Buses for School & College Students: ಇನ್ಮುಂದೆ ವಿದ್ಯಾರ್ಥಿಗಳ ತರಗತಿ ಸಮಯಕ್ಕೆ ತಕ್ಕಂತೆ ಬಸ್ ಸೌಲಭ್ಯ

KSRTC Bus Facility for Students: ತರಗತಿಗಳ ಅವಧಿಗೆ ಸರಿಯಾಗಿ ಬಸ್ ಸಂಚಾರದಿಂದ ಮಕ್ಕಳ ಹಾಜರಾತಿ ಇನ್ನಷ್ಟು ಹೆಚ್ಚಳವಾಗುತ್ತದೆ. ಬಸ್‌ಗಳಲ್ಲಿ ಸಂಚರಿಸುವ ಮಕ್ಕಳು ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಮಕ್ಕಳು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸಲಹೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಬೆಂಗಳೂರು:  ದೂರದ ಸ್ಥಳಗಳಿಂದ ಶಾಲಾ-ಕಾಲೇಜುಗಳಿಗೆ ತೆರಳುವ ಮಕ್ಕಳು ಸಮಯಕ್ಕೆ ಸರಿಯಾಗಿ ತಲುಪಲು ಅನುಕೂಲವಾಗುವಂತೆ ರಾಜ್ಯದ ಎಲ್ಲ ಭಾಗಗಳಲ್ಲಿ KSRTC ಬಸ್‌ಗಳು ಸಂಚರಿಸಲಿವೆ. ಈ ಬಗ್ಗೆ ಸಂಬಂಧಪಟ್ಟ ಕೆಎಸ್​​ಆರ್​​ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು. ಪ್ರೌಢ ಶಾಲೆ 9 ಮತ್ತು 10ನೇ ತರಗತಿಗಳು, ಪಿಯು ತರಗತಿಗಳು ಪುನಾರಂಭವಾಗಿದ್ದು, ಹಾಜರಾಗುವ ಮಕ್ಕಳ ಸಂಖ್ಯೆ ದಿನೇ ದಿನೇ ಏರುತ್ತಿದೆ. ಹೀಗಾಗಿ, ರಾಜ್ಯದ ಹಲವು ಭಾಗಗಳಲ್ಲಿ ಶಾಲೆ ಸಮಯಕ್ಕೆ ಬಸ್‌ಗಳು ಸಂಚರಿಸುವುದು ಅತ್ಯಗತ್ಯವಾಗಿದೆ. ಕೋವಿಡ್ ಲಾಕ್‌ಡೌನ್ ಪೂರ್ವದಲ್ಲಿ ಶಾಲಾ ಅವಧಿಗೆ ಸರಿಯಾಗಿ ಮಕ್ಕಳು ತಲುಪುವಂತೆ ಬಸ್ ಸಂಚರಿಸುತ್ತಿದ್ದವು. ಈಗ ಅದೇ ರೀತಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಸಂಚರಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.

ತರಗತಿಗಳ ಅವಧಿಗೆ ಸರಿಯಾಗಿ ಬಸ್ ಸಂಚಾರದಿಂದ ಮಕ್ಕಳ ಹಾಜರಾತಿ ಇನ್ನಷ್ಟು ಹೆಚ್ಚಳವಾಗುತ್ತದೆ. ಬಸ್‌ಗಳಲ್ಲಿ ಸಂಚರಿಸುವ ಮಕ್ಕಳು ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಮಕ್ಕಳು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸಲಹೆ, ಸೂಚನೆಗಳನ್ನು ನಿರ್ವಾಹಕರು ನೀಡುತ್ತಿರಬೇಕು ಎಂದು ಸಚಿವ ಬಿ.ಸಿ ನಾಗೇಶ್ ತಿಳಿಸಿದರು.

ಸೆ.15ರ ಒಳಗೆ ಎಲ್ಲ ಶಾಲೆಗಳಿಗೆ ಪಠ್ಯ ಪುಸ್ತಕಗಳ ಪೂರೈಕೆಗೆ ಕ್ರಮ

ಸೆಪ್ಟೆಂಬರ್ 15ರ ಒಳಗೆ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ಪೂರೈಕೆ ಮಾಡುವ ಗುರಿ ಹೊಂದಲಾಗಿದೆ. ನಿಗದಿತ ಅವಧಿಯೊಳಗೆ ಪಠ್ಯ ಪುಸಕ್ತಗಳು ತಲುಪುವ ವಿಶ್ವಾಸವಿದೆ ಎಂದು  ತಿಳಿಸಿದರು.‘ಕೋವಿಡ್-19 ಕಾರಣದಿಂದ ಸರಕಾರಿ ಮುದ್ರಣಾಲಯಗಳು ಕೆಲ ಅವಧಿಗೆ ಮುದ್ರಣ ಸ್ಥಗಿತಗೊಳಿಸಿದ್ದವು. ಹೀಗಾಗಿ, ಮುದ್ರಣ ಪ್ರಕ್ರಿಯೆ ವಿಳಂಬವಾಗಿದೆ. ಆದರೂ, ಶಾಲೆ ಆರಂಭಕ್ಕೆ ಮೊದಲೇ ಶೇ.50ರಷ್ಟು ಪಠ್ಯ ಪುಸ್ತಕಗಳು ಶಾಲೆಗಳನ್ನು ತಲುಪಬೇಕು ಎಂಬ ಗುರಿ ಹೊಂದಲಾಗಿತ್ತು. ಅದರಂತೆ ರಾಜ್ಯದ ಶೇ.50ಕ್ಕಿಂತ ಹೆಚ್ಚು ಶಾಲೆಗಳಿಗೆ ಪುಸ್ತಕಗಳನ್ನು ಪೂರೈಸಲಾಗಿದೆ' ಎಂದು ತಿಳಿಸಿದರು.

‘ಇಂದಿನವರೆಗೆ ಶೇ.70ಕ್ಕಿಂತ ಹೆಚ್ಚು ಪಠ್ಯ ಪುಸ್ತಕಗಳು ಮುದ್ರಣಗೊಂಡಿವೆ. ಮುಂದಿನ ಒಂದು ವಾರದೊಳಗೆ ಮುದ್ರಣಗೊಂಡಿರುವ ಎಲ್ಲ ಪುಸ್ತಕಗಳು ಶಾಲೆಗಳಿಗೆ ತಲುಪುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಆಯಾ ತರಗತಿಗಳಿಗೆ ಸಂಬಂಧಿಸಿದ ಎಲ್ಲ ವಿಷಯ, ಭಾಷೆ ಪುಸ್ತಕಗಳು ಮುದ್ರಣಗೊಂಡ ಕೂಡಲೇ ಶಾಲೆಗಳಿಗೆ ಪೂರೈಕೆ ಮಾಡಲಾಗುತ್ತದೆ. ಸೆಪ್ಟಂಬರ್ 15ರ ಒಳಗಾಗಿ ಎಲ್ಲ ಶಾಲೆಗಳಿಗೆ ಪುಸ್ತಕಗಳು ತಲುಪಿಸುವ ಗುರಿ ಹೊಂದಲಾಗಿದೆ’ ಎಂದು ಸಚಿವರು ತಿಳಿಸಿದರು.

ಆನ್‌ಲೈನ್‌ನಲ್ಲೇ ಪುಸ್ತಕಗಳನ್ನು ಡೌನ್‌ಲೋಡ್

‘ಆನ್‌ಲೈನ್ ಶಿಕ್ಷಣದ ಅಗತ್ಯಕ್ಕೆ ತಕ್ಕಂತೆ ಪಠ್ಯವನ್ನು ಸಿದ್ದಪಡಿಸಿ ಆನ್‌ಲೈನ್‌ಗೆ ಅಪ್‌ಲೋಡ್ ಮಾಡಲಾಗಿತ್ತು. ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಮಕ್ಕಳಿಗೆ, ಪಾಲಕರಿಗೆ ತಿಳಿಸಲಾಗಿತ್ತು. ಹೀಗಾಗಿ, ಬಹುತೇಕ ಮಕ್ಕಳು ಆನ್‌ಲೈನ್‌ನಲ್ಲೇ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ’ ಎಂದು ಸಚಿವರು ತಿಳಿಸಿದರು. ‘ಶಾಲೆಗಳ ಮುಖ್ಯ ಶಿಕ್ಷಕರಿಗೆ, ಆಡಳಿತ ಮಂಡಳಿಗಳಿಗೆ ಪಠ್ಯ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುವಂತೆ ಸೂಚನೆ ನೀಡಲಾಗಿದೆ’ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ಉಡುಪಿಯಲ್ಲಿ ಸೆಪ್ಟೆಂಬರ್ ಮೊದಲ ವಾರ ಶಾಲೆ ಆರಂಭ; ಮಾಸ್ಕ್ ಇಲ್ಲದಿದ್ದರೆ ಕೋವಿಡ್ ಟೆಸ್ಟ್

ರಾಜ್ಯದಲ್ಲಿ ಇಂದು 1224 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಇಂದು ಒಂದೇ ದಿನ 22 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. 1668 ಮಂದಿ ಇಂದು ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು 309 ಪಾಸಿಟಿವ್​​ ಕೇಸ್​ಗಳು ಪತ್ತೆಯಾಗಿದ್ದು, ಒಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಇಂದು ಪಾಸಿಟಿವಿಟ್ 0.62 %, ಸಾವಿನ ಪ್ರಮಾಣ 1.79 %ರಷ್ಟು ಇದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: