ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ಸೋಂಕು; ನಗರದ 6 ವಿಧಾನಸಭಾ ಕ್ಷೇತ್ರಗಳು ಡೇಂಜರ್ ವಲಯದಲ್ಲಿ

ಈ 6 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 300ಕ್ಕಿಂತ ಅಧಿಕ ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ಪ್ರಮಾಣ ಹೆಚ್ಚಾದ ಹಿನ್ನಲೆ ಆಕ್ಟಿವ್ ಪ್ರಕರಣಗಳಲ್ಲಿ ಕೂಡಾ ಏರಿಕೆ ಕಂಡಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಆ. 12): ರಾಜ್ಯದಲ್ಲಿ ನಿಧಾನವಾಗಿ ಸೋಂಕಿನ ಪ್ರಮಾಣ ಏರಿಕೆ ಕಾಣುತ್ತಿದೆ. ಈ ನಡುವೆ ಕಟ್ಟು ನಿಟ್ಟಿನ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಆದರೂ ರಾಜಧಾನಿಯಲ್ಲಿ ಮಾತ್ರ ಅಂಥಾ ಕಠಿಣ ನಿಯಮ ಜಾರಿಗೆ  ಆಗದಿರುವುದು ಮತ್ತಷ್ಟು ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ, ಅದರಲ್ಲೂ ನಗರದ ಮಧ್ಯಭಾಗಕ್ಕಿಂಗ ಹೊರ ವಲಯಗಳಲ್ಲಿ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.  ಬೆಂಗಳೂರಿನ 27 ವಿಧಾನಸಭಾ ಕ್ಷೇತ್ರಗಳ ಪೈಕಿ 6 ವಿಧಾನಸಭಾ ಕ್ಷೇತ್ರಗಳು ಅತಿಹೆಚ್ಚು ಆಕ್ಟಿವ್ ಪ್ರಕರಣಗಳ‌ನ್ನು ಹೊಂದಿದೆ. ಅಂದರೆ ಈ 6 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 300ಕ್ಕಿಂತ ಅಧಿಕ ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ಪ್ರಮಾಣ ಹೆಚ್ಚಾದ ಹಿನ್ನಲೆ ಆಕ್ಟಿವ್ ಪ್ರಕರಣಗಳಲ್ಲಿ ಕೂಡಾ ಏರಿಕೆ ಕಂಡಿದೆ. 

ನಗರದ ಹೊರವಲಯಗಳಾದ ಮಹದೇವಪುರ, ಕೆ.ಆರ್​.ಪುರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ, ಬ್ಯಾಟರಾಯನಪುರ ಕ್ಷೇತ್ರಗಳಲ್ಲಿ ಅತಿಹೆಚ್ಚು ಕೋವೊಡ್ ಪ್ರಕರಣಗಳು ಹಾಗೂ ಸಕ್ರಿಯ ಪ್ರಕರಣಗಳಿವೆ.‌ ಇನ್ನು ನಗರದ ಮಧ್ಯೆ ಭಾಗದಲ್ಲಿದ್ದರೂ, ಹೆಚ್ಚು ಕೋವಿಡ್ ಪ್ರಕರಣ ಕಂಡುಬಾರದೆ 6 ವಿಧಾನಸಭಾ ಕ್ಷೇತ್ರಗಳು ಸೇಫ್​ ವಲಯದಲ್ಲಿದೆ. ಚಾಮರಾಜಪೇಟೆ, ಗಾಂಧಿ ನಗರ, ಚಿಕ್ಕಪೇಟೆ,  ವಿಜಯನಗರ, ಫುಲಿಕೇಶಿನಗರ, ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳು ಸೇಫ್​ ಝೋನ್​​ನಲ್ಲಿ ಇವೆ.

ಡೇಂಜರ್ ಝೋನ್​​ನಲ್ಲಿರುವ ಟಾಪ್​​ 6 ವಿಧಾನಸಭಾ ಕ್ಷೇತ್ರಗಳು.!!

ವಿಧಾನಸಭಾ ಕ್ಷೇತ್ರ - ಆ್ಯಕ್ಟೀವ್ ಕೇಸ್​ - ಪಾಸಿಟಿವಿಟಿ ರೇಟ್
ಮಹದೇವಪುರ -          455        1.09%
ಕೆ.ಆರ್​.ಪುರ.               376          0.11%
ಬೊಮ್ಮನಹಳ್ಳಿ -           341           0.90%
ಬೆಂಗಳೂರು ದಕ್ಷಿಣ -     337            0.67%
ರಾಜರಾಜೇಶ್ವರಿ ನಗರ -  332          0.45%
ಬ್ಯಾಟರಾಯನಪುರ -     316           0.91%

ಸೇಫ್​ ಝೋನ್​​ನಲ್ಲಿರುವ ಟಾಪ್​​ 6 ವಿಧಾನಸಭಾ ಕ್ಷೇತ್ರಗಳು.!!

ವಿಧಾನಸಭಾ ಕ್ಷೇತ್ರ - ಆ್ಯಕ್ಟೀವ್ ಕೇಸ್​ - ಪಾಸಿಟಿವಿಟಿ ರೇಟ್ :
ಚಾಮರಾಜಪೇಟೆ - 34 - 0.34%
ಗಾಂಧಿನಗರ - 54 - 0.60%
ಚಿಕ್ಕಪೇಟೆ - 66 - 0.85%
ವಿಜಯನಗರ - 80 - 0.19%
ಪುಲಿಕೇಶಿನಗರ - 81 - 0.73%
ರಾಜಾಜಿನಗರ - 82 - 0.75%

ಈ ಬಗ್ಗೆ ಮಾಹಿತಿ ನೀಡಿದ, ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ ರಂದೀಪ್, ಲಸಿಕೆ ವಿತರಣೆಯ ಪ್ರಮಾಣ ಕುಗ್ಗಿದ್ದೇ ಇಲ್ಲಿ‌ ಕೊರೋನಾ ಸೋಂಕು ಹೆಚ್ಚಾಗಲು ಕಾರಣ ಎಂದು ತಿಳಿಸಿದ್ದಾರೆ. ಕೆಲವು ವಾರ್ಡ್ ಗಳಲ್ಲಿ ಕೋವಿಡ್ ಸೋಂಕು ಹೆಚ್ಚಾಗಿದೆ. ಹೀಗಾಗಿ ವ್ಯಾಕ್ಸಿನ್ ಕಡಿಮೆ ಆಗಿ ಕೋವಿಡ್ ಹೆಚ್ಚಾಗುತ್ತಿರುವ, ನಗರ ಪ್ರಾಥಮಿಕ ಕೇಂದ್ರಗಳ ವ್ಯಾಪ್ತಿಗೆ ಹೆಚ್ಚು ವ್ಯಾಕ್ಸಿನ್ ವಿತರಣೆ ಮಾಡಲಾಗುತ್ತದೆ. ಈ ರೀತಿ ಪ್ಲಾನ್ ಮಾಡಿ, ವ್ಯಾಕ್ಸಿನ್ ಕಡಿಮೆ ಹಂಚಿಕೆ ಆಗಿರುವ ಕಡೆ ಹೆಚ್ಚು ವಿತರಣೆ ಮಾಡಲಾಗುವುದು. ಸೀರೋ ಸರ್ವೇ ಕೂಡಾ ಮಾಡಲಾಗಿದೆ. ಮುಂದಿನ ವಾರದಲ್ಲಿ ಇದರ ವರದಿ ನೋಡಿಕೊಂಡು, ಎಲ್ಲಿ ಜನರಲ್ಲಿ ಕಡಿಮೆ ರೋಗನಿರೋಧಕ ಶಕ್ತಿ ಇರುವ ಕಡೆ, ಆದ್ಯತೆ ಮೇರೆಗೆ ವ್ಯಾಕ್ಸಿನೇಷನ್ ಹೆಚ್ಚು ಮಾಡಲಾಗುವುದು. ಈ ರೀತಿ ಟಾರ್ಗೆಟೆಡ್ ವ್ಯಾಕ್ಸಿನೇಷನ್ ಮಾಡಲಾಗುವುದು ಎಂದರು.

ಒಟ್ಟಾರೆ ಮೂರ‌ನೇ ಅಲೆ ಮುನ್ಸೂಚನೆಗಳು ಗೋಚರವಾಗ ತೊಡಗಿದೆ. ಈಗಾಗಲೇ ಸರ್ಕಾರ ಆಗಸ್ಟ್​ 15 ರ ಬಳಿಕ ಮತ್ತಷ್ಟು ಕಠಿಣ ನಿಯಮ ಜಾರಿ ಮಾಡುವುದಾಗಿ ಸುಳಿವು ನೀಡಿದೆ.  ಆಗಸ್ಟ್ 15ರ ಬಳಿಕ ವೀಕೆಂಡ್ ಕರ್ಫ್ಯೂ ಸೇರಿದಂತೆ ಮತ್ತಷ್ಟು ಕಠಿಣ ಕ್ರಮಗಳು ಜಾರಿಯಾದರೂ ಅಚ್ಚರಿ ಇಲ್ಲ. ಪಾಸಿಟಿವಿಟಿ ದರ ಶೇ 2ರಷ್ಟು ಆದ್ರೆ ಲಾಕ್​ಡೌನ್​ ಬಗ್ಗೆ ಚಿಂತಿಸಲಾಗುವುದು ಎನ್ನಲಾಗಿದ್ದು, ಸೋಂಕು ಹರಡುವ ಮುನ್ನ ಜನರು ಎಚ್ಚೆತ್ತುಕೊಳ್ಳುವುದು ಕೂಡ ಅನಿವಾರ್ಯವಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Seema R
First published: