ಬೆಂಗಳೂರು (ಆ. 4): ಬಿಎಸ್ ಯಡಿಯೂರಪ್ಪ ನಾಯಕತ್ವದ ವಿರುದ್ಧ ಬಂಡಾಯ ಸಾರಿದ್ದ ಬಸನಗೌಡ ಪಾಟೀಲ ಯತ್ನಾಳ್, ಸಿಪಿಯೋಗೇಶ್ವರ್, ಅರವಿಂದ ಬೆಲ್ಲದ್ ಸಚಿವ ಸಂಪುಟ ಸೇರುವಲ್ಲಿ ವಿಫಲರಾಗಿದ್ದಾರೆ. ಮಾಜಿ ಸಿಎಂ ವಿರುದ್ಧ ಬಂಡಾಯ ಎದಿದ್ದ ಈ ನಾಯಕರಿಗೆ ಮಂತ್ರಿ ಸ್ಥಾನ ಸಿಗದಂತೆ ನೋಡಿಕೊಳ್ಳುವಲ್ಲಿ ಬಿಎಸ್ ಯಡಿಯೂರಪ್ಪ ಸಫಲರಾಗಿದ್ದಾರೆ. ಕಳೆದ ಬಾರಿ ಸಚಿವ ಸ್ಥಾನ ನೀಡುವಂತೆ ನೋಡಿಕೊಂಡಿದ್ದ ಬಿಎಸ್ ಯಡಿಯೂರಪ್ಪಗೆ ಸಿಪಿ ಯೋಗೇಶ್ವರ್ ಮಗ್ಗಲ ಮಳ್ಳಲಾಗಿದ್ದಾರೆ. ಬಿಎಸ್ ಯಡಿಯೂರಪ್ಪ ವಿರುದ್ಧವೇ ಹೈ ಕಮಾಂಡ್ ಮಟ್ಟದಲ್ಲಿ ದೂರು ನೀಡಿದ್ದ ಸಿಪಿ ಯೋಗೇಶ್ವರ್ ಬಳಿಕ ಯತ್ನಾಳ್ಗೆ ಬೆಂಬಲ ನೀಡಿದ್ದರು.
ಇತ್ತ ಯತ್ನಾಳ್ ಕೂಡ ನಾಯಕತ್ವ ಬದಲಾವಣೆ ವಿರುದ್ಧ ಬಹಿರಂಗ ಹೇಳಿಕೆ ನೀಡುವ ಮೂಲಕ ಹೈ ಕಮಾಂಡ್ ಕಣ್ಣಿಗೆ ಗುರಿಯಾಗಿದ್ದರು. ಪಕ್ಷದಿಂದ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದ್ದರೂ ಕೂಡ ಬಿಎಸ್ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರ ಹಾಕುತ್ತಲೇ ಇದ್ದರು. ಇನ್ನು ಶಾಸಕ ಅರವಿಂದ್ ಬೆಲ್ಲದ್ ಕೂಡ ನಾಯಕತ್ವ ಬದಲಾವಣೆ ನಡೆಸಲು ಹೈ ಕಮಾಂಡ್ ಮಟ್ಟದಲ್ಲಿ ಸಾಕಷ್ಟು ರಾಜಕೀಯ ಮಾಡಿದ್ದಲ್ಲದೇ , ಸಿಎಂ ಸ್ಥಾನದ ಆಕಾಂಕ್ಷಿಯೂ ಆಗಿದ್ದರು. ತಮ್ಮ ನಾಯಕತ್ವ ಬದಲಾವಣೆಗೆ ಪೈಪೋಟಿ ನಡೆಸಿದ ಈ ಮೂವರು ನಾಯಕರಿಗೆ ಮಂತ್ರಿ ಸ್ಥಾನ ಕೈ ತಪ್ಪುವಂತೆ ನೋಡಿಕೊಳ್ಳುವಲ್ಲಿ ಬಿಎಸ್ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಈ ಮೂಲಕ ಸಿಎಂ ಅಧಿಕಾರ ಹೋದರು ತಾವು ಕಿಂಗ್ ಮೇಕರ್ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ವಿಜಯೇಂದ್ರನ ದಾಳ ಉರುಳಿಸಿದ್ದ ಮಾಜಿ ಸಿಎಂ
ಬಿಎಸ್ ಯಡಿಯೂರಪ್ಪ ಆಡಳಿತದಲ್ಲಿ ಮಗ ವಿಜಯೇಂದ್ರನ ಹಸ್ತಕ್ಷೇಪದ ವಿರುದ್ಧ ದೂರು ನೀಡಿದ್ದ ಈ ಮೂವರ ವಿರುದ್ಧ ಮಾಜಿ ಸಿಎಂ ಮಗನ ದಾಳವನ್ನೇ ಉರುಳಿಸಿದ್ದರು. ಹೈ ಕಮಾಂಡ್ ನಿರ್ದೇಶನದ ಮೇರೆಗೆ ಯಾವುದೇ ಮಾತುಗಳನ್ನು ಆಡದೇ ಸುಲಭವಾಗಿ ಒಪ್ಪಿಕೊಂಡು ಕೆಳಗಿಳಿಸಿದ ಮಾಜಿ ಸಿಎಂ, ತಮ್ಮ ಮಗನಿಗೆ ಮಂತ್ರಿ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದರು. ಶಿರಾ, ಕೆಆರ್ ಪೇಟೆ ಚುನಾವಣೆ ಯಶಸ್ವಿಗೆ ಕಾರಣರಾದ ವಿಜಯೇಂದ್ರನಿಗೆ ಸಚಿವ ಸ್ಥಾನ ಕೊಡಿಸಬೇಕು ಎಂದ ಬೇಡಿಕೆ ಇಟ್ಟಿದ್ದರು.
ಇದನ್ನು ಓದಿ: ಪ್ರಮಾಣವಚನಕ್ಕೆ ತಡ; ಶಶಿಕಲಾ ಜೊಲ್ಲೆಗೆ ಜೀರೋ ಟ್ರಾಫಿಕ್ ವ್ಯವಸ್ಥೆ
ತಮ್ಮ ವಿರುದ್ಧ ಬಂಡಾಯ ಎದ್ದ ನಾಯಕರಿಗೆ ಸಂಪುಟದಲ್ಲಿ ಅವಕಾಶ ನೀಡಿದರೆ, ವಿಜಯೇಂದ್ರನಿಗೂ ಸಚಿವ ಸ್ಥಾನ ನೀಡಲೇ ಬೇಕು ಎಂಬ ಸಂದೇಶವನ್ನು ಅವರು ನೀಡಿದ್ದರು. ಇದೇ ಹಿನ್ನಲೆ ಹೈ ಕಮಾಂಡ್ ವಿಜಯೇಂದ್ರನಿಗೆ ಸ್ಥಾನ ಕೊಡಿಸಿದರೆ ಮತ್ತೆ ಕುಟುಂಬ ರಾಜಕಾರಣಕ್ಕೆ ಬೆಂಬಲ ನೀಡಿದಂತೆ ಆಗುತ್ತದೆ ಎಂದು ಯೋಚಿಸಿ ಬಿಎಸ್ವೈ ಮಗನ ಜೊತೆಗೆ ಬಂಡಾಯ ಎದ್ದ ನಾಯಕರನ್ನು ಸಂಪುಟದಿಂದ ಕೈ ಬಿಟ್ಟಿದೆ.
ಈ ಹಿಂದೆ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದ ಸಿಪಿ ಯೋಗೇಶ್ವರ್ ಈಗ ಮಂತ್ರಿ ಸ್ಥಾನ ಕೈ ತಪ್ಪಿದ ಬೆನ್ನಲ್ಲೇ ಅಜ್ಞಾತ ಸ್ಥಾನಕ್ಕೆ ತೆರಳಿದ್ದಾರೆ. ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ್ ಬೆಲ್ಲದ್ ಕೂಡ ಸಚಿವರ ಪ್ರಮಾಣ ವಚನ ಕಾರ್ಯಕ್ಕೆ ಗೈರಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ