ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಜನ ಅದೆಷ್ಟೇ ಜೀವ ಬಿಡುತ್ತಿದ್ದರೂ ನಡುನಡುವೆ ಕೆಲವು ಅಮಾನವೀಯ ಘಟನೆಗಳು ಬೆಳಕಿಗೆ ಬರುತ್ತಿರುತ್ತವೆ. ಹೋದ ಜೀವಕ್ಕಿಂತ ಹಣಕ್ಕೇ ಹೆಚ್ಚು ಬೆಲೆಯೇನೋ ಎಂದು ಎನಿಸುವಂಥಾ ಘಟನೆಗಳು ಆಗಾಗ ಕಂಡುಬರುತ್ತವೆ. ಇಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಂಥದ್ದೇ ಒಂದು ಘಟನೆ ನಡೆದಿದೆ. ಆಂಬ್ಯುಲೆನ್ಸ್ ಚಾಲಕನೊಬ್ಬ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದೊಂದಿಗೆ ಬಹಳ ಕೆಟ್ಟದಾಗಿ ನಡೆದುಕೊಂಡ ಘಟನೆ ವರದಿಯಾಗಿದೆ. ಹೆಬ್ಬಾಳ ಚಿತಾಗಾರದ ಬಳಿ ಈ ಘಟನೆ ನಡೆದಿದೆ. ಆಂಬ್ಯುಲೆನ್ಸ್ ನಲ್ಲಿ ಚಿತಾಗಾರಕ್ಕೆ ಸೋಂಕಿತ ಮೃತ ವ್ಯಕ್ತಿಯ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತಿತ್ತು. ಆಗ ಆಂಬ್ಯುಲೆನ್ಸ್ ಚಾಲಕ ಕುಟುಂಬದವರ ಬಳಿ 18 ಸಾವಿರ ರೂಪಾಯಿ ಹಣ ಕೇಳಿದ್ದಾನೆ. ಹಣ ಕೊಟ್ಟಿಲ್ಲ ಎಂದು ಶವವನ್ನ ಪುಟ್ ಪಾತ್ ಮೇಲೆ ಇಳಿಸಿ ಹೋಗಿಬಿಟ್ಟಿದ್ದಾನೆ. ಚಾಲಕನನ್ನು ಶರತ್ ಗೌಡ ಎಂದು ಗುರುತಿಸಲಾಗಿದೆ.
ಕೆಲ ದಿನಗಳಿಂದ ಕೋವಿಡ್ ಸೋಂಕಿಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಅನೂಜ್ ಸಿಂಗ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಅಂತ್ಯಸಂಸ್ಕಾರಕ್ಕಾಗಿ ಮೃತದೇಹವನ್ನು ಹೆಬ್ಬಾಳದ ಚಿತಾಗಾರಕ್ಕೆ ಕೊಂಡೊಯ್ಯಲಾಗುತ್ತಿತ್ತು. ಆ ವೇಳೆ ಈ ಘಟನೆ ನಡೆದಿದೆ. ಮೃತರ ಪತ್ನಿಯ ಬಳಿ ಚಾಲಕ ಶರತ್ ಗೌಡ 18 ಸಾವಿರ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದ. ಆಗ ಮೊದಲಿಗೆ 3 ಸಾವಿರ ರೂಪಾಯಿ ಹಣ ಹೊಂದಿಸಿದ್ದು ನಂತರ ಉಳಿದ ಹಣವನ್ನು ನೀಡುವುದಾಗಿ ಮಹಿಳೆ ತಿಳಿಸಿದ್ದರು.
ಇದನ್ನೂ ಓದಿ: Corona Testing: ನಾಯಿಗಳು ಆರ್ಟಿಪಿಸಿಆರ್ ಟೆಸ್ಟ್ಗಿಂತಲೂ ವೇಗವಾಗಿ ಕೋವಿಡ್ ಸೋಂಕನ್ನು ಪತ್ತೆ ಮಾಡಬಲ್ಲವು !
ಚಿತಾಗಾರದ ಬಳಿ ತಲುಪುತ್ತಿದ್ದಂತೆ ಉಳಿದ ಹಣವನ್ನು ಕೂಡಲೇ ಕೊಡುವಂತೆ ಆಂಬ್ಯುಲೆನ್ಸ್ ಚಾಲಕ ಶರತ್ ಗೌಡ ಗಲಾಟೆ ಮಾಡಿದ್ದಾನೆ. ಸದ್ಯ ಕೈಯಲ್ಲಿ ಹಣವಿಲ್ಲ. ಸ್ವಲ್ಪ ಹೊತ್ತಿನಲ್ಲೇ ಕೊಡುತ್ತೇನೆ ಎಂದು ಮಹಿಳೆ ಚಾಲಕನ ಬಳಿ ಅಂಗಾಲಾಚಿದ್ದಾರೆ. ಆದರೆ ಆಗಷ್ಟೇ ಪತಿಯನ್ನು ಕಳೆದುಕೊಂಡ ಅವರ ಬಗ್ಗೆ ಸ್ವಲ್ಪವೂ ಕರುಣೆ ಇಲ್ಲದಂತೆ ಚಾಲಕ ಶವವನ್ನ ರಸ್ತೆ ಬದಿಯ ಪುಟ್ ಪಾತ್ ಮೇಲೆ ಇಳಿಸಿ ಅಂಬ್ಯುಲೆನ್ಸ್ ತೆಗೆದುಕೊಂಡು ಹೋಗಿಬಿಟ್ಟಿದ್ದಾನೆ. ಸದ್ಯ ಚಾಲಕ ಶರತ್ ಗೌಡ ಮತ್ತು ನಾಗೇಶ್ ಎಂಬಾತನ ವಿರುದ್ಧ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.
ಮಹಿಳೆಯ ಆಕ್ರಂದನ ಕೇಳಿ ಹೊರಬಂದ ಚಿತಾಗಾರದ ಸಿಬ್ಬಂದಿ ಫುಟ್ಪಾತ್ ಮೇಲಿದ್ದ ಶವವನ್ನು ಚಿತಾಗಾರದ ಒಳಗೆ ಕೊಂಡೊಯ್ದಿದ್ದಾರೆ. ನಂತರ ಹೆಬ್ಬಾಳ ಚಿತಾಗಾರ ಉಸ್ತುವಾರಿವಾರಿ ಅಮೃತಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಸದ್ಯ ಇವರಿಬ್ಬರ ಮೇಲೆ ಎಫ್ಐಆರ್ ದಾಖಲಾಗಿದ್ದು ಪೋಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಈಗಾಗಲೇ ಅನೇಕ ಬಾರಿ ರಾಜ್ಯ ಸರ್ಕಾರದ ಆದೇಶಗಳು ಮತ್ತು ಆರೋಗ್ಯ ಸಚಿವರು ಮತ್ತು ಡಿಸಿಎಂ ಕೂಡಾ ಕೋವಿಡ್ ಮೃತದೇಹಗಳನ್ನು ಸಾಗಿಸುವಾಗ ಅನ್ಯಾಯದ ಸುಲಿಗೆ ನಡೆದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಅಷ್ಟಾದರೂ ಇಂಥಾ ಅಮಾನವೀಯ ಘಟನೆಗಳು ನಡೆಯುತ್ತಲೇ ಇರುವುದು ಬೇಸರದ ಸಂಗತಿ. ಆದಷ್ಟು ಬೇಗ ತಪ್ಪಿತಸ್ಥರು ದೊರೆತು ಅವರಿಗೆ ತಕ್ಕ ಶಾಸ್ತಿಯಾದರೆ ಆಗ ಇದೇ ಮಾರ್ಗ ಅನುಸರಿಸುವ ಉಳಿದವರಿಗೂ ಎಚ್ಚರಿಕೆಯ ಗಂಟೆ ಬಾರಿಸಿದಂತಾಗುತ್ತದೆ ಎನ್ನುವುದು ಜನರ ಅನಿಸಿಕೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ