ಬೆಡ್ ಬೇಡಿಕೊಂಡು ಸೋಂಕಿತರು ಬಾಗಿಲಿಗೆ ಬರ್ತಾರೆಂದು ಸಿಎಂ ಮನೆ ರಸ್ತೆಯೇ ಬಂದ್..!

ಪ್ರತಿಭಟನೆ, ಧರಣಿಗೆ ಅಂಜಿ ರಸ್ತೆಯನ್ನೇ ಬಂದ್​ ಮಾಡಿದರೆ ಹೇಗೆ? ಜನಸಾಮಾನ್ಯರು ಮುಖ್ಯಮಂತ್ರಿ ಮನೆ ಬಳಿ ಬರುವುದೇ ತಪ್ಪೇ? ಮುಖ್ಯಮಂತ್ರಿಯಾದವರು ಜನಸಾಮಾನ್ಯರಿಗೆ ಎಟುಕುವಂತಿರಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿಎಂ ನಿವಾಸ ರಸ್ತೆ ಬಂದ್​

ಸಿಎಂ ನಿವಾಸ ರಸ್ತೆ ಬಂದ್​

  • Share this:
ಬೆಂಗಳೂರು: ಕೊರೋನಾ 2ನೇ ಅಲೆ ಜನಸಾಮಾನ್ಯರನ್ನು ಜರ್ಜರಿತರನ್ನಾಗಿಸಿದೆ. ಬೆಡ್​​ ಸಿಗದೇ, ಆಕ್ಸಿಜನ್​-ಚಿಕಿತ್ಸೆ ಸಿಗದೇ ಸೋಂಕಿತರು ನರಳಾಡಿ ಪ್ರಾಣ ಬಿಡುತ್ತಿದ್ದಾರೆ. ಬೆಡ್​ಗಾಗಿ, ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಅದೆಷ್ಟೋ ಮಂದಿ ಇನ್ಯಾರು ದಿಕ್ಕು ಎನ್ನುವಂತೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಎದುರು ಬಂದು ಕಣ್ಣೀರಿಟ್ಟಿದ್ದಾರೆ. ನಾಡಪ್ರಭು ನೀನಾದರೂ ನಮಗೆ ಆಸರೆಯಾಗು ಎಂದು ಬೇಡಿಕೊಂಡಿದ್ದಾರೆ. ಸಿಎಂ ನಿವಾಸd ಎದುರು ಪ್ರತಿಭಟನೆ ನಡೆಸಿದವರೂ ಇದ್ದಾರೆ. ಇವರನ್ನೆಲ್ಲಾ ಪೊಲೀಸರ ಮೂಲಕ, ಆಂಬ್ಯುಲೆನ್ಸ್​ ಮೂಲಕ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಈಗ ಆ ದಾರಿಯೂ ಮುಚ್ಚಿದೆ.

ಸಿಎಂ ಮನೆ ಎದುರು ಸೋಂಕಿತರು ಚಿಕಿತ್ಸೆಗಾಗಿ ಬೇಡಿಕೊಳ್ಳುವುದು, ಪ್ರತಿಭಟನೆ ನಡೆಸುವುದು ಹೆಚ್ಚಾದ ಹಿನ್ನೆಲೆಯಲ್ಲಿ ಸಿಎಂ ಮನೆಯ ರಸ್ತೆಯನ್ನೇ ಬಂದ್​ ಮಾಡಲಾಗಿದೆ. ಕೋವಿಡ್ ಸೋಂಕಿತರ ಕುಟುಂಬದವರ ಪ್ರತಿಭಟನೆ, ಧರಣಿ ಬಿಸಿಯಿಂದ ತಪ್ಪಿಸಿಕೊಳ್ಳಲು ಈ ರೀತಿ ಕ್ರಮ ಕೈಗೊಳ್ಳಲಾಗಿದೆ. ಸಿಎಂ ನಿವಾಸಗಳಾದ ಕಾವೇರಿ, ಕೃಷ್ಣಾ ಮುಂಭಾಗದ ರಸ್ತೆಗಳನ್ನು ಸಂಪೂರ್ಣ ಬಂದ್​ ಮಾಡಲಾಗಿದೆ. ಇನ್ಮುಂದೆ ಸಿಎಂ ಮನೆ ಬಾಗಿಲಿಗೆ ಇರಲಿ, ರಸ್ತೆಗೂ ಸಾರ್ವಜನಿಕರು ಕಾಲಿಡುವಂತಿಲ್ಲ.

ಸಿಎಂ ನಿವಾಸದ ರಸ್ತೆಯ ಎರಡು ತುದಿಗಳಲ್ಲಿ ಬ್ಯಾರಿಕೇಡ್​ಗಳನ್ನು ಅಳವಡಿಸಿ ಪೊಲೀಸರು ರಸ್ತೆಯನ್ನು ಬಂದ್​ ಮಾಡಿದ್ದಾರೆ. ಯಾವುದೇ ವಾಹನ ಸಂಚರಿಸದಂತೆ ನಿರ್ಬಂಧವೇರಲಾಗಿದೆ. ಸಿಎಂ ಮನೆ ಎದುರಿಗೆ ಹೋಗಿ ಗಮನ ಸೆಳೆದರೆ ಬೆಡ್​ ಸಿಗುವ ಕೊನೆಯ ಆಸೆಗೂ ತಣ್ಣೀರೆರಚಲಾಗಿದೆ.  ಪ್ರತಿಭಟನೆ, ಧರಣಿಗೆ ಅಂಜಿ ರಸ್ತೆಯನ್ನೇ ಬಂದ್​ ಮಾಡಿದರೆ ಹೇಗೆ? ಜನಸಾಮಾನ್ಯರು ಮುಖ್ಯಮಂತ್ರಿ ಮನೆ ಬಳಿ ಬರುವುದೇ ತಪ್ಪೇ? ಮುಖ್ಯಮಂತ್ರಿಯಾದವರು ಜನಸಾಮಾನ್ಯರಿಗೆ ಎಟುಕುವಂತಿರಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು ರಾಜ್ಯದಲ್ಲಿ ಕೊರೋನಾ ವಿರಾಟ ರೂಪ ತಾಳಿದೆ. ತನ್ನದೇ ದಾಖಲೆಯನ್ನು ಮುರಿದು ಕೊರೋನಾ ಹೊಸ ದಾಖಲೆ ಸೃಷ್ಟಿಸಿದೆ. ಮೊದಲ ಬಾರಿಗೆ ರಾಜ್ಯದಲ್ಲಿ ಅರ್ಧ ಲಕ್ಷ ಮಂದಿ 24 ಗಂಟೆಗಳ ಅವಧಿಯಲ್ಲಿ ಸೋಂಕಿಗೆ ತುತ್ತಾಗಿದ್ದಾರೆ. ನಿನ್ನೆ ಒಂದೇ ದಿನ ರಾಜ್ಯಾದ್ಯಂತ 50,112 ಪಾಸಿಟಿವ್​ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಕರ್ನಾಟಕದಲ್ಲಿ ಕೊರೋನಾ ಕೇಸ್​ಗಳ ಸಂಖ್ಯೆ 17,41,053ಕ್ಕೆ ಏರಿಕೆಯಾಗಿದೆ. ಇದರಲ್ಲಿ 4,87,288 ಸಕ್ರಿಯ ಪ್ರಕರಣಗಳಿವೆ. ಇನ್ನು ಸಾವಿನ ಸಂಖ್ಯೆಯೂ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದೆ.24 ಗಂಟೆಗಳ ಅವಧಿಯಲ್ಲಿ ರಾಜ್ಯಾದ್ಯಂತ 346 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈವರೆಗೆ ಸೋಂಕಿನಿಂದ 16,884 ಮಂದಿ ಸಾವನ್ನಪ್ಪಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲೂ ಕೊರೋನಾ ಆರ್ಭಟ ಕೊಂಚವೂ ತಗ್ಗಿಲ್ಲ. ಬುಧವಾರ 23,106 ಪಾಸಿಟಿವ್​ ಪ್ರಕರಣಗಳು 8,63,380ಕ್ಕೆ ಏರಿಕೆಯಾಗಿದೆ. ಇನ್ನು 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 161 ಮಂದಿ ಕೊರೋನಾದಿಂದ ಪ್ರಾಣ ಬಿಟ್ಟಿದ್ದಾರೆ.  11,343 ಗುಣಮುಖರಾಗಿದ್ದು, ಸದ್ಯ ರಾಜ್ಯಾದ್ಯಂತ 3,13,314 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ಮಾತ್ರವಲ್ಲದೇ ಜಿಲ್ಲೆಗಳಲ್ಲಿ ಕೊರೋನಾ ಮರಣ ಮೃದಂಗ ಹೆಚ್ಚಾಗಿದೆ. ಬಳ್ಳಾರಿ,  ಮಂಡ್ಯದಲ್ಲಿ ಒಂದೇ ದಿನ ತಲಾ 19 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಕಲಬುರಗಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ 15 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.  ತುಮಕೂರಿನಲ್ಲಿ 12 ಮಂದಿ, ಹಾಸನದಲ್ಲಿ 11 ಮಂದಿ, ಮೈಸೂರಲ್ಲಿ 10 ಮಂದಿ ಮೃತಪಟ್ಟಿದ್ದಾರೆ.
Published by:Kavya V
First published: