ಸಿಎಂಗೆ ಮುನ್ನ ಹೈ ಕಮಾಂಡ್​ ಭೇಟಿಗೆ ಮುಂದಾದ ಸಚಿವಾಕಾಂಕ್ಷಿಗಳು; ನಾಳೆ ದೆಹಲಿಯಲ್ಲಿ ರಾಜ್ಯ ಸಂಸದರೊಂದಿಗೆ ಮುಖ್ಯಮಂತ್ರಿ ಸಭೆ

ನಾಳೆ ಸಂಜೆ 7 ಗಂಟೆಗೆ ಖಾಸಗಿ ಹೋಟೆಲ್​​ನಲ್ಲಿ ಸಂಸದರ ಸಭೆಯನ್ನು ಕರೆದಿದ್ದು, ಸಂಸತ್ತಿನಲ್ಲಿ ರಾಜ್ಯದ ವಿಷಯಗಳನ್ನು ಚರ್ಚಿಸುವ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

 • Share this:
  ಬೆಂಗಳೂರು (ಜು. 29): ಮುಖ್ಯಮಂತ್ರಿಯಾಗಿ ಪದವಿ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ  ನಾಳೆ ಬಸವರಾಜ ಬೊಮ್ಮಾಯಿ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ವರಿಷ್ಠರ ಭೇಟಿ ಮಾಡಲಿರುವ ಅವರು ಇದೇ ವೇಳೆ ಧನ್ಯವಾದಗಳನ್ನು ತಿಳಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿಯಾಗಿ ಕೃತಜ್ಞತೆಯನ್ನು ತಿಳಿಸಲಿದ್ದಾರೆ. ಈ ವೇಳೆ ಅವರು ನೂತನ ಸಚಿವ ಸಂಪುಟ ರಚನೆ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ. ನಾಳೆ ಸಿಎಂ ಪ್ರಯಾಣಕ್ಕೂ ಮುನ್ನವೇ ಈಗಾಗಲೇ ಸಚಿವ ಆಕಾಂಕ್ಷಿಗಳ ದಂಡು ದೆಹಲಿ ತಲುಪಿದ್ದು, ಮಂತ್ರಿ ಸ್ಥಾನಕ್ಕಾಗಿ ಲಾಭಿ ನಡೆಸಲು ಮುಂದಾಗಿದ್ದಾರೆ.

  ಇನ್ನು ತಮ್ಮ ದೆಹಲಿ ಪ್ರವಾಸದ ಕುರಿತು ಮಾತನಾಡಿರುವ ಸಿಎಂ, ನಾಳೆ ನಾನು ದೆಹಲಿಗೆ ಭೇಟಿ ನೀಡುತ್ತಿದ್ದು, ಪ್ರಧಾನಿ, ಗೃಹ ಸಚಿವರು ಹಾಗೂ ಪಕ್ಷದ ವರಿಷ್ಠರನ್ನು ಭೇಟಿಯಾಗುತ್ತಿದ್ದೇನೆ. ಆದರೆ, ಈ ವೇಳೆ ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆಸುವುದಿಲ್ಲ. ಇದಾದ ಎರಡ್ಮೂರು ದಿನಗಳ ಬಳಿಕ ಮತ್ತೆ ಅವರನ್ನು ಭೇಟಿಯಾಗಿ ಸಂಪುಟ ರಚನೆ ಕುರಿತು ಚರ್ಚಿಸುತ್ತೇನೆ ಎಂದು ತಿಳಿಸಿದ್ದಾರೆ.

  ಇನ್ನು ನಾಳೆ ಪಕ್ಷದ ಹೈ ಕಮಾಂಡ್ ಭೇಟಿ ಬಳಿಕ ಸಿಎಂ ಸಂಜೆ ರಾಜ್ಯ ಸಂಸದರ ಸಭೆಯನ್ನು ಕರೆದಿದ್ದಾರೆ. ನಾಳೆ ಸಂಜೆ 7 ಗಂಟೆಗೆ ಖಾಸಗಿ ಹೋಟೆಲ್​​ನಲ್ಲಿ ಸಂಸದರ ಸಭೆಯನ್ನು ಕರೆದಿದ್ದು, ಸಂಸತ್ತಿನಲ್ಲಿ ರಾಜ್ಯದ ವಿಷಯಗಳನ್ನು ಚರ್ಚಿಸುವ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ರಾಜ್ಯದ ನೀರಾವರಿ ಯೋಜನೆ ಸೇರಿದಂತೆ ಉಳಿದ ವಿಚಾರಗಳ ಕುರಿತು ಇದೇ ವೇಳೆ ಅವರು ಚರ್ಚೆ ನಡೆಸಲಿದ್ದಾರೆ.

  ಸಿಎಂಗೂ ಮೊದಲೇ ದೆಹಲಿಗೆ ದೌಡಾಯಿಸಿದ ಆಕಾಂಕ್ಷಿಗಳು
  ನೂತನ ಸಂಪುಟದಲ್ಲಿ ಸ್ಥಾನ ಪಡೆಯಲು ಮುಂದಾಗಿರುವ ಕೆಲ ನಾಯಕರು ಹೈ ಕಮಾಂಡ್​ ಮಟ್ಟದಲ್ಲಿ ಲಾಬಿಗೆ ಮುಂದಾಗಿದ್ದಾರೆ. ಡಿಸಿಎಂ ಪಟ್ಟಕ್ಕಾಗಿ ಆರ್​ ಅಶೋಕ್​ ಲಾಬಿ ನಡೆಸಲು ಮುಂದಾಗಿದ್ದು, ಇಂದು ಬೆಳಗ್ಗೆಯೇ ದೆಹಲಿ ತಲುಪಿದ್ದಾರೆ. ಉಮೇಶ್​ ಕತ್ತಿ ಕೂಡ ಈಗಾಗಲೇ ಪಕ್ಷದ ವರಿಷ್ಠರ ಭೇಟಿ ಮಾಡಿ ತಮಗೆ ಸಚಿವ ಸ್ಥಾನ ನೀಡುವಂತೆ ಒತ್ತಡ ಹೇರುತ್ತಿದ್ದಾರೆ.

  ಈ ನಡುವೆ ಸಿಪಿ ಯೋಗೇಶ್ವರ್​ ಕೂಡ ದೆಹಲಿಗೆ ಪ್ರಯಾಣಿಸಲು ಸಜ್ಜಾಗಿದ್ದಾರೆ. ಬಿಎಸ್​ ಯಡಿಯೂರಪ್ಪ ಕೆಳಗಿಳಿಸಲು ಪದೇ ಪದೇ ದೆಹಲಿಗೆ ಭೇಟಿ ನೀಡಿದ್ದ ಸಿಪಿ ಯೋಗೇಶ್ವರ್​ ಈಗ ಬೊಮ್ಮಾಯಿ ಸರ್ಕಾರದಲ್ಲಿ ಪ್ರಮುಖ ಖಾತೆ ಮೇಲೆ ಕಣ್ಣಿಟ್ಟಿದ್ದು, ಇದಕ್ಕಾಗಿ ಹೈಕಮಾಂಡ್​ ಮೇಲೆ ಒತ್ತಡ ಹೇರಲು ತಯಾರಿ ನಡೆಸಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿಯಾಗಿ ಚರ್ಚೆ  ನಡೆಸಿರುವ ಅವರು ಶೀಘ್ರದಲ್ಲಿಯೇ ದೆಹಲಿ ಪ್ರಯಾಣ ನಡೆಸಿದ್ದಾರೆ.

  ಇದನ್ನು ಓದಿ: ಡಿಸಿಎಂ ಪಟ್ಟ ಸಾಧ್ಯತೆ: ಹೈ ಕಮಾಂಡ್​ ಭೇಟಿಗೆ ಮುಂದಾದ ಆರ್​ ಅಶೋಕ್​

  ಈ ನಡುವೆ ​, ಎಂಪಿ ರೇಣುಕಾಚಾರ್ಯ, ಸಿದ್ದ ಸವದಿ, ಮಾಡಾಳ್​ ವಿರೂಪಾಕ್ಷಪ್ಪ, ಎಎಸ್​ ಪಾಟೀಲ್​ ನಡಹಳ್ಳಿ. ಬಿಜೆಪಿ ವಲಸಿಗ ನಾಯಕರಾದ ಕೆ ಸುಧಾಕರ್​, ಬಿಸಿ ಪಾಟೀಲ್​, ಸೋಮಶೇಖರ್​ ಸೇರಿದಂತೆ ಅನೇಕ ಬಿಜೆಪಿ ಶಾಸಕರು ಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

  ಈ ನಡುವೆ ಅರಗ ಜ್ಞಾನೇಂದ್ರ, ಸೋಮಶೇಖರ್​ ರೆಡ್ಡಿ, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್​ ಸೇರಿದಂತೆ ಅನೇಕ ನಾಯಕರು ಕೂಡ ತಾವು ಸಚಿವ ಸ್ಥಾನದ ಆಕಾಂಕ್ಷಿಗಳು ಎಂದು ತಿಳಿಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: