ಯುಗಾದಿ ಹಬ್ಬದ ದಿನ ವಿದ್ಯುತ್ Shock ಹೊಡೆಯೋದು ಗ್ಯಾರೆಂಟಿ! ದರ ಏರಿಕೆಯ ‘ಬೇವು’ ಕೊಡಲು ನಡೆದಿದೆ ಪ್ಲಾನ್
ಯುಗಾದಿ ಹಬ್ಬದ ದಿನವೇ ನಿಮಗೆ ಪವರ್ ಶಾಕ್ ಕೊಡಲು ಬೆಸ್ಕಾಂ ಹಾಗೂ ಇತರೇ ವಿದ್ಯುತ್ಚ್ಛಕ್ತಿ ಕಂಪನಿಗಳು ನಿರ್ಧಾರ ಮಾಡಿದೆ. ಜನಸಾಮಾನ್ಯರಿಗೆ ವಿದ್ಯುತ್ ಬಿಲ್ ಬೆಲೆ ಏರಿಕೆಯ ಬೇವು ಕೊಡಲು ಇಲಾಖೆ ಮುಂದಾಗಿದೆ. ಈ ನಡುವೆ ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಮತ್ತೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಇದರ ಬೆನ್ನಲ್ಲೇ ವಿದ್ಯುತ್ ಹಾಗೂ ಅಗತ್ಯ ವಸ್ತುಗಳ ದರ ಏರಿಕೆಯಾದರೆ ಜನರ ಜೇಬಿಗೆ ಮತ್ತಷ್ಟು ಹೊರೆ ಬೀಳಲಿದೆ.
ಬೆಂಗಳೂರು: ಕೊರೋನಾ (Corona) ಅಬ್ಬರ ಕೊಂಚ ಕಡಿಮೆ ಆಯ್ತಪ್ಪ, ಈ ಬಾರಿಯಾದ್ರೂ ಖುಷಿಯಾಗಿ ಯುಗಾದಿ ಹಬ್ಬ (Yugadi Festival) ಮಾಡಬಹುದು, ಬೇವಿಗಿಂತ ಬೆಲ್ಲವೇ (Jaggery) ಜೀವನದಲ್ಲಿ ಜಾಸ್ತಿಯಾಗಿರಲಿ ಅಂತ ವಿಶ್ (Wish) ಮಾಡಬಹುದು ಅಂತ ನೀವು ಅಂದುಕೊಂಡಿದ್ದೀರಾ? ಹಾಗಿದ್ರೆ ಕೊಂಚ ಈ ಸುದ್ದಿ ಓದಿ, ಯುಗಾದಿ ಹಬ್ಬದ ದಿನವೇ ನಿಮಗೆ ಪವರ್ ಶಾಕ್ (Power Shock) ಕೊಡಲು ಬೆಸ್ಕಾಂ (BESCOM) ಹಾಗೂ ಇತರೇ ವಿದ್ಯುತ್ಚ್ಛಕ್ತಿ ಕಂಪನಿಗಳು ನಿರ್ಧಾರ ಮಾಡಿದೆ. ಜನಸಾಮಾನ್ಯರಿಗೆ ವಿದ್ಯುತ್ ಬಿಲ್ (Electricity Bill) ಬೆಲೆ ಏರಿಕೆಯ ಬೇವು ಕೊಡಲು ಇಲಾಖೆ ಮುಂದಾಗಿದೆ.
ಏಪ್ರಿಲ್ 1ರಿಂದಲೇ ವಿದ್ಯುತ್ ದರ ಏರಿಕೆ ಸಾಧ್ಯತೆ
ರಾಜ್ಯದ ಜನರಿಗೆ ಬೆಸ್ಕಾಂನಿಂದ ವಿದ್ಯುತ್ ದರ ಏರಿಕೆಯ ಶಾಕ್ ಎದುರಾಗುವ ಸಾಧ್ಯತೆಗಳಿವೆ. ಏಪ್ರಿಲ್ 1ರಿಂದ ವಿದ್ಯುತ್ ದರ ಹೆಚ್ಚಳಕ್ಕೆ ವಿದ್ಯಚ್ಛಕ್ತಿ ಸರಬರಾಜು ಕಂಪನಿಗಳು ಮುಂದಾಗಿವೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ವಿದ್ಯುತ್ ದರ ಪರಿಷ್ಕರಣೆಗೆ ರಚನೆಯಾಗಿರುವ ಕರ್ನಾಟಕ ವಿದ್ಯುತ್ ಪರಿಷ್ಕರಣ ಸಮಿತಿ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಹೊಸ ದರ ಪರಿಷ್ಕರಣೆಗೆ ಒಪ್ಪಿಗೆ ಕೊಡಲಿದೆ.
ವಿದ್ಯುತ್ ದರ ಏರಿಕೆಗೆ ಬೆಸ್ಕಾಂ ಬೇಡಿಕೆ
ಪ್ರತಿ ಯೂನಿಟ್ಗೆ 1.50 ರೂ. ಹೆಚ್ಚಿಸುವಂತೆ ಸರ್ಕಾರಕ್ಕೆ ಈಗಾಗಲೇ ಬೆಸ್ಕಾಂ ಪ್ರಸ್ತಾವನೆ ಕಳುಹಿಸಿದೆ. ಜನರಿಗೆ ಹೊರೆಯಾಗದಂತೆ ವಿದ್ಯುತ್ ದರ ಪರಿಷ್ಕರಣೆಯಾಗಲಿದೆ ಅಂತ ಬೆಸ್ಕಾಂ ತಿಳಿಸಿದೆ. 2022-23ರ ಸಾಲಿನಲ್ಲಿ ಪ್ರತಿ ಯೂನಿಟ್ಗೆ 35 ರಿಂದ 45 ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ತಿಂಗಳ ಅಂತ್ಯದಲ್ಲಿ ಹೊಸ ವಿದ್ಯುತ್ ದರ ಪರಿಷ್ಕರಣೆ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಬೆಸ್ಕಾಂ ಜೊತೆಗೆ ಇತರೇ ವಿದ್ಯುತ್ ಸರಬರಾಜು ಕಂಪನಿಗಳೂ ಸಹ ಬೆಲೆ ಏರಿಕೆಯ ಪ್ರಸ್ತಾಪವನ್ನು ಸರ್ಕಾರದ ಮುಂದೆ ಇಟ್ಟಿವೆ. ಮೆಸ್ಕಾಂ, ಚೆಸ್ಕಾಂ, ಹೆಸ್ಕಾಂ ಸೇರಿದಂತೆ ಇತರ ವಿದ್ಯುತ್ ಸರಬರಾಜು ಕಂಪನಿಗಳಿಂದ ವಿದ್ಯುತ್ ದರ ಪರಿಷ್ಕರಣೆಗೆ ಒತ್ತಾಯಿಸಲಾಗಿದೆ. ಕಂಪನಿಗಳ ನಿರ್ವಹಣೆ ವೆಚ್ಚ ಹೆಚ್ಚಳದ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಕೋರಲಾಗಿದೆ ಎಂದು ಬೆಸ್ಕಾಂ ತಾಂತ್ರಿಕ ವಿಭಾಗದ ನಿರ್ದೇಶಕರು ಹೇಳಿದ್ದಾರೆ.
ಶೀಘ್ರದಲ್ಲೇ ಬರಲಿದೆ ವಿದ್ಯುತ್ ದರದ ಹೊಸ ಪಟ್ಟಿ
ಈಗಾಗಲೇ ಫೆಬ್ರವರಿಯಲ್ಲಿ ಎಸ್ಕಾಂಗಳು ಹಾಗೂ ಸಾರ್ವಜನಿಕರಿಂದ ಕೆಇಆರ್ಸಿ ಅಭಿಪ್ರಾಯ ಸಂಗ್ರಹಿಸಿದೆ. ಈ ಹಿನ್ನೆಲೆ ಶೀಘ್ರದಲ್ಲೇ ಹೊಸ ವಿದ್ಯುತ್ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಿದೆ ಎಂದು ತಿಳಿದು ಬಂದಿದೆ. ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಕೆಇಆರ್ಸಿ ದರ ಪರಿಷ್ಕರಣೆ ಮಾಡುತ್ತದೆ.
ಶೀಘ್ರವೇ ಹಾಲು ಕೂಡ ‘ಬಿಸಿ’ಯಾಗೋ ಸಾಧ್ಯತೆ!
ಇನ್ನು ಈ ಏಪ್ರಿಲ್ನಿಂದ ಹಾಲಿನ ದರ ಕೂಡ ಏರಿಕೆಯಾಗುವ ಸಾಧ್ಯತೆ ಇದೆ. ಹಾಲು ಒಕ್ಕೂಟಗಳು ಬೆಲೆ ಏರಿಕೆಗೆ ಪಟ್ಟು ಹಿಡಿದಿದ್ದು, 5 ರೂಪಾಯಿ ಏರಿಕೆಗೆ ಮನವಿ ಮಾಡಿವೆ. ಕನಿಷ್ಠ 2 ರೂಪಾಯಿ ಏರಿಕೆ ಮಾಡುವಂತೆ ಸರ್ಕಾರಕ್ಕೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿದೆ. ಅಧಿವೇಶನ ಮುಗಿದ ಬಳಿಕವೇ ದರ ಏರಿಕೆಗೆ ಅನುಮತಿ ನೀಡಲಾಗುತ್ತದೆ ಎನ್ನಲಾಗಿದೆ.
ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಜನರಿಗೆ ಈಗ ಮತ್ತೆ ಬೆಲೆ ಏರಿಕೆಯ ಶಾಕ್ ತಟ್ಟಲಿದೆ. ಈಗಾಗಲೇ ದೈನಂದಿನ ವಸ್ತುಗಳ ಬೆಲೆಗಳು ಮುಗಿಲು ಮುಟ್ಟುತ್ತಿದ್ದು, ಜನರು ತತ್ತರಿಸುತ್ತಿದ್ದಾರೆ. ಮೊನ್ನೆಯಷ್ಟೇ LPG ದರ ದುಬಾರಿಯಾಗಿತ್ತು. ಈ ನಡುವೆ ವಿದ್ಯುತ್, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಮತ್ತೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಇದರ ಬೆನ್ನಲ್ಲೇ ವಿದ್ಯುತ್ ಹಾಗೂ ಅಗತ್ಯ ವಸ್ತುಗಳ ದರ ಏರಿಕೆಯಾದರೆ ಜನರ ಜೇಬಿಗೆ ಮತ್ತಷ್ಟು ಹೊರೆ ಬೀಳಲಿದೆ.