Banyan Tree- ಬೆಂಗಳೂರು ಹೊರವಲಯದಲ್ಲಿ ಶತಮಾನದ ಬೃಹತ್ ಆಲದ ಮರಕ್ಕೆ ಕೊಡಲಿ ಪೆಟ್ಟು

ಆನೇಕಲ್ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ಶತಮಾನದಷ್ಟು ಹಳೆಯದಾದ ಬೃಹತ್ ಆಲದ ಮರ ಧರೆಗುರುಳಿದೆ. ಒಂದೆರಡು ರೆಂಬೆ ಕತ್ತರಿಸಲು ಅನುಮತಿ ಸಿಕ್ಕರೂ ಮರದ ಎಲ್ಲಾ ರೆಂಬೆ ಕೊಂಬೆಗಳನ್ನ ಕತ್ತರಿಸಿಹಾಕಿದ್ಧಾರೆ ಖದೀಮರು.

ಇಗ್ಗಲೂರು ಗ್ರಾಮದ ಆಲದ ಮರ ಕತ್ತರಿಸಿದ ಖದೀಮರು

ಇಗ್ಗಲೂರು ಗ್ರಾಮದ ಆಲದ ಮರ ಕತ್ತರಿಸಿದ ಖದೀಮರು

  • Share this:
ಆನೇಕಲ್: ಅದು ಶತಮಾನದ ಬೃಹತ್‌ ಆಲದ ಮರ. ಹಾಡುಹಗಲೇ ಈ ಮಹಾ ಮರಕ್ಕೆ ಕೊಡಲಿ ಏಟು. ಸ್ಥಳೀಯರ ವಿರೋಧ ಲೆಕ್ಕಿಸದೆ ಬೃಹತ್ ಆಲದ ಮರ ಧರೆಗುರುಳಿಸಿದ ಖದೀಮರು. ಮರ ಕಡಿಯಲು ಅರಣ್ಯ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೌದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಇಗ್ಗಲೂರು ಬಳಿ. ಇಗ್ಗಲೂರು ಗ್ರಾಮದ ನಂಬರ್ ಕಾಣದ ಖರಾಬು (ಸರ್ಕಾರಿ ಪಾಳು ಭೂಮಿ) ಜಾಗದಲ್ಲಿ ಶತಮಾನದಷ್ಟು ಪುರಾತನವಾದ ಬೃಹತ್ ಆಲದ ಮರ ಬೆಳೆದು ನಿಂತಿದ್ದ ಆಲದ ಮರದ ರೆಂಬೆ ಕೊಂಬೆಗಳನ್ನು ಕಡಿದು ಬೋಳು ಮಾಡಲಾಗಿದೆ. ಮರದ ಟೊಂಗೆಗಳು ಅಕ್ಕಪಕ್ಕದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಮರ ಕಡಿದವರ ವಿರುದ್ದ ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಜನ ಜಾನುವಾರು ಸೇರಿದಂತೆ ಪ್ರಾಣಿ ಪಕ್ಷಿಗಳಿಗೆ ಮಳೆ ಬಿಸಿಲಿಗೆ ಆಶ್ರಯ ತಾಣವಾಗಿತ್ತು. ಆದ್ರೆ ಇತ್ತೀಚೆಗೆ ಕಿಡಿಗೇಡಿಗಳು ಮರದ ರೆಂಬೆ ಕೊಂಬೆಗಳನ್ನು ಕಡಿದು ಬೋಳು ಮಾಡಿದ್ದಾರೆ. ಈ ಬಗ್ಗೆ ಸ್ಥಳೀಯರು ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದಾಗ, ರಸ್ತೆಗೆ ಅಡ್ಡಲಾಗಿರುವ ಒಂದೆರಡು ಮರದ ಕೊಂಬೆಗಳನ್ನು ಕಡಿಯಲು ಅನುಮತಿಸಿರುವುದಾಗಿ ತಿಳಿಸಿದ್ದಾರೆ. ಆದ್ರೆ ಅನುಮತಿ ಪಡೆದಿರುವ ಎಸ್ ಎಸ್ ಲಾಜಿಸ್ಟಿಕ್ಸ್ ಕಂಪನಿಯವರು ಸಂಪೂರ್ಣವಾಗಿ ಮರದ ರೆಂಬೆ ಕೊಂಬೆಗಳನ್ನು ಕಡಿದು ಮರವನ್ನು ನಾಶಮಾಡಿದ್ದಾರೆ. ಇವತ್ತು ಪರಿಸರ ಮಾಲಿನ್ಯ ಹೆಚ್ಚಾಗಿ ಜನ ರೋಗರುಜಿನಗಳಿಗೆ ಬಲಿಯಾಗುತ್ತಿದ್ದಾರೆ. ಮರಗಳನ್ನು ಉಳಿಸಿ ಸಂರಕ್ಷಣೆ ಮಾಡಬೇಕಾದ ಅರಣ್ಯ ಅಧಿಕಾರಿಗಳು ಪುರಾತನವಾದ ಮರ ಕಡಿಯಲು ಅವಕಾಶ ನೀಡುವ ಮೂಲಕ ಆಕ್ರಮದಲ್ಲಿ ಶಾಮೀಲು ಆಗಿದ್ದಾರೆ ಎಂದು ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಬಾಲರಾಜು ಆರೋಪಿಸಿದ್ದಾರೆ.

ಇನ್ನು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಿಡ ಮರ ಬೆಳೆಸಲು ಕೋಟಿ ಕೋಟಿ ಹಣ ವ್ಯಯಿಸುತ್ತಿವೆ. ಆದ್ರೆ ಮರಗಳನ್ನು ಸಂರಕ್ಷಣೆ ಮಾಡಿ ಪೋಷಿಸುವ ಜವಾಬ್ದಾರಿ ಹೊತ್ತ ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೇ ಮರ ಕಡಿಯಲು ಅನುಮತಿ ನೀಡಿರುವುದು ಸರಿಯಲ್ಲ. ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಮರದಿಂದ ತೊಂದರೆಯಾಗುತ್ತಿದೆಯಾ ಎಂಬುದನ್ನು ಪರಿಶೀಲನೆ ನಡೆಸಿದ್ದರೆ ಇಂತಹ ದುರಂತ ಸಂಭವಿಸುತ್ತಿರಲಿಲ್ಲ. ಶತಮಾನದ ಬೃಹತ್ ಆಲದ ಮರ ಅಸಂಖ್ಯಾತ ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣವಾಗಿತ್ತು. ಅಂತಹ ಮರವನ್ನು ದೌರ್ಜನ್ಯಯುತವಾಗಿ ಖಾಸಗಿ ಕಂಪನಿಯವರು ಕಡಿದಿರುವುದು ತಪ್ಪು. ಇಂತಹ ಘಟನೆಗಳು ಪದೇ ಪದೇ ಮರುಕಳಿಸಿದರೆ ಮುಂದೊಂದು ದಿನ ಮರಗಳು ಮಾಯವಾಗಿ ಮಕ್ಕಳಿಗೆ ಕಾಗದದಲ್ಲಿ ಮರ ಗಿಡಗಳ ಚಿತ್ರ ತೋರಿಸಬೇಕಾಗುತ್ತದೆ ಎಂದು ಸ್ಥಳೀಯರಾದ ನಾರಾಯಣಸ್ವಾಮಿ ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Section 110- ಬೆಂಗಳೂರು ಪೊಲೀಸರ ಕೈಯಲ್ಲಿ ಸೆಕ್ಷನ್ 110; ಥರಗುಟ್ಟುತ್ತಿರುವ ರೌಡಿಗಳು; ಏನಿದು ಈ ಸೆಕ್ಷನ್?

ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರಿಂದ ಆಲದ ಮರ ಕಡಿಯಲು ಅನುಮತಿ ನೀಡುವಂತೆ ಎಸ್ ಎಸ್ ಲಾಜಿಸ್ಟಿಕ್ಸ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಡಿಆರ್​ಎಫ್ಓ ಮತ್ತು ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಲ ಷರತ್ತುಗಳೊಂದಿಗೆ ಒಂದೆರಡು ರೆಂಬೆಗಳನ್ನು ಕುಡಿಯಲು ಮಾತ್ರ ಅನುಮತಿ ನೀಡಿದ್ದೆವು. ಆದ್ರೆ ಷರತ್ತುಗಳನ್ನು ಉಲ್ಲಂಘನೆ ಮಾಡಿ ಮರದ ಎಲ್ಲಾ ರೆಂಬೆ ಕೊಂಬೆಗಳನ್ನು ಕಡಿಯಲಾಗಿದೆ. ಹಾಗಾಗಿ ಸ್ಥಳೀಯರ ಮಾಹಿತಿ ಮೇರೆಗೆ ಎಸ್ ಎಸ್ ಲಾಜಿಸ್ಟಿಕ್ಸ್ ಸಂಸ್ಥೆ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಆನೇಕಲ್ ವಲಯ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಮಾಹಿತಿ ನೀಡಿದ್ದಾರೆ.

ಒಟ್ನಲ್ಲಿ ಯಾರು ಏನೇ ಹೇಳಿದರೂ ಶತಮಾನದ ಮರ ನಮ್ಮ ಅತ್ಯಮೂಲ್ಯ ಅಸ್ತಿ. ಅದನ್ನು ನಾಶಪಡಿಸಿರುವುದು ಅಕ್ಷಮ್ಯ ಅಪರಾಧ. ಹಾಗಾಗಿ ಅರಣ್ಯ ಸಚಿವರು ಇತ್ತ ಗಮನ ಹರಿಸಿ ಯಾರೇ ತಪ್ಪಿತಸ್ಥರಿದ್ದರು ಮುಲಾಜಿಲ್ಲದೆ ಕ್ರಮ ವಹಿಸಬೇಕಿದೆ.

ವರದಿ: ಆದೂರು ಚಂದ್ರು
Published by:Vijayasarthy SN
First published: