ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತೆ ವಾಗ್ದಾಳಿ ನಡೆಸಿದೆ. ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ಕ್ರಮಗಳನ್ನು ಕಾಂಗ್ರೆಸ್ ನಾಯಕರು ಟೀಕಿಸಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದು ಕೊಲೆಗಡುಕ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊರೋನಾ ವೇಳೆ ಸಂಕಷ್ಟಕ್ಕೆ ಗುರಿಯಾದವರು ಸೋಶಿಯಲ್ ಮೀಡಿಯಾದಲ್ಲಿ ನೋವು ತೋಡಿಕೊಳ್ಳಲು ಬಿಜೆಪಿ ಸರ್ಕಾರ ಅವಕಾಶ ಕೊಡುತ್ತಿಲ್ಲ. ಸರ್ಕಾರದ ವಿರುದ್ಧ ಧ್ವನಿ ಎತ್ತಿದವರಿಗೆ ನೊಟೀಸ್ ಕೊಡಿಸಿ ಹೆದರಿಸುತ್ತಿದ್ದಾರೆ. ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ, ಜನರನ್ನ ಕೊಲೆ ಮಾಡುವ ಸಂಚನ್ನ ಸರ್ಕಾರ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಸಾಮಾಜಿಕ ಜಾಲತಾಣದಲ್ಲಿ ತಮಗಾದ ಅನ್ಯಾಯವನ್ನು ಹೇಳಿಕೊಂಡವರ ವಿರುದ್ಧ ಬಿಜೆಪಿಯವರು ಪ್ರಕರಣ ದಾಖಲಿಸುತ್ತಿದ್ದಾರೆ. ಜನರನ್ನು ಹೆದರಿಸುವ ಕೆಲಸ ಆಗ್ತಿದೆ. ಇದರ ಸಂಪೂರ್ಣ ಹೊಣೆ ಸರ್ಕಾರವೇ ಹೊರಬೇಕು. ಇಷ್ಟು ಬೈದ್ರೂ ಸರ್ಕಾರ ಎಚ್ಚೆತ್ತುಕೊಳ್ತಿಲ್ಲ. ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದೆ. ಜನರು ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ ಆದರೂ ಸಿಎಂ ಬಿ.ಎಸ್.ಯಡಿಯೂಪರಪ್ಪ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಡಿಕೆಶಿ ಕಿಡಿ ಕಾರಿದರು. ಇನ್ನು ಲಾಕ್ಡೌನ್ ಜಾರಿ ತಂದಿರುವ ರಾಜ್ಯ ಸರ್ಕಾರ ಜನರಿಗೆ ವಿಶೇಷ ಪ್ಯಾಕೇಜನ್ನು ಘೋಷಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಪೊಲೀಸರು ಹೊಡೆಯುವ ಮುಂಬೈ ವಿಡಿಯೋವನ್ನು ರಾಜ್ಯದ್ದು ಎಂದು ಹರಿಬಿಟ್ಟ ಕಾಂಗ್ರೆಸ್ ಕಾರ್ಯಕರ್ತೆ ಅರೆಸ್ಟ್
ಕರ್ನಾಟಕ ಜನರ ರಕ್ಷಣೆ ಗೆ ಇಂದು ಕೋಟ್೯ಗಳು ಬಂದಿವೆ. ರಾಜ್ಯಕ್ಕೆ ಇಂದು ಆಕ್ಸಿಜನ್ ಬಂದಿರುವುದಕ್ಕೆ ನಮ್ಮ ನ್ಯಾಯಾಲಯಗಳು ಕಾರಣ. ಇದಕ್ಕೆ ನಾವು ಕೃತಜ್ಞತೆ ಸಲ್ಲಿಸಬೇಕು. ರಾಜ್ಯದ ಜನತೆ ಪರವಾಗಿ ಸುಪ್ರೀಂ ಕೋರ್ಟ್ ಧನ್ಯವಾದಗಳು. ಸರ್ಕಾರಗಳು ನಡೆದುಕೊಳ್ಳುವ ರೀತಿ ನೋಡಿ ನ್ಯಾಯಾಲಯಗಳು ಜನರ ಧ್ವನಿಯಾಗಿ ನಿಂತಿವೆ. ಹಾಗಾಗಿ ಆರುವರೆ ಕೋಟಿ ಜನರ ಪರವಾಗಿ ನ್ಯಾಯಾಲಯಕ್ಕೆ ಅಭಿನಂದನೆಗಳು ಎಂದರು.
ಇನ್ನು ರಾಜ್ಯದಲ್ಲಿ ಲಸಿಕೆ ಕೊಡಲು ಆಗದೆ, ಕಾಟಚಾರಕ್ಕೆ ಮೇ 1ನೇ ತಾರೀಖು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀರುವ ಅಭಿಯಾನವನ್ನು ಪ್ರಾರಂಭ ಮಾಡಿದ್ದಾರೆ. ಲಸಿಕೆ ಸಿಗದೆ ಇರುವುದನ್ನು ನೋಡುತ್ತಾ ಇದ್ದೇವೆ. ಆಸ್ಪತ್ರೆಗೆ ಹೋಗಿ ತೊಂದರೆ ಅನುಭವಿಸುತ್ತಿದ್ದಾರೆ. ಜನರಿಗೆ ಫಸ್ಟ್ ಡೋಸ್ ಸರಿಯಾಗಿ ಸಿಕ್ಕಿಲ್ಲ. ಕೋವಿಡ್ ಲಸಿಕೆ ಪೂರೈಕೆ ಆಗ್ತಿಲ್ಲ. ಮೊದಲ ಡೋಸ್ ಪಡೆದವರು ಎರಡನೇ ಡೋಸ್ ಸಿಗ್ತಿಲ್ಲ. ಆನ್ ಲೈನ್ ನಲ್ಲಿ ಅಪ್ಲಿಕೇಶನ್ ತೆರೆಯುತ್ತಿಲ್ಲ. ಜನ ಆಸ್ಪತ್ರೆಗೆ ಹೋಗಿ ವಾಪಸ್ ಬರ್ತಿದ್ದಾರೆ. ಕೊರೋನಾ ಎರಡನೇ ಅಲೆ ತಡೆಯೋಕೆ ಸರ್ಕಾರಕ್ಕೆ ಆಗ್ತಿಲ್ಲ. ಚಾಮರಾಜನಗರದಲ್ಲಿ 24 ಜನ ಸಾವನ್ನಪ್ಪಿದ್ದರು. ರಾಜ್ಯದ ಹಲವು ಕಡೆ ಸಾವು ನೋವು ಹೆಚ್ಚಾಗ್ತಿದೆ ಆದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಡಿಕೆ ಶಿವಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಬರಿ ಸುಳ್ಳು ಹೇಳಿಕೊಂಡೇ ಕಾಲಹರಣ ಮಾಡುತ್ತಿದೆ. ವ್ಯಾಕ್ಸಿನ್ ಬಂದಿಲ್ಲ, ಬೆಡ್ ಸಿಗುತ್ತಿಲ್ಲ. ಲಾಕ್ ಡೌನ್ ಮಾಡಿದರೂ ಸೋಂಕು ಕಡಿಮೆಯಾಗುತ್ತಿಲ್ಲ. ಸಾವು ನೋವಿನ ಪ್ರಮಾಣ ಹೆಚ್ಚಾಗುತ್ತಿದೆ. ಸರ್ಕಾರ ಸಾವಿನ ಲೆಕ್ಕವನ್ನು ಸರಿಯಾಗಿ ಕೊಡ್ತಿಲ್ಲ ಎಂದು ಆರೋಪಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಿದ ಬಳಿಕ ಕಾಂಗ್ರೆಸ್ ನಾಯಕರು ಗಾಂಧಿ ಪ್ರತಿಮೆ ಬಳಿ ದಿಢೀರ್ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ