ಬೆಂಗಳೂರು (ಜು. 18): ಸಕಲ ಮುನ್ನೆಚ್ಚರಿಕೆಗಳೊಂದಿಗೆ ನಾಳೆ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ(SSLC Exam) ನಡೆಸಲಾಗುತ್ತಿದೆ. ಈ ಹಿನ್ನಲೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಜ್ಯದ ವಿದ್ಯಾರ್ಥಿಗಳಿಗೆ ಟ್ವೀಟ್ ಮೂಲಕ ಶುಭ ಕೋರಿದ್ದಾರೆ. ನಾಳೆ ವಿದ್ಯಾರ್ಥಿಗಳೆಲ್ಲಾ ಶಾಂತ ಚಿತ್ತರಾಗಿ, ಏಕಾಗ್ರತೆಯಿಂದ ಮತ್ತು ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸುವಂತೆ ಸಲಹೆ ನೀಡಿದ್ದಾರೆ. ಕೋವಿಡ್ ಹಿನ್ನಲೆ ಪರೀಕ್ಷೆಗಳನ್ನ ಸುರಕ್ಷಿತವಾಗಿ ಮತ್ತು ಸುಗಮವಾಗಿ ನಡೆಯಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿದೆ. ಈ ಮೂಲಕ ಪಾಲಕರಿಗೆ ಭರವಸೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ. ಪರೀಕ್ಷೆಗಳನ್ನು ಸುರಕ್ಷಿತವಾಗಿ ಮತ್ತು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಸಮನ್ವಯದಿಂದ ಏಕ ತಂಡವಾಗಿ ಉತ್ತಮ ವ್ಯವಸ್ಥೆಗಳನ್ನು ಮಾಡಿವೆ ಎಂದು ಪಾಲಕರಿಗೆ ಭರವಸೆ ನೀಡುತ್ತೇನೆ ಎಂದಿದ್ದಾರೆ.
ಈಗಾಗಲೇ ಪರೀಕ್ಷೆಯ ಕುರಿತು ಶಿಕ್ಷಣ ಇಲಾಖೆ ಸಾಕಷ್ಟು ಮುಂಜಾಗ್ರತೆ ವಹಿಸಿದ್ದು, ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರದ ಸ್ಯಾನಿಟೇಸೆಶನ್ನಿಂದ ಹಿಡಿದು ಎಲ್ಲಾ ಮುನ್ನೆಚ್ಚರಿಕೆಯನ್ನು ಕೈಗೊಳ್ಳಲಾಗಿದೆ,
ಕೋವಿಡ್ ಪಾಸಿಟಿವ್ ಇರುವ ವಿದ್ಯಾರ್ಥಿಗಳಿಗೆ ಹತ್ತಿರದ ಕೋವಿಡ್ ಕೇರ್ ಸೆಂಟರ್ನಲ್ಲಿ ಪರೀಕ್ಷೆ ಬರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಜ್ವರ ಕೆಮ್ಮು ನೆಗಡಿ ಅಂತಹ ಲಕ್ಷಣ ಕಂಡುಬಂದ ವಿದ್ಯಾಥಿ೯ ಗಳಿಗೆಪರೀಕ್ಷಾ ಕೇಂದ್ರಗಳಲ್ಲೇ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಹಾಗೂ ಅವರಿಗೆ ಎನ್ 95 ಮಾಸ್ಕ್ ನೀಡಲಾಗುವುದು. ಮಾಸ್ಕ್ ಮರೆತು ಬಂದ ವಿದ್ಯಾಥಿ೯ ಗಳಿಗೂ ಸಹ ಮಾಸ್ಕ್ ಕೊಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಪ್ರತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾಥಿ೯ ಗಳಿಗೆ ಸ್ಯಾನಿಟೈಜರ್, ಕುಡಿಯುವ ನೀರು, ಶೌಚಾಲಯ ಹಾಗೂ ಇನ್ನಿತರ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ಆರೋಗ್ಯ ಇಲಾಖೆ ನೀಡಿರುವ ಎಸ್.ಒ.ಪಿಯನ್ನು ಪಾಲಿಸಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಸರಳೀಕೃತ ಮಾಡಿ ನಡೆಸಲಾಗುತ್ತಿದೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.ಶಿಕ್ಷಣ ಇಲಾಖೆ ನಾಳೆ ಪರೀಕ್ಷೆ ನಡೆಸಲು ಪೂರ್ಣವಾಗಿ ಸಜ್ಜಾಗಿದೆ.
ಇದನ್ನು ಓದಿ: ಮುಂಬೈನಲ್ಲಿ ರೆಡ್ ಅಲರ್ಟ್; ಸಾವನ್ನಪ್ಪಿದವರಿಗೆ 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ
ಸುರಕ್ಷಾ ಕೇಂದ್ರ: ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳಿಗೆ ಶಿಕ್ಷಣ ಯಾವುದೇ ರೀತಿ ತೊಂದರೆಯಾಗದಂತೆ ಸುರಕ್ಷತೆ ನೀಡಿ ಪರೀಕ್ಷೆ ನಡೆಸಲಾಗುವುದು.ಈ ಬಾರಿ ಪರೀಕ್ಷಾ ಕೇಂದ್ರ, ಕೊಠಡಿ ಹಾಗೂ ಸಿಬ್ಬಂದಿ ಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ.ಮಕ್ಕಳು ಮತ್ತು ಪೋಷಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು. ಪರೀಕ್ಷೆಯ ನಂತರ ವಿದ್ಯಾರ್ಥಿಗಳು ಪರೀಕ್ಷೆಯ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಲಿದ್ದಾರೆ ಎಂದರು.
ಗ್ರಾಮೀಣ ಭಾಗದಿಂದ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು ಯಾವ ರೀತಿಯ ವಾಹನದ ವ್ಯವಸ್ಥೆ ಮೂಲಕ ಪರೀಕ್ಷಾ ಕೇಂದ್ರಗಳಿಗೆ ಬರಲಿದ್ದಾರೆ ಎಂಬ ಮಾಹಿತಿಯನ್ನು ಮುಖ್ಯ ಶಿಕ್ಷಕರಿಂದ ಸಂಗ್ರಹಿಸಲಾಗಿದೆ. ಬೇಕಿರುವ ಕಡೆ ಹೆಚ್ಚಿನ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಅವಶ್ಯಕವಿದ್ದಲ್ಲಿ ಸರ್ಕಾರಿ ವಾಹನ, ಎಸ್.ಡಿ.ಎಂ.ಸಿ ಅವರ ವಾಹನ ಸಹ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಕಳೆದ ಬಾರಿ 3310 ಇದ್ದ ಪರೀಕ್ಷಾ ಕೇಂದ್ರಗಳನ್ನು 4885 ಹಾಗೂ 48000 ಪರೀಕ್ಷಾ ಕೊಠಡಿಗಳನ್ನು 73064 ಕ್ಕೆ ಹೆಚ್ಚಳ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಆದಷ್ಟು ಅವರಿಗೆ ಹತ್ತಿರವಿರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗಿದೆ
ಮೂರು ವಿಷಯಗಳಿಗೆ 120 ಅಂಕಗಳ ಪರೀಕ್ಷೆಯನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಈಗಾಗಲೇ ಅಣಕು ಪರೀಕ್ಷೆ ಪರಿಶೀಲನೆ ಮಾಡಿದ್ದಾರೆ. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಅಂತಿಮ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬೆಳಗ್ಗೆ 10.30ರಿಂದ 1.30 ರವರೆಗೆ ಪರೀಕ್ಷೆ ಜರುಗಲಿದೆ. ಒಟ್ಟು 8 ಲಕ್ಷದ 76 ಸಾವಿರ 581 ವಿದ್ಯಾರ್ಥಿಗಳ ನೊಂದಣಿ ಮಾಡಿಕೊಂಡಿದ್ದು, ಇದರಲ್ಲಿ 4,72,643 ಬಾಲಕರು, 4,03,938 ಬಾಲಕಿಯರು ಇದ್ದಾರೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ