ಬೆಂಗಳೂರು: ಜ.9ರಿಂದ ಮೇಕೆದಾಟು ಪಾದಯಾತ್ರೆ (mekedatu padayatra) ಹಮ್ಮಿಕೊಂಡಿರುವ ಕಾಂಗ್ರೆಸ್ಗೆ (Congress) ರಾಜ್ಯ ಸರ್ಕಾರದ ಕೋವಿಡ್ ನಿಯಮಗಳಿಂದ (Covid Guidelines) ಭಾರೀ ಹಿನ್ನಡೆಯಾಗಿದೆ. ಇದರಿಂದ ಕೆರಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakuma), ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಜಂಟಿ ಸುದ್ದಿಗೋಷ್ಠಿ ನಡೆಸಿ ಪಾದಯಾತ್ರೆ ಮಾಡಿಯೇ ಸಿದ್ಧ ಎಂದು ಘೋಷಿಸಿದ್ದಾರೆ. ಡಿ.ಕೆ.ಶಿವಕುಮಾರ್ ಮಾತನಾಡಿ ನಮ್ಮ ಪಾದಯಾತ್ರೆಯನ್ನು ತಡೆದುಕೊಳ್ಳೋಕೆ ಒಂದು ಪಕ್ಷಕ್ಕೆ ಆಗ್ತಿಲ್ಲ, ಹೊಟ್ಟೆಕಿಚ್ಚು ಹೆಚ್ಚಾಗಿದೆ. ಏನಾದ್ರೂ ಮಾಡಿ ನಿಲ್ಲಿಸಬೇಕೆಂದು ಕೋವಿಡ್ ನೆಪದಲ್ಲಿ ನಿಲ್ಲಿಸೋಕೆ ಹೊರಟಿದ್ದಾರೆ. ಏಕಾಏಕಿ ಸೋಂಕಿನ ಪ್ರಕರಣ ಹೆಚ್ಚಳ ತೋರಿಸಿದ್ದಾರೆ, ವೀಕ್ ಎಂಡ್ ಕರ್ಪ್ಯೂ ಜಾರಿ ಮಾಡಿದ್ದಾರೆ ಎಂದು ಆರೋಪಿಸಿದರು.
ಉರಿಯೋ ಸೂರ್ಯನನ್ನ ಹಿಡಿಯೋಕೆ ಆಗಲ್ಲ
ಜನವರಿ 9ರಂದು ಪಾದಯಾತ್ರೆ ನಡೆಯಲಿದೆ. ಬಿಜೆಪಿಯವರು ಒಂದನ್ನ ಅರ್ಥ ಮಾಡಿಕೊಳ್ಳಬೇಕು. ಉರಿಯೋ ಸೂರ್ಯನನ್ನ ಹಿಡಿಯೋಕೆ ಆಗಲ್ಲ. ಹರಿಯೋ ನೀರನ್ನ ತಡೆಯೋಕೆ ಆಗಲ್ಲ. ಇದನ್ನ ಅವರು ಅರ್ಥ ಮಾಡಿಕೊಂಡರೆ ಸಾಕು ಎಂದು ಬಿಜೆಪಿ ನಾಯಕರ ವಿರುದ್ಧ ಡಿಕೆಶಿ ಗುಡುಗಿದರು. ಪಾದಯಾತ್ರೆಯನ್ನು ಟೀಕಿಸಿರುವ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರಿಗೂ ಡಿಕೆಶಿ ತಿರುಗೇಟು ನೀಡಿದರು. ಕುಮಾರಣ್ಣ ಬಹಳ ಮೇಧಾವಿ, ಅವರ ಬಗ್ಗೆ ನಾನು ಈಗ ಮಾತನಾಡಲ್ಲ. ಅವರ ಸಂಪುಟದಲ್ಲಿ ನಾನು ಮಂತ್ರಿಯಾಗಿದ್ದೆ. ಎಷ್ಟು ಸಲ ನಾನು ಸೆಂಟ್ರಲ್ ಮಿನಿಸ್ಟರ್ ಭೇಟಿ ಮಾಡಿದ್ದೆ, ತಮಿಳುನಾಡು ಸಚಿವರ ಭೇಟಿಗೆ ಪತ್ರ ಬರೆದಿದ್ದೆ. ಇದೆಲ್ಲವೂ ಅವರಿಗೆ ಗೊತ್ತಿದೆ ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ನಾವಿಬ್ಬರೇ ಪಾಲ್ಗೊಳ್ಳುತ್ತೇವೆ
ಪ್ರತಿಭಟನೆಯಲ್ಲಿ ಎಷ್ಟು ಮಂದಿ ಪಾಲ್ಗೊಳ್ಳುತ್ತಾರೆ ಎಂಬ ಪ್ರಶ್ನೆಗೆ, ನಾವಿಬ್ಬರೇ ಪಾಲ್ಗೊಳ್ಳುತ್ತೇವೆ ಎಂದು ಡಿಕೆ ಶಿವಕುಮಾರ್ ಉತ್ತರಿಸಿದರು. ಒಂದು ವೇಳೆ ಅವರು 144 ಸೆಕ್ಷನ್ ಹಾಕಿದ್ರೆ ನಾವಿಬ್ಬರೇ ಪಾದಯಾತ್ರೆ ಮಾಡ್ತೀವಿ. 144 ಸೆಕ್ಷನ್ ನಲ್ಲಿ 5 ಜನರ ಮೇಲೆ ಪಾಲ್ಗೊಳ್ಳುವಂತಿಲ್ಲ. ನಾವು ನಾಲ್ಕು ಜನ ಪಾಲ್ಗೊಳ್ಳುತ್ತೇವೆ ಎನ್ನುವ ಮೂಲಕ ಪಾದಯಾತ್ರೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದರು.
ಇದನ್ನೂ ಓದಿ: ಪಟ್ಟು ಬಿಡದೆ ಪಾದಯಾತ್ರೆಗೆ ಮುಂದಾಗಿರುವ Congress ನಾಯಕರಿಗೆ ಮೃದುವಾಗೇ ವಾರ್ನಿಂಗ್ ಕೊಟ್ಟ CM
ಬಿಜೆಪಿ ವಿರುದ್ಧ ಷಡ್ಯಂತ್ರ ಆರೋಪಿ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮಾತನಾಡಿ, ಹೋರಾಟ ಮಾಡಬಾರದು ಎಂದು ಬಿಜೆಪಿ ಷಡ್ಯಂತ್ರ ಮಾಡುತ್ತಿದೆ. ಯಾಕಂದರೆ ಅವರು ಜನರ ಮುಂದೆ ಬೆತ್ತಲಾಗ್ತಾರೆ. ಎರಡು ವರ್ಷದಿಂದ ಯಾವ ಪ್ರಯತ್ನ ಮಾಡಿಲ್ಲ. ಅಭಿವೃದ್ಧಿ ಕೆಲಸಗಳನ್ನ ಅವರು ಮಾಡಿಲ್ಲ. ಯೋಜನೆ ಸಂಬಂಧ ಪ್ರಧಾನಿ,ಜಲಸಂಪನ್ಮೂಲ ಸಚಿವರನ್ನ ಭೇಟಿ ಮಾಡಿಲ್ಲ. ಕೇಂದ್ರವೂ ಮಲತಾಯಿಧೋರಣೆ ತಾಳ್ತಿದೆ. ಇದೊಂದೇ ಯೋಜನೆಯಲ್ಲ ಮಹದಾಯಿ, ಅಪ್ಪರ್ ಕೃಷ್ಣಾದಲ್ಲೂ ತಾರತಮ್ಯ ಮಾಡಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಯೋಜನೆ ನಮ್ಮ ಸರ್ಕಾರ ಪ್ರಾರಂಭ ಮಾಡ್ತು, ಡಿಪಿಆರ್ ತಯಾರು ಕೂಡ ಮಾಡಿದ್ದೆವು. ಕೇಂದ್ರ ಜಲ ಆಯೋಗಕ್ಕೂ ಕಳಿಸಿದ್ದೆವು. ಮಾಜಿ ಸಿಎಂ ಯಡಿಯೂರಪ್ಪ ಒಂದು ಸ್ಟೇಟ್ ಮೆಂಟ್ ಕೊಟ್ಟಿದ್ದರು. ಅದನ್ನ ಬಿಟ್ಟರೆ ಇವರು ಯಾವ ಪ್ರಯತ್ನ ಮಾಡಿಲ್ಲ. ಈ ಯೋಜನೆಯಿಂದ ಎರಡೂವರೆ ಕೋಟಿ ಜನರಿಗೆ ಅನುಕೂಲ. ಬೆಂಗಳೂರು, ಅಕ್ಕಪಕ್ಕದ ಜಿಲ್ಲೆಗೆ ಅನುಕೂಲವಾಗಲಿದೆ. ಆದರೆ ಇವರು ಕಾಲಹರಣ ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಅಣ್ಣಾಮಲೈನ ಎತ್ತಿಕಟ್ಟುತ್ತಿದ್ದಾರೆ
ಅಣ್ಣಾಮಲೈ ತಮಿಳುನಾಡು ಬಿಜೆಪಿ ಅಧ್ಯಕ್ಷ, ಸಿ.ಟಿ.ರವಿ ತಮಿಳುನಾಡು ಇನ್ ಚಾರ್ಜ್. ಅಣ್ಣಾಮಲೈಗೆ ಪ್ರತಿಭಟನೆ ಮಾಡದಂತೆ ಹೇಳಬಹುದಿತ್ತು, ಆದರೆ ಅವರು ಹೇಳುವ ಕೆಲಸ ಮಾಡ್ತಿಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಶಕ್ತಿ ಹೆಚ್ಚಿಸಬೇಕು, ಅದಕ್ಕಾಗಿ ಅವರನ್ನ ಎತ್ತಿಕಟ್ಟುತ್ತಿದ್ದಾರೆ. ಇದರ ಹಿಂದೆ ಸಾಕಷ್ಟು ಹುನ್ನಾರಗಳಿವೆ. ಪ್ರಧಾನಿ ಪಂಜಾಬ್ ಗೆ ರ್ಯಾಲಿಗೆ ಹೋಗಿದ್ದಾರೆ. ಪಂಜಾಬ್ ನಲ್ಲಿ ಸೋಂಕು ಹೆಚ್ಚಳ ಇಲ್ಲವೇ. ರ್ಯಾಲಿ ಈ ಗೈಡ್ ಲೈನ್ಸ್ ಒಳಗಡೆ ಬರುತ್ತಾ? ಪ್ರಧಾನಿಯವರಿಗೆ ಬೇರೆ ಕಾನೂನಿದ್ಯಾ? ನಿಷೇಧಾಜ್ಞೆ ಎಲ್ಲರಿಗೂ ಒಂದೇ ಅಲ್ವಾ ಎಂದು ಪ್ರಶ್ನಿಸಿದರು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ