SSLC Result: ನಾಳೆ ಎಸ್​ಎಸ್ಎಲ್​ಸಿ ಫಲಿತಾಂಶ ಪ್ರಕಟವಾಗುವುದಿಲ್ಲ; ಶಿಕ್ಷಣ ಇಲಾಖೆ

ಫಲಿತಾಂಶ ಪ್ರಕಟಣೆ ಕುರಿತು ಇನ್ನು ಅನುಮತಿ ಸಿಗದ ಹಿನ್ನಲೆ ಇನ್ನು ಎರಡು ದಿನಗಳ ಬಳಿಕ ಫಲಿತಾಂಶ ಘೋಷಣೆಯಾಗುವ ಸಾಧ್ಯತೆ ಇದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು (ಆ. 6): ನಾಳೆ ಎಸ್ಎಸ್ಎಲ್​ಸಿ ಫಲಿತಾಂಶ ಪ್ರಕಟ ಮಾಡುವ ಕುರಿತು ಶಿಕ್ಷಣ ಇಲಾಖೆ ಇನ್ನು ಯಾವುದೇ ಘೋಷಣೆ ನಡೆಸಿಲ್ಲ. ಹೀಗಾಗಿ ನಾಳೆ ನಿಗದಿಯಾಗಿದ್ದ ಫಲಿತಾಂಶದ ದಿನ ಮುಂದೂಡಿಕೆಯಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೊದಲು ಆಗಸ್ಟ್​ 7ರಂದು ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟಿಸಲಾಗುವುದು ಎನ್ನಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಇಲಾಖೆ ನಾಳೆ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾಗುವುದಿಲ್ಲ. ಫಲಿತಾಂಶ ಪ್ರಕಟಣೆ ಕುರಿತು ಇನ್ನು ಸರ್ಕಾರದಿಂದ ಅನುಮತಿ ಸಿಗದ ಹಿನ್ನಲೆ ಇನ್ನು ಎರಡು ದಿನಗಳ ಬಳಿಕ ಫಲಿತಾಂಶ ಘೋಷಣೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.

    ಈಗಾಗಲೇ ಮೌಲ್ಯ ಮಾಪನ ಪೂರ್ಣಗೊಂಡಿದ್ದು, ಫಲಿತಾಂಶ ಪ್ರಕಟಣೆಗೆ ಸಕಲ ತಯಾರಿಯನ್ನು ಶಿಕ್ಷಣ ಇಲಾಖೆ ನಡೆಸಿದೆ. ಆದರೆ, ಸರ್ಕಾರದಲ್ಲಿ ನಡೆದ ಬದಲಾವಣೆಗಳಿಂದಾಗಿ ಫಲಿತಾಂಶ ವಿಳಂಬವಾಗಲಿದೆ. ಸದ್ಯ ಸಚಿವ ಸಂಪುಟ ನಿರ್ಮಾಣವಾಗಿದ್ದು, ಖಾತೆ ಹಂಚಿಕೆಯಾಗಿಲ್ಲ. ಈ ಹಿನ್ನಲೆ ಶಿಕ್ಷಣ ಸಚಿವರಿಲ್ಲದ ಕಾರಣ ಫಲಿತಾಂಶ ಪ್ರಕಟಕ್ಕೆ ಇನ್ನೆರಡು ದಿನ ತಡವಾಗಬಹುದು ಎನ್ನಲಾಗಿದೆ.

    ಖಾತೆ ಹಂಚಿಕೆ ಕಾರ್ಯ ಇಂದು ಸಂಜೆಯೊಳಗೆ ಬಹುತೇಕ ಪೂರ್ಣಗೊಳ್ಳಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ವೇಳೆ ಶಿಕ್ಷಣ ಇಲಾಖೆ ಜವಾಬ್ದಾರಿ ಯಾವ ಸಚಿವರಿಗೆ ಸಿಗಲಿದೆ ಎಂಬ ಸ್ಪಷ್ಟತೆ ಸಿಗಲಿದೆ. ಬಳಿಕ ನೂತನ ಶಿಕ್ಷಣ ಸಚಿವರು ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ, ಫಲಿತಾಂಶ ಪ್ರಕಟಣೆ ಕುರಿತು ಅವರೇ ಘೋಷಣೆ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

    ಕೋವಿಡ್ ಆತಂಕದಲ್ಲೂ ಸಕಲ ಮುನ್ನೆಚ್ಚರಿಕಾ ಕ್ರಮವಹಿಸಿ ಶಿಕ್ಷಣ ಇಲಾಖೆ ಕಳೆದ ಜು. 19 ಮತ್ತು 22 ರಂದು ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ನಡೆಸಿತ್ತು. ಜುಲೈ 19ರಂದು ಮೊದಲ ದಿನ ನಡೆದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಜು. 22ರಂದು ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಗಳ ಪರೀಕ್ಷೆ ಬರೆದಿದ್ದರು. ಬಹು ಆಯ್ಕೆಯ ಉತ್ತರ ಗಳೊಂದಿಗೆ ಸರಳವಾಗಿ 40 ಅಂಕಗಳಿಗೆ ಪರೀಕ್ಷೆಯನ್ನು ನಡೆಸಲಾಗಿತ್ತು.

    ಇದನ್ನು ಓದಿ: ಗಡಿ ಜಿಲ್ಲೆಗಳಲ್ಲಿ ವೀಕೆಂಡ್​​​ ಕರ್ಫ್ಯೂ; ಆಗಸ್ಟ್​ 23 ರಿಂದ ಶಾಲೆ-ಕಾಲೇಜು ಆರಂಭ; ಸಿಎಂ ಬಸವರಾಜ್​ ಬೊಮ್ಮಾಯಿ

    ಕೊರೋನಾ ಸೋಂಕಿನ ನಡುವೆ ಮಳೆ ಅಬ್ಬರದಲ್ಲೂ ವಿದ್ಯಾರ್ಥಿಗಳು ಹಿಂದೆಂದಿಗಿಂತಲೂ ಉತ್ಸಾಹದಿಂದ ಪರೀಕ್ಷೆ ಬರೆದಿದ್ದರು. ಶೇ 99.65 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಮೂಲಕ ದಾಖಲೆ ಬರೆದಿದ್ದರು. ಮಾಜಿ ಶಿಕ್ಷಣ ಸಚಿವರಾಗಿದ್ದ ಸುರೇಶ್​ ಕುಮಾರ್​, ಆಗಸ್ಟ್​ 10ರೊಳಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದ್ದರು.

    ಕೊರೋನಾ ನಡುವೆಯೂ  ಸವಾಲಾಗಿ ಸ್ವೀಕರಿಸಿ ಯಶಸ್ವಿಯಾಗಿ ಶಿಕ್ಷಣ ಇಲಾಖೆ ಪರೀಕ್ಷೆ ನಡೆಸಿತ್ತು. ಇದೇ ಹಿನ್ನಲೆ ಈ ಬಾರಿ ನಡೆದ ಎಸ್​ಎಸ್​​ಎಲ್​ಸಿ ಪರೀಕ್ಷೆ ಬಗ್ಗೆ ಪುಸ್ತಕ ಮಾಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದ್ದು, 'ಯಶೋಗಾಥೆ' ಹೆಸರಿನಲ್ಲಿ ಪುಸ್ತಕ ಬಿಡುಗಡೆ ಆಗಲಿದೆ. ಪುಸ್ತಕದಲ್ಲಿ ಪರೀಕ್ಷೆ ನಡೆಸಲು ಇಲಾಖೆ ತೆಗೆದುಕೊಂಡ ಕ್ರಮ, ನಿರ್ಧಾರ ಹಾಗೂ ಸಿದ್ಧತೆ, ಪರೀಕ್ಷೆ ವೇಳೆ ನಡೆದ ಇಂಟ್ರೆಸ್ಟಿಂಗ್ ವಿಚಾರಗಳು ಪುಸ್ತಕದಲ್ಲಿ ಇರಲಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
    Published by:Seema R
    First published: