HOME » NEWS » State » BENGALURU URBAN BJP MLA MP RENUKACHARYA MET CM BS YEDIYURAPPA OVER LEADERSHIP CHANGE CRISIS IN KARNATAKA CP YOGESHWAR SCT

Karnataka Politics | ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿಚಾರ; ಸಿ.ಪಿ. ಯೋಗೇಶ್ವರ್ ನಡೆ ಬಗ್ಗೆ ಸಿಎಂಗೆ ಮಾಹಿತಿ ನೀಡಿದ ಬಿಜೆಪಿ ಶಾಸಕರು

CM BS Yediyurappa: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಗೆ ಸಚಿವ ಸಿ.ಪಿ. ಯೋಗೇಶ್ವರ್ ಪ್ರಯತ್ನಿಸುತ್ತಿರುವ ಬಗ್ಗೆ ಮತ್ತು ಬಿಜೆಪಿಯ ಕೆಲ ಶಾಸಕರು ಇದಕ್ಕೆ ಸಹಿ ಸಂಗ್ರಹಿಸುತ್ತಿರುವ ಬಗ್ಗೆ ರೇಣುಕಾಚಾರ್ಯ ನೇತೃತ್ವದ ನಿಯೋಗ ಇಂದು ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾಹಿತಿ ನೀಡಿದೆ.

news18
Updated:May 30, 2021, 12:59 PM IST
Karnataka Politics | ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿಚಾರ; ಸಿ.ಪಿ. ಯೋಗೇಶ್ವರ್ ನಡೆ ಬಗ್ಗೆ ಸಿಎಂಗೆ ಮಾಹಿತಿ ನೀಡಿದ ಬಿಜೆಪಿ ಶಾಸಕರು
ಸಿಎಂ ಯಡಿಯೂರಪ್ಪನವರನ್ನು ಭೇಟಿಯಾದ ರೇಣುಕಾಚಾರ್ಯ ನೇತೃತ್ವದ ನಿಯೋಗ
  • News18
  • Last Updated: May 30, 2021, 12:59 PM IST
  • Share this:
ಬೆಂಗಳೂರು (ಮೇ 30): ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಕುರಿತ ಚರ್ಚೆಗಳು ಇನ್ನೂ ತಣ್ಣಗಾಗಿಲ್ಲ. ಸಿಎಂ ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್ ಭೇಟಿಗೂ ನಿರ್ಧರಿಸಿದ್ದ ಸಚಿವ ಸಿ.ಪಿ. ಯೋಗೇಶ್ವರ್ ಬಹಿರಂಗವಾಗಿಯೇ ತಮ್ಮದೇ ಪಕ್ಷದ ವಿರುದ್ಧ ಕಿಡಿಕಾರಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಸಿಎಂ ಯಡಿಯೂರಪ್ಪನವರಿಗೆ ಕೆಲವು ವಿಚಾರ ತಿಳಿಸುವ ಸಲುವಾಗಿ ಬಿಜೆಪಿಯ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ.

ಯಡಿಯೂರಪ್ಪ ವಿರೋಧಿ ಬಣದಿಂದ ಸಹಿ ಸಂಗ್ರಹಕ್ಕೆ ತೆರೆ ಮರೆಯಲ್ಲಿ ಪ್ರಯತ್ನ ನಡೆಯುತ್ತಿದೆ. ಈ ಬೆಳವಣಿಗೆಗಳನ್ನು ಸಿಎಂ ಯಡಿಯೂರಪ್ಪನವರ ಗಮನಕ್ಕೆ ತರಲು ಮುಂದಾದ ರೇಣುಕಾಚಾರ್ಯ ನೇತೃತ್ವದ ಕೆಲ‌ವು ಶಾಸಕರು ಕಾವೇರಿ ನಿವಾಸದಲ್ಲಿ ಬೆಳಗ್ಗೆ ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿದ್ದಾರೆ. ಎಂ.ಪಿ. ರೇಣುಕಾಚಾರ್ಯ, ರಾಜೂ ಗೌಡ, ಬಸವರಾಜ ದಡೆಸಗೂರು, ಬೆಳ್ಳಿ ಪ್ರಕಾಶ್, ನಿರಂಜನ ಕುಮಾರ್ ಸೇರಿ 10ಕ್ಕೂ ಹೆಚ್ಚು ಶಾಸಕರು ಸಿಎಂ ಭೇಟಿಯಾಗಿದ್ದಾರೆ. ಸಿ.ಪಿ ಯೋಗೇಶ್ವರ್ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ನಡೆಸುತ್ತಿರುವ ಬೆಳವಣಿಗೆಗಳ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದಾರೆ.

ಸಿ.ಪಿ. ಯೋಗೇಶ್ವರ್ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡುವುದೇ ಸೂಕ್ತ ಎಂಬ ಅಭಿಪ್ರಾಯ ಹೊಂದಿರುವ ರೇಣುಕಾಚಾರ್ಯ ಟೀಂನ ಕೆಲ ಶಾಸಕರು ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದಾರೆ. ಬಿ.ಎಸ್. ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ. ಈ ಕುರಿತು ಬಿಜೆಪಿ ಶಾಸಕರಲ್ಲಿ ಕೆಲವರು ಸಹಿಗಳನ್ನು ಸಂಗ್ರಹಿಸಿ ಹೈಕಮಾಂಡ್​ ಬಳಿಯೂ ಹೋಗಿದ್ದರು. ಆದರೆ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸದ್ಯಕ್ಕೆ ಆಸಕ್ತಿ ತೋರದ ಬಿಜೆಪಿ ಹೈಕಮಾಂಡ್ ನಾಯಕರು ರಾಜ್ಯದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: Mehul Choksi: ಊದಿದ ಕಣ್ಣು, ಕೈಗಳಲ್ಲಿ ಗಾಯ; ಡೊಮಿನಿಕಾ ಜೈಲಿನಲ್ಲಿರುವ ಮೆಹುಲ್ ಚೋಕ್ಸಿ ಮೊದಲ ಫೋಟೋ ರಿಲೀಸ್

ಹೀಗಿದ್ದರೂ ಸಚಿವ ಸಿ.ಪಿ. ಯೋಗೇಶ್ವರ್ ಕರ್ನಾಟಕದಲ್ಲಿ ಬಿಜೆಪಿಯ ವರ್ತನೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ನನ್ನ ಇಲಾಖೆಯಲ್ಲಿ ಬೇರೊಬ್ಬರ ಹಸ್ತಕ್ಷೇಪವನ್ನು ನಾನು ಸಹಿಸುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಬಿಜೆಪಿಯಾಗಿ ಉಳಿದಿಲ್ಲ. ಜೆಡಿಎಸ್ ಜೊತೆ ಬಿಜೆಪಿಗೆ ಹೊಂದಾಣಿಕೆಯಿದೆ ಎಂದು ಸ್ವಪಕ್ಷದವರ ವಿರುದ್ಧವೇ ಸಿ.ಪಿ. ಯೋಗೇಶ್ವರ್ ಹರಿಹಾಯ್ದಿದ್ದರು.

ನನ್ನ ಅಧಿಕಾರದಲ್ಲಿ ನನ್ನ ಮಗ ಮೂಗು ತೂರಿಸುವುದು ಸರಿಯಲ್ಲ. ಆದರೆ, ಕರ್ನಾಟಕದಲ್ಲಿ ಇದೇ‌ ನಡೆಯುತ್ತಿದೆ ಎನ್ನುವ ಮೂಲಕ ಸರ್ಕಾರದ ಆಡಳಿತದಲ್ಲಿ ಸಿಎಂ ಯಡಿಯೂರಪ್ಪನವರ ಮಗ ಬಿ.ವೈ. ವಿಜಯೇಂದ್ರ ಹಸ್ತಕ್ಷೇಪ ಮಾಡುವ ಬಗ್ಗೆ ಪರೋಕ್ಷವಾಗಿ ಸಿ.ಪಿ. ಯೋಗೇಶ್ವರ್ ಆಕ್ಷೇಪ ವ್ಯಕ್ತಪಡಿಸಿದ್ದರು. ನಮ್ಮ ಪಕ್ಷದ ಕೆಲವು ಸ್ನೇಹಿತರು ನನ್ನ ಬಗ್ಗೆ ಮಾತನಾಡುತ್ತಿರುವುದು ಗೊತ್ತು. ಅದನ್ನು ಮಾತನಾಡಿಸುತ್ತಿರುವುದು ಯಾರೆಂಬ ಬಗ್ಗೆಯೂ ಗೊತ್ತು. ಇದು ಶುದ್ಧ ಬಿಜೆಪಿ ಸರ್ಕಾರ ಆಗಿ ಉಳಿದಿಲ್ಲ. ಮೂರು ಗುಂಪಿನ ಸರ್ಕಾರ ಆಗಿದೆ. ಮೂರು ರಾಜಕೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ. ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಜತೆ ಬಿಜೆಪಿ ಸರ್ಕಾರ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಸಿ.ಪಿ. ಯೋಗೇಶ್ವರ್ ಬಾಂಬ್ ಸಿಡಿಸಿದ್ದರು.

ಇದನ್ನೂ ಓದಿ: Karnataka Lockdown Extension: ಕರ್ನಾಟಕದಲ್ಲಿ ಲಾಕ್​ಡೌನ್ ವಿಸ್ತರಣೆ ಬಗ್ಗೆ ಜೂನ್ 6ರೊಳಗೆ ತೀರ್ಮಾನ; ಸಿಎಂ ಯಡಿಯೂರಪ್ಪಕರ್ನಾಟಕದಲ್ಲಿ ಈಗ ಕೋವಿಡ್ ಕೆಲಸ ಮಾತ್ರ ನಡೆಯುತ್ತಿದೆ. ಬೇರೆ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಶಾಸಕರಿಗೆ ಈ ಹಿಂದೆಯೇ ಸೂಚಿಸಿದ್ದೆ, ಈಗಲೂ ಅದೇ ಸೂಚನೆ ಕೊಡುತ್ತಿದ್ದೇನೆ. ಈಗ ಕೋವಿಡ್ ಕೆಲಸ ಮಾಡಬೇಕು, ಬೇರೆ ರಾಜಕೀಯ ಚಟುವಟಿಕೆ ಮಾಡಬಾರದು ಎಂದು ಭಿನ್ನಮತೀಯ ಶಾಸಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ ಕೂಡ ಎಚ್ಚರಿಕೆ ನೀಡಿದ್ದರು.

ಆದರೆ, ಸಿಎಂ ಬಿ.ಎಸ್. ಯಡಿಯೂರಪ್ಪ ಸದ್ಯಕ್ಕೆ ಸೇಫ್ ಆಗಿದ್ದು, ಕರ್ನಾಟಕದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂದು ಬಿಜೆಪಿ ಹೈಕಮಾಂಡಿನಿಂದ ಬಂಡಾಯಗಾರರಿಗೆ ಸ್ಪಷ್ಟ ಸಂದೇಶ ರವಾನಿಸಿದೆ. ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ದೆಹಲಿಗೆ ದಂಡಯಾತ್ರೆ ಕೈಗೊಂಡಿದ್ದ ಸಚಿವ ಸಿ.ಪಿ ಯೋಗೇಶ್ವರ್‌, ಶಾಸಕ ಅರವಿಂದ ಬೆಲ್ಲದ್ ಅವರಿಗೆ ಹೈಕಮಾಂಡ್ ನಾಯಕರು ಸಮಯ ನೀಡಿರಲಿಲ್ಲ. ಬಿಜೆಪಿ ನಾಯಕರಾದ ಅರುಣ್ ಸಿಂಗ್, ಜೆಪಿ ನಡ್ಡಾ ಸೇರಿ ಹಲವು ನಾಯಕರ ಭೇಟಿಗೆ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ, ನಿರಾಸೆಯಿಂದ ರಾಜ್ಯ ಬಿಜೆಪಿ ನಾಯಕರು ದೆಹಲಿಯಿಂದ ವಾಪಾಸಾಗಿದ್ದರು.

ಇದನ್ನೂ ಓದಿ: BS Yediyurappa: ಸಿಎಂ ಯಡಿಯೂರಪ್ಪ ಸದ್ಯಕ್ಕೆ ಸೇಫ್; ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯಿಲ್ಲ ಎಂದ ಬಿಜೆಪಿ ಹೈಕಮಾಂಡ್

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮಾಡಬೇಕೆಂಬ ಒತ್ತಾಯ ಹೆಚ್ಚಾಗುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ರಾಜ್ಯದ ಬಿಜೆಪಿ ಶಾಸಕರ ಸಭೆ ಕರೆಯುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಜೂನ್ 7ರಂದು ಯಡಿಯೂರಪ್ಪ ಶಾಸಕರ ಸಭೆ ಕರೆದಿದ್ದಾರೆ.

ಸರ್ಕಾರ ಮತ್ತು ಪಕ್ಷದ ನಾಯಕರು ನಡುವಿನ ಅಂತರ, ಸಂಪುಟ ಸಚಿವರ ಒಳಜಗಳ, ಹಾಗೂ ಸಿಎಂ ಪಟ್ಟಕ್ಕಾಗಿ ದೆಹಲಿಯಲ್ಲಿ ವಿವಿಧ ನಾಯಕರು ಲಾಬಿ ನಡೆಸುತ್ತಿದ್ದಾರೆ. ಒಂದು ವೇಳೆ ಹೈಕಮಾಂಡ್ ಒಪ್ಪಿದರೆ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಖಚಿತ ಎನ್ನುತ್ತಿವೆ ಮೂಲಗಳು. ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪೂರ್ಣ ಅವಧಿಯನ್ನು ಮುಗಿಸಲಿದ್ದಾರೆ ಎಂದು ತೇಪೆ ಹಚ್ಚುತ್ತಿರುವ ಕೆಲವು ನಾಯಕರು ಒಂದೆಡೆಯಾದರೆ ಸದ್ದಿಲ್ಲದೆ ಸಿಎಂ ಯಡಿಯೂರಪ್ಪನವರ ವಿರುದ್ಧ ಸಹಿ ಸಂಗ್ರಹಿಸಿದವರ ತಂಡ ಇನ್ನೊಂದೆಡೆ.
Youtube Video

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಡಿಸಿಎಂ ಲಕ್ಷ್ಮಣ ಸವದಿ, ಅರವಿಂದ್ ಬೆಲ್ಲದ, ಬಸವರಾಜ ಬೊಮ್ಮಾಯಿ ಮತ್ತು ಮುರುಗೇಶ್ ನಿರಾಣಿ ಅವರು ಸಿಎಂ ಸ್ಥಾನದ ರೇಸಿನಲ್ಲಿದ್ದಾರೆ ಎನ್ನಲಾಗುತ್ತಿದೆ. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿವೆ. ವಿಜಯೇಂದ್ರ ಆಡಳಿತದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರೇ ಅಸಮಾಧಾನವನ್ನೂ ಹೊರಹಾಕಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರ ಬದಲಿಗೆ ಬೇರಾರನ್ನೂ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ಹೈಕಮಾಂಡ್ ಸಿದ್ಧವಾಗಿಲ್ಲ ಎಂದೂ ಹೇಳಲಾಗುತ್ತಿದೆ.
Published by: Sushma Chakre
First published: May 30, 2021, 12:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories