ಪೊಲೀಸರು ಹೊಡೆಯುವ ಮುಂಬೈ ವಿಡಿಯೋವನ್ನು ರಾಜ್ಯದ್ದು ಎಂದು ಹರಿಬಿಟ್ಟ ಕಾಂಗ್ರೆಸ್ ಕಾರ್ಯಕರ್ತೆ ಅರೆಸ್ಟ್

ಮುಂಬೈನ ಹಳೇ ವಿಡಿಯೋಗೆ ವಾಯ್ಸ್ ಮ್ಯಾಚ್ ಮಾಡಿ ವಿಡಿಯೋ ಹರಿಬಿಡಲಾಗಿದ್ದು ತನಿಖೆ ವೇಳೆ ಬಯಲಾಗಿದೆ. ವಿಡಿಯೋ ತಿರುಚುವಿಕೆ ಬಗ್ಗೆ  ಆರೋಪಿ ಪದ್ಮಾ ಹರೀಶ್ ತಪ್ಪೊಪ್ಪಿಕೊಂಡಿದ್ದಾರೆ.

ಕಾಂಗ್ರೆಸ್​ ಕಾರ್ಯಕರ್ತೆ ಪದ್ಮಾ ಹರೀಶ್​

ಕಾಂಗ್ರೆಸ್​ ಕಾರ್ಯಕರ್ತೆ ಪದ್ಮಾ ಹರೀಶ್​

  • Share this:
ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ ಅಬ್ಬರ ಹೆಚ್ಚಾದ ಹಿನ್ನೆಲೆ ರಾಜ್ಯ ಸರ್ಕಾರ ಮೇ 10ರಿಂದ ಕಟ್ಟುನಿಟ್ಟಿನ ಲಾಕ್​ಡೌನ್​ ಮೊರೆ ಹೋಗಿದೆ. ಲಾಕ್​ಡೌನ್​ ಮೊದಲ ದಿನವಾದ ಸೋಮವಾರ ಅನಗತ್ಯವಾಗಿ ರಸ್ತೆಗಿಳಿದವರ ಮೇಲೆ ಪೊಲೀಸರು ಲಾಠಿ ಪ್ರಯೋಗಿಸಿದ್ದರು. ಎಲ್ಲೆಡೆಯೂ ಪೊಲೀಸರ ವರ್ತನೆ ತೀವ್ರ ಟೀಕೆಗೆ ಗುರಿಯಾಗಿತ್ತು. ಹೈಕೋರ್ಟ್​ ಕೂಡ ಜನರನ್ನು ಹೊಡೆಯಬೇಡಿ ಎಂದು ಪೊಲೀಸರಿಗೆ ಸೂಚಿಸಿತ್ತು. ಇದರ ಬೆನ್ನಲ್ಲೇ ಪೊಲೀಸ್​ ಕಮಿಷನರ್​ ಕೂಡ ಲಾಠಿ ಪ್ರಯೋಗಿಸದಂತೆ ತಮ್ಮ ಸಿಬ್ಬಂದಿಗೆ ಆದೇಶಿಸಿದ್ದರು. ಪೊಲೀಸರು ಹೊಡೆಯುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಜನಾಕ್ರೋಶಕ್ಕೆ ಕಾರಣವಾಗಿತ್ತು. ಸಮಯದ ಲಾಭ ಪಡೆದು ನಕಲಿ ವಿಡಿಯೋ ಹರಿಬಿಟ್ಟವರನ್ನು ಪೊಲೀಸರು ಈಗ ಬಂಧಿಸಿದ್ದಾರೆ.

ಲಾಕ್​ಡೌನ್​ ಮೊದಲ ದಿನ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಒಂದು ವಿಡಿಯೋದಲ್ಲಿ ಪೊಲೀಸರೆಲ್ಲಾ ಸುತ್ತುವರಿದು ವ್ಯಕ್ತಿಯೊಬ್ಬನನ್ನು ಹೊಡೆತ್ತಿದ್ದ ದೃಶ್ಯವಿತ್ತು. ವಿಡಿಯೋ ಕರ್ನಾಟಕದ್ದು, ಹಾಗೂ ರಾಜ್ಯ ಪೊಲೀಸರು ದರ್ಪ ತೋರಿದ್ದಾರೆ ಎಂದು ಮಹಿಳೆಯೊಬ್ಬರು ವಿಡಿಯೋವನ್ನು ಪೋಸ್ಟ್​​​ ಮಾಡಿದ್ದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ರಾಜ್ಯ ಪೊಲೀಸರು ಇದು ರಾಜ್ಯದಲ್ಲಿ ನಡೆದಿರುವ ಘಟನೆ ಅಲ್ಲ. ಏಪ್ರಿಲ್​​ 3ರಂದು ಮುಂಬೈನಲ್ಲಿ ನಡೆದಿರುವ ಘಟನೆ ಎಂದು ಕಂಡು ಹಿಡಿದಿದ್ದರು. ಈ ಸುಳ್ಳು ಸುದ್ದಿ ಶೇರ್ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಟ್ವಿಟರ್ ಮೂಲಕ‌‌  ಸೂಚನೆ ನೀಡಿದ್ದರು.

ಸತ್ಯಾಸತ್ಯತೆ ತಿಳಿಯದೇ ಪ್ರಚೋದಾತ್ಮಕ ಸಂದೇಶಗಳನ್ನು ಪೋಸ್ಟ್ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್​ ಎಚ್ಚರಿಸಿದ್ದರು. ಪೋಸ್ಟ್ ಹಾಕಿದ ಮಹಿಳೆ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ಬೆನ್ನಲ್ಲೇ ದಕ್ಷಿಣ ವಿಭಾಗದ ಸಿಇಎನ್ ಠಾಣೆ ಪೊಲೀಸರು ವಿಡಿಯೋವನ್ನು ಹರಿಬಿಟ್ಟವರು ಪದ್ಮಾ‌ ಹರೀಶ್ ಎಂಬುವರು ಅನ್ನೋದನ್ನು ಪತ್ತೆ ಹಚ್ಚಿದ್ದರು. ಪದ್ಮಾ ಹರೀಶ್​ ಕಾಂಗ್ರೆಸ್​ನ ಕಾರ್ಯಕರ್ತೆ ಎಂಬುವುದು ತಿಳಿದು ಬಂದಿತ್ತು. ಬೆಳಗ್ಗೆ ನೋಟಿಸ್ ನೀಡಿ ಪದ್ಮಾ ಹರೀಶ್  ಅವರನ್ನು ವಿಚಾರಣೆಗೆ ಕರೆಸಲಾಗಿತ್ತು. ಮುಂಬೈನ ಹಳೇ ವಿಡಿಯೋಗೆ ವಾಯ್ಸ್ ಮ್ಯಾಚ್ ಮಾಡಿ ವಿಡಿಯೋ ಹರಿಬಿಡಲಾಗಿದ್ದು ತನಿಖೆ ವೇಳೆ ಬಯಲಾಗಿದೆ.

ತನಿಖೆ ವೇಳೆ ಆರೋಪಿ ಪದ್ಮಾ ಹರೀಶ್ ವಿಡಿಯೋ ತಿರುಚುವಿಕೆ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪದ್ಮಾ ಹರೀಶ್​ರನ್ನು ಬಂಧಿಸಲಾಗಿದೆ. ಕೊರೋನಾ ಸಂಕಷ್ಟ ಕಾಲದಲ್ಲಿ ಕಟ್ಟುನಿಟ್ಟಿನ ನಿಯಮಗಳ ಜಾರಿಗೆ ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂಥಾ ಸಮಯದಲ್ಲಿ ಕಿಡಿಗೇಡಿತನವನ್ನು ಒಪ್ಪುವುದಿಲ್ಲ. ಇನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹರಿಬಿಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಈ ಮೂಲಕ ಸ್ಪಷ್ಟ ಸಂದೇಶ ನೀಡಿದ್ದಾರೆ. ಹಳೆಯ ವಿಡಿಯೋದಿಂದ ರಾಜ್ಯ ಪೊಲೀಸರ ವಿರುದ್ಧ ಭಾರೀ ಜನಾಕ್ರೋಶ ವ್ಯಕ್ತವಾಗಿದ್ದು ಪೊಲೀಸ್​ ಸಿಬ್ಬಂದಿಗೆ ತೀವ್ರ ಬೇಸರ ತಂದಿದೆ. ಪದ್ಮಾ ಹರೀಶ್​ ಬಂಧನದ ಬಗ್ಗೆ ರಾಜ್ಯ ಕಾಂಗ್ರೆಸ್​ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
Published by:Kavya V
First published: