ಮದುವೆಯಾಗುತ್ತೇನೆಂದು ಯುವತಿಯರಿಗೆ ವಂಚಿಸುತ್ತಿದ್ದ ವ್ಯಕ್ತಿ ಬಂಧನ; ಈತನ ತಂತ್ರಕ್ಕೆ ಪೊಲೀಸರೇ ಶಾಕ್

ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕೈಸುಟ್ಟುಕೊಂಡವನಿಗೆ ಮ್ಯಾಟ್ರಿಮೊನಿ ವಂಚನೆ ಕಾರ್ಯ ಸಿದ್ಧಿಸಿತ್ತು. ಹಲವಾರು ವಿಚ್ಛೇದಿತ ಮಹಿಳೆಯರನ್ನ ನಂಬಿಸಿ ಹಣ ಲಪಟಾಯಿಸಿದ್ದ ಈ ಭೂಪನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಜಗನ್ನಾಥ್​ನನ್ನು ಬಂಧಿಸಿರುವ ಪೊಲೀಸರು

ಆರೋಪಿ ಜಗನ್ನಾಥ್​ನನ್ನು ಬಂಧಿಸಿರುವ ಪೊಲೀಸರು

  • Share this:
ಬೆಂಗಳೂರು: ಮ್ಯಾಟಿಮೋನಿಗಳಲ್ಲಿ ವಿಚ್ಚೇದಿತ ಮಹಿಳೆಯರನ್ನ ಟಾರ್ಗೆಟ್ ಮಾಡಿ ವಂಚಿಸ್ತಿದ್ದ ಆರೋಪಿಯನ್ನ ಬಂಧಿಸಲಾಗಿದೆ. ವಿವಿಧ ವೈವಾಹಿಕ ವೆಬ್ ಸೈಟ್​ಗಳಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ  ವಿಚ್ಚೇದಿತ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮದುವೆಯಾಗುವ ಸೋಗಿನಲ್ಲಿ ಹತ್ತಾರು ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಖತರ್ನಾಕ್ ವಂಚಕನನ್ನು ಹೆಣ್ಣೂರು ಪೊಲೀಸರು ಬಲೆಗೆ ಬೀಳಿಸಿ ಹಿಡಿದಿದ್ದಾರೆ. ವಿಜಯಪುರದ ಮೂಲದ ಜಗನ್ನಾಥ್ ಎಂಬ ಆರೋಪಿ ಬಂಧಿತನಾಗಿದ್ದು ಆತನಿಂದ ಪೊಲೀಸರು 115 ಗ್ರಾಂ ಚಿನ್ನಾಭರಣ, 1 ಲಕ್ಷ ರೂ ನಗದು ಹಾಗೂ‌ ಐದು ಫೋನ್ ಜಫ್ತಿ ಮಾಡಿಕೊಂಡಿದ್ದಾರೆ‌.

ವಿಜಯಪುರ ಮೂಲದ ಜಗನ್ನಾಥ್ ಕಳೆದ ಐದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಆರಂಭದಲ್ಲಿ ರಿಯಲ್‌ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ. ಇದು ಕೈಗತ್ತದೇ ಕೈ ಸುಟ್ಟಿಕೊಂಡಿದ್ದ. ಬಳಿಕ ಅತ ಹಣ ಸಂಪಾದನೆಗಾಗಿ ವಂಚನೆ ದಾರಿ ಹಿಡಿದಿದ್ದ. ಕನ್ನಡ ಮ್ಯಾಟ್ರಿಮೋನಿ, ಶಾದಿ ಡಾಟ್ ಕಮ್ ಸೇರಿದಂತೆ ವಿವಿಧ ವೈವಾಹಿಕ ಜಾಲತಾಣಗಳಲ್ಲಿ ಅಸಲಿ ಹೆಸರನ್ನು ಮರೆಮಾಚಿ ರಮೇಶ್, ವಿಜಯ್ ಇತ್ಯಾದಿ ವಿವಿಧ ಹೆಸರುಗಳಲ್ಲಿ ನಕಲಿ ಪ್ರೊಪೈಲ್ ಕ್ರಿಯೆಟ್ ಮಾಡುತ್ತಿದ್ದ. ವಿಧವೆಯರು, ವಿಚ್ಚೇದಿತ ಮಹಿಳೆಯರು ಹಾಗೂ ಗಂಡನಿಂದ ದೂರ ಉಳಿದಿದ್ದ ಮಹಿಳೆಯರನ್ನು ಹೆಚ್ಚಾಗಿ ಗುರಿಯಾಗಿಸಿಕೊಂಡು ವಿವಿಧ  ಹೆಸರುಗಳಿಂದ ಪರಿಚಯ ಮಾಡಿಕೊಳ್ಳುತ್ತಿದ್ದ. ವ್ಯಾಸಂಗ ಮಾಡಿದ್ದು ಬಿಎ ಆದರೂ ಸಿವಿಲ್ ಎಂಜಿನಿಯರ್ ಓದಿಕೊಂಡಿರುವುದಾಗಿ ಹೇಳಿಕೊಂಡು ನಂಬಿಸುತ್ತಿದ್ದ. ಬಳಿಕ ಆ ಮಹಿಳೆಯರನ್ನು ಭೇಟಿ ಮಾಡಿ ಮುಖತಃ ಪರಿಚಯ ಮಾಡಿಕೊಳ್ಳುತ್ತಿದ್ದ. ಕೆಲ ದಿನಗಳ ಬಳಿಕ ಕಾರ್ ನಲ್ಲಿ ಯುವತಿಯರನ್ನು ಪ್ರವಾಸಕ್ಕೆ ಕರೆದೊಯ್ದು ಮದುವೆಯಾಗುವುದಾಗಿ ನಂಬಿಸುತ್ತಿದ್ದ. ನಂಬಿಕೆ ಗಿಟ್ಟಿಸಿಕೊಂಡ ಬಳಿಕ ತನ್ನ ಅಸಲಿ ವರಸೆ ತೋರಿಸುತ್ತಿದ್ದ.

ತನಗೆ ಅಪಘಾತವಾಗಿದೆ, ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗಿದೆ, ಸೈಟು ಖರೀದಿ ಮಾಡುವುದಕ್ಕೆ ಹಣ ಬೇಕು ಎಂಬಿತ್ಯಾದಿ ವಿವಿಧ ಕಾರಣಗಳನ್ನ ನೀಡಿ ಮಹಿಳೆಯರಿಂದ ಹಣ, ನಗ- ನಾಣ್ಯ ದೋಚುತ್ತಿದ್ದ. ಒಮ್ಮೆ ಹಣ ಕೈಗೆ ಸೇರುತ್ತಿದ್ದಂತೆ ಮಹಿಳೆಯರ ಪೋನ್ ನಂಬರ್‌ ಬ್ಲಾಕ್ ಮಾಡಿ ಕಣ್ಮರೆಯಾಗುತ್ತಿದ್ದ. ಇದೇ ರೀತಿ ಹತ್ತಾರು ಮಹಿಳೆಯರಿಗೆ ಇದೇ ತಂತ್ರ ಬಳಸಿ ಲಕ್ಷಾಂತರ ರೂಪಾಯಿ ಹಣ ಮೋಸ ಮಾಡುತ್ತಿದ್ದ ಎಂದು ಬೆಂಗಳೂರು ನಗರ ಪೊಲೀಸ್ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ: Chandan Mitra- ಮಾಜಿ ಬಿಜೆಪಿ ಸಂಸದ, ಪತ್ರಕರ್ತ ಚಂದನ್ ಮಿತ್ರಾ ನಿಧನ; ಪ್ರಧಾನಿಯಿಂದ ಸಂತಾಪ

ಆರೋಪಿ ವಿರುದ್ಧ ಬನಶಂಕರಿ, ಬಾಗಲೂರು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ‌‌.‌ ಈ ಹಿಂದೆ ಬನಶಂಕರಿ ಪೊಲೀಸರಿಂದ ಬಂಧಿತನಾಗಿ ಆತ ಜೈಲು ಕೂಡ ಸೇರಿದ್ದ‌. ಜಾಮೀನು ಪಡೆದು ಹೊರಬಂದು ಮತ್ತೆ ಹಳೆ ಕಾಯಕವನ್ನೇ ಮುಂದುವರೆಸಿದ್ದ. ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿಕೊಳ್ಳುತ್ತಿದ್ದ ಮಹಿಳೆಯರನ್ನು ಗುರುತು ಇಟ್ಟುಕೊಳ್ಳಲು ಕೋಡ್ ನಂಬರ್ ಸಮೇತ ಮೊಬೈಲ್​ನಲ್ಲಿ ನಮೂದು ಮಾಡಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಡ್ ವರ್ಡ್​ಗಳನ್ನ ಬಳಸಿಕೊಂಡು ಮಹಿಳೆಯರ ನಂಬರ್​ಗಳನ್ನ ಸೇವ್ ಮಾಡಿಕೊಂಡು ಈತ ವಂಚನೆ ಮಾಡಿತ್ತಿದ್ದ ಬಗೆಯನ್ನ ನೋಡಿಯೇ ಪೊಲೀಸರು ಶಾಕ್ ಆಗಿದ್ದಾರೆ. ಇದೇ ರೀತಿ ಈತ ಬೇರೆ ಯಾರಿಗಾದರೂ ವಂಚನೆ ಮಾಡಿದ್ದಾನಾ ಎಂದು ವಿಚಾರಣೆ ಮಾಡ್ತಿದ್ದಾರೆ. ಈತನ ಬಂಧನವಾಗಿರುವ ವಿಷಯ ತಿಳಿದು ಕೆಲವರು ದೂರು ಕೊಡಲು ಮುಂದೆ ಬಂದಿದ್ದಾರೆನ್ನಲಾಗಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಗಂಗಾಧರ ವಾಗಟ
Published by:Vijayasarthy SN
First published: