ಬೆಂಗಳೂರು (ಆ. 12): ಮೇಕೆದಾಟು ವಿಚಾರದಲ್ಲಿ ನನ್ನದು ಭಾರತದ ನಿಲುವು ಎಂಬ ಬಿಜೆಪಿ ನಾಯಕ ಸಿಟಿ ರವಿ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ, ನಾವೇನು ಪಾಕಿಸ್ತಾನದವರಾ ಎಂದ್ರು ಪ್ರಶ್ನಿಸಿದ್ದಾರೆ. ನಾವೇನು ಪಾಕಿಸ್ತಾನದವರಾ? ಚೈನಾದವರಾ? ಅಮೆರಿಕಾದವರಾ? ನಾವು ಭಾರತೀಯರೇ...ಬಿಜೆಪಿಯವರಿಗೆ ಮಾತ್ರ ಭಾರತೀಯರು ಎನ್ನುವ ಗುತ್ತಿಗೆ ಕೊಟ್ಟಿಲ್ಲ. ನಾವು ಹುಟ್ಟಿರುವುದು ಈ ಮಣ್ಣಿನಲ್ಲಿ. ನಾನು ಭಾರತೀಯ ಎನ್ನುವುದಕ್ಕಿಂತ ಮುಂಚೆ ನಾನು ಮೊದಲು ಕನ್ನಡಿಗ. ಕನ್ನಡಿಗನಾಗಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿರುದ್ದ ಧ್ವನಿ ಎತ್ತುವುದು ನನ್ನ ಕರ್ತವ್ಯ. ಮೊದಲು ಕರ್ನಾಟಕ, ನನ್ನ ತಾಯಿ ನನಗೆ ಮೊದಲು ಮುಖ್ಯ.ನನ್ನ ತಾಯಿ ಉಳಿದುಕೊಂಡ್ರೆ ತಾನೇ ಭಾರತೀಯ ತಾಯಿ ಉಳಿಸಿಕೊಳ್ಳುವುದು ಸಿಟಿ ರವಿ ಇದನ್ನ ಅರ್ಥ ಮಾಡಿಕೊಳ್ಳಲಿ ಎಂದು ಹರಿಹಾಯ್ದರು.
ಮೇಕೆದಾಟು ವಿಚಾರದಲ್ಲಿ ಬಿಜೆಪಿ ದ್ವಿಮುಖ ನಿಲುವು ತಾಳಿದೆ. ಬಿಜೆಪಿ ಇಬ್ಬಾಗ ನೀತಿ ಮಾಡುತ್ತಿದೆ ಎಂಬುವುದರಲ್ಲಿ ಸಂಶಯವೇ ಇಲ್ಲ. ಬಿಜೆಪಿ, ಕಾಂಗ್ರೆಸ್ ಎರಡು ಪಕ್ಷದ ನಡವಳಿಕೆ ನೋಡಿದ್ದೇವೆ. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತಾಡಿರುವುದನ್ನು ನೋಡಿದ್ದೇನೆ. ಹಾಸನದಲ್ಲಿ ಒಬ್ಬರು ನಮ್ಮ ಬಗ್ಗೆ ಮಾತಾಡಿದ್ದಾರೆ. ಅವರ ಪಕ್ಷ ಉಳಿಸಿಕೊಳ್ಳಲು ನಮ್ಮ ಪಕ್ಷವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ ಎಂದು ಇದೇ ವೇಳೆ ಎಚ್ಚರಿಸಿದರು
ಶಿಸ್ತುಬದ್ದ ಪಕ್ಷದಲ್ಲಿ ಅಪಹಾಸ್ಯದ ವಿದ್ಯಮಾನ
ಬಿಜೆಪಿಯ ಬೆಳವಣಿಗೆಗಳು ನೋಡಿದರೆ ಮುಂದೆ ಯಾರೇ ಸಿಎಂ ಆದರೂ ಮಕ್ಕಳ ಆಟಿಕೆಯಂತೆ ವಾತಾವರಣ ನಿರ್ಮಾಣವಾಗಿದೆ. ಶಿಸ್ತು ಬದ್ದ ಪಾರ್ಟಿಯಲ್ಲಿ ಖಾತೆ ಕಿತ್ತಾಟ ನಡೆಯುತ್ತಿದೆ. ಶಿಸ್ತು ಬದ್ದ ಪಕ್ಷದಲ್ಲಿ ಅಪಹಾಸ್ಯಕ್ಕೆ ಕಾರಣವಾದ ವಿದ್ಯಮಾನಗಳು ನಡೆಯುತ್ತಿವೆ. ಶಾಸಕ ಎಂಪಿ ಕುಮಾರಸ್ವಾಮಿ ಅವರೇ ಕುಮಾರಸ್ವಾಮಿ ಅವರ ಕಾಲದಲ್ಲಿ ಕೆಲಸ ಆಗ್ತಿತ್ತು. ಗೌರವ ಸಿಗುತ್ತಿತ್ತು ಅಂತ ಹೇಳಿದ್ದಾರೆ. ನಮ್ಮದೇ ಸರ್ಕಾರ ಇದ್ದರು ಕೆಲಸ ಆಗುತ್ತಿಲ್ಲ ಎಂದು ದೂರಿದ್ದಾರೆ. ಎಂಪಿ ಕುಮಾರಸ್ವಾಮಿಗೆ ಮಾತ್ರವಲ್ಲ, ಬಿಜೆಪಿ ಹಲವಾರು ಶಾಸಕರಲ್ಲಿ ಅದೇ ಭಾವನೆ ಇದೆ. ನನ್ನ ಕಾಲದಲ್ಲಿ ನಾನು ಎಲ್ಲರಿಗೂ ಗೌರವ ಕೊಡುತ್ತಿದೆ
ಬಿಜೆಪಿಯವರಿಗೆ ಜೆಡಿಎಸ್ ಹೆಸರೇಳಿ ರಾಜಕಾರಣ ಮಾಡುವ ಅನಿವಾರ್ಯತೆ
ಈಗಿನ ಬಿಜೆಪಿ ಪಕ್ಷ ರಕ್ಷಣೆ ಪಡೆಯಲು ಜೆಡಿಎಸ್ ಪಕ್ಷವನ್ನ ಬಳಸಿಕೊಳ್ಳುತ್ತಿದೆ. ಯಾವ ಪಕ್ಷ ರಾಜ್ಯದಲ್ಲಿ ಮುಗಿದೇ ಹೋಯ್ತು ಅಂತ ಹೇಳಿದರೋ ಅದೇ ಪಕ್ಷದ ವ್ಯಕ್ತಿಗಳು ಮುಂದಿನ ರಾಜಕಾರಣ ಜೆಡಿಎಸ್ ನಿಂದಲೇ ಉಳಿಯುತ್ತೆ ಎನ್ನುವ ಭಾವನೆ ಇಟ್ಟುಕೊಂಡಿದ್ದಾರೆ. ಈ ಸರ್ಕಾರ ಉಳಿಬೇಕಾದರೆ ಜೆಡಿಎಸ್ ಇದೆ ಎನ್ನುವ ಗುಮ್ಮ ಬಿಟ್ಟುಕೊಂಡು ಕೆಲವರು ಮಾತಾಡ್ತಿದ್ದಾರೆ .ಜೆಡಿಎಸ್ ಪಕ್ಷದ ನೆರಳು, ಜೆಡಿಎಸ್ ಪಕ್ಷದ ಹೆಸರನ್ನು ಹೇಳಿಕೊಂಡು ರಾಜಕಾರಣ ಮಾಡುವ ಅನಿವಾರ್ಯ ಉಂಟಾಗಿದೆ ಎಂದರು
ಇದನ್ನು ಓದಿ: ಮೇಕೆದಾಟು ವಿಚಾರದಲ್ಲಿ ಸಿಟಿ ರವಿ ಕನ್ನಡಿಗರ ಪರ ಇಲ್ಲ; ಸಿದ್ದರಾಮಯ್ಯ
ಜನ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು
ನಮ್ಮ ಪಕ್ಷದ ಪ್ರಾದೇಶಿಕ ನೆಲಗಟ್ಟು ಹೊಂದಿರುವ ಪಕ್ಷ. ಬೆಂಗಳೂರು, ಉತ್ತರ ಕರ್ನಾಟಕದ ಜನರಿಗೆ ನೀರಾವರಿ ಕೊಡುಗೆ ಕೊಟ್ಟವರು ದೇವೇಗೌಡರು. ಆದರೆ ಜನ ಕಾಂಗ್ರೆಸ್, ಬಿಜೆಪಿಗೆ ಮತ ಹಾಕ್ತಾರೆ. ಜೆಡಿಎಸ್ ಮರೆಯುತ್ತಾರೆ. ಬೆಂಗಳೂರು ಜನ ಕಾವೇರಿ ನೀರು ಕುಡಿಯುತ್ತಿದ್ದರೆ ಅದು ದೇವೇಗೌಡರ ಕೊಡುಗೆ. ಇದನ್ನ ಜನರು ಅರ್ಥ ಮಾಡಿಕೊಳ್ಳಬೇಕು. ಜನರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ರಾಷ್ಟ್ರೀಯ ಪಕ್ಷಗಳಿಂದ ನಾಡಿಗೆ ಅಪಮಾನ ಆಗುತ್ತದೆ. ಇದಕ್ಕೆ ಜನ ಅವಕಾಶ ಕೊಡಬಾರದು.
2023 ಕ್ಕೆ ಜೆಡಿಎಸ್ ಪಕ್ಷದ್ದು ಮಿಷನ್ 123
ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ನ ಭಯ ಶುರುವಾಗಿದೆ. ಕರ್ನಾಟಕದಲ್ಲಿ 2023 ಕ್ಕೆ ಜನತಾದಳ ಟಾರ್ಗೆಟ್ 123 ಕ್ಷೇತ್ರಗಳ ಗೆಲ್ಲುವ ಗುರಿ ರೂಪಿಸಿದೆ. ಮಿಷನ್ 123 ಜೆಡಿಎಸ್ ಟಾರ್ಗೆಟ್. ಅದನ್ನ ಮುಂದೆ ಕಾದು ನೋಡಿ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ