Bengaluru Rains: ಬೆಂಗಳೂರಲ್ಲಿ ಧಾರಾಕಾರ ಮಳೆಗೆ ಕೆರೆಯಂತಾದ ರಸ್ತೆಗಳು, ಇನ್ನೂ 3 ದಿನ ವರುಣನ ಆರ್ಭಟ

ಬೆಂಗಳೂರು ಸೇರಿದಂತೆ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು, ಮಂಗಳೂರಿನಲ್ಲಿ ಇನ್ನೂ 3 ದಿನ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಮಳೆಯಿಂದ ಹಾನಿಯಾದರೆ 6 ಎನ್​ಡಿಆರ್​ಎಫ್​ ತಂಡಗಳನ್ನು ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಧಾರಾಕಾರ ಮಳೆಗೆ ರಸ್ತೆಯಲ್ಲಿ ನಿಂತಿರುವ ನೀರು

ಧಾರಾಕಾರ ಮಳೆಗೆ ರಸ್ತೆಯಲ್ಲಿ ನಿಂತಿರುವ ನೀರು

  • Share this:
Bengaluru Rain Updates ಬೆಂಗಳೂರು(ಅ.15): ರಾಜ್ಯ ರಾಜಧಾನಿ ಬೆಂಗಳೂರಿ(Bengaluru)ನಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ(Rainfall) ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನಗರದ ಹಲವೆಡೆ ಸುರಿದ ಜೋರು ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದ್ದು(Roads Waterlogged), ವಾಹನ ಸವಾರರು ಪರದಾಡುವಂತಾಗಿದೆ. ನಿನ್ನೆ ರಾತ್ರಿಯಿಡೀ ಸುರಿದ ಸತತ ಮಳೆ(Heavy Rain) ಬೆಂಗಳೂರಿಗರನ್ನು ತೊಯ್ದು ತೊಪ್ಪೆ ಮಾಡಿದೆ.  ರಾಜಾಜಿನಗರ, ನವರಂಗ್, ರಿಚ್ಮಂಡ್ ಸರ್ಕಲ್ , ಮಹಾಲಕ್ಷ್ಮಿ ಲೇಔಟ್ ಸಾಕಷ್ಟು ತಗ್ಗು ಪ್ರದೇಶದ ರಸ್ತೆಗಳಲ್ಲಿ ನೀರು ನಿಂತಿದೆ.  ರಸ್ತೆಯಲ್ಲಿ ನೀರು ನಿಂತಿರುವ ಹಿನ್ನಲೆ ದ್ವಿ ಚಕ್ರ ವಾಹನ ಸವಾರರು ಪರದಾಟ ನಡೆಸಿದ್ದಾರೆ. ತಗ್ಗು ಪ್ರದೇಶದ ಕೆಲ ರಸ್ತೆಗಳು ಕೆರೆಗಳಂತಾಗಿವೆ.

ಮಲ್ಲೇಶ್ವರಂನಲ್ಲಿ ಮನೆಗಳಿಗೆ ನುಗ್ಗಿದ ಮಳೆ ನೀರು

ಮಳೆಯಿಂದ ಯಾವುದೇ ಸಮಸ್ಯೆಗಳ ದೂರುಗಳು ಬಂದಿಲ್ಲವೆಂದು ಬಿಬಿಎಂಪಿ ಮಾಹಿತಿ ನೀಡಿದೆ. ಆದರೆ  ಮಲ್ಲೇಶ್ವರಂ ಗಾಯತ್ರಿ ನಗರದಲ್ಲಿ ಮನೆಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಇಂದು ಚಂದ್ರಶೇಖರ್ ಎಂಬುವರ ಮನೆಗೆ ಚರಂಡಿ ನೀರು ನುಗ್ಗಿದೆ. ಕೂಡಲೇ ಸ್ಥಳೀಯರು ಬಿಬಿಎಂಪಿಗೆ ಮಾಹಿತಿ ನೀಡಿದ್ದಾರೆ. ತಡರಾತ್ರಿ ಆಗಮಿಸಿದ ಬಿಬಿಎಂಪಿ ಸಿಬ್ಬಂದಿ ನೀರನ್ನ ಹೊರತೆಗೆದು ಕ್ಲಿಯರ್ ಮಾಡಿಕೊಟ್ಟಿದ್ದಾರೆ. ಗಾಯತ್ರಿನಗರದ 5th main ಡಿ ಬ್ಲಾಕ್ ನಲ್ಲಿ ಕಾಲುವೆ ಕಾಮಗಾರಿ ಹಿನ್ನೆಲೆ, ಮಳೆ ಹೆಚ್ಚಾದಾಗ ಮನೆಗಳಿಗೆ ಚರಂಡಿ ನೀರು ನುಗ್ಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ದಾಸರಹಳ್ಳಿಯಲ್ಲಿ ಮಳೆಯ ಅವಾಂತರ

ದಾಸರಹಳ್ಳಿಯ ಭಾಗದಲ್ಲಿ ವರುಣನ ಆರ್ಭಟ ಜೋರಾಗಿತ್ತು. ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿತ್ತು. ಬಾಗಲಗುಂಟೆ, ಮೇದರಹಳ್ಳಿ, ಚೊಕ್ಕಸಂದ್ರ, ರಾಯಲ್ ಎನ್ ಕ್ಲೇವ್ ಬಡಾವಣೆಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ನಿವಾಸಿಗಳು ತತ್ತರಿಸಿದ್ದಾರೆ. ಭಾರೀ ಮಳೆ ಹಿನ್ನೆಲೆ, ಬಿಬಿಎಂಪಿ ದಾಸರಹಳ್ಳಿ ವಲಯ ಕಛೇರಿಗೆ ಸಾಕಷ್ಟು ಫೋನ್ ಕರೆಗಳು ಬಂದಿವೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಶಾಸಕ ಆರ್​. ಮಂಜುನಾಥ್​ ಸ್ಥಳಕ್ಕೆ ಬರುವಂತೆ ಜನರು ಒತ್ತಡ ಹಾಕಿದ್ದಾರೆ. ರಾಜಕಾಲುವೆ ಬ್ಲಾಕ್ ಆಗಿರುವ ಸ್ಥಳಕ್ಕೆ ಶಾಸಕ ಆರ್.ಮಂಜುನಾಥ್ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದಾರೆ.

ಇಷ್ಟೇ ಅಲ್ಲದೇ, ಬೆಂಗಳೂರು ಉತ್ತರ ತಾಕೂಕಿನ ಶ್ರೀಕಂಠಪುರದಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ತಗ್ಗು ಪ್ರದೇಶಗಳಲ್ಲಿ ಮಳೆ ನೀರು ತುಂಬಿ ಹರಿಯುತ್ತಿದೆ. ಮನೆಗಳಿಗೂ ನೀರು ನುಗ್ಗಿದೆ. ತೋಟದಗುಡ್ಡದಹಳ್ಳಿಯಲ್ಲಿ ಅಡಕೆ ತೋಟದ ತುಂಬೆಲ್ಲ ಮಳೆ ನೀರು ನಿಂತಿದೆ. ರಾತ್ರಿ ಇಡೀ ಸುರಿದ ಧಾರಾಕಾರ ಮಳೆಗೆ ಜನಜೀವನ ತತ್ತರಿಸಿದೆ.

ಇದನ್ನೂ ಓದಿ:Karnataka Weather Today: ಬೆಂಗಳೂರಿನಲ್ಲಿ ಮುಂದುವರೆಯಲಿದೆ ಮಳೆ ಆರ್ಭಟ- ವಿವಿಧ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಅಕ್ಟೋಬರ್ 17ರವರೆಗೆ ಭಾರೀ ಮಳೆ

ಕರ್ನಾಟಕದಲ್ಲಿ ಅಕ್ಟೋಬರ್ 17ರ ವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು ಸೇರಿದಂತೆ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು, ಮಂಗಳೂರಿನಲ್ಲಿ ಇನ್ನೂ 3 ದಿನ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಮಳೆಯಿಂದ ಹಾನಿಯಾದರೆ 6 ಎನ್​ಡಿಆರ್​ಎಫ್​ ತಂಡಗಳನ್ನು ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಈ ಎಲ್ಲಾ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

ಮಳೆಯಿಂದ ಎಲ್ಲೆಲ್ಲಿ ಹಾನಿ?

ಮಧ್ಯ ರಾತ್ರಿಯಿಂದ ಧಾರಕಾರವಾಗಿ ಸುರಿದ ಮಳೆಯಿಂದ ಬೆಂಗಳೂರಿನ ಹಲವೆಡೆ ಹಾನಿಯಾಗಿದೆ.

ಪೂರ್ವ ವಲಯ :
ಮಳೆಯಿಂದ ಯಾವುದೇ ಹಾನಿಯಾಗಿಲ್ಲ

ಪಶ್ಚಿಮ ವಲಯ :
3 ಕಡೆ ಮನೆಗಳಿಗೆ ನುಗ್ಗಿದ ನೀರು
- ಲಕ್ಷ್ಮೀನಾರಾಯಣ ಪುರ
- ಬಸವೇಶ್ವರ ನಗರ
- ಗಾಯತ್ರಿ ನಗರ

ದಕ್ಷಿಣ ವಲಯ :
ಮಳೆಯಿಂದ ಯಾವುದೇ ಅನಾಹುತ ಘಟಿಸಿಲ್ಲ

ಆರ್ ಆರ್ ನಗರ :
ಎರಡು ಕಡೆ ಮನೆಗಳಿಗೆ ನುಗ್ಗಿದ ನೀರು
- ಆರ್ ಆರ್ ನಗರ ಐಡಿಯಲ್‌ ಹೋಮ್ಸ್ (ಅಕ್ಕಮಹಾದೇವಿ ಕನ್ವೆನ್ಷನ್ ಹಾಲ್ ಬಳಿ)
- ಪೀನ್ಯ ವಾರ್ಡ್ ನಂ. 38. 4ನೇ ಬ್ಲಾಕ್

ದಾಸರಹಳ್ಳಿ :
ಡ್ರೈನೇಜ್ ನೀರು ತುಂಬಿ ಅವಾಂತರ
- ಚಿಕ್ಕಸಂದ್ರ ಕೆರೆ ಏರಿಯಾ
- ಗುಂಡಪ್ಪ ಲೇಔಟ್
- ರಾಯಲ್‌ ಎನ್ಕ್ಲೇವ್
- ಬಿಟಿಎಸ್ ಲೇಔಟ್

ಮಹಾದೇವಪುರ & ಯಲಹಂಕ & ಬೊಮ್ಮನಹಳ್ಳಿ :
ಮಳೆಯಿಂದಾಗಿ ಯಾವುದೇ ಹಾನಿಯಾಗಿಲ್ಲ
Published by:Latha CG
First published: