Karnataka Politics: ಆತ ಬೊಗಳುತ್ತಲೇ ಇರಲಿ, ಯಡಿಯೂರಪ್ಪನವರೇ ನಮ್ಮ ನಾಯಕ; ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

Karnataka Leadership Change: ಬಿಜೆಪಿ ಹೈಕಮಾಂಡ್ ನಾಯಕರು ಯಡಿಯೂರಪ್ಪನವರೇ ನಾಯಕರು ಅಂತ ಹೇಳಿದ್ದಾರೆ. ಯಾರೋ ಒಬ್ಬರು ಬೊಗಳುತ್ತಿದ್ದಾರೆ. ಅವರು ಬೊಗಳಿಕೊಂಡೇ ಇರಲಿ ಎಂದು ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕಿಡಿ ಕಾರಿದ್ದಾರೆ.

ಎಂಪಿ ರೇಣುಕಾಚಾರ್ಯ

ಎಂಪಿ ರೇಣುಕಾಚಾರ್ಯ

  • Share this:
    ಬೆಂಗಳೂರು (ಮೇ 30): ಯಾರೋ ಒಬ್ಬಿಬ್ಬರು ಪಕ್ಷಕ್ಕೆ ಧಕ್ಕೆ ಮಾಡಿದರೆ ನಮ್ಮ ಪಕ್ಷಕ್ಕೆ ಏನೂ ಆಗುವುದಿಲ್ಲ. ಬಿಜೆಪಿ ಪಕ್ಷದ ಹೈಕಮಾಂಡ್ ನಾಯಕರು ಯಡಿಯೂರಪ್ಪನವರೇ ನಾಯಕರು ಅಂತ ಹೇಳಿದ್ದಾರೆ. ಯಾರೋ ಒಬ್ಬರು ಬೊಗಳುತ್ತಿದ್ದಾರೆ. ಅವರು ಬೊಗಳಿಕೊಂಡೇ ಇರಲಿ. ಸುಮ್ಮನೆ ದೆಹಲಿಗೆ ಹೋಗಿ ಗೇಟ್ ಮುಟ್ಟಿ ಬರಬೇಕು ಅಷ್ಟೇ. ಅವರಿಗೆ ದೆಹಲಿಯಲ್ಲೂ ಛೀಮಾರಿ ಹಾಕಿದ್ದಾರೆ ಎಂದು ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕಿಡಿ ಕಾರಿದ್ದಾರೆ.

    ಸಚಿವ ಸಿ.ಪಿ. ಯೋಗೇಶ್ವರ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಆಗದೆ ಇದ್ದವರು. ಕಾಂಗ್ರೆಸ್​ನಲ್ಲಿ ಸೋತು ಬಿಜೆಪಿಗೆ ಬಂದವರು. ಅವರ ಮೆಗಾ ಸಿಟಿ ಹಗರಣ ಎಲ್ಲರಿಗೂ ಗೊತ್ತಿದೆ. ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ. ಇಂತಹ ಸಂದರ್ಭದಲ್ಲಿ ಸೇವಕರಾಗಿ ಕೆಲಸ ಮಾಡ್ಬೇಕು. ಇದು ಬಿಜೆಪಿ ಸರ್ಕಾರ. ಇದು ಮೂರು ಪಕ್ಷದ ಸರ್ಕಾರ ಅಲ್ಲ. ಆ ರೀತಿ ಮಾತನಾಡುವುದಾದರೆ ಅವರು ರಾಜೀನಾಮೆ ಕೊಟ್ಟು ಹೋಗಲಿ.  ಕೊರೋನಾದಿಂದ ಇಡೀ ದೇಶವೇ ಕಂಗಾಲಾಗಿದೆ. ಇಂತಹ ಸಮಯದಲ್ಲಿ ಯಾರೂ ರಾಜಕಾರಣ ಮಾಡಬಾರದು. ನಾನಂತೂ ಈ ಟೈಮ್​ನಲ್ಲಿ ರಾಜಕೀಯ ಮಾತನಾಡುವುದಿಲ್ಲ. ಯಾರೋ ರಾಜಕೀಯ ಮಾತನಾಡುತ್ತಾರೆ ಎಂದರೆ ನಾನು ಮಾತನಾಡುವುದಿಲ್ಲ. ಯಾರು ರಾಜಕೀಯ ಮಾತಾಡುತ್ತಿದ್ದಾರೋ ಅವರು ರಾಜೀನಾಮೆ ಕೊಟ್ಟು ಹೋಗಲಿ. ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

    ಸಿಎಂ ವಿರುದ್ಧ ಯಾರೋ ಒಬ್ಬಿಬ್ಬರು ಆಟ ಆಡಿದರೆ ಏನೂ ಪ್ರಯೋಜನ ಆಗಲ್ಲ. ನಮ್ಮನ್ನು ವಿಜಯೇಂದ್ರ ಕಳಿಸಿದ್ದಾರೆ ಎಂದು ಹೇಳಬಹುದು.‌ ಆದರೆ, ನಮ್ಮನ್ನು ಯಾರೂ ಕಳಿಸಿಲ್ಲ. ನಾವು 18 ಜನ ಶಾಸಕರು ಪ್ರಾಮಾಣಿಕವಾಗಿ ಬಂದು ಯಡಿಯೂರಪ್ಪನವರನ್ನು ಭೇಟಿಯಾಗಿದ್ದೇವೆ. ಸಿ.ಪಿ. ಯೋಗೇಶ್ವರ್ ಸೋತು ಸುಣ್ಣವಾಗಿದ್ದಾರೆ. ಅವರು ಮೂಲ ಬಿಜೆಪಿ ಪಕ್ಷದವರಲ್ಲ. 2008ರಲ್ಲಿ ಬಿಜೆಪಿ ಚಿಹ್ನೆಯಲ್ಲಿ ಗೆದ್ದು, ಅರಣ್ಯ ಮಂತ್ರಿಯಾಗಿ ಲೂಟಿ ಹೊಡೆದರು. ಮೆಗಾ ಸಿಟಿ ಹಗರಣ ಮಾಡಿದರು. ಅದಕ್ಕೆ ನನ್ನ ಬಳಿ ದಾಖಲೆಗಳಿವೆ. ನನ್ನ ವಿರುದ್ಧ ತೊಡೆ ತಟ್ಟಲಿ, ಆಗ ನಾನು ಎಲ್ಲವನ್ನೂ ಬಯಲಿಗೆಳೆಯುತ್ತೇನೆ. ಆಮೇಲೆ ಕಾಂಗ್ರೆಸ್ ಸೇರಿ, ಸೈಕಲ್ ಏರಿದರು. ಬಳಿಕ ಮತ್ತೆ ಬಿಜೆಪಿಗೆ ಬಂದರು. ಸೋತು ಸುಣ್ಣವಾಗಿದ್ದರೂ ಅವರನ್ನು ನಮ್ಮ ಪಕ್ಷದವರು ಎಂಎಲ್‌ಸಿ, ಮಾಡಿ, ಸಚಿವರಾಗಿ ಮಾಡಿದರು. ಅದನ್ನು ಯೋಗೇಶ್ವರ್ ಮರೆಯಬಾರದು ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

    ಇದನ್ನೂ ಓದಿ: Karnataka Politics | ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿಚಾರ; ಸಿ.ಪಿ. ಯೋಗೇಶ್ವರ್ ನಡೆ ಬಗ್ಗೆ ಸಿಎಂಗೆ ಮಾಹಿತಿ ನೀಡಿದ ಬಿಜೆಪಿ ಶಾಸಕರು

    ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಕುರಿತ ಚರ್ಚೆಗಳೂ ಇನ್ನೂ ತಣ್ಣಗಾಗಿಲ್ಲ. ಸಿಎಂ ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್ ಭೇಟಿಗೂ ನಿರ್ಧರಿಸಿದ್ದ ಸಚಿವ ಸಿ.ಪಿ. ಯೋಗೇಶ್ವರ್ ಬಹಿರಂಗವಾಗಿಯೇ ತಮ್ಮದೇ ಪಕ್ಷದ ವಿರುದ್ಧ ಕಿಡಿಕಾರಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಸಿಎಂ ಯಡಿಯೂರಪ್ಪನವರಿಗೆ ಕೆಲವು ವಿಚಾರ ತಿಳಿಸುವ ಸಲುವಾಗಿ ಬಿಜೆಪಿಯ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ.

    ಯಡಿಯೂರಪ್ಪ ವಿರೋಧಿ ಬಣದಿಂದ ಸಹಿ ಸಂಗ್ರಹಕ್ಕೆ ತೆರೆ ಮರೆಯಲ್ಲಿ ಪ್ರಯತ್ನ ನಡೆಯುತ್ತಿದೆ. ಈ ಬೆಳವಣಿಗೆಗಳನ್ನು ಸಿಎಂ ಯಡಿಯೂರಪ್ಪನವರ ಗಮನಕ್ಕೆ ತರಲು ಮುಂದಾದ ರೇಣುಕಾಚಾರ್ಯ ನೇತೃತ್ವದ ಕೆಲ‌ವು ಶಾಸಕರು ಕಾವೇರಿ ನಿವಾಸದಲ್ಲಿ ಬೆಳಗ್ಗೆ ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿದ್ದಾರೆ. ಎಂ.ಪಿ. ರೇಣುಕಾಚಾರ್ಯ, ರಾಜೂ ಗೌಡ, ಬಸವರಾಜ ದಡೆಸಗೂರು, ಬೆಳ್ಳಿ ಪ್ರಕಾಶ್, ನಿರಂಜನ ಕುಮಾರ್ ಸೇರಿ 10ಕ್ಕೂ ಹೆಚ್ಚು ಶಾಸಕರು ಸಿಎಂ ಭೇಟಿಯಾಗಿದ್ದಾರೆ. ಸಿ.ಪಿ ಯೋಗೇಶ್ವರ್ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ನಡೆಸುತ್ತಿರುವ ಬೆಳವಣಿಗೆಗಳ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: BS Yediyurappa: ಸಿಎಂ ಯಡಿಯೂರಪ್ಪ ಸದ್ಯಕ್ಕೆ ಸೇಫ್; ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯಿಲ್ಲ ಎಂದ ಬಿಜೆಪಿ ಹೈಕಮಾಂಡ್

    ಸಿ.ಪಿ. ಯೋಗೇಶ್ವರ್ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡುವುದೇ ಸೂಕ್ತ ಎಂಬ ಅಭಿಪ್ರಾಯ ಹೊಂದಿರುವ ರೇಣುಕಾಚಾರ್ಯ ಟೀಂನ ಕೆಲ ಶಾಸಕರು ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದಾರೆ. ಬಿ.ಎಸ್. ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ. ಈ ಕುರಿತು ಬಿಜೆಪಿ ಶಾಸಕರಲ್ಲಿ ಕೆಲವರು ಸಹಿಗಳನ್ನು ಸಂಗ್ರಹಿಸಿ ಹೈಕಮಾಂಡ್​ ಬಳಿಯೂ ಹೋಗಿದ್ದರು. ಆದರೆ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸದ್ಯಕ್ಕೆ ಆಸಕ್ತಿ ತೋರದ ಬಿಜೆಪಿ ಹೈಕಮಾಂಡ್ ನಾಯಕರು ರಾಜ್ಯದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

    ಹೀಗಿದ್ದರೂ ಸಚಿವ ಸಿ.ಪಿ. ಯೋಗೇಶ್ವರ್ ಕರ್ನಾಟಕದಲ್ಲಿ ಬಿಜೆಪಿಯ ವರ್ತನೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ನನ್ನ ಇಲಾಖೆಯಲ್ಲಿ ಬೇರೊಬ್ಬರ ಹಸ್ತಕ್ಷೇಪವನ್ನು ನಾನು ಸಹಿಸುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಬಿಜೆಪಿಯಾಗಿ ಉಳಿದಿಲ್ಲ. ಜೆಡಿಎಸ್ ಜೊತೆ ಬಿಜೆಪಿಗೆ ಹೊಂದಾಣಿಕೆಯಿದೆ ಎಂದು ಸ್ವಪಕ್ಷದವರ ವಿರುದ್ಧವೇ ಸಿ.ಪಿ. ಯೋಗೇಶ್ವರ್ ಹರಿಹಾಯ್ದಿದ್ದರು.

    ನನ್ನ ಅಧಿಕಾರದಲ್ಲಿ ನನ್ನ ಮಗ ಮೂಗು ತೂರಿಸುವುದು ಸರಿಯಲ್ಲ. ಆದರೆ, ಕರ್ನಾಟಕದಲ್ಲಿ ಇದೇ‌ ನಡೆಯುತ್ತಿದೆ ಎನ್ನುವ ಮೂಲಕ ಸರ್ಕಾರದ ಆಡಳಿತದಲ್ಲಿ ಸಿಎಂ ಯಡಿಯೂರಪ್ಪನವರ ಮಗ ಬಿ.ವೈ. ವಿಜಯೇಂದ್ರ ಹಸ್ತಕ್ಷೇಪ ಮಾಡುವ ಬಗ್ಗೆ ಪರೋಕ್ಷವಾಗಿ ಸಿ.ಪಿ. ಯೋಗೇಶ್ವರ್ ಆಕ್ಷೇಪ ವ್ಯಕ್ತಪಡಿಸಿದ್ದರು. ನಮ್ಮ ಪಕ್ಷದ ಕೆಲವು ಸ್ನೇಹಿತರು ನನ್ನ ಬಗ್ಗೆ ಮಾತನಾಡುತ್ತಿರುವುದು ಗೊತ್ತು. ಅದನ್ನು ಮಾತನಾಡಿಸುತ್ತಿರುವುದು ಯಾರೆಂಬ ಬಗ್ಗೆಯೂ ಗೊತ್ತು. ಇದು ಶುದ್ಧ ಬಿಜೆಪಿ ಸರ್ಕಾರ ಆಗಿ ಉಳಿದಿಲ್ಲ. ಮೂರು ಗುಂಪಿನ ಸರ್ಕಾರ ಆಗಿದೆ. ಮೂರು ರಾಜಕೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ. ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಜತೆ ಬಿಜೆಪಿ ಸರ್ಕಾರ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಸಿ.ಪಿ. ಯೋಗೇಶ್ವರ್ ಬಾಂಬ್ ಸಿಡಿಸಿದ್ದರು.

    ಆದರೆ, ಸಿಎಂ ಬಿ.ಎಸ್. ಯಡಿಯೂರಪ್ಪ ಸದ್ಯಕ್ಕೆ ಸೇಫ್ ಆಗಿದ್ದು, ಕರ್ನಾಟಕದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂದು ಬಿಜೆಪಿ ಹೈಕಮಾಂಡಿನಿಂದ ಬಂಡಾಯಗಾರರಿಗೆ ಸ್ಪಷ್ಟ ಸಂದೇಶ ರವಾನಿಸಿದೆ.

    ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ದೆಹಲಿಗೆ ದಂಡಯಾತ್ರೆ ಕೈಗೊಂಡಿದ್ದ ಸಚಿವ ಸಿ.ಪಿ ಯೋಗೇಶ್ವರ್‌, ಶಾಸಕ ಅರವಿಂದ ಬೆಲ್ಲದ್ ಅವರಿಗೆ ಹೈಕಮಾಂಡ್ ನಾಯಕರು ಸಮಯ ನೀಡಿರಲಿಲ್ಲ. ಬಿಜೆಪಿ ನಾಯಕರಾದ ಅರುಣ್ ಸಿಂಗ್, ಜೆಪಿ ನಡ್ಡಾ ಸೇರಿ ಹಲವು ನಾಯಕರ ಭೇಟಿಗೆ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ, ನಿರಾಸೆಯಿಂದ ರಾಜ್ಯ ಬಿಜೆಪಿ ನಾಯಕರು ದೆಹಲಿಯಿಂದ ವಾಪಾಸಾಗಿದ್ದರು.
    Published by:Sushma Chakre
    First published: