ಬೆಂಗಳೂರು (ಜು. 5): ಮೇಕೆದಾಟು ಯೋಜನೆ ಪ್ರಾರಂಭಕ್ಕೆ ಮುನ್ನ ಎರಡು ರಾಜ್ಯಗಳ ನಡುವಿನ ಸೌಹರ್ದತೆಯನ್ನು ಕಾಯ್ದುಕೊಳ್ಳುವುದು ಅವಶ್ಯ ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮಿಳುನಾಡು ಸಿಎಂಗೆ ಪತ್ರ ಬರೆದು ಸಹಕಾರ ಕೋರಿದ್ದರು. ನ್ಯಾಯಾಲಯದ ಆದೇಶದ ಅನ್ವಯ ಈ ಕ್ರಮಕ್ಕೆ ಮುಂದಾಗುತ್ತಿದ್ದು, ಇದರಿಂದ ತಮಿಳು ನಾಡು ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ, ಇದಕ್ಕೆ ಪ್ರತಿ ಉತ್ತರ ಬರೆದಿರುವ ತಮಿಳುನಾಡು ಸಿಎಂ ಸ್ಟಾಲಿನ್, ಈ ಯೋಜನೆ ಕೈಗೊಳ್ಳದಂತೆ ಎಚ್ಚರಿಸಿದ್ದಾರೆ. ಅವರ ಕ್ರಮದ ವಿರುದ್ಧ ಕಿಡಿಕಾರಿರುವ ಮುಖ್ಯಮಂತ್ರಿ ಬಿಎಸ್ವೈ, ಯೋಜನೆ ಅನುಷ್ಟಾನಗೊಳಿಸಲು ಅಗತ್ಯವಿರುವ ತೀರುವಳಿಗಳನ್ನು ಪಡೆಯಲು ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರದಲ್ಲಿ ತೀರುವಳಿ ಪಡೆದು ಯೋಜನೆ ಅನುಷ್ಟಾನಗೊಳಿಸಲಾಗುವುದು ಎಂದಿದ್ದಾರೆ.
ಕರ್ನಾಟಕ ರಾಜ್ಯವು ಕಾವೇರಿ ನದಿ ಪಾತ್ರದಲ್ಲಿ ನೀರು ಬಳಸಿಕೊಳ್ಳಲು ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ಮೇಕೆದಾಟು ಯೋಜನೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನಲೆ ಎರಡು ರಾಜ್ಯಗಳ ನಡುವೆ ಸೌಹರ್ದತೆಯ ಸಲುವಾಗಿ ತಮಿಳುನಾಡು ಸಿಎಂಗೆ ಪತ್ರ ಬರೆಯಲಾಗಿತ್ತು. ಮೇಕೆದಾಟು ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ದೃಷ್ಟಿಯಿಂದ ಸದರಿ ಯೋಜನೆಯ ನಿರ್ಮಾಣದಿಂದ ಎರಡು ರಾಜ್ಯಗಳಿಗೆ ಅನುಕೂಲವಾಗುವ ಅಂಶಗಳನ್ನು ತಿಳಿಯಪಡಿಸಲಾಗಿದೆ. ಆದರೆ, ತಮಿಳು ನಾಡು ಸರ್ಕಾರ ಈ ಅಂಶಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಅಲ್ಲದೇ, ಈ ಯೋಜನೆಯಿಂದ ತಮ್ಮ ರಾಜ್ಯಕ್ಕೆ ತೊಂದರೆಯಾಗುತ್ತದೆ ಎಂದು ಹೇಳುತ್ತಿದೆ.
ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು 4.75 ಟಿಎಂಸಿ ನೀರನ್ನು ಸರ್ವೋಚ್ಛ ನ್ಯಾಯಾಲಯ ಆದೇಶಿಸಿದೆ. ಸದರಿ ಪ್ರಮಾಣವು ಬಳಕೆಯಾಗಿದ್ದು, ಈ ಪ್ರಮಾಣವನ್ನು ಉಪಯೋಗಿಸಿಕೊಳ್ಳಲು 23.75 ಟಿಎಂಸಿ ನೀರಿನ ಪ್ರಮಾಣವನ್ನು ಸಂಗ್ರಹಿಸಿ ಪೂರೈಸಬೇಕಾಗಿರುತ್ತದೆ. ಆದರೆ, ಇದರಿಂದ ತಮಿಳುನಾಡು ರಾಜ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ, ಅಲ್ಲದೇ ಈ ನೀರಿನ ಹರಿವಿನಿಂದ ಅನುಕೂಲವಾಗಲಿದೆ. ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ರಾಜಕೀಯ ಕಾರಣಗಳಿಂದ ವಿರೋಧಿಸುತ್ತಿದೆ ಎಂದು ಆರೋಪಿಸಿದ್ದಾರೆ
ಇದನ್ನು ಓದಿ: ಮೇಕೆದಾಟು ಯೋಜನೆಗೆ ಸಹಕಾರ ಕೋರಿ ತ.ನಾಡು ಸಿಎಂಗೆ ಬಿಎಸ್ವೈ ಪತ್ರ
ಸಿಎಂ ಪತ್ರಕ್ಕೆ ಪ್ರತಿ ಉತ್ತರ ಬರೆದಿರುವ ತಮಿಳುನಾಡು ಡಿಎಂಕೆ ಸರ್ಕಾರ, ಕಾವೇರಿ ನದಿ ಪಾತ್ರದಲ್ಲಿ ತಮಿಳುನಾಡು ಸರ್ಕಾರ ಕೈಗೆತ್ತಿಕೊಳ್ಳುತ್ತಿರುವ ಎರಡು ಜಲವಿದ್ಯುತ್ ಯೋಜನೆಗಳಿಗೂ, ಕರ್ನಾಟಕದ ಮೇಕೆದಾಟು ಯೋಜನೆಗೂ ಹೋಲಿಕೆ ಮಾಡಬೇಡಿ. ಕರ್ನಾಟಕ ಸರ್ಕಾರವು ಮೇಕೆದಾಟು ಯೋಜನೆಯಡಿ 67.16 ಟಿಎಂಸಿ ನೀರಿನ ಸಂಗ್ರಹ ಪ್ರಸ್ತಾಪ ಮಾಡಿದೆ. ಇದು ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಸ್ಪಷ್ಟ ಉಲ್ಲಂಘನೆ. ಈ ಯೋಜನೆ ಜಾರಿಯಾದರೆ, ಅಂತಾರಾಜ್ಯ ನೀರಾವರಿ ಹಂಚಿಕೆಯ ನಿಯಮಾವಳಿಗಳ ಉಲ್ಲಂಘನೆಯಾಗುತ್ತದೆ ಎಂದಿದ್ದಾರೆ.
ಇದನ್ನು ಓದಿ: ತಮಿಳುನಾಡು ಸಿಎಂಗೆ ಬಿಎಸ್ವೈ ಪತ್ರ ಬರೆದಿದ್ದು ತಪ್ಪು; ಸಿದ್ದರಾಮಯ್ಯ
ಮೇಕೆದಾಟು ವಿಚಾರವಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ಗೆ ಸಿಎಂ ಪತ್ರ ಬರೆದಿದ್ದು ತಪ್ಪು ಎಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ನಾವು ಅಣೆಕಟ್ಟು ಕಟ್ಟಲು ಅವರ ಅನುಮತಿ ಯಾಕೆ ಬೇಕು. ನಮ್ಮ ಕೆಲಸ ನಾವು ಮಾಡಬೇಕು. ಕೋರ್ಟ್ ಆದೇಶದಂತೆ ನಾವು ಕೆಲಸ ಮಾಡಬೇಕು. ಇವರು ಪತ್ರ ಬರೆದಿದ್ದಕ್ಕೆ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಬೇಡಿ ಎಂದು ಸ್ಟಾಲಿನ್ ಪತ್ರಿಕ್ರಿಯಿಸಿರುವುದು. ಪತ್ರ ಬರೆದು ಅನುಮತಿ ಕೇಳಿದರೆ ಯಾರು ಒಪ್ಪಲ್ಲ ಎಂದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ