ಕೋವಿಡ್​ ಎಫೆಕ್ಟ್​​: ರಕ್ಷಣಾ ಉಪಕರಣ ಉತ್ಪಾದಕ ಸಂಸ್ಥೆ ಎಇಐಪಿಎಲ್ ಗೆ ನಿರಾಸೆ

ಕೋವಿಡ್-19 ಹಿನ್ನೆಲೆಯಲ್ಲಿ ಯೋಜನೆಗೆ ಭೂಮಿ ಮಂಜೂರಾತಿ ನೀಡಲು ಸಾಧ್ಯವಾಗಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜೂ, 1):  ಕೋವಿಡ್-19 ನ ಎರಡನೇ ಅಲೆ ಉತ್ಪಾದನಾ ವಲಯದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಅದರಲ್ಲೂ ರಾಜ್ಯ ಸರ್ಕಾರ ಲಾಕ್ ಡೌನ್ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಬೆಂಗಳೂರಿನ ಉತ್ಪಾದನಾ ಕ್ಷೇತ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇದರಲ್ಲಿ ಪ್ರಮುಖವಾಗಿ ತೇಜಸ್ ಎಂಕೆ 1 ಯುದ್ಧ ವಿಮಾನದ ಅಸೆಂಬ್ಲಿಗೆ ಕಟ್ಟಿಂಗ್ ಟೂಲ್ಸ್ ಉತ್ಪಾದನೆ ಮಾಡಲು ಉದ್ದೇಶ ಹೊಂದಿದ್ದ ಎಡಿಡಿ ಎಂಜಿನಿಯರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗೆ ಸಾಕಷ್ಟು ಹಿನ್ನಡೆ ಉಂಟಾಗಿದೆ. ಲಾಕ್ ಡೌನ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಉದ್ಯಮವನ್ನು ಆರಂಭಿಸುವ ಕನಸು ಕನಸು ಮತ್ತೊಮ್ಮೆ ಮುಂದಕ್ಕೆ ಹೋದಂತಾಗಿದೆ. ತುಮಕೂರು ಮಷಿನ್ ಟೂಲ್ ಪಾರ್ಕ್ ನಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಎಇಐಪಿಎಲ್ ಗೆ ಅಗತ್ಯವಾದ ಭೂಮಿಯನ್ನು ನೀಡಲು ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಅದರಂತೆ ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಉದ್ದಿಮೆಯನ್ನು ಆರಂಭಿಸಲು ಅಲ್ಲಿ ಎಇಐಪಿಎಲ್ ಗೆ ಮಂಜೂರು ಮಾಡುವುದಾಗಿ ಕೆಐಎಡಿಬಿ ಸಹ ಭರವಸೆ ನೀಡಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಇಐಪಿಎಲ್ ನಿರ್ದೇಶಕ ಗಿರೀಶ್ ಎಲ್, ಈ ಭರವಸೆ ನಂತರ, ನನ್ನ ಅರ್ಜಿಯನ್ನು ಪುರಸ್ಕರಿಸಲಾಗಿದೆ ಮತ್ತು ಕೈಗಾರಿಕೆಗೆ ಅಗತ್ಯವಾದ ಭೂಮಿಯನ್ನು ಮಂಜೂರು ಮಾಡುವುದಾಗಿ ಎಂದು ಕರ್ನಾಟಕ ಉದ್ಯೋಗ ಮಿತ್ರದಿಂದ ಸಂದೇಶ ಬಂದಿತ್ತು. ಅದಕ್ಕೆ ಪೂರಕವಾಗಿ ಹಣವನ್ನು ಪಾವತಿ ಮಾಡುವಂತೆ ಸೂಚನೆ ಬಂದಿದ್ದು, ಅದರಂತೆ ಭೂಮಿಯ  ದರದ ಶೇ.30 ರಷ್ಟು ಪಾವತಿಸಿದ್ದೇನೆ. ಆದರೆ, ಜಾಗದ ಮಂಜೂರಾತಿ ವಿಚಾರ ಮಾತ್ರ ಯಥಾಸ್ಥಿತಿಯಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈ‌ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದಾಗ ಕೋವಿಡ್-19 ಹಿನ್ನೆಲೆಯಲ್ಲಿ ಯೋಜನೆಗೆ ಮಂಜೂರಾತಿ ನೀಡಲು ಸಾಧ್ಯವಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಸಿನಿಮಾದಿಂದ ದೂರಾದ ಬಳಿಕ ಬದುಕು ಸಾಗಿಸಲು ಸಾಮಾನ್ಯ ಕೆಲಸಕ್ಕೆ ಸೇರಿದ ಹಾಲಿವುಡ್​ ತಾರೆಯರು

ಕೋವಿಡ್-19 ಮಾರ್ಗಸೂಚಿಯಂತೆ ಕೆಐಎಡಿಬಿಯ ಕನಿಷ್ಠ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಪರಿಣಾಮ ಅವರ ಕೆಲಸಗಳ ಮೇಲೆ ಬೀರಿದೆ. ಸಾಂಕ್ರಾಮಿಕವು ತಹಬದಿಗೆ ಬಂದ ನಂತರ ನಿಮ್ಮ ಯೋಜನೆಗೆ ಮಂಜೂರಾತಿ ನೀಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಎಇಐಪಿಎಲ್ ನ ಮಾತೃಸಂಸ್ಥೆಯಾದ ಜರ್ಮನ್ ಎಡಿಡಿ ಎಂಜಿನಿಯರಿಂಗ್ ಜಿಎಂಬಿಎಚ್ ಈ ಯೋಜನೆಗಾಗಿ ಬಂಡವಾಳ ತೊಡಗಿಸಲು ಆಸಕ್ತಿ ಹೊಂದಿತ್ತು. ಆದರೆ, ಭೂಮಿ ಪಡೆಯುವುದು ಮತ್ತೊಮ್ಮೆ ಮುಂದಕ್ಕೆ ಹೋಗಿರುವುದರಿಂದ ಹೂಡಿಕೆಯಿಂದ ಹಿಂದೆ ಸರಿಯಲು ಆಲೋಚಿಸುತ್ತಿದೆ. ಕೋವಿಡ್ -19 ರ ಅಲೆಯಿಂದಾಗಿ ಹೂಡಿಕೆ ಮಾಡಲು ಹೂಡಿಕೆದಾರರು ಹಿಂದೇಟು ಹಾಕುವಂತಾಗಿದೆ. ಈ ಹಿನ್ನೆಲೆಯಲ್ಲಿ ನಮಗಿರುವ ಒಂದೇ ಮಾರ್ಗವೆಂದರೆ ವ್ಯವಸ್ಥೆಯ ಬದಲಾವಣೆಯನ್ನು ಸದ್ಯದಲ್ಲೇ ಕಾಣುವಂತದ್ದಾಗಿದೆ’ ಎಂದು ತಿಳಿಸಿದ್ದಾರೆ

ಎಚ್ಎಎಲ್ ನಲ್ಲಿ ಕೆಲಸ ಮಾಡುತ್ತಿರುವ ಅನೇಕರಿಗೆ ಕೋವಿಡ್ ಸೋಂಕು ಬಂದಿದ್ದರಿಂದ ಕೆಲವು ದಿನಗಳ ಹಿಂದಷ್ಟೇ ಕೆಲಸವನ್ನು ಪುನಾರಂಭಿಸಲಾಗಿದೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡುವಂತೆ ಮಾಡಿದೆ.ಎಇಐಪಿಎಲ್ ತನ್ನ ಉತ್ಪಾದನಾ ಘಟಕವನ್ನು ಕರ್ನಾಟಕದಲ್ಲಿ ಆರಂಭಿಸಬೇಕೆಂದು ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದೆ. ಕೆಎಸ್ಎಸ್ಐಡಿಸಿ ನೆಲಮಂಗಲ ಕೈಗಾರಿಕಾ ಎಸ್ಟೇಟ್ ನಲ್ಲಿ ಜಾಗವನ್ನು ಮಂಜೂರು ಮಾಡಲು ವಿಳಂಬ ಧೋರಣೆ ಅನುಸರಿಸಿ, ನಿರಾಕರಿಸಿದ್ದು ಕಂಪನಿಗೆ ಆದ ಮೊದಲ ಹಿನ್ನಡೆಯಾಗಿತ್ತು. ಹಣವನ್ನು ನೀಡಿದ್ದರೂ ಕಂಪನಿ ಕೇಳಿದ್ದ 2400 ಚದರಡಿ ಭೂಮಿಯನ್ನು ನೀಡದೇ ಕೆಎಸ್ಎಸ್ಐಡಿಸಿ ಕಾಲಹರಣ ಮಾಡಿತ್ತು. ಹಲವು ತಿಂಗಳವರೆಗೆ ಅಲೆದಾಡಿದ ನಂತರ ಕೆಐಎಡಿಬಿ ತುಮಕೂರಿನ ಮಷಿನ್ ಟೂಲ್ ಪಾರ್ಕ್ ನಲ್ಲಿ ಭೂಮಿ ನೀಡಲು ಸಮ್ಮತಿಸಿತ್ತು.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)
Published by:Seema R
First published: