ಬೆಂಗಳೂರು (ಜೂ. 9): ಕೊರೋನಾ ಲಾಕ್ಡೌನ್ ನಡುವೆಯೂ ಪೆಟ್ರೋಲ್ ಬೆಲೆ ಏರಿಕೆ ಕಾಣುತ್ತಲೇ ಇದೆ. ಈಗಾಗಲೇ ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ಶತಕ ಬಾರಿಸಿದ್ದು, ಜನರನ್ನು ಕಂಗೆಡಿಸಿದೆ. ಇಂಧನದ ಬೆಲೆ ಈ ರೀತಿ ಏರಿಕೆ ಕಾಣುತ್ತಿರುವುದು ಮಧ್ಯಮ ವರ್ಗದ ಜನರನ್ನು ಇನ್ನಷ್ಟು ಕಂಗೆಡಿಸಿದೆ. ಇದೇ ಹಿನ್ನಲೆ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಲು ಸಜ್ಜಾಗಿದೆ. ರಾಜ್ಯದ ಸುಮಾರು 5 ಸಾವಿರ ಪೆಟ್ರೋಲ್ ಬಂಕ್ನಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದೆ. ಈ ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, 100 ನಾಟೌಟ್ ಶೀರ್ಷಿಕೆಯಡಿ ಜೂ.11ರಿಂದ ಜೂ.15ರವರೆಗೆ ವಿನೂತನ ಪ್ರತಿಭಟನೆ ನಡೆಸಲು ಪಕ್ಷ ತೀರ್ಮಾನಿಸಿದೆ ಎಂದು ತಿಳಿಸಿದರು.
ಪೆಟ್ರೋಲ್ ದರ ಏರಿಕೆ ಖಂಡಿಸಿ 100 ನಾಟೌಟ್ ಕ್ಯಾಂಪೇನ್ ಹಮ್ಮಿಕೊಂಡಿದ್ದೇವೆ. 11ರಿಂದ 15 ರವರೆಗೆ ಕಾರ್ಯಕ್ರಮ ರೂಪಿಸಿದ್ದೇವೆ. ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಜೂನ್ 11 ರಂದು ಪ್ರತಿಭಟನೆ ನಡೆಸುತ್ತೇವೆ. ಜೂನ್ 12 ರಂದು ತಾಲೂಕು ಕೇಂದ್ರಗಳಲ್ಲಿ, ಜೂನ್ 13 ರಂದು ಹೋಬಳಿ ಮಟ್ಟದಲ್ಲಿ ಹಾಗೂ ಜೂನ್ 14 ರಂದು ಗ್ರಾ.ಪಂ ವ್ಯಾಪ್ತಿಯಲ್ಲಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಜೂನ್15 ರಂದು ಉಳಿದ ಕಡೆ ಪೆಟ್ರೋಲ್ ಬಂಕ್ ಬಳಿ ಪ್ರತಿಭಟನೆ ಮಾಡುತ್ತೇವೆ. 5000 ಪೆಟ್ರೋಲ್ ಬಂಕ್ ಮುಂದೆ ಹೋರಾಟ ಮಾಡುತ್ತೇವೆ. ಪೆಟ್ರೋಲ್ ದರ ಇಳಿಸುವವರೆಗೆ ನಮ್ಮ ಹೋರಾಟ ನಡೆಯಲಿದೆ. ಜಿಲ್ಲೆಗೆ ಒಬ್ಬರು ಉಸ್ತುವಾರಿಯನ್ನ ನೇಮಕಮಾಡುತ್ತೇವೆ. ಈ ಪ್ರತಿಭಟನೆ ವೇಳೆ ಪಕ್ಷದ ನಾಯಕರು ಜಿಲ್ಲೆಗೆ ಹೋಗಿ, ಪರಿಶೀಲಿಸಬೇಕು. ಪ್ರತಿಭಟನೆಯನ್ನ ಜೂಮ್ ಮೂಲಕ ಪರಿಶೀಲಿಸಲಿದ್ದಾರೆ. ಪ್ರತಿಭಟನೆ ವಿಶ್ಯುವಲ್ಸ್ ಎಐಸಿಸಿಗೆ ಕಳಿಸುತ್ತೇವೆ ಎಂದರು.
ಇದನ್ನು ಓದಿ: ಮೂರನೇ ಮಗುವು ಹೆಣ್ಣಾಯಿತು ಎಂದು ಹಸುಗೂಸನ್ನು ಅನಾಥ ಮಾಡಿ ದತ್ತು ಕೇಂದ್ರಕ್ಕೆ ಒಪ್ಪಿಸಿದ ತಾಯಿ
ಕೊರೋನಾ ಹಿನ್ನಲೆ ಕೋವಿಡ್ ಪ್ರೋಟೋಕಾಲ್ ನಂತೆ ಪ್ರತಿಭಟನೆ ಮಾಡಬೇಕು. ಈ ಬಗ್ಗೆ ಎಐಸಿಸಿ ನಮಗೆ ಸೂಚನೆ ಕೊಟ್ಟಿದೆ. ಪೆಟ್ರೋಲ್ ಮೂಲಕ ಜನರ ಪಿಕ್ ಪಾಕೆಟ್ ನಡೆಯುತ್ತಿದೆ. ಹಾಗಾಗಿ 100 ನಾಟೌಟ್ ಕ್ಯಾಂಪೇನ್ ಇಟ್ಕೊಂಡಿದ್ದೇವೆ. ಇವರು ಕೊರೋನಾ ಸಮಯದಲ್ಲಿ ಕುಂಭಮೇಳ, ಚುನಾವಣೆ ಸಂದರ್ಭದಲ್ಲಿ ಹೇಗೆ ನಿರ್ವಹಣೆ ಮಾಡಿದರು ಎಂದು ಗೊತ್ತಿದೆ ಎಂದು ಇದೇ ವೇಳೆ ಕುಟುಕಿದರು.
ಇದನ್ನು ಓದಿ: ಕಾಂಗ್ರೆಸ್ ತೊರೆದ ರಾಹುಲ್ ಗಾಂಧಿ ಆಪ್ತ; ಬಿಜೆಪಿ ಸೇರಿದ ಜಿತಿನ್ ಪ್ರಸಾದ್
ಒಂದು ತಿಂಗಳಲ್ಲಿಯೇ 16 ಬಾರಿ ಪೆಟ್ರೋಲ್ ಬೆಲೆ ಏರಿಸಲಾಗಿದೆ. ನೆರೆಯ ಬಾಂಗ್ಲಾ, ಪಾಕ್, ಶ್ರೀಲಂಕಾದಲ್ಲಿಯೂ ಇಷ್ಟು ದರ ಇಲ್ಲ. ಅವರಿಗಿಂತ ನಮ್ಮ ಜಿಡಿಪಿಯೂ ಕೆಳಗಿಳಿದಿರುವುದು ದುರ್ದೈವದ ಸಂಗತಿ. ಅಭಿವೃದ್ಧಿ ಶೀಲ ಭಾರತದಿಂದ ನಾವು ಈ ಮಟ್ಟಕ್ಕೆ ಬಂದಿದ್ದೇವೆ. ಪೆಟ್ರೋಲ್ ಬೆಲೆಯಿಂದ ಇತರೆ ವಸ್ತುಗಳ ದರಗಳು ಕೂಡ ಏರಿಕೆಯಾಗಲಿದ್ದು, ಜನರ ಬದುಕು ದುಸ್ತರವಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದರು.
ಲಸಿಕೆಗಾಗಿ 100 ಕೋಟಿ ಅನುದಾನ ನೀಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಉಚಿತ ಲಸಿಕೆ ಕೊಡಿ ಅಂತ ಕ್ಯಾಂಪೇನ್ ಮಾಡಿದ್ದೇವು. ಎಲ್ಲಾ ರಾಜ್ಯಗಳ ರಾಜ್ಯಪಾಲರಿಗೆ ದೂರು ನೀಡಿದ್ದೇವು. ಈಗಷ್ಟೇ ಅವಕಾಶ ಕೊಡಲ್ಲ ಅಂತ ಲವ್ ಲೆಟರ್ ಬರೆದಿದ್ದಾರೆ. ಸಚಿವ ನಾರಾಯಣಗೌಡರು ಬರೆದಿದ್ದಾರೆ. ಅವರಿಗೆ ಜನರ ಜೀವ ಉಳಿಸುವ ಆಸಕ್ತಿಯಿಲ್ಲ ಎಂದು ಕಿಡಿಕಾರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ