ಬೆಂಗಳೂರು (ಅ. 1): ಸಿಲಿಕಾನ್ ಸಿಟಿಯನ್ನೇ ಬೆಚ್ಚಿ ಬೀಳಿಸಿದ್ದ ಬ್ಯಾಡರಹಳ್ಳಿಯ ತಿಗಳರ ಪಾಳ್ಯದಲ್ಲಿ ನಡೆದ ಒಂದೇ ಕುಟುಂಬದ ಐವರ ಸಾವು ಪ್ರಕರಣಕ್ಕೆ ((byadarahalli family suicide case) ಸಂಬಂಧಿಸಿದಂತೆ ಕುಟುಂಬದ ಯಜಮಾನ ಶಂಕರ್ ನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸಾವನ್ನಪ್ಪಿದ ಶಂಕರ್ ಮಗ ಮಧು ಸಾಗರ್ ಹಾಗೂ ಹೆಣ್ಣು ಮಕ್ಕಳು ಬರೆದ ಡೆತ್ ನೋಟ್ನಲ್ಲಿ ಶಂಕರ್ ( ಮೇಲೆ ನೇರ ಆರೋಪ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದಲ್ಲಿಯೇ ಪ್ರಕರಣ ಸಂಬಂಧ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದೇ ವೇಳೆ ಸಿಂಧೂರಾಣಿ ಗಂಡ ಶ್ರೀಕಾಂತ್ ಮತ್ತು ಸಿಂಚನಾ ಗಂಡ ಪ್ರವೀಣ್ನನ್ನು ವಶಕ್ಕೆ ಪಡೆಯಲಾಗಿದೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ
ಆತ್ಮಹತ್ಯೆಗೂ ಮುನ್ನ ಇಬ್ಬರು ಹೆಣ್ಣು ಮಕ್ಕಳು ತಮ್ಮ ಗಂಡನ ವಿರುದ್ಧ ನೇರಾ ಆರೋಪ ಮಾಡಿದ ಹಿನ್ನಲೆ ಅವರ ವಿರುದ್ಧವೂ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಐಪಿಸಿ ಸೆಕ್ಷೆನ್ 306 - ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
9 ತಿಂಗಳ ಗಂಡು ಮಗು ಸೇರಿ ಶಂಕರ್ ಕುಟುಂಬದ 5 ಮಂದಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಪೊಲೀಸರು ತನಿಖೆಯನ್ನು ಮುಂದುವರೆಸಿ ಮನೆಯ ಯಜಮಾನ ಶಂಕರ್ ಹಾಗೂ ಇಬ್ಬರು ಅಳಿಯಂದಿರನ್ನು ಕರೆದು ವಿಚಾರಣೆ ನಡೆಸಿದ್ದರು. ಈಗ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈ ಸೇರಿದ್ದು, ಅದರಲ್ಲಿ ಬೆಚ್ಚಿ ಬೀಳಿಸುವ ವಿಷಯ ಬಹಿರಂಗಗೊಂಡಿದ್ದವು.
ಶಂಕರ್ ವಿರುದ್ಧ ನೇರಾ ಆರೋಪ
ಮಧು ಸಾಗರ್ ಮತ್ತು ಆತನ ತಂದೆ ಶಂಕರ್ ನಡುವೆ ಉತ್ತಮ ಸಂಬಂಧ ಇರಲಿಲ್ಲ. ಆಗಾಗ್ಗ ಜಗಳ ನಡೆಯುತ್ತಿತ್ತು ಎಂಬುದು ಈಗಾಗಲೇ ತನಿಖೆಯಿಂದ ತಿಳಿದು ಬಂದಿದೆ. ಈ ಜಗಳದ ವಿಚಾರ ಕೂಡ ಮಧು ಸಾಗರ್ ಬರೆದಿದ್ದ ಡೈರಿಯಲ್ಲಿ ಪ್ರಸ್ತಾಪವಾಗಿದೆ. ಈ ಡೈರಿಯಲ್ಲಿ ಮಧು ಸಾಗರ್ ತಂದೆಯ ಅನೇಕ ವಿಚಾರಗಳನ್ನು ಬರೆದಿಟ್ಟಿದ್ದಾನೆ. ಈ ಹಿಂದೆ ಕೂಡ ತಂದೆ ವಿರುದ್ಧವೇ ದೂರು ನೀಡಲು ಬಂದಿದ್ದ ಮಧು ಸಾಗರ್ ಈ ಡೈರಿ ವಿಚಾರಗಳನ್ನು ಪೊಲೀಸರಿಗೆ ತೋರಿಸಿದ್ದ.
ಲ್ಯಾಪ್ಟಾಪ್ನಲ್ಲಿ ಪತ್ತೆಯಾಗಿತ್ತು ಡೆತ್ ನೋಟ್
ಮಧು ಸಾಗರ್ ಹೊರತಾಗಿ ಸಿಂಧೂರಾಣಿ ಮತ್ತು ಸಿಂಚನಾ ಕೂಡ ಸಾವಿಗೆ ಮುನ್ನ ತಮ್ಮ ತಂದೆ ಹಾಗೂ ಗಂಡಂದಿರ ಬಗ್ಗೆ ನೇರ ಆರೋಪ ಮಾಡಿದ್ದರು. ತಂದೆಯ ಮನೆಯಲ್ಲೂ ನೆಮ್ಮದಿ ಇಲ್ಲ ಗಂಡನ ಮನೆಯಲ್ಲೂ ನೆಮ್ಮದಿ ಇಲ್ಲ. ಈ ಹಿನ್ನಲೆ ಈ ನಿರ್ಧಾರಕ್ಕೆ ಬರುತ್ತಿರುವುದಾಗಿ ಅವರು ಸ್ಪಷ್ಟವಾಗಿ ಉಲ್ಲೇಖಿಸಿದ್ದರು.
ಇದನ್ನು ಓದಿ: ಕುಟುಂಬದ ಐವರ ಸಾವು ಪ್ರಕರಣಕ್ಕೆ ಹೊಸ ತಿರುವು: ಪೊಲೀಸರಿಗೆ ಸಿಕ್ತು ಸಾವಿಗೆ ಮುನ್ನ ಮಧುಸಾಗರ್ ಬರೆದಿದ್ದ ಡೈರಿ
ಈ ಹಿಂದೆ ಕುಟುಂಬಸ್ಥರ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಕುರಿತು ಕುಟುಂಬದ ಯಜಮಾನ ಶಂಕರ್ ಹೇಳಿಕೆಯಂತೆ ಪೊಲೀಸರು ದೂರು ದಾಖಲಿಸಿದ್ದಾರೆ. ಐಪಿಸಿ 174 ಸೆಕ್ಷನ್ ಅಡಿ ಎಫ್ ಐಆರ್ ದಾಖಲಿಸಿದ್ದು, ಎಲ್ಲರೂ ಆತ್ಮಹತ್ಯೆಗೆ ಶರಣಾಗಿದ್ದು, ಇದು UDR (ಅಸಹಜ ಸಾವು ) ಎಂದು ದೂರಿನಲ್ಲಿ ದಾಖಲಿಸಲಾಗಿತ್ತು.
ಇದನ್ನು ಓದಿ: ಹೆಂಡತಿಯ ಹಠಕ್ಕೆ ಇಡೀ ಕುಟುಂಬವೇ ನಾಶವಾಯಿತು; ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಶಂಕರ್
ನಾನು ನಿರಾಪರಾಧಿ ಎಂದಿದ್ದ ಶಂಕರ್
ಕುಟುಂಬಸ್ಥರ ಸಾವಿನ ಬಳಿಕ ಶಂಕರ್ ಎಲ್ಲಾ ತಪ್ಪನ್ನು ಹೆಂಡತಿಗೆ ಕಟ್ಟುವ ಪ್ರಯತ್ನ ನಡೆಸಿದ್ದರು. ಹೆಂಡತಿಯ ಹಠದಿಂದ ಕುಟುಂಬವೇ ನಾಶವಾಯಿತು. ಹೆಣ್ಣು ಮಕಳನ್ನು ಗಂಡನ ಮನೆಗೆ ಕಳುಹಿಸು ಎಂದರು ಆಕೆ ಕಳುಹಿಸಲಿಲ್ಲ. ಈಕೆಯ ಹಠದಿಂದ ಕುಟುಂಬ ನಿರ್ನಾಮ ಆಯಿತು ಎಂದಿದ್ದರು. ಅಲ್ಲದೇ ಈ ಘಟನೆಯಲ್ಲಿ ತಾನು ನಿರ್ದೋಷಿ. ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರಿಸುತ್ತೇನೆ ಎಂದು ತಿಳಿಸಿದ್ದರು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ