Booster Dose: ಕೋವಿಡ್ 4ನೇ ಅಲೆ ಆತಂಕದ ಮಧ್ಯೆ ಮತ್ತೊಂದು ಶಾಕ್, ಬೆಂಗಳೂರಿನಲ್ಲಿ ಸಿಗುತ್ತಿಲ್ಲ ಬೂಸ್ಟರ್ ಡೋಸ್!
ಖಾಸಗಿ ಆಸ್ಪತ್ರೆಯಲ್ಲಿ ಬೂಸ್ಟರ್ ಡೋಸ್ಗೆ 600 ರೂಪಾಯಿ ನೀಡಬೇಕು. 4 ನೇ ಅಲೆ ಮುನ್ನೆಲೆಗೆ ಬರ್ತಿದಂಗೆ ಬೂಸ್ಟರ್ ಡೋಸ್ ಹೆಸರಲ್ಲಿ ಖಾಸಗಿ ಅಸ್ಪತ್ರೆಗಳ ದಂಧೆಗೆ ಇಳಿಯಿತೇ ಎಂಬ ಪ್ರಶ್ನೆಯನ್ನು ಈ ಬೆಳವಣಿಗೆ ಹುಟ್ಟುಹಾಕಿದೆ.
ಬೆಂಗಳೂರು: ಕೊಂಚ ತಣ್ಣಗಾಗಿದೆ ಎಂದುಕೊಂಡಿದ್ದ ಕೊರೋನಾ (Corona) ಮಹಾಮಾರಿ ಮತ್ತೆ ಅಬ್ಬರಿಸುತ್ತಿದೆ. ಕೋವಿಡ್ 4ನೇ ಅಲೆ (Covid 4th Wave) ಬಗ್ಗೆ ಎಚ್ಚರವಾಗಿರಿ ಅಂತ ಸ್ವತಃ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೇ ಹೇಳಿದ್ದಾರೆ. ಇಲ್ಲಿಗೆ ಮತ್ತೊಂದು ಅಲೆ ಬರೋದು ನಿಶ್ಚಿತ. ಈಗಾಗಲೇ ಈ ಬಗ್ಗೆ ತೆಗೆದುಕೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ (Government) ಮುಂದಾಗಿದೆ ಅಂತ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ (Health Minister Dr. K.Sudhakar) ಹೇಳಿದ್ದಾರೆ. ಬೆಂಗಳೂರಿನ (Bengaluru) ಬಗ್ಗೆ ಹೆಚ್ಚಿನ ಜಾಗೃತೆ ತೆಗೆದುಕೊಳ್ಳಲು ತಜ್ಞರು ಸೂಚಿಸಿದ್ದಾರೆ. ಆದರೆ ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಕೊರೋನಾ ಬೂಸ್ಟರ್ ಡೋಸ್ (Corona Booster Dose) ಅಭಾವ ಎದುರಾಗಿದೆ.
ಕೊರೋನಾ 4ನೇ ಅಲೆಯ ಟೆನ್ಶನ್
ಜೂನ್ ಹೊತ್ತಲ್ಲಿ ಮತ್ತೊಂದು ಸುತ್ತಿನ ಕೊರೋನಾ ಹಲ್ಚಲ್ ನಡೆಯುವ ಸಂಭವವಿದೆ. ತಜ್ಞರು ಇದನ್ನು ಖಚಿತಪಡಿಸಿದ್ದು, ಸರ್ಕಾರ ಕೂಡ ಈ ಬಗ್ಗೆ ಚಿಂತನೆಗೆ ಬಿದ್ದಿದೆ. ಹೀಗಾಗಿ ಜನ ಸಾಮಾನ್ಯರಲ್ಲಿ ಮತ್ತೆ ಆತಂಕ ಮನೆ ಮಾಡಿದೆ. ಈಗಾಗಲೇ ಮೊದಲ ಡೋಸ್ ಹಾಗೂ ಎರಡನೇ ಡೋಸ್ ಲಸಿಕೆಯೇ ಪೂರ್ಣ ಪ್ರಮಾಣದಲ್ಲಿ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಸಹಜವಾಗಿಯೇ ಭೀತಿ ಇಮ್ಮಡಿಯಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಮಾರಾಟ, ಬಡವರಿಗಿಲ್ವಾ ಸಂಜೀವಿನಿ ಶ್ರೀರಕ್ಷೆ?.
ಇಂಥಾ ಹೊತ್ತಲ್ಲಿ ಬೆಂಗಳೂರಿನಲ್ಲಿ ಬೂಸ್ಟರ್ ಡೋಸ್ ಗೂ ಅಭಾವ ಎದುರಾಗಿದೆ. ಅದಾಗಿಯೂ ಖಾಸಗಿ ಆಸ್ಪತ್ರೆಯಲ್ಲಿ ಮಾತ್ರ ಪ್ರಿಕಾಷನರಿ ಡೋಸ್ ಲಭ್ಯವಾಗುತ್ತಿದೆ. ಸರ್ಕಾರಿ ಅಥವಾ ಬಿಬಿಎಂಪಿ ಆಸ್ಪತ್ರೆಯಲ್ಲಿ ಬೂಸ್ಟರ್ ಡೋಸ್ ಲಭ್ಯವಿಲ್ಲ. ಹೀಗಾಗಿ ಬಡವರು ಬೂಸ್ಟರ್ ಡೋಸ್ ನಿಂದ ವಂಚಿತರಾಗುವ ಸಾಧ್ಯತೆ ಇದೆ.
ಮೊದಲ ಡೋಸ್ ಮತ್ತು ಎರಡನೇ ಡೋಸ್ ಲಸಿಕೆ ಉಚಿತವಾಗಿ ಕೊಟ್ಟ ಸರ್ಕಾರ, ಬೂಸ್ಟರ್ ಡೋಸ್ ಯಾಕೆ ಉಚಿತವಾಗಿ ನೀಡಿಲ್ಲ ಎಂಬ ಪ್ರಶ್ನೆ ಸದ್ಯದ್ದು. ಇದು ಹಲವು ಅನುಮಾನಗಳಿಗೆ ಅವಕಾಶ ಮಾಡಿಕೊಟ್ಟಿದ್ದು, ಈ ಮೂಲಕ ಖಾಸಗಿ ಆಸ್ಪತ್ರೆಗಳು ಬೂಸ್ಟರ್ ಡೋಸ್ ಅಧಿಕ ಬೆಲೆ ನಿಗದಿ ಮಾಡಿ ದಂಧೆ ಮಾಡಲು ಹೊರಟಿತೇ ಎಂಬ ಅನುಮಾನ ಮೊದಲಿನದ್ದು.
ಸಮರ್ಪಕ ರೀತಿಯಲ್ಲಿ ಪೂರೈಕೆಗೆ ಸರ್ಕಾರಕ್ಕೆ ಮನವಿ
ಇದನ್ನು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಳ್ಳಿ ಹಾಕಿದ್ದು, ಮೊದಲ ಮತ್ತು ಎರಡನೇ ಡೋಸ್ ನಂತೆಯೇ ಎಲ್ಲರಿಗೂ ಬೂಸ್ಟರ್ ಡೋಸ್ ಸಿಗಲಿದೆ. ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಿರುವುದು ಸರ್ಕಾರ. ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಕ್ ಹೆಚ್ಚಿರುವ ಕಾರಣ ಅಲ್ಲಿ ಲಭ್ಯವಿರಬಹುದು. ಸರ್ಕಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೂಸ್ಟರ್ ಡೋಸ್ ಲಸಿಕೆ ನಮಗೆ ನೀಡಲು ಮನವಿಮಾಡಿಕೊಳ್ಳುತ್ತೇವೆ ಎಂದರು.
ಖಾಸಗಿ ಆಸ್ಪತ್ರೆಯಲ್ಲಿ ಬೂಸ್ಟರ್ ಡೋಸ್ಗೆ 600 ರೂ. ನಿಗದಿ !
ಖಾಸಗಿ ಆಸ್ಪತ್ರೆಯಲ್ಲಿ ಬೂಸ್ಟರ್ ಡೋಸ್ಗೆ 600 ರೂಪಾಯಿ ನೀಡಬೇಕು. 4 ನೇ ಅಲೆ ಮುನ್ನೆಲೆಗೆ ಬರ್ತಿದಂಗೆ ಬೂಸ್ಟರ್ ಡೋಸ್ ಹೆಸರಲ್ಲಿ ಖಾಸಗಿ ಅಸ್ಪತ್ರೆಗಳ ದಂಧೆಗೆ ಇಳಿಯಿತೇ ಎಂಬ ಪ್ರಶ್ನೆಯನ್ನು ಈ ಬೆಳವಣಿಗೆ ಹುಟ್ಟುಹಾಕಿದೆ.
ಸದ್ಯ ಬಿಬಿಎಂಪಿ ಉಚಿತವಾಗಿ ಬೂಸ್ಟರ್ ಡೋಸ್ ಲಸಿಕೆ ನೀಡುವಂತೆ ಮನವಿ ಮಾಡಿಕೊಂಡಿದೆ. ಉಚಿತ ವ್ಯಾಕ್ಸಿನ್ ನೀಡಿದ ಕಾರಣ 1,2,3 ನೇ ಅಲೆ ತಡೆಗಟ್ಟಲು ಸಹಾಯವಾಗಿದೆ. ಮತ್ತೆ ಉಚಿತವಾಗಿ ವ್ಯಾಕ್ಸಿನ್ ನೀಡಿದರೆ ನಾಲ್ಕನೇ ಅಲೆ ತಡೆಗಟ್ಟಲು ಸಹಾಯವಾಗಬಹುದು ಎಂಬ ಅಭಿಪ್ರಾಯ ಬಿಬಿಎಂಪಿಯದ್ದು. ಆದರೆ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತೆ ಎಂಬುವುದನ್ನು ಕಾದು ನೋಡಬೇಕಿದೆ.