ಬೆಂಗಳೂರು(ಆ.21): ತೀವ್ರ ಹಣಕಾಸಿನ ತೊಂದರೆ ಎದುರಿಸುತ್ತಿರುವ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ಪೋರ್ಟ್ ಕಾರ್ಪೊರೇಶನ್ (ಬಿಎಂಟಿಸಿ) ಇದೀಗ ನಗರದ ಮೂರು ಮಾರ್ಗಗಳಲ್ಲಿ ಎಸಿ ಬಸ್ ಸೇವೆಯನ್ನು ಪರಿಚಯಿಸಲು ನಿರ್ಧರಿಸಿದೆ. ಆ ಬಸ್ಗಳಲ್ಲಿ ಬೆಂಗಳೂರು ದರ್ಶಿನಿ ವೀಕ್ಷಣಾ ಸೇವೆಯೂ ಒಂದು. ಬೆಂಗಳೂರು ದರ್ಶಿನಿ ವೀಕ್ಷಣಾ ಸೇವೆ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಸ್ಥಗಿತವಾಗಿತ್ತು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ವಲ್ಪ ಪುನಶ್ಚೇತನ ಕಾಣುವ ಉದ್ದೇಶದಿಂದ ಬಿಎಂಟಿಸಿಯು, ಬೆಂಗಳೂರು ದರ್ಶಿನಿ ವೀಕ್ಷಣಾ ಸೇವೆಯನ್ನು ಮರು ಪರಿಚಯಿಸಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು ದರ್ಶಿನಿ ಬಸ್ ಸೇವೆಯು ಶುಕ್ರವಾರದಿಂದ ಭಾನುವಾರದವರೆಗೆ ಕಾರ್ಯ ನಿರ್ವಹಿಸಲಿದೆ. ವಾರದ ಇತರ ದಿನಗಳಲ್ಲಿ ಈ ಬಸ್ ಸೇವೆ ಲಭ್ಯ ಇಲ್ಲ. ಬೆಂಗಳೂರು ದರ್ಶಿನಿ, ಪ್ರಯಾಣಿಕರಿಗೆ ಬೆಂಗಳೂರು ನಗರದ ಸುತ್ತಮುತ್ತ ಇರುವ ಪ್ರಮುಖ ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತಿಸುವ ಒಂದು ಬಸ್ ಸೇವೆ. ಬೆಂಗಳೂರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಈ ಬಸ್ ಹೆಚ್ಚು ಉಪಯುಕ್ತ ಎನ್ನಬಹುದು.
ಬೆಳಗ್ಗಿನಿಂದ ರಾತ್ರಿಯವರೆಗೆ ನಿರ್ದಿಷ್ಟ ಸಮಯದಲ್ಲಿ ಈ ಬಸ್ ಸೇವೆ ಲಭ್ಯವಿದೆ. ದರವೂ ದುಬಾರಿ ಇಲ್ಲ. ಈ ಬೆಂಗಳೂರು ದರ್ಶಿನಿ ಸೇವೆಯ ಮೂಲಕ, ಇಸ್ಕಾನ್ ಮಂದಿರ, ವಿಧಾನ ಸೌಧ, ಟಿಪ್ಪು ಸುಲ್ತಾನ್ ಅರಮನೆ, ಗವಿ ಗಂಗಾಧರೇಶ್ವರ ಮಂದಿರ, ಬುಲ್ ಟೆಂಪಲ್, ದೊಡ್ಡ ಗಣಪತಿ ದೇವಸ್ಥಾನ, ಕರ್ನಾಟಕ ಸಿಲ್ಕ್ ಎಂಪೋರಿಯಮ್, ಮಹಾತ್ಮ ಗಾಂಧಿ ರಸ್ತೆ, ಹಲಸೂರು ಕೆರೆ, ಕಬ್ಬನ್ ಪಾರ್ಕ್, ಸರ್ ಎಂ ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ ಮತ್ತು ಕರ್ನಾಟಕ ಆರ್ಟ್ ಗ್ಯಾಲರಿ ಮುಂತಾದ ಸ್ಥಳಗಳ ವೀಕ್ಷಣೆಯ ಆನಂದವನ್ನು ಪ್ರಯಾಣಿಕರು ಪಡೆಯಬಹುದು.
ಎಸಿ ಬಸ್ಗಳು ಇನ್ನು ಎರಡು ಮಾರ್ಗಗಳಲ್ಲಿ ಸಂಚರಿಸಲಿವೆ. ಒಂದು ಎಸಿ ಬಸ್ ಸೇವೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಬನ್ನೇರುಘಟ್ಟ ನ್ಯಾಶನಲ್ ಪಾರ್ಕ್ಗೆ(ವಿ-365), ಇನ್ನೊಂದು ಎಸಿ ಬಸ್ ಸೇವೆ ಹೆಚ್ಎಸ್ಆರ್ ಲೇಔಟ್ ಬಿಡಿಎ ಕಾಂಪ್ಲೆಕ್ಸ್ನಿಂದ ವಂಡರ್ ಲಾಗೆ (ವಿ-226) ಆರಂಭವಾಗಲಿದೆ. ವಂಡರ್ ಲಾ ಅಮ್ಯೂಸ್ಮೆಂಟ್ ಪಾರ್ಕ್ ಬಿಡದಿ ಹತ್ತಿರ ಇರುವ ಒಂದು ಜನಪ್ರಿಯ ಪ್ರವಾಸಿ ತಾಣ.
ಕೋವಿಡ್ ಸಾಂಕ್ರಾಮಿಕದ ನಂತರ, ಕೆಲವು ಪ್ರಯಾಣಿಕರು ಈಗ ವೋಲ್ವೋ ಬಸ್ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಪ್ರಸ್ತುತ ಇರುವ 860 ಎಸಿ ವೋಲ್ವೋ ಬಸ್ಗಳಲ್ಲಿ 50ಕ್ಕೂ ಕಡಿಮೆ ಬಸ್ಗಳು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ವಿಧಿಸಲಾದ ನಿರ್ಬಂಧಗಳನ್ನು ಈಗ ಸಡಿಲಿಸಲಾಗಿದೆ. ಆದರೂ ಬಿಎಂಟಿಸಿ ಬಸ್ಗಳಿಗೆ ಬೇಡಿಕೆ ಕಡಿಮೆ ಆಗಿದೆ. ಹಾಗಾಗಿ , ಈಗಿರುವ 6,500 ಬಸ್ಗಳಲ್ಲಿ ಕೇವಲ 4,800 ಬಸ್ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ ಎಂದು ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ಪೋರ್ಟ್ ಕಾರ್ಪೊರೇಶನ್ನ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ