BJP: ಬೆಂಗಳೂರಿಗೆ ಸದಾನಂದ ಗೌಡ ಆಗಮನ; ಜಮಾಯಿಸಿದ ಸಾವಿರಾರು ಕಾರ್ಯಕರ್ತರು

ತಮ್ಮ ನಾಯಕ ದೊಡ್ಡ ದೊಡ್ಡ ಹುದ್ದೆಗೆ ಏರಬೇಕು ಎಂದು ಬಯಸುವುದು ಸಹಜ. ಅದು ಅವರ ಇಚ್ಛೆಯಿರಬಹುದಷ್ಟೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಾನೆಂದೂ ಯಾವುದೇ ಹುದ್ದೆಯ ಹಿಂದೆಬಿದ್ದವನಲ್ಲ

ವಿಮಾನ ನಿಲ್ದಾಣಕ್ಕೆ ಬಂದಿಳಿದ ಸದಾನಂದ ಗೌಡರನ್ನುಬಿಜೆಪಿ ಕಾರ್ಯಕರ್ತರು ಬೃಹತ್​ ಹೂಮಾಲೆ ಹಾಕಿ ಸ್ವಾಗತಿಸಿದರು

ವಿಮಾನ ನಿಲ್ದಾಣಕ್ಕೆ ಬಂದಿಳಿದ ಸದಾನಂದ ಗೌಡರನ್ನುಬಿಜೆಪಿ ಕಾರ್ಯಕರ್ತರು ಬೃಹತ್​ ಹೂಮಾಲೆ ಹಾಕಿ ಸ್ವಾಗತಿಸಿದರು

 • Share this:
  ಬೆಂಗಳೂರು, ಜುಲೈ 9 - ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ  ನಗರಕ್ಕೆ ವಾಪಸ್ಸಾದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ ವಿ ಸದಾನಂದ ಗೌಡ ಅವರಿಗೆ ವಿಮಾನ ನಿಲ್ದಾಣದಲ್ಲಿ ಕಾರ್ಯಕರ್ತರು ಭಾವನಾತ್ಮಕ ಸ್ವಾಗತ ನೀಡಿದರು.

  ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರು ಮಾಜಿ ಕೇಂದ್ರ ಸಚಿವರು ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಜಯಘೋಷ ಹಾಕಿದರು. ಭಾರತ ಮಾತೆಯ ಪರವಾಗಿ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ, ಸದಾನಂದ ಗೌಡ, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತಿತರ ನಾಯಕರ ಪರವಾಗಿ ಜೈಕಾರ ಕೂಗಿದರು.

  ಪಕ್ಷದ ಧ್ವಜದ ಜೊತೆಗೆ “ನಮ್ಮ ಸಂಸದರು ನಮ್ಮ ಹೆಮ್ಮೆ. ನಿಮ್ಮ ಜೊತೆ ನಾವಿದ್ದೇವೆ.” ಇವೇ ಮುಂತಾದ ಫಲಕಗಳನ್ನು ಪ್ರದರ್ಶಿಸಿದರು. ವಿಮಾನ ನಿಲ್ದಾಣದಿಂದ ಮನೆಗೆ (ಆರ್. ಎಂ.ವಿ. 2ನೇ ಹಂತ) ತೆರಳುವ ಮಾರ್ಗದಲ್ಲಿ ಶೆಟ್ಟಿಗೆರೆ, ದೊಡ್ಡಜಾಲ, ಮೀನುಕುಂಟೆ, ಹೊಸೂರು, ಶೆಟ್ಟಿಹಳ್ಳಿ ಇವೇ ಮುಂತಾದ ಕಡೆ ವಾಹನ ನಿಲ್ಲಿಸಿ ಹೂಮಳೆಗೈದರು.

  ಕಾರ್ಯಕರ್ತರ ಪ್ರೀತಿ ಅಭಿಮಾನ ನೋಡಿ ಸದಾನಂದ ಗೌಡರಿಗೆ ಆನಂದ ಭಾಷ್ಪ ತುಂಬಿಬಂತು. ಕೆಲವುಕಡೆ ಅವರು ಗದ್ಗದಿತರಾದ ಪ್ರಸಂಗವೂ ನಡೆಯಿತು.
  ಕೆಲವುಕಡೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸದಾನಂದ ಗೌಡರು  ಅಧಿಕಾರದಿಂದ ಕೆಳಗಿಳಿದಾಗಲೂ ಇಷ್ಟೊಂದು ಪ್ರೀತಿ, ಅಭಿಮಾನ ತೋರಿದ ಕಾರ್ಯಕರ್ತರ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ. ಇದು ಇನ್ನಷ್ಟು ಸೇವೆ ಮಾಡಲು ಪ್ರೇರಣೆ ನೀಡಿದೆ. ಎಲ್ಲರೂ ಸೇರಿ ಪಕ್ಷವನ್ನು ಇನ್ನಷ್ಟು ಗಟ್ಟಿಯಾಗಿ ಸಂಘಟಿಸೋಣ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯಾಗಿಸೋಣ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕನಿಷ್ಠ 7 ಸ್ಥಾನಗಳನ್ನು ಗೆಲ್ಲುವ ದಿಸೆಯಲ್ಲಿ ಕಾರ್ಯಪ್ರವೃತ್ತರಾಗೋಣ ಎಂದರು.

  ಈ ನಡುವೆ ತಮ್ಮನ್ನು ಭೇಟಿಯಾದ ವರದಿಗಾರರೊಂದಿಗೆ ಮಾತನಾಡಿದ ಸದಾನಂದ ಗೌಡ  ಸಂಪುಟ ಪುನರ್ರಚನೆಯ ದಿನ ಬೆಳಿಗ್ಗೆ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ದೂರವಾಣಿ ಮಾಡಿ ನಾನೂ ಸೇರಿದಂತೆ ಹಲವು ಹಿರಿಯ ಸಚಿವರ ಸೇವೆಯು ಪಕ್ಷಕ್ಕೆ ಬೇಕಾಗಿದೆ ಎಂದರು. ಪಕ್ಷದ ತೀರ್ಮಾನದಂತೆ ಸಚಿವ ಸ್ಥಾನ ತ್ಯಜಿಸಿದೆ ಎಂದರು.

  ನಿಮಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕಾರ್ಯಕರ್ತರು ಘೋಷಣೆ ಹಾಕುತ್ತಿದ್ದಾರೆ. ನೀಮಗೇನಾದರೂ ರಾಜ್ಯದಲ್ಲಿ ಹೊಸ ಜವಾಬ್ದಾರಿ ಕಾದಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸದಾನಂದ ಗೌಡ - ಕಾರ್ಯಕರ್ತರು ತಮ್ಮ ನಾಯಕ ದೊಡ್ಡ ದೊಡ್ಡ ಹುದ್ದೆಗೆ ಏರಬೇಕು ಎಂದು ಬಯಸುವುದು ಸಹಜ. ಅದು ಅವರ ಇಚ್ಛೆಯಿರಬಹುದಷ್ಟೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಾನೆಂದೂ ಯಾವುದೇ ಹುದ್ದೆಯ ಹಿಂದೆಬಿದ್ದವನಲ್ಲ. ಕಳೆದ 27 ವರ್ಷಗಳಲ್ಲಿ ಶಾಸಕನಾಗಿ, ಸಂಸದನಾಗಿ, ರಾಜ್ಯ ಘಟಕದ ಅಧ್ಯಕ್ಷನಾಗಿ, ಮುಖ್ಯಮಂತ್ರಿಯಾಗಿ, ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕನಾಗಿ, ಕೇಂದ್ರದಲ್ಲಿ 7 ವರ್ಷಗಳ ಕಾಲ ಸಚಿವನಾಗಿ ಕಾರ್ಯನಿರ್ವಹಿಸುವ ಅವಕಾಶವನ್ನು ಪಕ್ಷ ನೀಡಿತು. ಪಕ್ಷ ಏನೆಲ್ಲ ಆದೇಶ, ಜವಾಬ್ಧಾರಿಯನ್ನು ನೀಡಿತೋ ಅದನ್ನೆಲ್ಲ ಶಿರಸಾವಹಿಸಿ ಪಾಲಿಸಿದ್ದೇನೆ. ರಾಜಕೀಯದಲ್ಲಿ ಮಾನ-ಅಪಮಾನ, ಏಳು-ಬೀಳು ಸಹಜವಾಗಿದೆ. ನನಗಂತೂ ಇದರ ಅನುಭವ ಸಾಕಷ್ಟಾಗಿದೆ ಎಂದರು.

  ಇದನ್ನೂ ಓದಿ: ವ್ಯಾಕ್ಸಿನ್​ ತೆಗೆದುಕೊಂಡವರಿಗೆ ಮಾತ್ರ ಸಿನಿಮಾ ನೋಡಲು ಅವಕಾಶ: ಪಂಜಾಬಿನಲ್ಲಿ ಹೊಸ ಅನ್​ಲಾಕ್​ ರೂಲ್ಸ್​

  ಬೆಂಗಳೂರು ಉತ್ತರ ಬಿಜೆಪಿ ಜಿಲ್ಲಾಧ್ಯಕ್ಷ ಬಿ ನಾರಾಯಣ, ವಿಧಾನ ಪರಿಷತ್ ಸದಸ್ಯ ವೈ ಎ ನಾರಾಯಣಸ್ವಾಮಿ, ಶಾಸಕ ಸಂಜೀವ್ ಮಠಂದೂರ್, ‘ಬಯಪಾ’ (BIAAPA) ಅಧ್ಯಕ್ಷ ಎ ರವಿ, ಮಾಜಿ ಶಾಸಕರಾದ ಎಸ್ ಮುನಿರಾಜು ಮತ್ತು ನೆ ಲ ನರೇಂದ್ರಬಾಬು, ಮಂಡಲಾಧ್ಯಕ್ಷರು, ಪದಾಧಿಕಾರಿಗಳು, ಪಕ್ಷದ ಮುಖಂಡರಾದ ಎಸ್ ಹರೀಶ್, ರಿಷಿಕುಮಾರ್, ಎನ್ ಲೋಕೇಶ್, ದೊಡ್ಡಬಸವರಾಜು, ರವೀಂದ್ರ, ತಮ್ಮೇಗೌಡ ಮುಂತಾದವರು ಉಪಸ್ಥಿತರಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: