ಕುಮಾರಸ್ವಾಮಿನ ಕಿತ್ತಾಕಿ BSYನ ತಂದಿದ್ದೇವೆ, ಅವರೇ ಸಿಎಂ ಆಗಿ ಮುಂದುವರಿಯಲಿ: ಯೋಗೇಶ್ವರ್ ಯೂಟರ್ನ್?

ತಿಹಾರ್ ಜೈಲಿಗೆ ಹೋಗಿ ಬಂದ ಮೇಲೆ ಡಿಕೆ ಶಿವಕುಮಾರ್​​ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಸಿಪಿ ಯೋಗೇಶ್ವರ್​ ವ್ಯಂಗ್ಯವಾಡಿದರು.

ಸಿಎಂ, ಯೋಗೇಶ್ವರ್​

ಸಿಎಂ, ಯೋಗೇಶ್ವರ್​

  • Share this:
ಬೆಂಗಳೂರು : ಬಿ.ಎಸ್​.ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ವಿಚಾರಕ್ಕೆ ದೆಹಲಿ ಭೇಟಿ ಮೂಲಕ ತುಪ್ಪ ಸುರಿದಿದ್ದ ಸಚಿವ ಸಿ.ಪಿ.ಯೋಗೇಶ್ವರ್ ದಿಢೀರನೇ ಸಿಎಂ ಬಗ್ಗೆ ಮೃದು ಧೋರಣೆ ತಳೆದಿದ್ದಾರೆ. ಹೈಕಮಾಂಡ್​ ಕೇಳಿದರೆ ರಾಜೀನಾಮೆ ಸಿದ್ಧ ಎನ್ನುವ ಮೂಲಕ ನಿನ್ನೆ ಯಡಿಯೂರಪ್ಪ ಅಚ್ಚರಿ ಮೂಡಿಸಿದ್ದರು. ಈ ಹೇಳಿಕೆ ಬೆನ್ನಲ್ಲೇ ರಾಜಕೀಯ ಲೆಕ್ಕಾಚಾರ ಬದಲಾದಂತೆ ಕಾಣುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತಿದೆ ಸಿಪಿ ಯೋಗೇಶ್ವರ್​ ಅವರ ಇಂದಿನ ಹೇಳಿಕೆ. ನಮ್ಮ‌ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇನ್ನು ಎರಡು ವರ್ಷ ಮುಂದುವರಿಯಬೇಕು ಎಂಬುದು ನನ್ನ‌ ಇಚ್ಛೆ ಎನ್ನುವ ಮೂಲಕ ಸಿಪಿ ಯೋಗೇಶ್ವರ್​​ ಯೂಟರ್ನ್​​ ಹೊಡೆದಿದ್ದಾರೆ.

ಈ ಸರ್ಕಾರ ರಚನೆಯಾಗೋದಕ್ಕೆ ನನ್ನದೂ ಅಳಿಲು ಸೇವೆ ಇದೆ. ಎಚ್​.ಡಿ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಅವರ ಸಖ್ಯ ಕಿತ್ತುಹಾಕಿ ಬಿಜೆಪಿ ಸರ್ಕಾರ ತಂದಿದ್ದೇವೆ. ಹೀಗಾಗಿ ಮುಖ್ಯಮಂತ್ರಿಯಾಗಿ ಬಿ.ಎಸ್​.ಯಡಿಯೂರಪ್ಪ ಮುಂದುವರಿಯಬೇಕು ಎನ್ನುವ ಮೂಲಕ ಮೃದು ಧೋರಣೆ ತಳೆದಿದ್ದಾರೆ. ನನ್ನ ‌ನೋವನ್ನು ಎಲ್ಲಿ ಹೇಳಿಕೊಳ್ಳಬೇಕೋ ಅಲ್ಲಿ ಹೇಳಿಕೊಂಡಿದ್ದೇನೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಗಳನ್ನು ಬಗೆ ಹರಿಸಿಕೊಳ್ಳುತ್ತೇವೆ ಎಂದು ತಮ್ಮ ದೆಹಲಿ ಭೇಟಿ ಬಗ್ಗೆ ಸ್ಪಷ್ಟನೆ ನೀಡಿದರು. ಸಚಿವ ಆರ್.ಅಶೋಕ್ ಸೇರಿದಂತೆ ಎಲ್ಲ ನನ್ನ ಸ್ನೇಹಿತರು ಅವರು ಏನು ಬೇಕಾದರೂ ಹೇಳಬಹುದು ಎನ್ನುವ ಮೂಲಕ ಭಿನ್ನಮತವನ್ನು ಶಮನ ಮಾಡಲು ಯತ್ನಿಸಿದರು.

ನಮ್ಮ‌ ಪಕ್ಷದ ಯಾವುದೇ ಶಾಸಕರ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ‌. ಡಿ.ಕೆ.ಶಿವಕುಮಾರ್ ಗೆ ಏಕೆ ನಮ್ಮ ಪಕ್ಷದ ಉಸಾಬರಿ ಬೇಕು ಎಂದು ಕಿಡಿಕಾಡಿದರು. ಅವರು ನಮ್ಮ ಪಕ್ಷದ ಸಾಮಾನ್ಯ ಸದಸ್ಯರಾಗಿ ನೋಂದಣಿ ಮಾಡಿಕೊಳ್ಳುವುದು ಸೂಕ್ತ. ಅವರು ನನ್ನ ರಾಜಕೀಯ ವಿರೋಧಿ. ಸಿಡಿ ಸಂಸ್ಕೃತಿ ಅವರಿಗೆ ಚೆನ್ನಾಗಿ ಗೊತ್ತು‌. ನಮ್ಮ ಜಿಲ್ಲೆಯ ಎಲ್.ಎನ್.ಮೂರ್ತಿ ಅನ್ನೋರು ಯಾರು ಯಾರಿಗೆ ಸಿಡಿ ತೋರಿಸುತ್ತಿದ್ದರು ಎಂದು ಬರೆದಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಹಗರಣದ ಹಿಂದೆ ಯಾರು ಇದ್ದ ಎಂಬುದು ಎಲ್ಲರಿಗೂ ಗೊತ್ತಿದೆ‌. ನಾನು ಜೆಎಸ್ ಎಸ್ ಮಠಕ್ಕೆ, ಆದಿ ಚುಂಚನಗಿರಿ ಮಠಕ್ಕೆ ಹೋಗುತ್ತಲೇ ಇರುತ್ತೇನೆ. ನಾನು ಹೋಗಿ ಬಂದ ತಕ್ಷಣ ಅವರು ಹೋಗುತ್ತಾರೆ, ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ತಿಹಾರ್ ಜೈಲಿಗೆ ಹೋಗಿ ಬಂದ ಮೇಲೆ ಡಿಕೆ ಶಿವಕುಮಾರ್​​ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಬ್ರಾಹ್ಮಣರ ವಿರುದ್ಧ ನಟ ಚೇತನ್ ಹೇಳಿಕೆ: ಪೊಲೀಸ್ ಆಯುಕ್ತರಿಗೆ ಬಾಹ್ಮಣ ಸಮುದಾಯದಿಂದ ದೂರು

ಇನ್ನು ರಾಜ್ಯಾದ್ಯಂತ ಭಾನುವಾರ  12,209 ಜನ ಸೋಂಕಿಗೆ ತುತ್ತಾಗಿದ್ದಾರೆ. ಇನ್ನೂ 320 ಜನ ಸಾವನ್ನಪ್ಪಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ 2,944 ಕೊರೋನಾ ಪ್ರಕರಣಗಳು ದಾಖಲಾಗಿದ್ದು, 187 ಜನ ಸಾವನ್ನಪ್ಪಿದ್ದಾರೆ. ಅಲ್ಲದೆ, 10224 ಜನ ಡಿಸ್ವಾರ್ಜ್ ಆಗಿದ್ದು, ಆಕ್ಟಿವ್ ಕೇಸ್​ಗಳ ಸಂಖ್ಯೆ 117340 ಕ್ಕೆ ಇಳಿದಿದೆ ಎಂದು ಆರೋಗ್ಯ ಇಲಾಖೆ ಅಧಿಕೃತ ಮಾಹಿತಿಯಲ್ಲಿ ತಿಳಿಸಿದೆ. ಇನ್ನು ಕಳೆದ 10 ದಿನಗಳಿಂದ ನಿರಂತರವಾಗಿ ದೇಶದಲ್ಲಿ ಕೊರೋನಾ ಸೋಂಕು ಪೀಡಿತರಾಗುವವರ ಸಂಖ್ಯೆ ಎರಡು ಲಕ್ಷಕ್ಕಿಂತ ಕಡಿಮೆ ಆಗಿವೆ. ಕೊರೋನಾದಿಂದ ಸಾಯುವವರ ಸಂಖ್ಯೆ ಇಳಿಮುಖವಾಗಿದೆ. ಇನ್ನೊಂದೆಡೆ ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಚಿಗರುತ್ತಿದ್ದು 52 ದಿನಗಳ ಬಳಿಕ ದೇಶದಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 15 ಲಕ್ಷಕ್ಕಿಂತ ಕಡಿಮೆಯಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: