dominos video: ಪ್ರೀತಿ ಒಪ್ಪಿಕೊಳ್ಳದ್ದಕ್ಕೆ ಸಿಟ್ಟು: ಕೆಲಸದ ನೆಪ ತೆಗೆದು ಯುವತಿ ಮೇಲೆ ಮ್ಯಾನೇಜರ್​ ಅಮಾನುಷ ಹಲ್ಲೆ

dominos assault video: ಪ್ರೀತಿಗೆ ಒಲ್ಲೆ ಎಂದ ಯುವತಿ ಮೇಲೆ ದ್ವೇಷ ಕಾರುತ್ತಿದ್ದ ಮ್ಯಾನೇಜರ್​​​ ಆಕೆಗೆ ಕಾಟ ಕೊಡಲು ತನ್ನ ಹುದ್ದೆಯನ್ನು ಬಳಸಿಕೊಂಡಿದ್ದಾನೆ. ಕೆಲಸದ ವಿಚಾರವಾಗಿ ತಗಾದೆ ತೆಗೆದು ಯುವತಿಯನ್ನು ಹೊಡೆದೇ ಬಿಟ್ಟಿದ್ದಾನೆ.

ಮಹಿಳಾ ಸಿಬ್ಬಂದಿ ಮೇಲೆ ಮ್ಯಾನೇಜರ್​ ಹಲ್ಲೆ

ಮಹಿಳಾ ಸಿಬ್ಬಂದಿ ಮೇಲೆ ಮ್ಯಾನೇಜರ್​ ಹಲ್ಲೆ

  • Share this:
    ಬೆಂಗಳೂರು: ಡಾಮಿನೋಸ್​​ ಪಿಜ್ಜಾದಲ್ಲಿ ಮಹಿಳಾ ಸಿಬ್ಬಂದಿ ಮೇಲೆ ಮ್ಯಾನೇಜರ್​ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಬಯಲಾಗಿದೆ. ಮಹಿಳಾ ಸಿಬ್ಬಂದಿ ಅಂತಲೂ ನೋಡದೆ ಹೊಡೆದಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಲ್ಲೆ ವಿಡಿಯೋದಿಂದ ಮ್ಯಾನೇಜರ್​​​ ಬಂಡವಾಳ ಬಯಲಾಗಿದೆ. ರಾಮಕೃಷ್ಣ ಆಶ್ರಮ ರಸ್ತೆಯಲ್ಲಿರುವ ಡಾಮಿನೋಸ್​ ಔಟ್​ಲೇಟ್​ನಲ್ಲಿ ಘಟನೆ ನಡೆದಿದೆ. ಕೆಲಸ ಹೋಗುವ ಭೀತಿಯಲ್ಲಿ ಹಲ್ಲೆಗೊಳಗಾದ ಯುವತಿ ಪೊಲೀಸರಿಗೆ ದೂರು ನೀಡಿಲ್ಲ. ಇನ್ನು ಹಲ್ಲೆಗೆ ದ್ವೇಷವೇ ಕಾರಣ ಎನ್ನಲಾಗುತ್ತಿದೆ.

    ಪ್ರೀತಿ ಒಪ್ಪಿಕೊಳ್ಳದ್ದಕ್ಕೆ ಸಿಟ್ಟು

    ಅಮಾನುಷವಾಗಿ ಹಲ್ಲೆ ನಡೆಸಿರುವ ಆರೋಪಿಯ ಹೆಸರು ಪುರುಷೋತಮ್​. ರಾಮಕೃಷ್ಣ ಆಶ್ರಮ ರಸ್ತೆಯಲ್ಲಿರುವ ಡಾಮಿನೋಸ್​ ಪಿಜ್ಜಾಗೆ ಈತನೇ ಮ್ಯಾನೇಜರ್​. ಹಲ್ಲೆಗೊಳಗಾದ ಯುವತಿ ಈತನ ಕೈಕೆಳಗೆ ಕೆಲಸ ಮಾಡುತ್ತಿದ್ದಳು. ಕಳೆದ ಕೆಲವು ದಿನಗಳಿಂದ ತನ್ನನ್ನು ಪ್ರೀತಿ ಮಾಡುವಂತೆ ಮ್ಯಾನೇಜರ್​ ಪುರುಷೋತಮ್​​ ಯುವತಿಯನ್ನು ಪೀಡಿಸುತ್ತಿದ್ದನಂತೆ. ಆದರೆ ಪುರುಷೋತಮ್​ನ ಪ್ರೀತಿಸಲು ಯುವತಿ ನಿರಾಕರಿಸಿದ್ದಾಳೆ. ಜೊತೆಗೆ ಬೇರೊಬ್ಬ ಯುವಕನನ್ನು ಯುವತಿ ಪ್ರೀತಿಸುತ್ತಿದ್ದದ್ದು ಮ್ಯಾನೇಜರ್​ ಪುರುಷೋತಮ್​ಗೆ ಗೊತ್ತಾಗಿದೆ.

    ಪ್ರೀತಿಗೆ ಒಲ್ಲೆ ಎಂದ ಯುವತಿ ಮೇಲೆ ದ್ವೇಷ ಕಾರುತ್ತಿದ್ದ ಮ್ಯಾನೇಜರ್​​​ ಆಕೆಗೆ ಕಾಟ ಕೊಡಲು ತನ್ನ ಹುದ್ದೆಯನ್ನು ಬಳಸಿಕೊಂಡಿದ್ದಾನೆ. ಕೆಲಸದ ವಿಚಾರವಾಗಿ ತಗಾದೆ ತೆಗೆದು ಯುವತಿಯನ್ನು ಹೊಡೆದೇ ಬಿಟ್ಟಿದ್ದಾನೆ. ವಿಡಿಯೋದಲ್ಲಿ ಯುವತಿಯ ಜೊತೆಗೆ ಮತ್ತೊಬ್ಬ ಸಿಬ್ಬಂದಿಯೂ ನಿಂತಿರುವುದನ್ನು ಕಾಣಬಹುದು. ಇಬ್ಬರು ಸಿಬ್ಬಂದಿಗೆ ಮ್ಯಾನೇಜರ್​ ಪುರುಷೋತಮ್​​ ಸಿಟ್ಟಿನಿಂದ ಬೈಯುತ್ತಿದ್ದಾನೆ. ನಂತರ ಮೊಬೈಲ್​ ಹಿಡಿದುಕೊಂಡು ಇನ್ನೊಂದು ಕೈನಿಂದ ಯುವತಿಯ ಕಪಾಳಕ್ಕೆ ಹೊಡೆದಿದ್ದಾನೆ. ಹಲ್ಲೆಯ ರಭಸಕ್ಕೆ ಯುವತಿ ಕುಸಿದು ಬಿದ್ದಿದ್ದಾಳೆ. ಪಕ್ಕದಲ್ಲಿದ್ದ ಮತ್ತೊಬ್ಬ ಸಿಬ್ಬಂದಿ ಮ್ಯಾನೇಜರ್​​ ಕ್ರೌರ್ಯ ಕಂಡು ಶಾಕ್​ ಆಗಿದ್ದಾನೆ. ಕೂಡಲೇ ಯುವತಿಯನ್ನು ಮೇಲೆತ್ತಲು ಪ್ರಯತ್ನಿಸಿದ್ದಾನೆ.

    ಯುವತಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಮ್ಯಾನೇಜರ್​ ವಿರುದ್ಧ ಡಾಮಿನೋಸ್​​ ಪಿಜ್ಜಾ ಆಡಳಿತ ಮಂಡಳಿಗಾಗಲಿ, ಪೊಲೀಸ್​ ಠಾಣೆಗಾಗಲಿ ದೂರು ನೀಡಿಲ್ಲ ಎನ್ನಲಾಗುತ್ತಿದೆ. ವೈಯಕ್ತಿಕ ದ್ವೇಷದಿಂದ ಯುವತಿ ಮೇಲೆ ಹಲ್ಲೆ ನಡೆಸಿರುವುದನ್ನು ವಿಡಿಯೋ ನೋಡಿದ ಮಂದಿ ಖಂಡಿಸುತ್ತಿದ್ದಾರೆ. ಸದ್ಯ ಹಲ್ಲೆ ವಿಡಿಯೋ ವೈರಲ್​ ಆಗಿದ್ದು ಡಾಮಿನೋಸ್​​ ಹಾಗೂ ಪೊಲೀಸರು ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. ಕೆಂಪೇಗೌಡ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:Kavya V
    First published: