ಕೊರೋನಾ ನಿಯಮಗಳನ್ನ ಗಾಳಿಗೆ ತೂರಿ ಕೇಂದ್ರ ಸಚಿವ ನಾರಾಯಣಸ್ವಾಮಿಗೆ ತವರಿನಲ್ಲಿ ಭರ್ಜರಿ ಸ್ವಾಗತ

ಆನೇಕಲ್​ನಲ್ಲಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಾಶೀರ್ವಾದ ಯಾತ್ರೆಯಲ್ಲಿ ಜನ ಸಾಗರವೇ ನೆರೆದಿತ್ತು. ಜನರು ಸಾಮಾಜಿಕ ಅಂತರ ಇತ್ಯಾದಿ ಪಾಲನೆ ಮಾಡುವ ಗೋಜಿಗೆ ಹೋಗಲಿಲ್ಲ.

ಎ ನಾರಾಯಣಸ್ವಾಮಿ

ಎ ನಾರಾಯಣಸ್ವಾಮಿ

  • Share this:
ಆನೇಕಲ್: ಕೇಂದ್ರ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ತವರೂರು ಆನೇಕಲ್​ಗೆ ಆಗಮಿಸಿದ ಎ ನಾರಾಯಣಸ್ವಾಮಿ ಅವರಿಗೆ ಬಿಜೆಪಿ ಕಾರ್ಯಕರ್ತರು ಜನಾಶೀರ್ವಾದ ಯಾತ್ರೆ ಮೂಲಕ ಅದ್ದೂರಿ ವೆಲ್ ಕಮ್ ನೀಡಿದ್ದಾರೆ. ಭಾನುವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ಜನಾಶೀರ್ವಾದ ಯಾತ್ರೆಯಲ್ಲಿ ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ ಮತ್ತು ಆನೇಕಲ್ ಪಟ್ಟಣದ ಶಿವಾಜಿ ವೃತ್ತದಲ್ಲಿ ಕ್ರೇನ್ ಮೂಲಕ ಸೇಬಿನ ಹಾರ ಹಾಕುವ ಮೂಲಕ ನೆಚ್ಚಿನ ನಾಯಕನಿಗೆ ಕಾರ್ಯಕರ್ತರು ಅಭಿನಂಧನೆ ಸಲ್ಲಿಸಿದ್ದಾರೆ. ಇದರ ನಡುವೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸುವ ವೇಳೆ ಪಲ್ಸರ್ ಬೈಕಿಗೆ ಹೊತ್ತಿಕೊಂಡ ಅಹಿತರ ಘಟನೆ ಕೂಡ ಜರುಗಿದೆ. ಜೊತೆಗೆ ಇಡೀ ಜನಾಶ್ರೀರ್ವಾದ ಯಾತ್ರೆಯಲ್ಲಿ ಕೊರೊನಾ ನಿಯಮ ಮಂಗಮಾಯವಾಗಿ ಕೊರೊನಾ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ.

ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಾಶೀರ್ವಾದ ಯಾತ್ರೆಯಲ್ಲಿ ಜನ ಸಾಗರವೇ ನೆರೆದಿತ್ತು. ಹಾರ ತುರಾಯಿ, ಸಾಂಸ್ಕೃತಿಕ ವಾದ್ಯ ಮತ್ತು ಕಲಾ ತಂಡಗಳ ಮೆರವಣಿಗೆ ನಡುವೆ ಕೊರೊನಾ ನಿಯಮಗಳು ಸಂಪೂರ್ಣವಾಗಿ ಉಲ್ಲಂಘನೆಯಾಗಿದೆ. ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು, ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೇ ನೆಚ್ಚಿನ ನಾಯಕನಿಗೆ ಜೈಕಾರ ಹಾಕಲು ಮುಗಿಬಿದ್ದರು. ಮಹಿಳೆಯರು ಸಹ ಪೂರ್ಣ ಕುಂಭ ಸ್ವಾಗತ ಕೋರಿ ನೆಚ್ಚಿನ ನಾಯಕನಿಗೆ ಅಭಿನಂಧಿಸಿದ್ದಾರೆ.

ಇನ್ನು, ಕೊರೋನಾ ನಿಯಮಗಳು ಉಲ್ಲಂಘನೆ ಆಗದಂತೆ ಜನಾಶೀರ್ವಾದ ಯಾತ್ರೆಯನ್ನು ಸರಳವಾಗಿ ಆಚರಣೆ ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಆದ್ರೆ ನಾನು ನನ್ನ ತವರು ಆನೇಕಲ್​ಗೆ ಬರುತ್ತಿರುವ ವಿಚಾರ ತಿಳಿದ ಪಕ್ಷದ ಹಳೆಯ ಕಾರ್ಯಕರ್ತರು ಮತ್ತು ಮುಖಂಡರು ತಮ್ಮ ತಮ್ಮ ಊರುಗಳ ಬಳಿ ಬರಬೇಕು ಎಂದಾಗ ಇಲ್ಲ ಎನ್ನಲಾಗಲಿಲ್ಲ. ಹೋದ ಎಲ್ಲಾ ಕಡೆ ಜನ ಸಾಗರವೇ ಹರಿದು ಬಂತು. ಈ ವೇಳೆ ಕೊರೋನಾ ನಿಯಮಗಳು ಉಲ್ಲಂಘನೆಯಾಗಿದೆ. ಕಾರ್ಯಕರ್ತರ ಸಂಭ್ರಮ, ಪ್ರೀತಿ, ವಿಶ್ವಾಸದ ಮುಂದೆ ಕೊರೊನಾ ನಿಯಮಗಳು ಉಲ್ಲಂಘನೆಯಾದರೂ ಮೂಕ ಪ್ರೇಕ್ಷಕನಾದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ ನಾರಾಯಣಸ್ವಾಮಿ ಮಾಧ್ಯಮಗಳ ಮುಂದೆ ಕ್ಷಮೆಯಾಚಿಸಿದ್ದಾರೆ.

ಇದನ್ನೂ ಓದಿ: ಕಾಣೆಯಾಗಿದ್ದ ಮಹಿಳೆ ಹಲವು ದಿನಗಳ ಬಳಿಕ ಪತ್ತೆ; ಠಾಣೆಯಲ್ಲೇ ತಂಗಿಗೆ ರಾಖಿ ಕಟ್ಟಿ ಸಂಭ್ರಮಿಸಿದ ಅಣ್ಣ

ಇದೇ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆಯೂ ಎ ನಾರಾಯಣಸ್ವಾಮಿ ಹರಿಹಾಯ್ದಿದ್ದಾರೆ. ಪ್ರಸ್ತುತ ಮೋದಿ ಸಂಪುಟದಲ್ಲಿ 20 ಕ್ಕೂ ಅಧಿಕ ದಲಿತ ಹಿಂದುಳಿದ ಮಂತ್ರಿಗಳು ಇದ್ದಾರೆ. ಅವರನ್ನು ದೇಶಕ್ಕೆ ಪರಿಚಯಿಸಲು ಸಂಸತ್ತಿನಲ್ಲಿ ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧ ಪಕ್ಷಗಳು ಅವಕಾಶ ನೀಡಲಿಲ್ಲ. ಅಸಂವಿಧಾನಿಕವಾಗಿ ಸಂಸತ್ತಿನಲ್ಲಿ ನಡೆದುಕೊಂಡಿವೆ. ಆದ್ರೆ ಸಂವಿಧಾನದ ನಾಲ್ಕನೆ ಅಂಗ ಮಾಧ್ಯಮಗಳು ಯಾಕೆ ಪ್ರಶ್ನೆ ಮಾಡಲಿಲ್ಲ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳಿಗೂ ಜವಾಬ್ದಾರಿ ಇದೆ. ನಾನು ತಪ್ಪು ಮಾಡಿದಾಗಲೂ ತಿಳಿಸಿದರೆ ತಿದ್ದಿಕೊಳ್ಳುವೆ ಎಂದು ತಮ್ಮ ಬೇಸರವನ್ನು ಎ ನಾರಾಯಣಸ್ವಾಮಿ ಹೊರ ಹಾಕಿದ್ದಾರೆ.

ಅಂದಹಾಗೆ ಜನಾಶೀರ್ವಾದ ಯಾತ್ರೆ ನಡುವೆ ಚಂದಾಪುರ ಬಳಿ ಕಾರ್ಯಕರ್ತರು ಹಚ್ಚಿದ ಪಟಾಕಿ ಕಿಡಿ ತಗುಲಿ ಬೈಕಿಗೆ ಹೊತ್ತಿಕೊಂಡಿದ್ದು, ಮರಳು ಮತ್ತು ನೀರು ಎರಚುವ ಮೂಲಕ ಬೆಂಕಿ ನಂದಿಸಿದ್ದಾರೆ. ಜೊತೆಗೆ ಜನಾಶೀರ್ವಾದ ಯಾತ್ರೆಯಲ್ಲಿ ಅಲ್ಲಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು. ಇದರ ನಡುವೆ ಕಾರ್ಯಕರ್ತರ ನಡುವೆ ಪಿಕ್ ಪಾಕೆಟ್ ಹೊಡೆಯಲು ಯತ್ನಿಸಿದ ಅಸಾಮಿಯನ್ನು ಬಂದ ಬಿಜೆಪಿ ಕಾರ್ಯಕರ್ತರು ಹಿಡಿದು ಗೂಸಾ ನೀಡಿ ಹೆಬ್ಬಗೋಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ವರದಿ: ಆದೂರು ಚಂದ್ರು
Published by:Vijayasarthy SN
First published: