DK Shivakumar: ಜೈಲಿನಲ್ಲಿದ್ದಾಗ ಸಹಾಯ ಮಾಡಿದ್ದ ಕೈದಿಗಳಿಗೆ ಹೊಸ ಬದುಕು ಕಟ್ಟಿಕೊಟ್ಟ ಡಿಕೆ ಶಿವಕುಮಾರ್!

DK Shivakumar | ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 2019ರಲ್ಲಿ ತಿಹಾರ್ ಜೈಲು ಸೇರಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಲ್ಲಿ ತಮಗೆ ಸಹಾಯ ಮಾಡಿದ್ದ ಇಬ್ಬರು ಕೈದಿಗಳಿಗೆ ಹೊಸ ಜೀವನ ಕಟ್ಟಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

 • Share this:
  ಬೆಂಗಳೂರು (ಜೂನ್ 23): ಅಕ್ರಮ ಹಣ ವರ್ಗಾವಣೆ ಆರೋಪದಡಿ 2 ವರ್ಷದ ಹಿಂದೆ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ತಿಹಾರ ಜೈಲು ಸೇರಿದ್ದರು. 48 ದಿನಗಳ ಜೈಲುವಾಸದ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಡಿಕೆ ಶಿವಕುಮಾರ್ ಬಳಿಕ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನೂ ಏರಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಅವರ ಬಗ್ಗೆ ಗೊತ್ತಿಲ್ಲದ ಸಂಗತಿಯೊಂದನ್ನು ನಾವು ಹೇಳುತ್ತೇವೆ ಓದಿ...

  2019ರ ಸೆಪ್ಟೆಂಬರ್ ತಿಂಗಳಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ವಿಚಾರಣೆಗೆ ಒಳಗಾಗಿದ್ದ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿ, ದೆಹಲಿಯ ತಿಹಾರ್ ಜೈಲಿನಲ್ಲಿರಿಸಲಾಗಿತ್ತು. 48 ದಿನ ಜೈಲಿನಲ್ಲಿ ಕಷ್ಟದ ದಿನಗಳನ್ನು ಕಳೆದಿದ್ದ ಡಿಕೆ ಶಿವಕುಮಾರ್ ಅಲ್ಲಿ ತಮ್ಮ ಜೊತೆಗಿದ್ದವರನ್ನು ನೆನಪಿಸಿಕೊಂಡು ಅವರಿಗೆ ಸಹಾಯ ಮಾಡುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ.

  ತಿಹಾರ್ ಜೈಲಿನಲ್ಲಿದ್ದ ಡಿಕೆ ಶಿವಕುಮಾರ್ ಅವರಿಗೆ ಅದೇ ಜೈಲಿನಲ್ಲಿದ್ದ ಇಬ್ಬರು ಕೈದಿಗಳು ಸಹಾಯ ಮಾಡಿದ್ದರು. ಆಗ ತಮ್ಮ ಜೊತೆಗಿದ್ದವರನ್ನು ಇನ್ನೂ ನೆನಪಿನಲ್ಲಿಟ್ಟುಕೊಂಡಿರುವ ಡಿಕೆಶಿ ತಮ್ಮ ಕಷ್ಟಕಾಲದಲ್ಲಿ ನೆರವಾದವರನ್ನು ಜೈಲಿನಿಂದ ಬಿಡಿಸಿ, ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ. ಐಷಾರಾಮಿ ಜೀವನ ನಡೆಸುತ್ತಿದ್ದ ಕನಕಪುರದ ಬಂಡೆ ಡಿಕೆ ಶಿವಕುಮಾರ್ ಜೈಲಿನಲ್ಲಿದ್ದಾಗ ಅವರ ಎಲ್ಲ ಕೆಲಸಗಳಿಗೂ ಸಹಾಯ ಮಾಡಿದ್ದ ಇಬ್ಬರನ್ನು ಜೈಲಿನಿಂದ ಬಿಡಿಸಿದ್ದಾರೆ. ಅಷ್ಟೇ ಅಲ್ಲದೆ, ಅವರಲ್ಲಿ ಒಬ್ಬರನ್ನು ತಮ್ಮ ಮನೆಯಲ್ಲೇ ಇರಿಸಿಕೊಂಡಿದ್ದಾರೆ. ಇನ್ನೊಬ್ಬರಿಗೆ ಬೆಂಗಳೂರಿನ ಕಂಪನಿಯಲ್ಲಿ ಉದ್ಯೋಗ ಕೊಡಿಸಿ, ಹೊಸ ಜೀವನ ಕಟ್ಟಿಕೊಟ್ಟಿದ್ದಾರೆ.

  ಇದನ್ನೂ ಓದಿ: Morning Digest: ಬಿಗ್ ಬಾಸ್ ಮತ್ತೆ ಶುರು, ಚಿನ್ನ ದುಬಾರಿ, ಕರ್ನಾಟಕದಲ್ಲೂ ಡೆಲ್ಟಾ ಪ್ಲಸ್ ವೈರಸ್ ಪತ್ತೆ!; ಇಂದಿನ ಪ್ರಮುಖ ಸುದ್ದಿಗಳಿವು

  ಜೈಲಿನಲ್ಲಿದ್ದಾಗ ಅಸಹಾಯಕರಾಗಿದ್ದ ಡಿಕೆ ಶಿವಕುಮಾರ್ ಅವರಿಗೆ ಮೊಯಿಸಿನ್ ರಾಝಾ ಹಾಗೂ ಇನ್ನೊಬ್ಬ ಕೈದಿ ಸಹಾಯ ಮಾಡಿದ್ದರು. ಡಿಕೆ ಶಿವಕುಮಾರ್ ಜೈಲಿಗೆ ಹೋಗುವ ಮೊದಲೇ ವಿಚಾರಣಾಧೀನ ಕೈದಿಯಾಗಿದ್ದ ಮೊಯಿಸಿನ್ ಇದ್ದ ಸೆಲ್ನಲ್ಲೇ ಡಿಕೆಶಿ ವಾಸವಾಗಿದ್ದರು. ಡಿಕೆ ಶಿವಕುಮಾರ್ ಜೈಲಿನಿಂದ ಬಿಡುಗಡೆಯಾಗಿ ಬರುವಾಗ ಆ ಇಬ್ಬರು ಕೈದಿಗಳನ್ನು ಜೈಲಿನಿಂದ ಬಿಡಿಸುವುದಾಗಿ ಭರವಸೆ ನೀಡಿದ್ದರು. ಆ ಮಾತನ್ನು ನೆನಪಿನಲ್ಲಿಟ್ಟುಕೊಂಡು ಉಳಿಸಿಕೊಂಡಿರುವ ಡಿಕೆ ಶಿವಕುಮಾರ್, ನಾಲ್ಕೂವರೆ ಲಕ್ಷ ರೂ. ಹಣ ಕಟ್ಟಿ ಮೊಯಿಸಿನ್ ಅವರನ್ನು ಜೈಲಿನಿಂದ ಬಿಡಿಸಿದ್ದಾರೆ. ಅಷ್ಟು ಮಾಡಿ ಕೈ ತೊಳೆದುಕೊಳ್ಳದೆ ತಮ್ಮ ಮನೆಯಲ್ಲೇ ಅವರಿಗೆ ಉಳಿದುಕೊಳ್ಳಲು ಅವಕಾಶ ನೀಡಿದ್ದಾರೆ.

  ಜೈಲಿನಲ್ಲಿದ್ದಾಗ ಡಿ.ಕೆ. ಶಿವಕುಮಾರ್ ಅವರಿಗೆ ಊಟ, ತಿಂಡಿ, ಕಾಫಿ, ಟೀ ತಂದು ಕೊಡುವುದು ಹಾಗೂ ಅವರ ಬಟ್ಟೆ ಸ್ವಚ್ಛಗೊಳಿಸಿಕೊಡುವ ಸಣ್ಣ ಪುಟ್ಟ ಸಹಾಯ ಮಾಡುತ್ತಿದ್ದ ಮೊಯಿಸಿನ್ ಮತ್ತು ಇನ್ನೊಬ್ಬ ಕೈದಿಗೆ ಡಿಕೆ ಶಿವಕುಮಾರ್ ಮರು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಜೈಲಿನಲ್ಲಿದ್ದಾಗ ಮೊಯಿಸಿನ್ ಅವರಿಂದ ಡಿಕೆ ಶಿವಕುಮಾರ್ ಹಿಂದಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವುದನ್ನು ಕಲಿತರಂತೆ. ಇದೀಗ ಆ ಇಬ್ಬರನ್ನು ಜೈಲಿನಿಂದ ಬಿಡಿಸಿರುವ ಡಿಕೆ ಶಿವಕುಮಾರ್, ಮೊಹಿಸಿನ್ ಅವರನ್ನು ತಮ್ಮ ಸಹೋದರ ಹಾಗೂ ಸಂಸದ ಡಿ.ಕೆ ಸುರೇಶ್ ಅವರ ಮನೆಯಲ್ಲಿ ಅಡುಗೆ ಕೆಲಸಕ್ಕೆ ಸಹಾಯ ಮಾಡಲು ನೇಮಕ ಮಾಡಿದ್ದಾರಂತೆ. ಇನ್ನೊಬ್ಬ ಕೈದಿಗೆ ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಕೊಡಿಸಿ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ.

  ಕೌಟುಂಬಿಕ ಕಲಹದ ಪ್ರಕರಣದಲ್ಲಿ ಜೈಲು ಸೇರಿದ್ದ ಮೊಹಿಸಿನ್ ತನ್ನ ಹೆಂಡತಿಯ ಜೊತೆ ಜಗಳವಾಡಿಕೊಂಡು ದೂರವಾಗಿದ್ದರು. ಆಕೆಗೆ ನಾಲ್ಕೂವರೆ ಲಕ್ಷ ರೂ. ಪರಿಹಾರ ನೀಡಲು ಸೂಚಿಸಲಾಗಿತ್ತು. ಆದರೆ, ಮೊಯಿಸಿನ್ ಬಳಿ ಪರಿಹಾರ ನೀಡಲು ಹಣವಿರಲಿಲ್ಲ. ಹೀಗಾಗಿ ಮೊಹಿಸಿನ್ ಆ ಪರಿಹಾರ ಮೊತ್ತ ನೀಡುವವರೆಗೂ ಜೈಲಿನಲ್ಲಿಯೇ ಇರಬೇಕಾಗಿತ್ತು. ಕೊಟ್ಟ ಭರವಸೆಯಂತೆ ನಾಲ್ಕೂವರೆ ಲಕ್ಷ ರೂ. ಹಣ ಕಟ್ಟಿದ ಡಿಕೆ ಶಿವಕುಮಾರ್ ಮೊಹಿಸಿನ್ ಅವರಿಗೆ ಜೈಲುವಾಸದಿಂದ ಮುಕ್ತಿ ಕೊಡಿಸಿದ್ದಾರೆ.

  2017ರಲ್ಲಿ ಡಿ.ಕೆ.ಶಿವಕುಮಾರ್ ಅವರ ದೆಹಲಿ ಮನೆಯಲ್ಲಿ ಐಟಿ ದಾಳಿಯಾದಾಗ ದಾಖಲೆಗಳಿಲ್ಲದ ಹಣ ಪತ್ತೆಯಾಗಿತ್ತು. 2019ರಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಇ.ಡಿ. ಅಧಿಕಾರಿಗಳು ಡಿ.ಕೆ. ಶಿವಕುಮಾರ್ ಅವರನ್ನು ವಿಚಾರಣೆಗೆಂದು ದೆಹಲಿಗೆ ಕರೆಸಿದ್ದರು. ಆದರೆ ವಿಚಾರಣೆಗೆ ಸರಿಯಾಗಿ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಅವರನ್ನು ಬಂಧಿಸಿದ್ದರು. 48 ದಿನಗಳ ಕಾಲ ಡಿಕೆ ಶಿವಕುಮಾರ್ ತಿಹಾರ್ ಜೈಲಿನಲ್ಲಿದ್ದರು. ಈ ನಡುವೆ ಅವರು ಅನಾರೋಗ್ಯಕ್ಕೂ ತುತ್ತಾಗಿದ್ದರು.
  Published by:Sushma Chakre
  First published: