ದರ್ಶನ್ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ನಾನು ದಲಿತನೇ ಅಲ್ಲ ಎಂದ ವೇಟರ್ ಬಿಚ್ಚಿಟ್ಟರು ಅಸಲಿ ಕಥೆ

ನಾನು ದಲಿತ ಸಮುದಾಯಕ್ಕೆ ಸೇರಿದವನಲ್ಲ, ನಾನು ನಾಯರ್ ಸಮುದಾಯಕ್ಕೆ ಸೇರಿದವನು. ಅಂದು ದರ್ಶನ್ ಅವರು ನನ್ನ ಮೇಲೆ ಸಿಟ್ಟಾಗಿದ್ದು ನಿಜ. ಆದರೆ ನನ್ನ ಮೇಲೆ ಯಾವುದೇ ರೀತಿಯ ದೈಹಿಕ ಹಲ್ಲೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ ವೇಟರ್​​ ಗಂಗಾಧರ್​.

ದರ್ಶನ್​​, ಇಂದ್ರಜಿತ್​ ಲಂಕೇಶ್​​

ದರ್ಶನ್​​, ಇಂದ್ರಜಿತ್​ ಲಂಕೇಶ್​​

  • Share this:
ಬೆಂಗಳೂರು: ಮೈಸೂರಿನ ಸಂದೇಶ ಪ್ರಿನ್ಸ್​​​ ಹೋಟೆಲ್​​ನಲ್ಲಿ ನಟ ದರ್ಶನ್​​ ದಲಿತ ವೇಟರ್​​ರೊಬ್ಬರಿಗೆ ಹಲ್ಲೆ ಮಾಡಿದ್ದಾರೆ ಎಂಬ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಆರೋಪ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದ್ರಜಿತ್​ ಹಲ್ಲೆ ಆಗಿದೆ ಎಂದು ಹೆಸರಿಸಿದ್ದ ವೇಟರ್​​ ಗಂಗಾಧರ್​ ಇಂದು ಮಾಧ್ಯಮಗಳ ಎದುರು ಪ್ರತ್ಯಕ್ಷವಾಗಿ ಸ್ಪಷ್ಟನೆ ನೀಡಿದರು. ನಾನು ದಲಿತ ಸಮುದಾಯಕ್ಕೆ ಸೇರಿದವನಲ್ಲ, ನಾನು ನಾಯರ್ ಸಮುದಾಯಕ್ಕೆ ಸೇರಿದವನು. ಅಂದು ದರ್ಶನ್ ಅವರು ನನ್ನ ಮೇಲೆ ಸಿಟ್ಟಾಗಿದ್ದು ನಿಜ. ಆದರೆ ನನ್ನ ಮೇಲೆ ಯಾವುದೇ ರೀತಿಯ ದೈಹಿಕ ಹಲ್ಲೆ ಮಾಡಿಲ್ಲ. ಹಲ್ಲೆಯಾಗಿದ್ದರೆ ನನ್ನ ಮುಖದಲ್ಲಿ ಗಾಯಗಳಿರಬೇಕಿತ್ತು. ನೋಡಿ ಯಾವುದೇ ಗಾಯಗಳೂ ಇಲ್ಲ ಎಂದು ಮಾಸ್ಕ್ ತೆಗೆದು ಮುಖ ತೋರಿಸಿದರು.

ಇನ್ನು ನನಗೆ ಮದುವೆಯಾಗಿಲ್ಲ ನಾನೂ ಈಗಲೂ ಬ್ಯಾಚ್ಯುಲರ್. ಹಾಗಾಗಿ ನನ್ನ ಹೆಂಡತಿ ಹೋಟೆಲ್ ಬಳಿ ಪೊರಕೆ ಹಿಡಿದು ಬಂದಿದ್ದಳು ಎಂಬುದು ಸುಳ್ಳು. ಬಹುಷಃ ಹೋಟೆಲ್ ಕ್ಲೀನ್ ಮಾಡುವ ಮಹಿಳೆಯನ್ನು ನೋಡಿ ಹಾಗೆ ಭಾವಿಸಿರಬಹುದು ಎಂದು ಸ್ಪಷ್ಟನೆ ನೀಡಿದರು.

ಇದರ ಬೆನ್ನಲ್ಲೇ ನಿರ್ದೇಶನ ಇಂದ್ರಜಿತ್​ ಅವರು ವಕೀಲ ಶ್ಯಾಮಸುಂದರ ಜೊತೆಯಾಗಿ ಸುದ್ದಿಗೋಷ್ಠಿ ನಡೆಸಿದರು. ನನ್ನ ಮಾತಿಗೆ ನಾನು ಬದ್ದ. ಬಡವರು, ಅಲ್ಲಿನ ವೆಟರ್ ಗಳಿಗೆ ನ್ಯಾಯ ಕೊಡಿಸಲು ಬಂದಿದ್ದೇನೆ ಎಂದರು ಇಂದ್ರಜಿತ್​. ಬಡವರು, ಸಾಮಾನ್ಯ ಜನರಿಗಾಗಿ ಬಂದಿದ್ದೇನೆ. ಯಾರು ನೋವು ತಿಂದಿದ್ದಾರೆ ಅವರಿಗೆ ಕ್ಷಮೆ ಕೇಳಿ, ನ್ಯಾಯ ಒದಗಿಸಿ ಕೊಡಿ. ಇದಕ್ಕಿಂತ ಬೇರೆ ನನಗೆ ಬೇಕಿಲ್ಲ‌. ಪೊಲೀಸರ ತನಿಖೆ ಮತ್ತು ಮಾಧ್ಯಮದವರ ತನಿಖೆಗೆ ನಾನು ಬದ್ದ ಎಂದರು.

ಇನ್ನು ಕುಮಾರಸ್ವಾಮಿ ಅವರನ್ನು ಭೇಟಿಯಾಗಿರುವ ಫೋಟೋ ವೈರಲ್​ ಆಗಿರುವ ಬಗ್ಗೆಯೂ ಸ್ಪಷ್ಟನೆ ನೀಡಿದರು.  ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರನ್ನು ಇಲ್ಲಿ ತರಬೇಡಿ. ನಾನು ಕುಮಾರಸ್ವಾಮಿಯವರನ್ನ ಹಲವು ಬಾರಿ ಇಂಟರ್ ವ್ಯೂ ಮಾಡಿದ್ದೇನೆ ಎಂದರು. ಮೇರು ನಟ ಹೇಗಿರಬೇಕು ಅನ್ನೋದನ್ನ ರಾಜ್ ಕುಮಾರ್ ನೋಡಿ ಕಲಿಯಬೇಕು. ನೀವು ಸಮಾಜದಲ್ಲಿ ಇರುವ ಮೇರು ನಟ, ನೀವು ಮಾದರಿಯಾಗಿರಬೇಕು ಎಂದು ದರ್ಶನ್​ಗೆ ಸಲಹೆ ನೀಡಿದರು.

ಇದನ್ನೂ ಓದಿ: ಸಿನಿಮಾದವ್ರಿಗೇ ಚಳ್ಳೆಹಣ್ಣು ತಿನಿಸಿದ ಅರುಣಾ ಕುಮಾರಿ ಕತೆ ಈಗ ಸಿನಿಮಾ ಆಗ್ತಿದೆ...!

ವೇಟರ್​​ಗಳಿಗೆ ನಾಳೆ ಕೆಲಸ ಕಳೆದುಕೊಳ್ತಾರೆ ಅನ್ನೋ ಭಯ ಇದೆ. ಹೀಗಾಗಿ ಸತ್ಯ ಹೇಳುತ್ತಿಲ್ಲ. ನಾನು ಸಂದೇಶ್ ನಾಗರಾಜ್ ಮತ್ತು ಮಗನಿಗೆ ಹೇಳ್ತಿನಿ ಇದನ್ನ ಇನ್ನೂ ಮುಂದುವರೆಸಬೇಡಿ. ಗೋಪಾಲ ರಾಜ್ ಇರಬಹುದು, ಗಂಗಾಧರ್ ಇರಬಹುದು ಅವರು ಬಡವರು. ಅವರು ಸಮಾಜದಲ್ಲಿ ಇದನ್ನ ಫೇಸ್ ಮಾಡೋಕೆ ಅಗಲ್ಲ. ನಾನು ಹಲವಾರು ಮಾಹಿತಿ ಕಲೆ ಹಾಕಿದ್ದೇನೆ. ನಾನು ಪೊಲೀಸರ ತನಿಖೆಗೆ ಸಹಕಾರ ಕೊಡ್ತೇನೆ. ಮೈಸೂರಿನಲ್ಲಿ ನಡೆಯೋ ಕೆಲಸಗಳ ಬಗ್ಗೆ ಹಲವಾರು ಜನ ಫೋನ್ ಮಾಡ್ತಿದ್ದಾರೆ.

ನಾನು ಸಿಬಿಐ ಅಲ್ಲ. ಇನ್ವೆಸ್ಟಿಂಗ್ ಏಜೆನ್ಸಿ ಅಲ್ಲ. ಪತ್ರಕರ್ತನಾಗಿ ನಾನು ಇದನ್ನ ಬೆಳಕಿಗೆ ತಂದಿದ್ದೆ. ಡ್ರಗ್ ಕೇಸ್ ಬಗ್ಗೆಯೂ ದಾಖಲೆಗಳನ್ನ ಸಿಸಿಬಿ ಪೊಲೀಸರಿಗೆ ಕೊಟ್ಟಿದ್ದೆ. ಈ ಬಗ್ಗೆ ತನಿಖೆ ನಡೆಸಿ ಹಲವರ ಬಂಧನವಾಯ್ತು. ಅದ್ರೆ ಇನ್ನೂ ಕೆಲವರ ವಿಚಾರ ಹೊರ ಬರಬೇಕಿತ್ತು ಎಂದರು. ಇನ್ನು ಇಂದ್ರಜಿತ್ ಲಂಕೇಶ್ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಕಚೇರಿ ಬಳಿ ಹತ್ತಕ್ಕೂ ಹೆಚ್ಚು ಪೊಲೀಸರ ನಿಯೋಜಿಸಲಾಗಿದೆ.

ಇತ್ತ ಮೈಸೂರಿನಲ್ಲಿ ವೇಟರ್​​​ ಗಂಗಾಧರ್​​ರಿಂದ ಕಾರ್ಮಿಕ ಸಂಘಟನೆ ಮಾಹಿತಿ ಪಡೆದುಕೊಂಡಿದೆ. ನನಗೆ ಯಾರು ಹಲ್ಲೆ ಮಾಡಿಲ್ಲ, ಬೈದ್ರು ಅಷ್ಟೇ ಅಂದಿದ್ದಾರೆ ಗಂಗಾಧರ್. ನಾವು ಮಾಧ್ಯಮಗಳಲ್ಲಿ ಬಂದ ಹಲ್ಲೆ ವಿಚಾರ ನೋಡಿ ಇಲ್ಲಿಗೆ ಬಂದು ವಿಚಾರಿಸಿದ್ವಿ, ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ರಾಜ್ಯ ಹೋಟೆಲ್ ಕಾರ್ಮಿಕರ ಸಂಘದ ಮಹಿಳಾ ಘಟಕದ ರಾಜ್ಯಧ್ಯಕ್ಷೆ ಪ್ರಿಯ ರಮೇಶ್ ತಿಳಿಸಿದರು.
Published by:Kavya V
First published: