ಕೋವಿಡ್-19 ಅಟ್ಟಹಾಸದಿಂದ (Covid-19) ಹಲವಾರು ಕಿರು ಮತ್ತು ಸೂಕ್ಷ್ಮ ಉದ್ಯಮಗಳು (Micro Enterprises) ಶಾಶ್ವತವಾಗಿ ಬಾಗಿಲು ಹಾಕಿಕೊಂಡವು. ಅದರಲ್ಲೂ ಆತಿಥ್ಯ ವಲಯವಂತೂ ಭಾರಿ ನಷ್ಟ ಅನುಭವಿಸಿತು. ಸಹಸ್ರಾರು ಹೋಟೆಲ್, ರೆಸ್ಟೋರೆಂಟ್‌ಗಳು ಮುಚ್ಚಲ್ಪಟ್ಟವು, ಇಲ್ಲವೆ ಮಾರಾಟವಾದವು. ಈಗ ಈ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆ: ಬೆಂಗಳೂರಿನ ಟಾವೋ ಟೆರೇಸ್ (Tao Terrace Restaurant in Bangalore )ರೆಸ್ಟೋರೆಂಟ್... ವಿಶ್ವಾದ್ಯಂತ ಕೋವಿಡ್-19 ಭೀತಿ ಸೃಷ್ಟಿಸಿದ್ದು, ಭಾರತದಲ್ಲಿ ಅಸಂಖ್ಯಾತ ರೆಸ್ಟೋರೆಂಟ್‌ಗಳು ಬಂದ್ ಆದವು. ಮೊದಲನೆ ಅಲೆಯ ಸಂದರ್ಭದಲ್ಲಿ ಹಾಗೂ ಹೀಗೂ ಆ ಅಲೆಯಲ್ಲಿ ತೇಲಿಕೊಂಡು ಜೀವವುಳಿಸಿಕೊಂಡಿದ್ದ ಹಲವಾರು ರೆಸ್ಟೋರೆಂಟ್‌ಗಳು ಎರಡನೆ ಅಲೆಯ ಸಂದರ್ಭದಲ್ಲಿ ಕೊನೆಯುಸಿರೆಳದವು. ಮೂರನೆ ಅಲೆ (Third Wave) ಆರಂಭಗೊಳ್ಳುವ ಲಕ್ಷಣಗಳು ತೋರುತ್ತಿರುವ ಈ ಹೊತ್ತಿನಲ್ಲಿ ಹಲವಾರು ರೆಸ್ಟೋರೆಂಟ್ ( Restaurant) ಮಾಲೀಕರಿಗೆ ತಮ್ಮ ರೆಸ್ಟೋರೆಂಟ್ ಬಂದ್ ಮಾಡದೆ ಬೇರೆ ದಾರಿಯೇ ಉಳಿದಿಲ್ಲ.
ದುಬಾರಿ ಬಾಡಿಗೆ
ಇದಕ್ಕಿಂತ ಮುಖ್ಯವಾಗಿ ಪದೇ ಪದೇ ಹೇರಿಕೆಯಾಗುತ್ತಿರುವ ಲಾಕ್‌ಡೌನ್‌ನಿಂದ ಅವರ ಮೇಲೆ ನಷ್ಟದ ಬರಸಿಡಿಲೆರಗಿದೆ. ಬೆಂಗಳೂರಿನಲ್ಲಿ ಸಾಂಕ್ರಾಮಿಕದ ಕಾರಣಕ್ಕೆ ಹೇರಲಾಗಿರುವ ವಾರಾಂತ್ಯದ ಕರ್ಫ್ಯೂನಿಂದ ನಗರದ ಪ್ರತಿಷ್ಠಿತ ಟಾವೋ ಟೆರೇಸ್ ರೆಸ್ಟೋರೆಂಟ್‌ಗೆ ತೀವ್ರ ಹೊಡೆತ ನೀಡಿದೆ.
ಹಲವರ ಪಾಲಿಗೆ ಅಚ್ಚುಮೆಚ್ಚಿನ ರೆಸ್ಟೋರೆಂಟ್ ಆಗಿದ್ದ ಟಾವೋ ಟೆರೇಸ್ ಶನಿವಾರದಂದು ತನ್ನ ರೆಸ್ಟೋರೆಂಟ್ ಗೆ ಬಾಗಿಲು ಎಳೆಯಿತು. ಈ ಕುರಿತು ಭಾವನಾತ್ಮಕ ಪತ್ರ ಬರೆದಿರುವ ರೆಸ್ಟೋರೆಂಟ್ ಮಾಲೀಕ ನರೇನ್ ಬೆಳ್ಳಿಯಪ್ಪ, ಪುನರಾವರ್ತಿತ ಲಾಕ್‌ಡೌನ್, ದುಬಾರಿ ಬಾಡಿಗೆ ಹಾಗೂ ಸರ್ಕಾರದ ತಾರತಮ್ಯ ನೀತಿಯಿಂದಾಗಿ ತನ್ನ ರೆಸ್ಟೋರೆಂಟ್ ಮುಚ್ಚದೆ ಬೇರೆ ಆಯ್ಕೆ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Tea Shops: ಚಹಾ ಪ್ರಿಯರಿಗೆ ಇಲ್ಲಿದೆ ಬೆಂಗಳೂರಿನ ಟಾಪ್ 5 ರುಚಿಕರ ಟೀ ಅಂಗಡಿಗಳ ಲಿಸ್ಟ್
ಅಸಾಧ್ಯ ಪರಿಸ್ಥಿತಿ
“ನಿಮ್ಮ ಅಚ್ಚುಮೆಚ್ಚಿನ ಸಂಗೀತ ಸ್ಥಳ ಟಾವೋ ಟೆರೇಸ್ ಇಂದಿನಿಂದ ಬಂದ್ ಆಗುತ್ತಿದೆ. ನಮ್ಮ ಎದುರಿಗಿದ್ದ ಅತಿ ದೊಡ್ಡ ಸವಾಲು ದುಬಾರಿ ಬಾಡಿಗೆ ಹಾಗೂ ಪ್ರತಿ ಬಾರಿ ನಿರ್ಬಂಧಗಳು ಘೋಷಣೆಯಾದಾಗಲೂ ನಾವೇ ಮೊದಲು ಬಾಗಿಲು ಮುಚ್ಚಬೇಕಾಗುತ್ತಿತ್ತು ಹಾಗೂ ನಿರ್ಬಂಧ ತೆರವುಗೊಂಡ ಬಳಿಕ ಕೊನೆಯಲ್ಲಿ ಬಾಗಿಲು ತೆರೆಯಬೇಕಾಗುತ್ತಿತ್ತು. ನಾವು ಕಳೆದ ವರ್ಷದ ಮಾರ್ಚ್‌ನಲ್ಲಿ ತಾತ್ಕಾಲಿಕವಾಗಿ ರೆಸ್ಟೋರೆಂಟ್‌ಗೆ ಬಾಗಿಲು ಹಾಕಿದಾಗ ನಾವ್ಯಾರು 21 ತಿಂಗಳ ನಂತರವೂ ಕೋವಿಡ್-19 ಉಳಿದಿರುತ್ತದೆ ಎಂದು ಭಾವಿಸಿರಲಿಲ್ಲ. ಹೀಗಿದ್ದೂ ಇಂತಹ ಅಸಾಧ್ಯ ಪರಿಸ್ಥಿತಿಯಲ್ಲೂ ನಾವು ನಮ್ಮ ಭರವಸೆಯನ್ನು ದೊಡ್ಡ ಮಟ್ಟದಲ್ಲಿ ಉಳಿಸಿಕೊಂಡಿದ್ದೆವು. ಯಾಕೆಂದರೆ, ನಾವು ಏನನ್ನು ಮಾಡುತ್ತಿದ್ದೆವು ಅದರ ಬಗ್ಗೆ ನಮಗೆ ಅಪಾರ ಪ್ರೀತಿಯಿತ್ತು-ಅತ್ಯುತ್ತಮ ಸಂಗೀತವನ್ನು ವಿಶ್ವದ ಅತ್ಯುತ್ತಮ ಜನಸಂದಣಿ ಎದುರು ಪ್ರದರ್ಶಿಸಲು..” ಎಂದು ಅವರು ತಮ್ಮ ಪತ್ರದಲ್ಲಿ ಬರೆದುಕೊಂಡಿದ್ದಾರೆ.
ರೆಸ್ಟೋರೆಂಟ್‌ಗಳ ಒಕ್ಕೂಟ
ನಮ್ಮ ಪಾಲಿಗೆ ರೆಸ್ಟೋರೆಂಟ್ ನಡೆಸುವುದು ಅಸಾಧ್ಯ ಹಾಗೂ ಸಹಿಸಲಸಾಧ್ಯವಾಗಿತ್ತು. ಪುನರಾವರ್ತಿತ ಲಾಕ್ ಡೌನ್ ಸಂದರ್ಭಗಳಲ್ಲಿ ನಾವು ಹೇಗೆ ತಾನೆ ಅಬಕಾರಿ ಸುಂಕ ತೆರುವುದು, ನಮ್ಮ ವ್ಯಾಪಾರ ಮುನ್ನಡೆಸುವುದು ಹಾಗೂ ನಮ್ಮ ಸಿಬ್ಬಂದಿಗಳಿಗೆ ವೇತನ ಪಾವತಿಸುವುದು” ಎಂದು ನೋವಿನಿಂದ ಪ್ರಶ್ನಿಸಿದ್ದಾರೆ. ಈ ನಡುವೆ ಭಾರತೀಯ ರಾಷ್ಟ್ರೀಯ ರೆಸ್ಟೋರೆಂಟ್‌ಗಳ ಒಕ್ಕೂಟದ ಬೆಂಗಳೂರು ವಿಭಾಗ ಹಾಗೂ ಜನಪ್ರಿಯ ಕಿರು ಮದ್ಯ ಉತ್ಪಾದನಾ ಘಟಕದ ಸಹ ಸಂಸ್ಥಾಪಕ ಮುಕೇಶ್ ತೊಲಾನಿ ಅವರು ಅಬಕಾರಿ ಇಲಾಖೆಯನ್ನು ಸಂಪರ್ಕಿಸಿ, ವಾರದ ದಿನಗಳಲ್ಲಿ ರಾತ್ರಿ ಕರ್ಫ್ಯೂವನ್ನು ರಾತ್ರಿ 10 ಗಂಟೆಯ ಬದಲು ರಾತ್ರಿ 11.30ರವರೆಗೆ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ ಎಂದು “ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಮಾಡಿದೆ.
ಬಾರ್ ಗಳಿಗೆ ಪೆಟ್ಟು
ನಾವು ಸಾಂಕ್ರಾಮಿಕದ ಕಾರಣಕ್ಕೆ ನಮ್ಮ ಬಹು ದೊಡ್ಡ ವ್ಯಾಪಾರವನ್ನು ನಷ್ಟ ಮಾಡಿಕೊಂಡಿದ್ದೇವೆ. ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳ ಸಂದಣಿ ಕೊರತೆಯಿಂದ ವಾರದ ದಿನಗಳ ವ್ಯಾಪಾರ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ವಾರದ ದಿನಗಳಲ್ಲಿ ರಾತ್ರಿ 10 ಗಂಟೆಯಿಂದ ಶುರುವಾಗುವ ಕರ್ಫ್ಯೂ ಹಾಗೂ ಈಗ ವಾರಾಂತ್ಯದ ಕರ್ಫ್ಯೂ ಹೇರಿಕೆಯಿಂದ ರೆಸ್ಟೋರೆಂಟ್, ಪಬ್‌ಗಳು ಹಾಗೂ ಬಾರ್ ಗಳಿಗೆ ಪೆಟ್ಟು ಬಿದ್ದಿದೆ. ವ್ಯಾಪಾರವನ್ನು ಮರೆತುಬಿಡಿ.
ಇದನ್ನೂ ಓದಿ: The Village: ಹಳ್ಳಿ ಸೊಗಡಿನ ಈ ಹೋಟೆಲ್ಗೆ ಒಮ್ಮೆ ಹೋಗ್ಲೇಬೇಕು -ಈ ವೀಕೆಂಡ್ ಮಿಸ್ ಮಾಡ್ಬೇಡಿ
ನಮ್ಮ ಹಾಗೂ ನಮ್ಮ ಸಿಬ್ಬಂದಿಗಳ ಉಳಿವೇ ದೊಡ್ಡ ಆದ್ಯತೆಯಾಗಿದೆ” ಎಂದು ಮುಕೇಶ್ ತೊಲಾನಿ ಹೇಳಿದ್ದಾರೆ.ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಅಬಕಾರಿ ಆಯುಕ್ತರನ್ನು ಭೇಟಿ ಮಾಡುವ ನಮ್ಮ ಪ್ರಯತ್ನ ಫಲಪ್ರದವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ