ಬ್ರಾಹ್ಮಣರ ವಿರುದ್ಧ ನಟ ಚೇತನ್ ಹೇಳಿಕೆ: ಪೊಲೀಸ್ ಆಯುಕ್ತರಿಗೆ ಬಾಹ್ಮಣ ಸಮುದಾಯದಿಂದ ದೂರು

ಬ್ರಾಹ್ಮಣಿಕೆ ಹಾಗೂ ಬ್ರಾಹ್ಮಣತ್ವ ಭಯೋತ್ಪಾದಕತ್ವ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಇದರಿಂದ ಬ್ರಾಹ್ಮಣ ಸಮುದಾಯಕ್ಕೆ ತುಂಬಾ ನೋವಾಗಿದೆ. ಹೀಗಾಗಿ ಬ್ರಾಹ್ಮಣ ಸಮುದಾಯದ ಬಳಿ ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ನಟ ಚೇತನ್.

ನಟ ಚೇತನ್.

  • Share this:
ಬೆಂಗಳೂರು: ಕನ್ನಡದ ನಟ ಚೇತನ್​​ ಸಿನಿಮಾಯೇತರ ಸಾಮಾಜಿಕ ವಿಷಯಗಳ ಕುರಿತು ನೇರ, ನಿಷ್ಠುರವಾಗಿ ಅಭಿಪ್ರಾಯಗಳನ್ನು ತಿಳಿಸುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಬ್ರಾಹ್ಮಣರ ವಿಚಾರವಾಗಿ ಟ್ವೀಟ್​ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ನಟ ಚೇತನ್​ ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಟ್ವೀಟ್​ ಮಾಡಿದ್ದಾರೆಂದು ಆರೋಪಿಸಿ ಬಾಹ್ಮಣ ಸಮುದಾಯದ ಪೊಲೀಸ್​ ಆಯುಕ್ತರಿಗೆ ದೂರು ನೀಡಿದೆ. ಬ್ರಾಹ್ಮಣ ಸಮುದಾಯದ ಮುಖಂಡ ಸಚ್ಚಿದಾನ ಅವರು ಇಂದು ಪೊಲೀಸ್​ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಬ್ರಾಹ್ಮಣಿಕೆ ಹಾಗೂ ಬ್ರಾಹ್ಮಣತ್ವ ಭಯೋತ್ಪಾದಕತ್ವ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಇದರಿಂದ ಬ್ರಾಹ್ಮಣ ಸಮುದಾಯಕ್ಕೆ ತುಂಬಾ ನೋವಾಗಿದೆ. ಹೀಗಾಗಿ ಬ್ರಾಹ್ಮಣ ಸಮುದಾಯದ ಬಳಿ ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಮತ್ತೊಮ್ಮೆ ಸಮುದಾಯದ ವಿರುದ್ದ ಮಾತನಾಡದಂತೆ ಮುಖಂಡರು ನಟ ಚೇತನ್​​ಗೆ ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ.

ವಿವಾದಕ್ಕೆ ಕಾರಣವಾಗಿದ್ದೇನು?

ನಿನ್ನೆ ಟ್ವೀಟ್​ ಮಾಡಿದ್ದ ನಟ ಚೇತನ್​​ ತಾನು ಅಂಬೇಡ್ಮರ್​, ಪೆರಿಯಾರ್​ ಚಿಂತನೆಗಳಲ್ಲಿ ನಂಬಿಕೆವುಳ್ಳವನು ಎಂದಿದ್ದಾರೆ. ಜೊತೆ ಬ್ರಾಹ್ಮಣಿಕೆಯ ಬಗ್ಗೆ ಅಂಬೇಡ್ಕರ್​, ಪೆರಿಯಾರ್​ ಹೇಳಿದ್ದಾರೆ ಎನ್ನಲಾದ ಹೇಳಿಕೆಗಳನ್ನು ಪೋಸ್ಟ್​​ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಜಾತಿ ವಿಚಾರವಾಗಿಯೇ ಕನ್ನಡದ ಮತ್ತೊಬ್ಬ ನಟ ಉಪೇಂದ್ರ ವಿರುದ್ಧವೂ ನಟ ಚೇತನ್​ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಜಾಕೀಯದ ಮೂಲಕ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಹೊರಟಿರುವ ರಿಯಲ್​ ಸ್ಟಾರ್​ ಉಪೇಂದ್ರ ಅವರಿಗೆ ಜಾತಿ ವಿಚಾರವಾಗಿ ಕೆಲ ಪ್ರಶ್ನೆಗಳನ್ನು ಕೇಳಲಾಗಿತ್ತು. ಅದಕ್ಕೆ ಉಪೇಂದ್ರ ಅವರು ವಿಡಿಯೋ ಮೂಲಕ ಉತ್ತರ ನೀಡಿದ್ದರು. ಆ ವಿಡಿಯೋದಲ್ಲಿ  ಜಾತಿ ಎನ್ನುವ ಪದ ಬಳಸುವುದು ತಪ್ಪು ಎಂದಿದ್ದಾರೆ. ಜಾತಿ ವಿಚಾರವಾಗಿ ಉಪೇಂದ್ರ ಅವರು ಕೊಟ್ಟಿರುವ ಪ್ರತಿಕ್ರಿಯೆ ಕುರಿತಾಗಿ ಚೇತನ್​ ಸಿಟ್ಟಿಗೆದ್ದಿದ್ದರು. ಉಪೇಂದ್ರ ಅವರ ಹೆಸರು ತೆಗೆದುಕೊಳ್ಳದೆ ಚೇತನ್​ ಅವರು ಒಂದು ವಿಡಿಯೋ ಮೂಲಕ ಬುದ್ಧಿಮಾತು ಹೇಳಿದ್ದಾರೆ.


ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿತ್ತರಂಗದವರು ಸೇವೆ ಮಾಡುತ್ತಿರುವುದು ಸಂತೋಷದ ವಿಷಯ. ಒಬ್ಬ ಸೆಲೆಬ್ರಿಟಿಯ ವೈಚಾರಿಕತೆಯ ಕೊರತೆಯ ಮಾತುಗಳನ್ನು ಕೇಳಿ ಆಶ್ಚರ್ಯವಾಗಿದೆ. ಜಾತಿ ವ್ಯವಸ್ಥೆಯ ಬಗ್ಗೆ ಮಾತನಾಡಿದರೆ ಜೀವಂತವಾಗಿ ಉಳಿಯುತ್ತೆ. ಅದರ ಬಗ್ಗೆ ಮಾತನಾಡದಿದ್ದರೆ ಅದು ಹೋಗುತ್ತದೆ. ಇದು ಹೇಳಿರುವುದು ಎಷ್ಟು ಹಾಸ್ಯಾಸ್ಪದ ಎಂದಿದ್ದರು ಚೇತನ್​.

ಜಾತಿ ಮೀರಿ, ಧರ್ಮ ಮೀರಿ ಪಕ್ಷ ಕಟ್ಟುವುದಾಗಿ ಹೇಳುತ್ತಿರುವ ನೀವು, ಕರ್ನಾಟಕದ ಹೋರಾಟದ ಚರಿತ್ರೆ ಒಮ್ಮೆ ಓದಿಕೊಳ್ಳಿ. ಬಸವಾದಿ ಶರಣದ ಚರಿತ್ರೆ ಓದಿ. ಇವರೆಲ್ಲ ಏನೇನು ಸಾಧನೆ ಮಾಡಿದ್ದಾರೆ ಓದಿಕೊಳ್ಳಿ. ನಿಮಗೆ ಪುಸ್ತಕ ಬೇಕೆಂದರೆ ಹೇಳಿ ನಾನೇ ನಿಮಗೆ ಕೊಡುತ್ತೇನೆ. ಹಾಗೆಯೇ ನಮ್ಮ ಸಂವಿಧಾನ ಓದಿಕೊಂಡು ನಿಜವಾದ ಬುದ್ಧಿವಂತರಾಗಿ ಎಂದು ಖಾರವಾಗಿ ನುಡಿದಿದ್ದರು ಚೇತನ್​.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: