ಬೆಂಗಳೂರು (ಜೂನ್ 30); ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ಕಳೆದ ವರ್ಷ ಫೆ.24ರಂದು ಕರ್ನಾಟಕ ಪೊಲೀಸರು ವಿದೇಶದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು. ಸದ್ಯ ಆತ ಕೇಂದ್ರ ಅಪರಾಧ ತನಿಖಾ ದಳದ ವಶದಲ್ಲಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ದೇಶದ ಅನೇಕ ಭಾಗಗಳಲ್ಲಿ ಡಾನ್ ರವಿ ಪೂಜಾರಿ ಅಪರಾಧ ನಡೆಸಿದ್ದು, ಮುಂಬೈ,ಕೇರಳ, ಬಳಿಕ ಗುಜರಾತ್ ಪೊಲೀಸರು ಇದೀಗ ವಿಚಾರಣೆಗೆ ರವಿ ಪೂಜಾರಿನ್ನು ತಮ್ಮ ಕಸ್ಟಡಿಗೆ ನೀಡಬೇಕು ಎಂದು ಕರ್ನಾಟಕ ಪೊಲೀಸ್ ಇಲಾಖೆ ಎದುರು ಬೇಡಿಕೆ ಇಡುತ್ತಿದ್ದಾರೆ. ಸಿಟಿ ಕೌನ್ಸಿಲರ್ ಶೂಟೌಟ್ ಪ್ರಕರಣದಲ್ಲಿ ರವಿ ಪೂಜಾರಿಯನ್ನ ಕಸ್ಟಡಿಗೆ ನೀಡುವಂತೆ ಗುಜರಾತ್ ಎಟಿಎಸ್ ಬೆಂಗಳೂರಿನ 62ನೇ ಸಿಸಿಎಚ್ ಕೋರ್ಟ್ನಲ್ಲಿ ಈ ಹಿಂದೆ ಮನವಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ 30 ದಿನಗಳ ಕಾಲ ಗುಜರಾತ್ ಪೊಲೀಸರ ವಶಕ್ಕೆ ನೀಡುವಂತೆ ಆದೇಶಿಸಿದೆ. ಹೀಗಾಗಿ ರವಿ ಪೂಜಾರಿಯನ್ನು ಬೆಂಗಳೂರು ಪೊಲೀಸರು ಇದೀಗ ಗುಜರಾತ್ ಪೊಲೀಸರಿಗೆ ವಿಚಾರಣೆಗಾಗಿ ಹಸ್ತಾಂತರ ಮಾಡಿದ್ದಾರೆ.
ಜನವರಿ 2017ರಲ್ಲಿ ಗುಜರಾತ್‌ನ ಬೊರ್ಸಾದ್ ನಲ್ಲಿ ಶೂಟೌಟ್ ನಡೆದಿತ್ತು. ಬೊರ್ಸಾದ್ ಕೌನ್ಸಿಲರ್ ಪ್ರಗ್ನೇಶ್ ಪಟೇಲ್ ಮೇಲೆ ಗುಂಡಿನ ದಾಳಿ ನಡೆಸಿದ್ದ ಸುಪಾರಿ ಹಂತಕರು, ಆತನನ್ನು ಕೊಲೆ ಮಾಡಿದ್ದರು.
ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಗುಜರಾತ್ ಎಟಿಎಸ್ ಪೊಲೀಸರು ಬಂಧಿಸಿದ್ದರು. ತನಿಖೆ ವೇಳೆ ರವಿ ಪೂಜಾರಿ ಪಾತ್ರ ಬೆಳಕಿಗೆ ಬಂದಿತ್ತು. ಹೀಗಾಗಿ ಹೆಚ್ಚಿನ ತನಿಖೆಗಾಗಿ ಡಾನ್ ರವಿ ಪೂಜಾರಿಯನ್ನು ತಮ್ಮ ವಶಕ್ಕೆ ನೀಡುವಂತೆ ಗುಜರಾತ್ ಎಟಿಎಸ್ ಬೆಂಗಳೂರು ಪೊಲೀಸರ ಬಳಿ ಮನವಿ ಸಲ್ಲಿಸಿತ್ತು.
ಇನ್ನೂ ಈ ಹಿಂದೆ ಭೂಗತ ಪಾತಕಿ ರವಿ ಪೂಜಾರಿಯನ್ನ ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಮುಂಬೈನ ಬಿಲ್ಡರ್ ರಾಜು ಪಾಟೀಲ್ ಕೊಲೆ ಸಂಬಂಧ ವಿಚಾರಣೆ ಸಲುವಾಗಿ ಮುಂಬೈ ಪೊಲೀಸರು ಬಾಡಿ ವಾರೆಂಟ್ ಮೇಲೆ ಆರೋಪಿಯನ್ನು ಕಳೆದ ನವೆಂಬರ್ ತಿಂಗಳಲ್ಲಿ ವಶಕ್ಕೆ ಪಡೆದಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರವಿ ಪೂಜಾರಿಯನ್ನ ಬಾಡಿ ವಾರೆಂಟ್ ಮೇಲೆ ಮುಂಬೈ ಪೊಲೀಸರು 10 ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದರು.
ಈ ಕೇಸ್ ಸಹ ಮುಂಬೈ ಹೈಕೋರ್ಟ್ನಲ್ಲಿ ನಡೆಯುತ್ತಿದೆ. ಈ ವೇಳೆ ಡಾನ್ ರವಿ ಪೂಜಾರಿಗೆ ಕೊಲೆ ಬೆದರಿಕೆಗಳು ಇರುವ ಕಾರಣ ಅವರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಬೇಕು ಎಂದು ಕೋರ್ಟ್ ತಿಳಿಸಿತ್ತು.
ಪೂಜಾರಿ ಮೇಲಿದೆ ನೂರಕ್ಕೂ ಹೆಚ್ಚು ಪ್ರಕರಣಗಳು:
ರವಿ ಪೂಜಾರಿ ವಿರುದ್ಧ ನೂರಾರು ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ 36, ಮಂಗಳೂರಿನಲ್ಲಿ 39 ಸೇರಿ ಹಲವು ಠಾಣೆಗಳಲ್ಲಿ ಕೇಸ್ಗಳು ದಾಖಲಾಗಿವೆ. ಈ ಬಗ್ಗೆ ರಾಜ್ಯ ಪೊಲೀಸ್ ಇಲಾಖೆ ತನಿಖೆ ನಡೆಸಲಿದೆ. ಸದ್ಯ, ರಾಜ್ಯದಲ್ಲಿರುವ ಎಲ್ಲ ಕೇಸ್ಗಳ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ರಾಜಕಾರಣಿಗಳಿಗೆ ಬೆದರಿಕೆ:
ರವಿ ಪೂಜಾರಿ ಹಣಕ್ಕಾಗಿ ಅನೇಕ ರಾಜಕಾರಣಿಗಳಿಗೆ ಬೆದರಿಕೆ ಒಡ್ಡಿದ್ದಾರೆ. 2018ರಲ್ಲಿ ಮಾಜಿ ಸಚಿವ ತನ್ವೀರ್ ಸೇಠ್ಗೆ ಹಣಕ್ಕಾಗಿ ರವಿ ಪೂಜಾರಿ ಬೇಡಿಕೆ ಇಟ್ಟಿದ್ದ. 15 ಕೋಟಿ ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಕರೆ ಮಾಡಿದ್ದ. ಮಾಜಿ ಸಚಿವ ಅನಿಲ್ ಲಾಡ್ಗೂ 10 ಕೋಟಿ ಹಣ ಕೊಡುವಂತೆ ಬೆದರಿಕೆ ಹಾಕಿದ್ದ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ