Nimhans| ಬುದ್ಧಿಮಾಂದ್ಯತೆ ಸಮಸ್ಯೆ ನಿವಾರಣೆಗೆ ನಿಮ್ಹಾನ್ಸ್‌ನಿಂದ ದಕ್ಷಿಣ ಬೆಂಗಳೂರಿನಲ್ಲಿ ಜಾಗೃತಿ ಅಭಿಯಾನ..!

ಮನೋರೋಗದ ಕುರಿತು ಜನರಿಗೆ ತಿಳುವಳಿಕೆ ನೀಡುವುದು ಅತಿಮುಖ್ಯವಾಗಿದ್ದು ಇದರಿಂದ ಬುದ್ಧಿಮಾಂದ್ಯ ಸಮಸ್ಯೆ ಹೊಂದಿರುವವರಿಗೆ ಬೆಂಬಲವನ್ನು ಒದಗಿಸಬಹುದು ಹಾಗೂ ಈ ದೆಸೆಯಲ್ಲಿ ರೋಗಿಯ ಮನೆಯವರು ಸಂಪೂರ್ಣ ಸಹಕಾರ ನೀಡಬೇಕು ಎಂಬುದಾಗಿ ನಿಮ್ಹಾನ್ಸ್ ಹೇಳಿದೆ.

ನಿಮ್ಹಾನ್ಸ್ ಆಸ್ಪತ್ರೆ.

ನಿಮ್ಹಾನ್ಸ್ ಆಸ್ಪತ್ರೆ.

  • Share this:
    ಕೇಂದ್ರ ಸರಕಾರದ ಯೋಜನೆಗೆ ಸಂಬಂಧಿಸಿದಂತೆ ದಕ್ಷಿಣ ಬೆಂಗಳೂರನ್ನು ಬುದ್ಧಿಮಾಂದ್ಯ ಸ್ನೇಹಿ ಸ್ಥಳವನ್ನಾಗಿ ಮಾಡುವ ಪ್ರಪ್ರಥಮ ಕಾರ್ಯವನ್ನು ನಿಮ್ಹಾನ್ಸ್ ಕೈಗೆತ್ತಿಕೊಂಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಜೈವಿಕ ತಂತ್ರಜ್ಞಾನ ವಿಭಾಗವು ಇತ್ತೀಚೆಗೆ ಆರಂಭಿಸಿರುವ ಸಂಶೋಧನಾ ಉಪಕ್ರಮವಾದ ಬುದ್ಧಿಮಾಂದ್ಯ ಸಂಬಂಧಿತ ಸಂಶೋಧನೆಯ ಸುಧಾರಿತ ವಿಧಾನಗಳಿಗೆ (AADAR) ಸಂಬಂಧಿಸಿದಂತೆ ಎರಡೂ ಸಂಸ್ಥೆಗಳು ಬೆಂಗಳೂರು ನಗರದಲ್ಲಿನ ಬುದ್ಧಿಮಾಂ ದ್ಯತೆಯ ಹರಡುವಿಕೆ, ಸಂಭವ ಮತ್ತು ಅಪಾಯದ ಬಗ್ಗೆ ತನಿಖೆ ನಡೆಸಿ ಮತ್ತು ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲಿವೆ.

    ತರಬೇತಿ ಪಡೆದಿರುವ ಮನಃಶಾಸ್ತ್ರಜ್ಞರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕ ಆರೋಗ್ಯ ಪರಿಣಿತರನ್ನೊಳಗೊಂಡಿರುವ ತಂಡವು ಸಂಶೋಧನಾ ಅಧ್ಯಯನವನ್ನು ಕೈಗೊಂಡ ನಂತರ ಪ್ರಮುಖ ಅಧ್ಯಯನವನ್ನು ಜನವರಿಯಲ್ಲಿ ಕೈಗೊಳ್ಳಲಾಗುತ್ತದೆ ಎಂದು ನಿಮ್ಹಾನ್ಸ್ ನಿರ್ದೇಶಕಿ ಡಾ ಪ್ರತಿಮಾ ಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಇಲ್ಲಿಯವರೆಗೆ ಬೆಂಗಳೂರಿನ ಜಯನಗರ ಸುತ್ತಮುತ್ತಲಿನ ಪ್ರತಿ ಮನೆ ಮನೆಗೂ ಭೇಟಿ ನೀಡಿ 60 ಹಾಗೂ ಅದಕ್ಕಿಂತ ಹೆಚ್ಚಿನ ವಯೋವೃದ್ಧರನ್ನೊಳಗೊಂಡಂತೆ 1,000ಕ್ಕಿಂತಲೂ ಹೆಚ್ಚಿನ ವ್ಯಕ್ತಿಗಳನ್ನು ವಿಶ್ಲೇಷಣೆ ನಡೆಸಲಾಗಿದೆ. ಈ ಸಮೀಕ್ಷೆಯು ಪ್ರಮುಖವಾಗಿ ಹಿರಿಯರ ಮೂಲ ಆರೋಗ್ಯ ಸ್ಥಿತಿಗತಿಗಳನ್ನು ಗುರುತಿಸುವುದು ಹಾಗೂ ಅವರ ಅರಿವಿನ ಕ್ರಿಯಾತ್ಮಕ ಸ್ಥಿತಿ ನಿರ್ಣಯಿಸುವುದನ್ನು ಒಳಗೊಂಡಿದೆ.

    ಸಪ್ಟೆಂಬರ್ 21ರಂದು ಆಚರಿಸುವ ವಿಶ್ವ ಅಲ್ಜೈಮರ್ ದಿನಕ್ಕಾಗಿ (ಸ್ಮರಣೆ ಹಾಗೂ ಮಾನಸಿಕ ಕಾರ್ಯಗಳನ್ನು ನಾಶಪಡಿಸುವ ಕಾಯಿಲೆ) ಜಾಗೃತಿ ಚಟುವಟಿಕೆಗಳನ್ನು ಕೂಡ ಆಯೋಜಿಸಲಾಗಿದೆ. ಇದರ ಜೊತೆಗೆ ನಿಮ್ಹಾನ್ಸ್ ತಂಡವು ಬುದ್ಧಿಮಾಂದ್ಯತೆ ಹಾಗೂ ಮೆದುಳಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಜಾಗೃತಿ ಕಾರ್ಯಕ್ರಮಗಳನ್ನು ಜಯನಗರ ಹಾಗೂ ಜೆ.ಪಿ. ನಗರದ ಪೊಲೀಸ್ ಠಾಣೆಗಳು, ಆರೋಗ್ಯ ಕೇಂದ್ರಗಳು, ಜಯನಗರ ಜನರಲ್ ಆಸ್ಪತ್ರೆ, ಅಂಚೆ ಕಚೇರಿಗಳು, ಉದ್ಯಾನವನಗಳು ಹಾಗೂ ದೇವಸ್ಥಾನಗಳಲ್ಲಿ ಆಯೋಜಿಸುತ್ತಿದೆ.

    ಈ ಜಾಗೃತಿ ಕಾರ್ಯಕ್ರಮಗಳನ್ನು ಭಾರತ್ ಸ್ಕೌಟ್ಸ್, ಪುರಸಭೆಯ ಅಧಿಕಾರಿಗಳು ಹಾಗೂ ಸಮುದಾಯ ಕಾರ್ಯಕರ್ತರಿಗಾಗಿ ಕೂಡ ಅಭಿವೃದ್ಧಿಪಡಿಸಲಾಗುತ್ತದೆ. ಬುದ್ಧಿಮಾಂದ್ಯತೆ ಎಂಬುದು ನರ ಕ್ಷೀಣಗೊಳ್ಳುವ ಮೆದುಳಿನ ಅಸ್ವಸ್ಥತೆಯಾಗಿದ್ದು ಇದು ಸ್ಮರಣೆ, ಭಾಷೆ ಹಾಗೂ ಸಮಸ್ಯೆ ಪರಿಹರಿಸುವ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಅದೇ ರೀತಿ ವ್ಯಕ್ತಿಯು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯದ ಮೇಲೂ ನಿಧಾನವಾಗಿ ಪರಿಣಾಮ ಬೀರುತ್ತದೆ. ಬುದ್ಧಿಮಾಂದ್ಯತೆಯ ಸಾಮಾನ್ಯ ವಿಧ ಎಂದರೆ ಅಲ್ಜೈಮರ್ ಕಾಯಿಲೆಯಾಗಿದೆ.

    ನಿಮ್ಹಾನ್ಸ್ ಕೇಂದ್ರವು ಬುದ್ಧಿಮಾಂದ್ಯತೆ ಹಾಗೂ ದೀರ್ಘಕಾಲದ ನರ ಮನೋವೈದ್ಯಕೀಯ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಕೈಗೆಟಕುವ ದರದಲ್ಲಿ ಆರೈಕೆ ಹಾಗೂ ಬೆಂಬಲವನ್ನು ಒದಗಿಸುವ ಗುರಿ ಹೊಂದಿದೆ. ಬುದ್ಧಿಮಾಂದ್ಯತೆಯು 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಹಾಗೂ ಅಲ್ಜೈಮರ್ ಕಾಯಿಲೆ ಈ ವಯಸ್ಸಿನವರಲ್ಲಿ ಹೆಚ್ಚು ಸಾಮಾನ್ಯವಾಗಿದೆ ಎಂದು ನಿಮ್ಹಾನ್ಸ್ ಅಭಿಪ್ರಾಯಪಟ್ಟಿದೆ.

    ಇದನ್ನೂ ಓದಿ: CoronaVirus| ದೇಶದಲ್ಲಿ ಶೇ.15 ರಷ್ಟು ಕುಸಿತ ಕಂಡ ಕೊರೋನಾ ಕೇಸ್, 6 ತಿಂಗಳಲ್ಲೇ ಅತೀ ಕಡಿಮೆ; ದೆಹಲಿಯಲ್ಲಿ ಶೂನ್ಯ ಸಾವು!

    ಮನೋರೋಗದ ಕುರಿತು ಜನರಿಗೆ ತಿಳುವಳಿಕೆ ನೀಡುವುದು ಅತಿಮುಖ್ಯವಾಗಿದ್ದು ಇದರಿಂದ ಬುದ್ಧಿಮಾಂದ್ಯ ಸಮಸ್ಯೆ ಹೊಂದಿರುವವರಿಗೆ ಬೆಂಬಲವನ್ನು ಒದಗಿಸಬಹುದು ಹಾಗೂ ಈ ದೆಸೆಯಲ್ಲಿ ರೋಗಿಯ ಮನೆಯವರು ಸಂಪೂರ್ಣ ಸಹಕಾರ ನೀಡಬೇಕು ಎಂಬುದಾಗಿ ನಿಮ್ಹಾನ್ಸ್ ಹೇಳಿದೆ.
    Published by:MAshok Kumar
    First published: