Chandrashekhar Patil: ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಚಂದ್ರಶೇಖರ ಪಾಟೀಲ್ (ಚಂಪಾ Champa) ಅವರು ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಇಂದು ಬೆಳಗ್ಗೆ ಅವರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿರುವ ಮಾಹಿತಿ ಲಭ್ಯವಾಗಿದೆ. ಚಂಪಾ ಅವರಿಗೆ 83 ವರ್ಷ ವಯಸ್ಸು ಆಗಿತ್ತು. ಚಂದ್ರಶೇಖರ್ ಪಾಟೀಲ್ ಕನ್ನಡ ನಾಡಿನ ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ಬಹುಮುಖ ವ್ಯಕ್ತಿತ್ವದಿಂದ ಪ್ರಸಿದ್ಧರಾಗಿದ್ದರು. ಕಳೆದ ಕೆಲ ದಿನಗಳಿಂದ ಚಂಪಾ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಂಪಾ ಸಂಕ್ರಮಣ ಪತ್ರಿಕೆಯ ಸಂಪಾದಕರಾಗಿದ್ದರು. ಪುಸ್ತಕ ಸಂತೆ, ಗಡಿನಾಡು ಕನ್ನಡಿಗರ ಪರವಾಗಿ ಚಂಪಾ ಅವರು ಹೋರಾಟ ನಡೆಸಿದ್ದರು.
1939 ಜೂನ್ 18ರಂದು ಚಂಪಾ ಅವರು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹತ್ತಮುತ್ತೂರಿನಲ್ಲಿ ಜನಿಸಿದ್ದರು. ತಂದೆ ಬಸವರಾಜ್ ಹಿರೇಗೌಡರು, ತಾಯಿ ಮುರಿಗೆವ್ವ. ಚಂದ್ರಶೇಖರ್ ಪಾಟೀಲರು ಸಾಹಿತ್ಯ ಲೋಕದಲ್ಲಿ ಚಂಪಾ ಎಂಬ ಹೆಸರಿನಿಂದ ಪ್ರಖ್ಯಾತರು. ಪಾಟೀಲರ ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ ಮತ್ತು ಪ್ರೌಢಶಿಕ್ಷಣ ಧಾರವಾಡದಲ್ಲಿ ನೆರವೇರಿತು. ಅವರ ತಂದೆಯವರಿಗೆ ಇಂಗ್ಲಿಷ್ ಬಗ್ಗೆ ಅಭಿಮಾನವಿದ್ದುದರಿಂದ ಅದರಿಂದ ಪ್ರೇರಿತರಾಗಿ ಇಂಗ್ಲಿಷ್ ಎಂ.ಎ. ಪದವಿ ಗಳಿಸಿದರು.
ಇದಲ್ಲದೆ ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿ ವೇತನ ಪಡೆದು ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ಭಾಷಾಶಾಸ್ತ್ರದಲ್ಲಿನ ಸ್ನಾತಕೋತ್ತರ ಪದವಿ ಮತ್ತು ಹೈದರಾಬಾದಿನ ಕೇಂದ್ರೀಯ ಇಂಗ್ಲಿಷ್ ಸಂಸ್ಥೆಯಿಂದ ಇಂಗ್ಲಿಷ್ ಅಧ್ಯಯನದ ಡಿಪ್ಲೊಮಾ ಪಡೆದರು. ಶಿಕ್ಷಣದ ಪ್ರತಿ ಹಂತದಲ್ಲಿಯೂ ಆಗ್ರ ಶ್ರೇಯಾಂಕ ಗಳಿಸಿದ ಕೀರ್ತಿ ಅವರದ್ದಾಗಿತ್ತು.
ಇಂಗ್ಲಿಷ್ ಉಪನ್ಯಾಸಕರಾಗಿ ಬೋಧಕ ವೃತ್ತಿ ಆರಂಭ
ಚಂದ್ರಶೇಖರ ಪಾಟೀಲರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಬೋಧಕ ವೃತ್ತಿ ಆರಂಭಿಸಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಲೇ ತಮ್ಮ ಕಾವ್ಯ ಹಾಗೂ ನಾಟಕಗಳ ಮೂಲಕ ಪ್ರಸಿದ್ಧರಾಗುತ್ತಾ ಬಂದರು. ಧಾರವಾಡದ ಕಾಲೇಜಿಗೆ ಬಂದಾಗ ಪ್ರಿನ್ಸಿಪಾಲರಾಗಿದ್ದ ವಿ.ಕೃ. ಗೋಕಾಕರು ನವ್ಯಕಾವ್ಯ ನಿರ್ಮಿತಿಯ ನೇತಾರರಲ್ಲೊಬ್ಬರಾಗಿದ್ದು, ಇವರ ಪ್ರಭಾವಕ್ಕೆ ಒಳಗಾಗಿ ಕವನಗಳನ್ನೂ ಬರೆಯತೊಡಗಿ, ಅವುಗಳಲ್ಲಿ ಹಲವಾರು ಕವನಗಳು ‘ಪ್ರಪಂಚ’ ಪತ್ರಿಕೆಯಲ್ಲಿ ಪ್ರಕಟಗೊಂಡವು. ಕಾವ್ಯದಲ್ಲಿ ಬೆಳೆದ ಆಸಕ್ತಿಯಿಂದ, ಹಲವಾರು ಮಂದಿ ಉದಯೋನ್ಮುಖರು ಸೇರಿ ‘ಕಮಲ ಮಂಡಲ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು.
ಚಂಪಾ ಇವರ ಸಂಪಾದಿತ ಕೃತಿಗಳೆಂದರೆ ಸಂಕ್ರಮಣ ಕಾವ್ಯ, ಗಾಂಧಿ ಗಾಂಧಿ, ಜೂನ್ 75-ಮಾರ್ಚ್ 77, ಬಂಡಾಯ ಮತ್ತು ಸಾಹಿತ್ಯ, ನೆಲ್ಸನ್ಮಂಡೇಲಾ, ಕನ್ನಡನಾಡಿಗೊಂದು ಪ್ರಾದೇಶಿಕ ಪಕ್ಷ, ಸಂಕ್ರಮಣ ಸಾಹಿತ್ಯ (೩ ಸಂಪುಟ), ಗಾಂಧಿ ಎನ್ನುವ ಹೆಸರು ಮುಂತಾದವುಗಳು. ಪಾಟೀಲರ ಇತರ ಕೃತಿಗಳೆಂದರೆ ಬೇಂದ್ರೆ-ನಾ ಕಂಡಂತೆ, ನನಗೆ ಕಂಡಷ್ಟು, ೨೬ ದಿನ ೨೫ ರಾತ್ರಿ, ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ ಮತ್ತು ಇಂಗ್ಲಿಷ್ನಲ್ಲಿ ರಚಿಸಿದ ಕೃತಿ AT THE OTHER END ಮುಂತಾದವು.
ಕನ್ನಡ ನಾಡು-ನುಡಿ, ಸಂಸ್ಕೃತಿಯ ರಕ್ಷಣೆಗಾಗಿ ನಿರಂತರ ಹೋರಾಡುತ್ತಾ ಬಂದಿರುವ ಚಂಪಾರವರಿಗೆ ಬಂದಿರುವ ಪ್ರಶಸ್ತಿ ಗೌರವಗಳು ಹಲವಾರು. ಇವುಗಳಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ (1960, 74, 76), ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ವಿ. ಶಂಕರಗೌಡ ರಂಗಭೂಮಿ ಪ್ರಶಸ್ತಿ, ಸಂದೇಶ್ ಮಾಧ್ಯಮ ಪ್ರಶಸ್ತಿ, ಕರುನಾಡ ಭೂಷಣ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ ಮುಂತಾದವುಗಳು ಪ್ರಮುಖವಾಗಿವೆ. 2017 ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು 2018 ಸಾಲಿನಲ್ಲಿ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಚಂದ್ರಶೇಖರ ಪಾಟೀಲರು 'ಕನ್ನಡ ಕಾವ್ಯದ ಭೂತ ಭವಿಷ್ಯವ ಬಣ್ಣಿಸಿ ಹೇಳೋ ಗಾಂಪಾ; ನಮ್ಮ ಆದಿಕವಿ ಪಂಪಾ, ಗುರುವೇ ನಮ್ಮ ಅಂತ್ಯಕವಿ ಚಂಪಾ' ಅಂದು ತಮ್ಮನ್ನೇ ತಾವು ವಿನೋದ ಮಾಡಿಕೊಳ್ಳುತ್ತಿದ್ದರು.