ವಿಮಾ ಮೊತ್ತ ಬಳಸಿಕೊಂಡು ಮಾದಕ ವಸ್ತು ಮಾರಾಟ (Narcotic Substances) ದಂಧೆ ಆರಂಭಿಸಿದ ಆರೋಪದ ಮೇಲೆ ಹೋಟೇಲ್ ಮ್ಯಾನೇಜ್ಮೆಂಟ್ ಪದವೀಧರನನ್ನು (Hotel Management Graduate) ಬೆಂಗಳೂರು ಪೊಲೀಸರು (Bengaluru Police) ಬಂಧಿಸಿದ್ದಾರೆ. ಬೆಂಗಳೂರಿನ ನಾಯಂಡಹಳ್ಳಿಯ ನಿವಾಸಿ, 25 ವರ್ಷದ ಆರೋಪಿ ಸಚಿನ್ ಹಾಗೂ ಆತನ ಸಹಚರ ಹೆಬ್ಬಗೋಡಿಯ ನಿವಾಸಿ, ಆಟೋ ರಿಕ್ಷಾ ಚಾಲಕ, 23 ವರ್ಷದ ಆನಂದ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ದೇವನಹಳ್ಳಿಯಲ್ಲಿ ಸ್ಥಳೀಯ ವ್ಯಾಪಾರಿಗಳಿಗೆ ಡ್ರಗ್ಸ್ ಮಾರುವಾಗ ಅವರನ್ನು ಬಂಧಿಸಲಾಯಿತು. ಅವರಿಂದ 40 ಲಕ್ಷ ರೂ ಮೌಲ್ಯದ 101 ಕೆಜಿ ಗಾಂಜಾವನ್ನು (Marijuana worth Rs 40 lakh seized) ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ದಂಧೆಯಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿ, ಸಚಿನ್ ಸಹೋದರ ಸಾಗರ್ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಅವನನ್ನು ಪತ್ತೆಹಚ್ಚುವ ಪ್ರಯತ್ನ ಜಾರಿಯಲ್ಲಿದೆ ಎಂದು ಉಪ ಪೊಲೀಸ್ ಆಯುಕ್ತ (ಈಶಾನ್ಯ) ಸಿ ಕೆ ಬಾಬಾ (North East DCP CK Baba) ಹೇಳಿದ್ದಾರೆ.
ಪೊಲೀಸರ ಪ್ರಕಾರ, ಚೆನ್ನೈನಲ್ಲಿ ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ ಮುಗಿಸಿ, ಮಲೇಷ್ಯಾಗೆ ಇಂಟರ್ನ್ಶಿಪ್ ಮಾಡಲು ಹೋಗಿದ್ದ. ಬಳಿಕ ಆತ ಬೆಂಗಳೂರಿಗೆ ಬಂದು , ಆತಿಥ್ಯ ವಲಯದಲ್ಲಿ ಉದ್ಯೋಗ ಪಡೆದ.
“ಸಚಿನ್ ಗಾಂಜಾ ಬಳಸಲು ಆರಂಭಿಸಿದ ಮತ್ತು ತನ್ನ ಲಾಭಕ್ಕಾಗಿ ಅದನ್ನು ಸಣ್ಣ ಪ್ರಮಾಣದಲ್ಲಿ ಮಾರಾಟ ಮಾಡಲು ಆರಂಭಿಸಿದ. ಡ್ರಗ್ಸ್ ಚಟಕ್ಕೆ ದಾಸನಾಗಿದ್ದ ಆನಂದನ ಪರಿಚಯವೂ ಆಯಿತು. ಇಬ್ಬರೂ ಸೇರಿ , ಗಾಂಜಾ ಖರೀದಿಸಿ, ಅದನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲು ನಿರ್ಧರಿಸಿದರು,” ಎಂದು ಬಾಬಾ ತಿಳಿಸಿದ್ದಾರೆ.
ಸಚಿನ್ ಇತ್ತೀಚಿಗೆ ಅಪಘಾತಕ್ಕೆ ಈಡಾಗಿದ್ದ ಮತ್ತು ವಿಮಾ ಮೊತ್ತ ಪಡೆದಿದ್ದ. ಅವನು ಆ ಹಣವನ್ನು, ವೈಜಾಗ್ನ ತನ್ನ ಸಂಪರ್ಕದಿಂದ ಡ್ರಗ್ಸ್ ಖರೀದಿಸಲು ಹೂಡಿಕೆ ಮಾಡಿದ. ಅಲ್ಲಿಂದ ಡ್ರಗ್ಸ್ ಅನ್ನು ಸರಕು ಸಾಗಾಣೆ ವ್ಯಾನ್ನಲ್ಲಿ ಗುಪ್ತ ರೀತಿಯಲ್ಲಿ ಬೆಂಗಳೂರಿಗೆ ಸಾಗಿಸಿದ್ದನು ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ನಂದಿ ಬೆಟ್ಟಕ್ಕೆ ಭೇಟಿ ನೀಡಲಿರುವ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡಲು, ದಂಧೆಕೋರರು ದೇವನಹಳ್ಳಿಗೆ ಬರುತ್ತಿದ್ದಾರೆ ಎಂಬ ಕುರಿತು ಪೊಲೀಸರಿಗೆ ಮಾಹಿತಿ ಬಂದಾಗ, ಈ ಡ್ರಗ್ಸ್ ದಂಧೆ ಬೆಳಕಿಗೆ ಬಂತು. ಸಚಿನ್ ಮತ್ತು ಇತರರು ಮರಿಜುವಾನ ಮಾರಲಿದ್ದ ರಾಣಿ ಕ್ರಾಸ್ ಸಮೀಪ ಪೊಲೀಸರ ತಂಡವೊಂದು ಕಣ್ಣಿಟ್ಟು ಕಾದಿತ್ತು.
ಕೆಲವು ಗಂಟೆಗಳ ಬಳಿಕ, ಅವನು ಮತ್ತು ಆನಂದ್ ಆ ಸ್ಥಳಕ್ಕೆ ಬೈಕ್ನಲ್ಲಿ ಬಂದರು. ಆದರೆ ಪೊಲೀಸರನ್ನು ನೋಡಿ ಪರಾರಿಯಾಗಲು ಯತ್ನಿಸಿದರು. ಪೊಲೀಸರು ಅವರನ್ನು ಬೆನ್ನಟ್ಟಿ ಹಿಡಿಯುವಲ್ಲಿ ಸಫಲರಾದರು ಮಾತ್ರವಲ್ಲ ಅವರಿಂದ 5 ಕೆಜಿ ಗಾಂಜಾವನ್ನೂ ವಶಪಡಿಸಿಕೊಳ್ಳಲಾಯಿತು.
ಆ ನಂತರ ನಾಯಂಡಹಳ್ಳಿಯಲ್ಲಿರುವ ಸಚಿನ್ ಮನೆಗೆ ನಡೆಸಿದ ದಾಳಿಯಲ್ಲಿ ಪೊಲೀಸರು ಉಳಿದ 96 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಂಡರು. ಆದರೆ, ಸಾಗರ್ ಜೊತೆ ವಾಸಿಸುತ್ತಿದ್ದ, ಈ ಡ್ರಗ್ಸ್ ದಂಧೆಯ ಸಹಭಾಗಿ ಸಾಗರ್, ಪೊಲೀಸರಿಂದ ತಪ್ಪಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ