• Home
 • »
 • News
 • »
 • state
 • »
 • ಮತ್ತೊಂದು ಪ್ರಕರಣದಲ್ಲೂ ವಿನಯ್ ಕುಲಕರ್ಣಿಗೆ ಜಾಮೀನು: ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿಗೆ ಅನುಮತಿ

ಮತ್ತೊಂದು ಪ್ರಕರಣದಲ್ಲೂ ವಿನಯ್ ಕುಲಕರ್ಣಿಗೆ ಜಾಮೀನು: ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿಗೆ ಅನುಮತಿ

ವಿನಯ್​​ ಕುಲಕರ್ಣಿ , ಜನಾರ್ದನ ರೆಡ್ಡಿ

ವಿನಯ್​​ ಕುಲಕರ್ಣಿ , ಜನಾರ್ದನ ರೆಡ್ಡಿ

vinay Kulkarni and janardhan reddy: ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮತ್ತೊಂದು ರಿಲೀಫ್ ಸಿಕ್ಕಿದೆ.  ಬಳ್ಳಾರಿ ಜಿಲ್ಲೆ ಮತ್ತು ಆಂಧ್ರಪ್ರದೇಶದ ಅನಂತಪುರಂ ಭೇಟಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

 • Share this:

  ಬೆಂಗಳೂರು: ಜಿ.ಪಂ.ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್​ ಕುಲಕರ್ಣಿಗೆ ಸುಪ್ರೀಂ ಕೋರ್ಟ್​ ಜಾಮೀನು ಮಂಜೂರು ಮಾಡಿದ್ದರೂ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. ಏಕೆಂದರೆ ಸಾಕ್ಷ್ಯನಾಶ ಪ್ರಕರಣದಲ್ಲಿ ವಿನಯ್​​ ಕುಲಕರ್ಣಿಗೆ ಬೇಲ್​ ದೊರೆತಿರಲಿಲ್ಲ. ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಷರತ್ತು ಬದ್ಧ ಜಾಮೀನು ಹಿನ್ನೆಲೆಯಲ್ಲಿ ವಿನಯ್​​ ಕುಲಕರ್ಣಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.


  ಜಾಮೀನಿನ ಷರತ್ತಿನ ಪ್ರಕಾರ ವಿನಯ್​ ಕುಲಕರ್ಣಿ ಯಾವುದೇ ಕಾರಣಕ್ಕೂ ಧಾರವಾಡ ಜಿಲ್ಲೆ ಪ್ರವೇಶಿಸುವಂತಿಲ್ಲ. ವಾರಕ್ಕೆ ಎರಡು ಬಾರಿ‌ ಸಿಬಿಐ ಮುಂದೆ ಹಾಜರಾಗಬೇಕು. ಐಒ ಮುಂದೆ ಹಾಜರಾಗಿ ಸಹಿ ‌ಮಾಡಿ ಬರಬೇಕು. ಜಾಮೀನಿಗೆ ಇಬ್ಬರು ಶ್ಯೂರಿಟಿ‌ ಬಾಂಡ್ ನೀಡಬೇಕು. ಪ್ರಕರಣದ ಸಾಕ್ಷಿ ನಾಶ ಮಾಡಬಾರದು. ಸಾಕ್ಷಿಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಬಾರದು ಎಂದು ಕೋರ್ಟ್​ ಷರತ್ತು ವಿಧಿಸಿದೆ.


  ಇ- ಮೇಲ್ ಮೂಲಕ ಹಿಂಡಲಗಾ ಜೈಲಿಗೆ ಜಾಮೀನು ಪತ್ರ ಹೋಗಲಿದೆ. ಅದನ್ನ ಪಡೆದ ನಂತರ ಜೈಲಾಧಿಕಾರಿ‌ ಬಿಡುಗಡೆ ಮಾಡಲು ಅವಕಾಶವಿದೆ. ನಾಳೆ ಸರ್ಕಾರಿ ರಜೆ ಹಿನ್ನೆಲೆ ಬಹುತೇಕ ಇಂದು ರಾತ್ರಿ ವೇಳೆಗೆ ಕುಲಕರ್ಣಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


  ಮಾಜಿ ಸಚಿವ ವಿನಯ ಕುಲಕರ್ಣಿಗೆ ಜಾಮೀನು ಸಿಗುತ್ತಿದ್ದಂತೆ ಧಾರವಾಡದಲ್ಲಿ ಬೆಂಬಲಿಗರ ಸಂಭ್ರಮಾಚರಣೆ ನಡೆಸಿದ್ದಾರೆ. ಧಾರವಾಡದ ಶಿವಗಿರಿ ಬಡಾವಣೆಯಲ್ಲಿನ ನಿವಾಸದ ಎದುರು ಸಂಭ್ರಮಾಚರಣೆ ನಡೆದಿದೆ. ಹೆಬ್ಬಳ್ಳಿ ಅಗಸಿ ವೃತ್ತದಲ್ಲಿ ಪಟಾಕಿ ಸಿಡಿಸಿ ಬೆಂಬಲಿಗರು ವಿಜಯೋತ್ಸವ ನಡೆಸಿದ್ದಾರೆ.


  ಜನಾರ್ದನ ರೆಡ್ಡಿಗೆ ಮತ್ತೊಂದು ರಿಲೀಫ್


  ಇತ್ತ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮತ್ತೊಂದು ರಿಲೀಫ್ ಸಿಕ್ಕಿದೆ.  ಬಳ್ಳಾರಿ ಜಿಲ್ಲೆ ಮತ್ತು ಆಂಧ್ರಪ್ರದೇಶದ ಅನಂತಪುರಂ ಭೇಟಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. 8 ವಾರಗಳ ಕಾಲ ಭೇಟಿ ನೀಡಲು ಮತ್ತು ಅಲ್ಲಿ ಉಳಿಯಲು ಅವಕಾಶ ನೀಡಿ ಜಸ್ಟೀಸ್ ವಿನೀತ್ ಸಾರನ್ ಪೀಠ ಆದೇಶ ಹೊರಡಿಸಿದೆ. ಈ ಹಿಂದೆ ಜಾಮೀನು ನೀಡಿ ಬಳ್ಳಾರಿ, ಅನಂತಪುರ ಭೇಟಿ ನಿಷೇಧಿಸಲಾಗಿತ್ತು. ಈ ಹಿನ್ನೆಲೆ ಬಳ್ಳಾರಿ, ಅನಂತಪುರ ಭೇಟಿಗೆ ಅವಕಾಶ ಕೋರಿ ಜನಾರ್ದನ ರೆಡ್ಡಿ ಅರ್ಜಿ ಸಲ್ಲಿಸಿದ್ದರು. ರೆಡ್ಡಿ ಮನವಿಯನ್ನು ಸುಪ್ರೀಂ ಕೋರ್ಟ್​​ ಪುರಸ್ಕರಿಸಿದೆ.  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

  Published by:Kavya V
  First published: