರೆಸ್​ ಪಕ್ಷವನ್ನು ಸೋಲಿಸಿದ್ದೀರಿ, ಅಶೋಕ್ ಅವರನ್ನು ಗೆಲ್ಲಿಸಿದ್ದೀರಿ. ಆರು ಬಾರಿ ಶಾಸಕರಾಗಿದ್ದಾರೆ, ನಿಮ್ಮ ದಮ್ಮಯಾ ಅಂತಿನಿ ಈ ಭಾರಿ ಬದಲಾವಣೆ ಮಾಡಿ ಎಂದು ಮನವಿ ಮಾಡಿದರು. ಅದಕ್ಕೆ ಕಾರ್ಯಕರ್ತರು ಈ ಸಲ ಒಳ್ಳೆಯ ಕ್ಯಾಂಡಿಡೇಟ್ ಬೇಕು ಎಂದು ಆಗ್ರಹಿಸಿದರು. ಇನ್ನು ಕೆಲ ಕಾರ್ಯಕರ್ತರು ನೀವೇ ಸ್ಪರ್ಧೆ ಮಾಡಿ ಎಂದು ಸಿದ್ದರಾಮಯ್ಯ ಪರ ಘೋಷಣೆ ಕೂಗಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ನವರು,  224 ಕ್ಷೇತ್ರದಲ್ಲೂ ನಾನು ನಿಲ್ಲೋಕೆ ಆಗಲ್ಲ. ನಾನು ಈಗ ಬಾದಾಮಿ ಶಾಸಕ, ಮುಂದಿನ ಬಾರಿಯೂ ಬಾದಾಮಿಯಿಂದ ನಿಲ್ಲುತ್ತೇನೆ. ಕಾಂಗ್ರೆಸ್​ ಚುನಾವಣೆಗೆ ಹೋಗಲು ಸಿದ್ಧ ಇದೆ ಎಂದರು.

ಬೊಮ್ಮಾಯಿ ಅನ್ನು ಸಿಎಂ  ಮಾಡಿದ್ದಾರೆ. ಆದ್ರೂ ಏನು ಬದಲಾವಣೆ ಆಗಲ್ಲ, ಭ್ರಷ್ಟ ಸರ್ಕಾರವಿದು. ಕೂಡಲೇ ಮಂತ್ರಿ ಮಂಡಲ ಮಾಡಬೇಕು. ಪ್ರವಾಹದಿಂದ ಜನ ಕಷ್ಟ ಪಡುತ್ತಿದ್ದಾರೆ. ಕೊರೊನಾ ಮೂರನೇ ಅಲೆ ಬರ್ತಾ ಇದೆ. ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೂಡಲೇ ಪಟ್ಟಿ ತಂದು ಮಂತ್ರಿ ಮಂಡಲ ಮಾಡಬೇಕು. ಸಮಸ್ಯೆಗಳಿಗೆ ಪರಿಹಾರ ಸರ್ಕಾರ ಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
Published by:Kavya V
First published: