ನನ್ನ ವಿಡಿಯೋ ಇದೆ ಎನ್ನುತ್ತಿದ್ದಾರೆ, ಬ್ಲ್ಯಾಕ್​​ಮೇಲ್​​ ಖೆಡ್ಡಾಗೆ ನಾನು ಬೀಳುವುದಿಲ್ಲ : ರೇಣುಕಾಚಾರ್ಯ ತಿರುಗೇಟು

Renukacharya on Yatnal: ನೀವು ಜೆಡಿಎಸ್ ಹೋಗಿದ್ರಲ್ಲ, ಅವತ್ತು ಹಿಂದುತ್ವ ಎಲ್ಲಿ ಹೋಗಿತ್ತು. ಸ್ವಾರ್ಥಕ್ಕಾಗಿ ಹಿಂದುತ್ವ ಬೇಕಾ? ಜೆಡಿಎಸ್‌ನಲ್ಲಿದ್ದಾಗ ಅಲ್ಪಸಂಖ್ಯಾತರ ಓಲೈಕೆ ಮಾಡಿಲ್ವಾ ಎಂದು ಯತ್ನಾಳ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಎಂ ಪಿ ರೇಣುಕಾಚಾರ್ಯ

ಎಂ ಪಿ ರೇಣುಕಾಚಾರ್ಯ

 • Share this:
  ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಸದ್ಯ ಸಂಪುಟ ಸರ್ಕಸ್​ ಜೋರಾಗಿದೆ. ಮಂತ್ರಿಗಿರಿಗಾಗಿ ಪೈಪೋಟಿ, ಓಲೈಕೆ ಭರದಿಂದ ನಡೆಯುತ್ತಿದೆ. ಈ ಮಧ್ಯೆ ಬಿ.ಎಸ್​.ಯಡಿಯೂರಪ್ಪ ವಿರುದ್ಧ ದನಿ ಎತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​​​ ಕೈ ಮೇಲಾಗಿದೆ. ಬಿಎಸ್​ವೈ ವಿರುದ್ಧ ಹರಿಹಾಯ್ದಿದ್ದ ಯತ್ನಾಳ್​​ ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಸಚಿವಾಕಾಂಕ್ಷಿಯಾಗಿರುವ ಬಿಎಸ್​ವೈ ಆಪ್ತ ಶಾಸಕ ರೇಣುಕಾಚಾರ್ಯ ಅವರು ಯತ್ನಾಳ್​ ವಿರುದ್ಧ ಹರಿಹಾಯ್ದಿದ್ದಾರೆ. ನೀವು ಜೆಡಿಎಸ್ ಹೋಗಿದ್ರಲ್ಲ, ಅವತ್ತು ಹಿಂದುತ್ವ ಎಲ್ಲಿ ಹೋಗಿತ್ತು. ಸ್ವಾರ್ಥಕ್ಕಾಗಿ ಹಿಂದುತ್ವ ಬೇಕಾ? ಜೆಡಿಎಸ್‌ನಲ್ಲಿದ್ದಾಗ ಅಲ್ಪಸಂಖ್ಯಾತರ ಓಲೈಕೆ ಮಾಡಿಲ್ವಾ ಎಂದು ಯತ್ನಾಳ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

  ಬಿಜೆಪಿ ಬಗ್ಗೆ ಮಾತನಾಡಿದರೆ ಪಕ್ಷಕ್ಕೆ ಅವಮಾನ, ಪಕ್ಷ ಇದನ್ನು ಗಮನಿಸಿ ಕ್ರಮ‌ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸ್ವಾಮೀಜಿಗಳು ಯಡಿಯೂರಪ್ಪ ಪರ‌ ಸಮಾವೇಶ ಮಾಡಿಲ್ಲ. ಅರಮನೆ ಮೈದಾನದಲ್ಲಿ ಸ್ವಾಮೀಜಿಗಳು ಹೇಳಿದ್ದಾರೆ,ಸ್ವಾಮೀಜಿಗಳು ಮನೆಗೆ ಬಂದಾಗ ಕಾಣಿಕೆ ನೀಡುವುದು ಸಂಸ್ಕೃತಿ. ಕಾಣಿಕೆಯಿಂದಲೇ ಸ್ವಾಮೀಜಿಗಳು ಶಾಲೆ-‌ಕಾಲೇಜು ನಡೆಸುತ್ತಾರೆ. ಯತ್ನಾಳ್​ ಆ ಬಗ್ಗೆ ಮಾತನಾಡುವ ಮೂಲಕ ಮಠಾಧೀಶರಿಗೆ ಅವಮಾನ ಮಾಡಿದ್ದಾರೆ. ಅವರು ಬೇಷರತ್ ಕ್ಷಮೆ‌ ಕೇಳಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದರು.

  ರೇಣುಕಾಚಾರ್ಯ ವಿಡಿಯೋ ಇದೆ ಎಂದು ಯಾರೋ ಪುಣ್ಯಾತ್ಮ ಬ್ಲಾಕ್ ಮೇಲೆ ಮಾಡಿದ್ದಾರೆ. ಹೀಗಾಗಿ ನಾನು ತಡೆಯಾಜ್ಞೆ ನೋಡುತ್ತಿದ್ದೇನೆ . ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಯಾವುದನ್ನ ಬೇಕಾದರೂ ಎಡಿಟ್ ಮಾಡಬಹುದು. ಯಾರ ಮುಖ ಯಾವುದಕ್ಕೂ ಜೋಡಿಸಬಹುದು. ಯಾರದ್ದೋ ಕಾಲು, ಯಾರದ್ದೋ ದೇಹ ಗ್ರಾಫಿಕ್ಸ್ ಮಾಡಿಸಬಹುದು. ನನ್ನನ್ನು ಯಾರೂ ಬ್ಲ್ಯಾಕ್ ಮೇಲ್ ಮಾಡಲು ಸಾಧ್ಯವಿಲ್ಲ, ಬ್ಲ್ಯಾಕ್ ಮೇಲ್ ಖೆಡ್ಡಾಗೆ ಬೀಳುವುದಿಲ್ಲ. ನನ್ನ‌ ಮೇಲೆ‌ ಆರೋಪ ಮಾಡುವವರು ಆತ್ಮಾವಲೋಕನ ಮಾಡಿಕೊಳ್ಳಲಿ. ಜೀವನದಲ್ಲಿ ಅವರು ಏನು ಮಾಡಿದ್ದಾರೆ ಯೋಚಿಸಲಿ ಎಂದು ಕಿಡಿಕಾರಿದರು.

  ನಾನು ಅಂದು ಒಮ್ಮೆ ತಪ್ಪು ಮಾಡಿದ್ದೆ, ತಪ್ಪಿನಿಂದ ನಾನು ಪಾಠ ಕಲಿತಿದ್ದೇನೆ. ನಡೆಯುವ ಮನುಷ್ಯ ಎಡವುವುದು ಸಹಜ, ಮತ್ತೆಂದೂ ಆ ತಪ್ಪು ನಾನು ಮಾಡಿಲ್ಲ. ನೀಚಮಟ್ಟದ ಕೀಳುಮಟ್ಟದ ರಾಜಕಾರಣ ಯಾರೂ ಕ್ಷಮಿಸಲ್ಲ ಎಂದರು. ಇನ್ನು ಕೋರ್ಟ್​​ನಿಂದ ತಡೆಯಾಜ್ಞೆ ತಂದ ಶಾಸಕರಿಗೆ ಮಂತ್ರಿಗಿರಿ ಬೇಡ ಎಂದು ಬಿಜೆಪಿಗೆ ಆರ್‌ಎಸ್‌ಎಸ್ ಸೂಚನೆ ವಿಚಾರವಾಗಿಗಿ ಪ್ರತಿಕ್ರಿಯಿಸಿದ ಅವರು, ಸಂಪುಟ ರಚನೆ ಸಿಎಂ ಪರಮಾಧಿಕಾರ. ಸಿಎಂಗೆ ನಾನು ಮನವಿ ಮಾಡಿದ್ದೇನೆ . ಅವಕಾಶ ಮಾಡಿಕೊಡಲು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

  ಇನ್ನು ಬಿಎಸ್​ವೈ ಪರ ಬ್ಯಾಟ್​ ಬೀಸಿದ ರೇಣುಕಾಚಾರ್ಯ, ಯಡಿಯೂರಪ್ಪ ಸಾಮರ್ಥ್ಯ ನಾಯಕತ್ವ ಹೋರಾಟ ದೊಡ್ಡದು. ನೂರಾರು ಪಾದಯಾತ್ರೆ, ಸಾವಿರಾರು ಹೋರಾಟ ಮಾಡಿದ್ದಾರೆ. ಅನೇಕ ಬಾರಿ ಜೈಲಿಗೆ ಹೋದವರು, ಯಾರೋ ಒಬ್ಬರು ಮಾತಾಡಿದರೆ ಗೌರವ‌ ಕಡಿಮೆ‌ ಆಗಲ್ಲ. ಬಿಜೆಪಿಗೆ ಯಡಿಯೂರಪ್ಪ ಬಗ್ಗೆ ಅಪಾರ ಗೌರವ ಇದೆ ಎನ್ನುವ ಮೂಲಕ ಯತ್ನಾಳ್​ಗೆ ತಿರುಗೇಟು ನೀಡಿದರು.

  ಯಡಿಯೂರಪ್ಪ ಹೋರಾಟದ ಶ್ರಮ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇಬ್ಬರು ಶಾಸಕರಿದ್ದಾಗ ಯಡಿಯೂರಪ್ಪ ಯೋಚಿಸಲಿಲ್ಲ, ಈಗ 120 ಸಂಖ್ಯೆ ತಲುಪಿದೆ. ಯಡಿಯೂರಪ್ಪ ಕೈಕಾಲು ಹಿಡಿದು ಯತ್ನಾಳ್ ಪಕ್ಷಕ್ಕೆ ಬಂದಿದ್ದಾರೆ. ರಾಷ್ಟ್ರೀಯ ನಾಯಕರಿಗೆ ಗೌರವಿಸಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಯಡಿಯೂರಪ್ಪ ಮೋಜು ಮಸ್ತಿಗಾಗಿ ಅಧಿಕಾರದಲ್ಲಿ ಇರಲಿಲ್ಲ. ಹೈಕಮಾಂಡ್ ಹಾಗೂ ಸಂಘ ಪರಿವಾರದವರು ಯಡಿಯೂರಪ್ಪ ಅವರನ್ನು ಶ್ಲಾಘಿಸಿದ್ದಾರೆ. ಯಡಿಯೂರಪ್ಪ ಬಗ್ಗೆ ಮಾತನಾಡುವುದು ಎಷ್ಟು ಸೂಕ್ತ ಎಂದು ಯತ್ನಾಳ್​ ವಿರುದ್ಧ ರೇಣುಕಾಚಾರ್ಯ ಕಿಡಿಕಾರಿದರು.
  Published by:Kavya V
  First published: