ಬೆಂಗಳೂರು: ರಾಜ್ಯದಲ್ಲಿ ಲಸಿಕೆಗಾಗಿ ಕರ್ನಾಟಕ ಕಾಂಗ್ರೆಸ್ 100 ಕೋಟಿಗಳನ್ನು ನೀಡಲಿದೆ ಎಂದು ಈಗಾಗಲೇ ಕಾಂಗ್ರೆಸ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿಡಿಯೋ ಮೂಲಕ ಕರ್ನಾಟಕಕ್ಕೆ ಕಾಂಗ್ರೆಸ್ ಲಸಿಕೆ ನೀಡಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೂ ಸೆಡ್ಡು ಹೊಡೆದಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ಜನರಿಗೆ ಲಸಿಕೆ ನೀಡುವಲ್ಲಿ ವಿಫಲವಾಗಿವೆ. ಹೀಗಾಗಿ ಕಾಂಗ್ರೆಸ್ ಇನ್ಮುಂದೆ ಕರ್ನಾಟಕದ ಜನತೆಗೆ ಲಸಿಕೆ ನೀಡಲಿದೆ ಎಂದು ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೆಸ್ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ 100 ಕೋಟಿ ರೂಪಾಯಿಗಳಲ್ಲಿ ಕೊರೋನಾ ಲಸಿಕೆ ಖರೀದಿಸಿ ಜನರಿಗೆ ನೀಡಲಿದೆ. ಇದಕ್ಕೆ ರಾಜ್ಯ ಸರ್ಕಾರ ಸಹಕರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ. ಲಸಿಕೆ ಪಡೆದು ಸೋಂಕಿನಿಂದ ಸುರಕ್ಷಿತವಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ. ಲಸಿಕೆ ಪಡೆದವರಲ್ಲಿ ರೋಗ ಹರಡುವಿಕೆ, ಮರಣ ಪ್ರಮಾಣ ಕಡಿಮೆ ಎಂದು ಸಾಬೀತಾಗಿದೆ. ಪ್ರತಿಯೊಬ್ಬರಿಗೂ ಲಸಿಕೆ ನೀಡುವುದು ಸರ್ಕಾರದ ಕರ್ತವ್ಯ. ರಾಜ್ಯದಲ್ಲಿ ಲಸಿಕೆ ಇಲ್ಲದೆ ವಿಷಮಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಲಸಿಕೆ ಖರೀದಿಸಿ ಕೊಡಲು ನಿರ್ಧರಿಸಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಹೀಗಾಗಿ ಲೆಟ್ಸ್ ಕಾಂಗ್ರೆಸ್ ವ್ಯಾಕ್ಸಿನೇಟ್ ಕರ್ನಾಟಕ ಎಂಬ ಘೋಷವಾಕ್ಯದೊಂದಿಗೆ ಅಭಿಯಾನ ಶುರು ಮಾಡಿದ್ದಾರೆ.
ಇನ್ನು ದೇಶದಲ್ಲಿ ಇಂದು ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ತಗ್ಗಿದೆ. ಸೋಮವಾರ 1,96,427 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,69,48,874ಕ್ಕೆ ಏರಿಕೆ ಆಗಿದೆ. ಇದಲ್ಲದೆ ಬಹಳ ದಿನಗಳ ಬಳಿಕ ದಿನ ಒಂದರಲ್ಲಿ ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆ ನಾಲ್ಕು ಸಾವಿರಕ್ಕಿಂತ ಕಡಿಮೆ ಆಗಿದೆ. ಸೋಮವಾರ 3,511 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 3,07,231ಕ್ಕೆ ಏರಿಕೆ ಆಗಿದೆ. ಈವರೆಗೆ 2,40,54,861 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 25,86,782 ಆಕ್ಟಿವ್ ಕೇಸುಗಳಿವೆ. ದೇಶದಲ್ಲಿ ಈವರೆಗೆ 19,85,38,999 ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ದೇಶದಲ್ಲಿ ಕಳೆದ ಏಳು ದಿನಗಳಲ್ಲಿ ವರದಿಯಾದ ಹೊಸ ಪ್ರಕರಣಗಳು ಮತ್ತು ಹಿಂದಿನ ಏಳು ದಿನಗಳಲ್ಲಿ ವರದಿಯಾದ ಪ್ರಕರಗಳ ನಡುವಿನ ವ್ಯತ್ಯಾಸ ಶೇಕಡಾ 23ರಷ್ಟು. ವಿಶ್ವ ಮಟ್ಟದಲ್ಲಿ ಈ ಸರಾಸರಿ ಶೇಕಡಾ 13ರಷ್ಟಿದೆ. ದೇಶದಲ್ಲಿ ಈಗ ಅತಿ ಹೆಚ್ಚು ಕೊರೋನಾ ಪ್ರಕರಣಗಳು ಕಂಡುಬಂದಿರುವುದು ತಮಿಳುನಾಡಿನಲ್ಲಿ. ಸೋಮವಾರ ತಮಿಳುನಾಡಿನಲ್ಲಿ 34.87 ಸಾವಿರ ಹೊಸ ಪ್ರಕರಣಗಳು ಕಂಡುಬಂದಿದ್ದರೆ ಕರ್ನಾಟಕದಲ್ಲಿ 25.31 ಸಾವಿರ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಸಂಪೂರ್ಣ ನಿಯಂತ್ರಣ ಆಗುತ್ತಿದ್ದು ಕೇವಲ 22.12 ಸಾವಿರ ಪ್ರಕರಣಗಳು ಗೋಚರಿಸಿವೆ. ಸಾರ್ವಜನಿಕರು ಮಾಸ್ಕ್ ಧಾರಣೆ, ಸಾಮಾಜಿಕ ಅಂತರವನ್ನು ತಪ್ಪದೇ ಪಾಲಿಸಬೇಕು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ