Bengaluru: ಎಲ್ಲಾ ರೀತಿಯ ನಷ್ಟ ತಂದಿಟ್ಟ Coronaದಿಂದ ಆಗಿದ್ದು ಇದೊಂದೇ ಲಾಭ ನೋಡಿ..!

ಟ್ರಾಫಿಕ್​ ವಿಷಯದಲ್ಲಿ ಬೆಂಗಳೂರು 2021ರಲ್ಲಿ 10ನೇ ಸ್ಥಾನಕ್ಕೆ ಹಿಂದೂಡಲ್ಪಟ್ಟಿದೆ. ಅಂಕಿ ಸಂಖ್ಯೆಗಳನ್ನು ಹೋಲಿಸಿದರೆ ಬೆಳಗ್ಗೆಯ ದಟ್ಟಣೆಯಲ್ಲಿ ಶೇ. 49ರಷ್ಟು ಹಾಗೂ ಸಾಯಂಕಾಲದ ಸಮಯದಲ್ಲಿ ಶೇ. 37ರಷ್ಟು ಕುಸಿತ ಉಂಟಾಗಿರುವುದು ಕಂಡುಬಂದಿದೆ.

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮೂಲಭೂತ ಸೌಕರ್ಯಗಳು (Infrastructure) ಹಾಗೂ ವಿವಿಧ ಬಗೆಯ ಸೇವೆಗಳ ಲಭ್ಯತೆಯ ವಿಚಾರಕ್ಕೆ ಬಂದರೆ ಮಹಾನಗರಗಳು ಎಲ್ಲರಿಗೂ ಅಚ್ಚುಮೆಚ್ಚು. ಆದರೆ, ಇಂತಹ ದೊಡ್ಡ ದೊಡ್ಡ ಮೆಟ್ರೋ ನಗರಗಳಲ್ಲಿ (Metro Cities ) ಎಲ್ಲರಿಗೂ ಇಷ್ಟವಾಗದ ಅಥವಾ ಕಿರಿಕಿರಿ ಉಂಟು ಮಾಡುವ ವಿಚಾರವೆಂದರೆ ಅಲ್ಲಿನ ಟ್ರಾಫಿಕ್ ಸಮಸ್ಯೆ(Traffic Problem). ನಿತ್ಯ ರಸ್ತೆಗಳಲ್ಲಿ ಕಂಡುಬರುವ ವಿಪರೀತವಾದ ಟ್ರಾಫಿಕ್ ದಟ್ಟಣೆಯಿಂದಾಗಿ ಜನರು ತಮ್ಮ ತಮ್ಮ ಕೆಲಸ ಕಾರ್ಯಗಳಿಗಾಗಿ ಪರದಾಡುವ ಸ್ಥಿತಿಯಿರುತ್ತದೆ. ಬೆಂಗಳೂರು ಮಹಾನಗರವೂ ಸಹ ಇದಕ್ಕೆ ಹೊರತಾಗಿಲ್ಲ. ಟ್ರಾಫಿಕ್ ದಟ್ಟಣೆಯ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ದೇಶದಲ್ಲಿ ಮಂಚೂಣಿಯಲ್ಲಿರುವ ಮೊದಲ ಐದು ನಗರಗಳಲ್ಲಿ ಒಂದಾಗಿದೆ. ಅಷ್ಟೆ ಏಕೆ, 2019ರಲ್ಲಿ ಪ್ರಕಟಿಸಲಾದ ಅಂಕಿ-ಅಂಶಗಳ ಪ್ರಕಾರ, ಬೆಂಗಳೂರು ಸಂಚಾರ ದಟ್ಟಣೆಯ ವಿಷಯಕ್ಕೆ ಸಂಬಂಧಿಸಿದಂತೆ ಮುಂಬೈ ನಗರವನ್ನೂ ಮೀರಿಸಿ ಮೊದಲ ಸ್ಥಾನ ಅಲಂಕರಿಸಿತ್ತು.

  ಇದನ್ನೂ ಓದಿ: Thyroid Problem: ಕೊರೊನಾದಿಂದ ಗುಣಮುಖರಾದವರಿಗೆ ಕಾಡುತ್ತಿದೆ ಥೈರಾಯ್ಡ್ ಸಮಸ್ಯೆ.. ಇದನ್ನು ತಪ್ಪಿಸಲು ಏನ್ಮಾಡ್ಬೇಕು?

  ಕೋವಿಡ್​ನಿಂದಲೂ ಆಯ್ತು ಲಾಭ

  ಈಗಾಗಲೇ, ಬೆಂಗಳೂರಿನ ಮಹಾನಗರ ಪಾಲಿಕೆ ಹಾಗೂ ಹಿಂದಿನ ಸರ್ಕಾರ ಸೇರಿದಂತೆ ಇಂದಿನ ರಾಜ್ಯ ಸರ್ಕಾರವೂ ಸಹ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದರಾದರೂ ಯಾವುದೂ ಫಲಿಸಿರಲಿಲ್ಲ. ಆದರೆ, ಈಗ ಹೊರಬಿದ್ದಿರುವ ವರದಿಯೊಂದರ ಪ್ರಕಾರ, ಆಡಳಿತದಿಂದ ಸಾಧಿಸಲಾಗದ ಕಾರ್ಯವೀಗ ಕೋವಿಡ್ ಸಾಧಿಸಿ ತೋರಿಸಿದಂತಾಗಿದೆ. ಸಂಚಾರ ದಟ್ಟಣೆಯ ಕುರಿತು ಅಧ್ಯಯನ ನಡೆಸುವಂತಹ ಟಾಮ್‌ಟಾಮ್‌ ಎಂಬ ಜಿಯೋಲೊಕೇಶನ್ ತಂತ್ರಜ್ಞಾನಾಧಾರಿತ ಪರಿಣಿತ ಸಂಸ್ಥೆಯೊಂದು ಇತ್ತೀಚೆಗೆ ತಾನು ನಡೆಸಿದ ಸಮೀಕ್ಷೆಯೊಂದರ ಬಗ್ಗೆ ವರದಿ ಪ್ರಕಟಿಸಿದೆ. ಆ ಸಮೀಕ್ಷೆಯ ಪ್ರಕಾರ, ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆ ಸಾಕಷ್ಟು ತಗ್ಗಿರುವ ಅಂಶ ಬೆಳಕಿಗೆ ಬಂದಿದೆ.

  ಬೆಂಗಳೂರಿನ ಟ್ರಾಫಿಕ್‌ ದಟ್ಟಣೆಯಲ್ಲಿ ಶೇ. 32ರಷ್ಟು ಕುಸಿತ..!

  ಈ ವರದಿಯಲ್ಲಿ, "ಬೆಂಗಳೂರು ನಗರವು 2019ರಲ್ಲಿ ಜಾಗತಿಕವಾಗಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರ ಎಂದು ಗುರುತಿಸಲ್ಪಟ್ಟಿತ್ತು. ಆದರೆ, ಪರಿಸ್ಥಿತಿ ಈಗ ವಿಭಿನ್ನವಾಗಿದೆ. 2021 ವರ್ಷದಾದ್ಯಂತ ನಡೆಸಿದ ಅಧ್ಯಯನದಲ್ಲಿ ನಗರದ ಸಂಚಾರ ದಟ್ಟಣೆಯಲ್ಲಿ ಶೇ.32ರಷ್ಟು ಕುಸಿತ ಕಂಡುಬಂದಿದೆ. 2020ರಲ್ಲಿ ಆರನೇ ಹೆಚ್ಚು ಸಂಚಾರ ದಟ್ಟನೆಯ ಸ್ಥಾನ ಪಡೆದಿದ್ದ ಬೆಂಗಳೂರು 2021ರಲ್ಲಿ ಹತ್ತನೇ ಸ್ಥಾನಕ್ಕೆ ಹಿಂದೂಡಲ್ಪಟ್ಟಿದೆ. ಅಂಕಿ ಸಂಖ್ಯೆಗಳನ್ನು ಹೋಲಿಸಿದರೆ ಬೆಳಗ್ಗೆಯ ದಟ್ಟಣೆಯಲ್ಲಿ ಶೇ. 49ರಷ್ಟು ಹಾಗೂ ಸಾಯಂಕಾಲದ ಸಮಯದಲ್ಲಿ ಶೇ. 37ರಷ್ಟು ಕುಸಿತ ಉಂಟಾಗಿರುವುದು ಕಂಡುಬಂದಿದೆ" ಎಂದು ವಿವರ ನೀಡಿದೆ.

  ಬೆಂಗಳೂರಿಗೆ 10ನೇ ಸ್ಥಾನ 

  ಕೋವಿಡ್-19 ಪರಿಣಾಮವಾಗಿ ಮನೆಯಿಂದಲೇ ಕೆಲಸ ಹಾಗೂ ವೈರಾಣು ಕುರಿತು ಜನರಲ್ಲಿ ಮೂಡಿರುವ ಅರಿವು ಮುಂತಾದ ಅಂಶಗಳು ಈ ರೀತಿಯ ಅಗಾಧ ಪ್ರಮಾಣದಲ್ಲಿ ಸಂಚಾರ ದಟ್ಟಣೆಯಲ್ಲಿ ಕುಸಿತ ಉಂಟಾಗಿರುವುದಕ್ಕೆ ಕಾರಣ ಎನ್ನಲಾಗಿದೆ. ಆದರೂ ಟಾಮ್‌ಟಾಮ್‌ ಸಂಸ್ಥೆಯು ಪ್ರಕಟಿಸಿದ ಜಾಗತಿಕ ಮೊದಲ 25 ಸಂಚಾರ ದಟ್ಟಣೆಯ ನಗರಗಳಲ್ಲಿ ಭಾರತದ ನಾಲ್ಕು ಮಹಾನಗರಗಳು ಸ್ಥಾನ ಪಡೆದಿವೆ - ಮುಂಬೈ (5ನೇ ಸ್ಥಾನ), ಬೆಂಗಳೂರು (10ನೇ ಸ್ಥಾನ), ದೆಹಲಿ (11ನೇ ಸ್ಥಾನ), ಪುಣೆ (21ನೇ ಸ್ಥಾನ).

  ಇದನ್ನೂ ಓದಿ: ಏಕಾಏಕಿ BMTC Buses ಹೊತ್ತಿ ಉರಿದೇ ಬಿಟ್ಟವು.. ಹೆದರಿರುವ ಪ್ರಯಾಣಿಕರ ವಿಶ್ವಾಸ ಗಳಿಸಲು ಮುಂದಾದ MD

  ವರ್ಕ್​​ ಫ್ರಮ್​ ಹೋಂ ಎಫೆಕ್ಟ್​ 

  ಈ ಬಗ್ಗೆ ವರದಿಯಲ್ಲಿ, "2021ರ ವರ್ಷದಲ್ಲಿ ಸಾಕಷ್ಟು ಬದಲಾವಣೆಗಳನ್ನು ನೋಡಲಾಯಿತು. ಕೋವಿಡ್ ಸಂಕ್ರಮಣ ಎಷ್ಟು ಉಲ್ಬಣವಾಗಿತ್ತೆಂದರೆ ಸಾಕಷ್ಟು ಸಂಸ್ಥೆಗಳು ಮನೆಯಿಂದಲೇ ಕೆಲಸ ಮಾಡುವಂತಹ ವಿಧಾನಗಳನ್ನು ಅಳವಡಿಸಿಕೊಂಡವು; ಭೌತಿಕವಾಗಿ ನಡೆಯುತ್ತಿದ್ದ ಕಚೇರಿ ಸಭೆಗಳು ಟೆಲಿಕಾನ್ಫರೆನ್ಸ್‌ಗಳ ರೂಪ ಪಡೆದವು; ಎಷ್ಟೋ ಸಂಸ್ಥೆಗಳಲ್ಲಿ ಫ್ಲೆಕ್ಸಿಬಲ್ ಟೈಮಿಂಗ್ಸ್ ಅಳವಡಿಸಿದರ ಪರಿಣಾಮವಾಗಿ ಸಾಕಷ್ಟು ಜನರು ಪೀಕ್ ಸಮಯದಲ್ಲಿ ಸಂಚರಿಸುವುದರಿಂದ ಮುಕ್ತರಾದರು; ಇದು ಜಾಗತಿಕ ಮಟ್ಟದಲ್ಲಿ ಎಲ್ಲೆಡೆ ಪೀಕ್ ಸಮಯದಲ್ಲೇ ಬದಲಾವಣೆ ಉಂಟು ಮಾಡಿತು" ಎಂದು ಬರೆಯಲಾಗಿದೆ.

  "ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯ ಪ್ರಮಾಣವು 2021ರಲ್ಲಿ ಶೇ. 48 ದಾಖಲಾಯಿತು. ಇದೇ ಪ್ರಮಾಣವು 2019ರಲ್ಲಿ ಶೇ. 71ರಷ್ಟಿತ್ತು. ಅಂದರೆ ಈ ಪ್ರಮಾಣದಲ್ಲಿ ಮಹತ್ವದ ಶೇ. 32ರಷ್ಟು ಕುಸಿತವಾಗಿದ್ದು ಕಂಡುಬಂದಿದೆ. ಅಲ್ಲದೆ 2021ರಲ್ಲಿ ಸಂಚಾರ ದಟ್ಟಣೆಯ ಪೀಕ್ ಪ್ರಮಾಣದಲ್ಲೂ ಸಹ ಶೇ. 44ರಷ್ಟು ಕುಸಿತವಾಗಿದ್ದು ದಾಖಲಾಗಿದೆ. ಆದರೆ 2021ರ ಅಕ್ಟೋಬರ್ 9 ರಂದು ನಗರದಲ್ಲಿ ವಿಪರೀತವಾದ ಟ್ರಾಫಿಕ್ ದಟ್ಟಣೆ ಉಂಟಾಗಿತ್ತು, ಕಾರಣ ಅಂದು ಸುರಿದಿದ್ದ ಅಪಾರವಾದ ಮಳೆ. ಇನ್ನು ಭಾರತದ ಇತರೆ ನಗರಗಳಾದ ಮುಂಬೈ, ದೆಹಲಿ ಹಾಗೂ ಪುಣೆ ನಗರಗಳ ಸಂಚಾರ ದಟ್ಟಣೆಯಲ್ಲಿ ಸಾಮಾನ್ಯವಾದ ಕುಸಿತ ಕಂಡುಬಂದಿವೆ. ಅವುಗಳ ಪ್ರಮಾಣ ಕ್ರಮವಾಗಿ ಶೇ.18, ಶೇ.14 ಹಾಗೂ ಶೇ.29 ದಾಖಲಾಗಿವೆ" ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.
  Published by:Kavya V
  First published: