ಸಮಸ್ಯೆ ಉದ್ಭವಿಸುತ್ತಲೇ BSY ಮೊರೆ ಹೋದ ಸಿಎಂ: ಆನಂದ್ ಸಿಂಗ್ ಸಂಧಾನ ಹೊಣೆ ಯಡಿಯೂರಪ್ಪ ಹೆಗಲಿಗೆ!

ಹೊರಗಡೆಯಿಂದ ಬಂದವರಲ್ಲಿ ನೀನು ಒಬ್ಬ, ಆದ್ರೆ ನೀನು ಬಿಜೆಪಿಯವನೇ. ಸಚಿವ ಸ್ಥಾನ ಇಂದು ಇರುತ್ತೆ, ನಾಳೆ ಹೋಗುತ್ತೆ. ಅದಕ್ಕಾಗಿ ಈ ತರ ಮಾಡಬೇಡಪ್ಪ. ಎಲ್ಲ ಸರಿ ಹೋಗುತ್ತೆ, ಕೊಟ್ಟಿರೋದನ್ನು ಮುಂದುವರೆಸುಕೊಂಡು ಹೋಗು. ವಿಜಯನಗರ ಜಿಲ್ಲೆಗೆ ಹೆಚ್ಚು ಅನುದಾನ ಕೊಡಿಸುತ್ತೇವೆ.

ಯಡಿಯೂರಪ್ಪ ಜೊತೆ ಆನಂದ್​ ಸಿಂಗ್​, ರಾಜೂಗೌಡ

ಯಡಿಯೂರಪ್ಪ ಜೊತೆ ಆನಂದ್​ ಸಿಂಗ್​, ರಾಜೂಗೌಡ

  • Share this:
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಬಂದೊದಗಿರುವ ಮೊದಲ ಸಂಕಷ್ಟವನ್ನು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಮೂಲಕ ಶಮನ ಮಾಡಲು ಬೊಮ್ಮಾಯಿ ಮುಂದಾಗಿದ್ದಾರೆ. ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ನೀಡುವುದಕ್ಕೆ ಅಸಮಾಧಾನಗೊಂಡಿರುವ ಸಚಿವ ಆನಂದ್​ ಸಿಂಗ್​ ರಾಜೀನಾಮೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆನಂದ್​ ಸಿಂಗ್​ ಬಂಡಾಯವನ್ನು ತಣ್ಣಗಾಗಿಸಲು ಬೊಮ್ಮಾಯಿ ಅವರು ಬಿಎಸ್​ವೈನ ಬಳಸಿಕೊಂಡಿದ್ದಾರೆ. ಈ ಹಿನ್ನೆಲೆ  ಇಂದು ಯಡಿಯೂರಪ್ಪ ಅವರು ಸಚಿವ ಆನಂದ್​ಗೆ ಬುಲಾವ್​ ನೀಡಿದ್ದರು. ರಾಜೂಗೌಡ ಜೊತೆ ಆಗಮಿಸಿದ ಆನಂದ್​ ಸಿಂಗ್​ ಯಡಿಯೂರಪ್ಪರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಬಳಿ ಆನಂದ್ ಸಿಂಗ್ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ನಿಮ್ಮ ಆಶೀರ್ವಾದದಿಂದ ನಾನು ಮಂತ್ರಿಯಾದೆ. ವಿಜಯನಗರ ಸಾಮ್ರಾಜ್ಯದ ವೈಭವ ಉಳಿಸಲು, ಪ್ರತ್ಯೇಕ ಜಿಲ್ಲೆ ರಚನೆ ಮಾಡಿ ಘೋಷಣೆ ಮಾಡಿದ್ದೀರ. ಆದ್ರೆ ನಿಮ್ಮ ಅವಧಿಯಲ್ಲಿ ಎರಡು ಬಾರಿ ಸಚಿವ ಸ್ಥಾನ ಬದಲಾವಣೆ ಮಾಡಿದಿರಿ. ಆದ್ರೂ ನಾನು ನಿಮಗಾಗಿ ಏನೂ ಮಾತನಾಡಲಿಲ್ಲ. ಆದ್ರೆ ಈಗ ನನಗೆ ಅನ್ಯಾಯ ಆಗಿದೆ, ಉತ್ತಮ ಖಾತೆಯ ನಿರೀಕ್ಷೆಯಲ್ಲಿದ್ದೆ.  ಆದರೆ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ನೀಡಿದ್ದಾರೆ. ಇದು ನನಗೆ ಬೇಸರ ತರಿಸಿದೆ. ಹೀಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ಸಿಎಂ ಬೊಮ್ಮಾಯಿ ಬಳಿ ಹೇಳಿದ್ದೇನೆ, ಅವರು ಸ್ವಲ್ಪ ದಿನ ಕಾಯುವಂತೆ ಹೇಳಿದ್ದಾರೆ ಅಂತ ಬಿಎಸ್​ವೈ ಬಳಿ ಆನಂದ್ ಸಿಂಗ್ ವರದಿ ಒಪ್ಪಿಸಿದ್ದಾರೆ.

ಇದನ್ನೂ ಓದಿ: Anand Singh: ಆನಂದ್​ ಸಿಂಗ್​ ಓಲೈಕೆಗೆ ಮುಂದಾದ ಸಿಎಂ; ಖಾತೆ ಮರು ಹಂಚಿಕೆ ಸಾಧ್ಯತೆ!

ಸಚಿವ ಆನಂದ್ ಸಿಂಗ್​ನ ಸಮಾಧಾನ ಪಡಿಸುತ್ತಿರೋ ಬಿಎಸ್​ವೈ, ನಿನ್ನ ಯಾರೂ ಕಡೆಗಣಿಸಿಲ್ಲ. ಹೊರಗಡೆಯಿಂದ ಬಂದವರಲ್ಲಿ ನೀನು ಒಬ್ಬ, ಆದ್ರೆ ನೀನು ಬಿಜೆಪಿಯವನೇ. ಸಚಿವ ಸ್ಥಾನ ಇಂದು ಇರುತ್ತೆ, ನಾಳೆ ಹೋಗುತ್ತೆ. ಅದಕ್ಕಾಗಿ ಈ ತರ ಮಾಡಬೇಡಪ್ಪ. ಎಲ್ಲ ಸರಿ ಹೋಗುತ್ತೆ, ಕೊಟ್ಟಿರೋದನ್ನು ಮುಂದುವರೆಸುಕೊಂಡು ಹೋಗು. ವಿಜಯನಗರ ಜಿಲ್ಲೆಗೆ ಹೆಚ್ಚು ಅನುದಾನ ಕೊಡಿಸುತ್ತೇವೆ. ಉತ್ತಮ ಕೆಲಸ ಮಾಡಿಕೊಂಡು ಹೋಗು, ನಿನಗೆ ಇನ್ನೂ ಭವಿಷ್ಯ ಇದೆ. ಮುಂದಿನ ದಿನಗಳಲ್ಲಿ ಉತ್ತಮ ಖಾತೆ ಸಿಗುತ್ತೆ. ಪಕ್ಷ ಕಟ್ಟಿ ಮುಂದಿನ ದಿನಗಳಲ್ಲಿ ಮತ್ತೆ ಅಧಿಕಾರಕ್ಕೆ ತರೋಣ. ಈಗಲೇ ಮುನಿಸಿಕೊಂಡು ಕೆಟ್ಟ ತೀರ್ಮಾನಕ್ಕೆ ಬರಬೇಡ, ಹೈಕಮಾಂಡ್ ಕೂಡ ಗಮನಿಸಿಸುತ್ತಿದೆ. ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಇದೆ ಎಂದು ಆನಂದ್ ಸಿಂಗ್​ನ ಯಡಿಯೂರಪ್ಪ ಸಮಾಧಾನಪಡಿಸಿದ್ದಾರೆ.

ಬುದ್ದಿವಾದ ಹೇಳಿ ಕಳಿಸಿರೋ ಬಿಎಸ್​​ವೈ, ಯೋಚಿಸಿ ಮತ್ತೆ ಭೇಟಿಯಾಗುವಂತೆ ಹೇಳಿದ್ದಾರೆ. ಇಂದೇ ಆನಂದ್ ಸಿಂಗ್ ಅಸಮಾಧಾನಕ್ಕೆ ತೆರೆ ಎಳೆಯಲು ಸಿಎಂ ಪ್ರಯತ್ನಿಸುತ್ತಿದ್ದು, ಯಡಿಯೂರಪ್ಪರನ್ನು ಭೇಟಿ ಆಗಿದ್ದಾರೆ. ಯಡಿಯೂರಪ್ಪ ಸಂದೇಶದಂತೆ ಸಿಎಂ ಬೊಮ್ಮಾಯಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಜೊತೆಗೆ ಆನಂದ್​ ಸಿಂಗ್​ನ  ಆರ್ ಟಿ ನಗರದ ನಿವಾಸಕ್ಕೆ ಕರೆಸಿಕೊಂಡು ಮಾತನಾಡಲಿದ್ದಾರೆ ಎನ್ನಲಾಗುತ್ತಿದೆ.

ಬಿಎಸ್​ವೈ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡದೆ ಆನಂದ್​ ಸಿಂಗ್​ ತೆರಳಿದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: